ದುಬೈ: ವಾಹನಗಳ ಫ್ಯಾನ್ಸಿ ನಂಬರ್ ಪ್ಲೇಟ್ ಹರಾಜು ಪ್ರಕ್ರಿಯೆ ಆಗಾಗ ನಡೆಸುತ್ತಾರೆ. ಕೆಲವೊಂದು ಸೀರಿಸ್ನ ಅತ್ಯಾಕರ್ಷಕ ನಂಬರ್ಗಳಿಗೆ ಹೆಚ್ಚು ಬೇಡಿಕೆ ಬರುವ ಕಾರಣ ಹರಾಜು ಮಾಡುವುದು ಕೂಡ ಅನಿವಾರ್ಯ. ಈ ರೀತಿ ಆರ್ಟಿಒ ಅಧಿಕಾರಿಗಳು ಹರಾಜು ಮಾಡುವ ವೇಳೆ ಪಡೆಯುವ ಒಟ್ಟು ಮೊತ್ತ ಲಕ್ಷಕ್ಕೆ ಸೀಮಿತವಾಗಿರುತ್ತದೆ. ಒಂದಿಷ್ಟು ಲಕ್ಷ ಗಳಿಸಿದ್ದೇವೆ ಎಂದು ಅಧಿಕಾರಿಗಳು ಕೂಡ ಮಾಹಿತಿ ನೀಡುತ್ತಾರೆ. ಆದರೆ, ದುಬೈನಲ್ಲಿ ನಡೆದ ಫ್ಯಾನ್ಸ್ ನಂಬರ್ ಹರಾಜಿನಲ್ಲಿ ಸಂಖ್ಯೆಯೊಂದು ಇದುವರೆಗಿನ ಗರಿಷ್ಠ ಮೊತ್ತಕ್ಕೆ ಹರಾಜಾಗಿದೆ. ಇದರ ಮೂಲಕ ಹರಾಜು ಪ್ರಕ್ರಿಯೆ ಗಿನ್ನಿಸ್ ಪುಸ್ತಕ ಸೇರಿದೆ.
P 7 ವಿಶ್ವದಲ್ಲಿಯೇ ಅತಿ ಹೆಚ್ಚು ಮೊತ್ತ ಪಡೆದ ಸಂಖ್ಯೆಯಾಗಿದೆ. 55 ದಶ ಲಕ್ಷ ದಿರ್ಹಾಮ್ ಪಡೆದುಕೊಂಡಿದೆ ಈ ಸಂಖ್ಯೆ. ಅಂದರೆ ಭಾರತದ ರೂಪಾಯಿಯಲ್ಲಿ 122 ಕೋಟಿ. ಇಷ್ಟೊಂದು ಮೊತ್ತವನ್ನು ಕೊಟ್ಟು ನಂಬರ್ ಪಡೆದುಕೊಂಡಿರುವ ವ್ಯಕ್ತಿ ತನ್ನ ಗುರುತನ್ನು ಹೇಳಿಕೊಳ್ಳುವುದಕ್ಕೆ ಇಚ್ಛೆ ಪಟ್ಟಿಲ್ಲ. ದತ್ತಿ ನಿಧಿ ಸಂಗ್ರಹದ ಉದ್ದೇಶದಿಂದ ಈ ಹರಾಜು ಪ್ರಕ್ರಿಯೆಯನ್ನು ನಡೆಸಲಾಗಿತ್ತು. ಸಂಗ್ರಹಗೊಂಡ ಮೊತ್ತವು ಕೋಟಿ ಊಟ (ಒನ್ ಮಿಲಿಯನ್ ಮೀಲ್) ವಿತರಣೆ ಮಾಡುವ ಕಾರ್ಯಕ್ಕೆ ಹೋಗಲಿದೆ.
ದುಬೈನ ಪ್ರಧಾನ ಮಂತ್ರಿ ಶೇಖ್ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತೋಮ್ ಅವರು ಒನ್ ಬಿಲಿಯನ್ ಮೀಲ್ ಕಾರ್ಯಕ್ರಮಕ್ಕೆ ಚಾಲನೆ ಕೊಟ್ಟಿದ್ದಾರೆ. ಈ ಯೋಜನೆ ಮೂಲಕ ರಂಜಾನ್ ಹಬ್ಬದ ಹಿನ್ನೆಲೆಯಲ್ಲಿ ವಿಶ್ವಾದ್ಯಂತ ಒಂದು ಕೋಟಿ ಮಂದಿಗೆ ಊಟ ನೀಡುವ ಯೋಜನೆ ಹಾಕಿಕೊಳ್ಳಲಾಗಿದೆ. ಅದಕ್ಕಾಗಿ ಆಯೋಜಿಸಿದ್ದ ಹರಾಜಿನಲ್ಲಿ ಪಿ7 ಸಂಖ್ಯೆಗೆ 122 ಕೋಟಿ ರೂಪಾಯಿ ಲಭಿಸಿದೆ.
ಪಿ7 ಸಂಖ್ಯೆಯ ಜತೆಗೆ AA19, AA22, AA80, O71, X36, W78, H31, Z37, J57 ಮತ್ತ N41 ಎಂಬ ಸಂಖ್ಯೆಯೂ ಹರಾಜಾಗಿದೆ. Y900, Q22222, ಮತ್ತು Y6666 ಸಂಖ್ಯೆಗಳೂ ಹರಾಜಾಗಿವೆ. ಇದರಲ್ಲಿ AA19 ಸಂಖ್ಯೆ 10 ಕೋಟಿ ರೂಪಾಯಿಗೆ ಬಿಡ್ ಆಗಿದೆ. o71 ಸಂಖ್ಯೆ 33 ಕೋಟಿ ರೂಪಾಯಿಗೆ ಹರಾಜಾಗಿದ್ದರೆ, Q22222 ಸಂಖ್ಯೆ 2 ಕೋಟಿ ರೂಪಾಯಿಗೆ ಹರಾಜಾಗಿದೆ.
ಇದನ್ನೂ ಓದಿ : Women’s Premier League | ಹರಾಜು ಪಟ್ಟಿಯಲ್ಲಿದ್ದಾರೆ 409 ಆಟಗಾರ್ತಿಯರು
ಫ್ಯಾನ್ಸಿ ನಂಬರ್ಗಳ ಗರಿಷ್ಠ ಬಿಡ್ಡಿಂಗ್ ದಾಖಲೆ 2018ರಲ್ಲಿ ದಾಖಲಾಗಿತ್ತು. ಅ ಬಾರಿ 1 ಸಂಖ್ಯೆ 116.3 ಕೋಟಿ ರೂಪಾಯಿ ಪಡೆದುಕೊಂಡಿತ್ತು. ಈ ಬಿಡ್ಡಿಂಗ್ನಲ್ಲಿ ಟೆಲಿಗ್ರಾಮ್ ಸಂಸ್ಥಾಪಕ ಪಾವೆಲ್ ಡುರೋವ್ ಪಾಲ್ಗೊಂಡಿದ್ದರು ಎಂದು ಹೇಳಲಾಗಿದೆ.
ಫೋನ್ ಸಂಖ್ಯೆಯೂ ಹರಾಜು
ಕಾರುಗಳ ನಂಬರ್ ಪ್ಲೇಟ್ ಜತೆಗೆ ಫೋನ್ ನಂಬರ್ಗಳ ಹರಾಜು ಪ್ರಕ್ರಿಯೆ ನಡೆಯಿತು. ಹರಾಜು ಪ್ರಕ್ರಿಯೆಲ್ಲಿ ಒಟ್ಟು 100 ಕೋಟಿ ರೂಪಾಯಿಗೂ ಅಧಿಕ ಮೊತ್ತ ದಾಖಲಾಗಿದೆ. 971583333333 ಸಂಖ್ಯೆ 4.4 ಕೋಟಿ ರೂಪಾಯಿ ಮೊತ್ತಕ್ಕೆ ಹರಾಜಾಗಿದೆ.