ಮುಂಬಯಿ: ಆರ್ಥಿಕ ಹಿಂಜರಿತದಿಂದ ತತ್ತರಿಸಿರುವ ಪಾಕಿಸ್ತಾನದಲ್ಲಿ ತನ್ನ ಕಾರು ಉತ್ಪಾದನಾ ಘಟಕವನ್ನು ಮುಂದುವರಿಸುವುದಿಲ್ಲ ಎಂದು ಜಪಾನ್ ಮೂಲದ ಕಾರು ತಯಾರಿಕಾ ಕಂಪನಿ ಹೋಂಡಾ (Honda Car) ಹೇಳಿದೆ. ಪಾಕಿಸ್ತಾನದಲ್ಲಿ ಹೋಂಡಾ ಅಟ್ಲಾಸ್ ಕಾರ್ಸ್ ಪಾಕಿಸ್ತಾನ (HACP) ಹೆಸರಿನಲ್ಲಿ ಕಾರು ಉತ್ಪಾದನೆ ಮಾಡಲಾಗುತ್ತಿತ್ತು. ಆದರೆ, ಕಚ್ಚಾವಸ್ತುಗಳ ಸರಬರಾಜು ಸೇರಿದಂತೆ ಮೂಲ ಸೌಕರ್ಯಗಳ ಕೊರತೆ ಉಂಟಾಗಿರುವ ಕಾರಣ ಉತ್ಪಾದನೆಯನ್ನು ನಿಲ್ಲಿಸಲು ಹೋಂಡಾ ಮುಂದಾಗಿದೆ. ಮಾರ್ಚ್ 8ರಿಂದ 31ರವರೆಗೆ ಘಟಕವನ್ನು ಬಂದ್ ಮಾಡುವುದಾಗಿ ಹೋಂಡಾ ಹೇಳಿರುವ ಜತೆಗೆ ಅದನ್ನು ಮುಂದುವರಿಸುವುದು ಕೂಡ ಅಸಾಧ್ಯ ಎಂದು ಹೇಳಿದೆ.
ಹೋಂಡಾ ಅಟ್ಲಾಸ್ ಕಾರ್ಸ್ ಪಾಕಿಸ್ತಾನ ಅಲ್ಲಿನ ಸ್ಟಾಕ್ ಮಾರ್ಕೆಟ್ಗೆ ಈ ಕುರಿತು ಮಾಹಿತಿ ರವಾನಿಸಿದೆ ಎಂಬುದಾಗಿ ಜಿಯೋ ನ್ಯೂಸ್ ವರದಿ ಮಾಡಿದೆ. ಆರ್ಥಿಕ ಹಿಂಜರಿತ ತಡೆಯುವ ಉದ್ದೇಶದಿಂದ ಪಾಕಿಸ್ತಾನದಲ್ಲಿ ಹಲವಾರು ಕಠಿಣ ಆರ್ಥಿಕ ಕ್ರಮಗಳನ್ನು ಕೈಗೊಳ್ಳಲಾಗಿದೆ. ಲೆಟರ್ ಆಫ್ ಕ್ರೆಡಿಟ್ಸ್, ವಿದೇಶಿ ಪಾವತಿಗಳಿಗೆ ನಿಯಂತ್ರಣ ಹೇರಲಾಗಿದೆ. ಇದರಿಂದ ಹೋಂಡಾದ ವಿತರಣಾ ಜಾಲ ಹಾಗೂ ಮೂಲ ವಸ್ತುಗಳ ಖರೀದಿಗೆ ಅಡಚಣೆ ಉಂಟಾಗಿದೆ.
ಪಾಕಿಸ್ತಾನದಲ್ಲಿ ಉತ್ಪಾದನಾ ಘಟಕವನ್ನು ಸ್ಥಗಿತಗೊಳಿಸುವುದಾಗಿ ಹೇಳುತ್ತಿರುವ ಮೂರನೇ ಕಂಪನಿ ಹೋಂಡಾ. ಈ ಹಿಂದೆ ಇಂಡಸ್ ಮೋಟಾರ್ ಕಂಪನಿ ಹಾಗೂ ಪಾಕ್ ಸುಜುಕಿ ಮೋಟಾರ್ ಕಂಪನಿ ತಮ್ಮ ಘಟಕಗಳನ್ನು ಬಂದ್ ಮಾಡುವುದಾಗಿ ಹೇಳಿತ್ತು.
ಇದನ್ನೂ ಓದಿ: Honda City : ಹೋಂಡಾ ಕಂಪನಿಯ ಸೆಡಾನ್ ಸಿಟಿ ಕಾರಿಗೆ ಸಿಕ್ಕಾಪಟ್ಟೆ ಡಿಸ್ಕೌಂಟ್; ಯಾಕೆ ಗೊತ್ತೇ?
ಪಾಕಿಸ್ತಾನದ ಆಟೋಮೊಬೈಲ್ ಕ್ಷೇತ್ರವು ಸಂಪೂರ್ಣವಾಗಿ ಆಮದಿನ ಮೇಲೆ ನಿಂತಿದೆ. ಅಲ್ಲಿಗೆ ಬೇಕಾಗಿರುವ ಕಚ್ಚಾ ವಸ್ತುಗಳನ್ನು ಲೆಟರ್ ಆಫ್ ಕ್ರೆಡಿಟ್ ಮೂಲಕ ತರಿಸಿಕೊಳ್ಳಬೇಕಾಗುತ್ತದೆ. ಹಣದುಬ್ಬರ ಹಾಗೂ ಪಾಕಿಸ್ತಾನದ ರೂಪಾಲಿ ಮೌಲ್ಯ ಕುಸಿದಿರುವ ಕಾರಣ ಅದರ ನಿಯಂತ್ರಣಕ್ಕೆ ಸರಕಾರ ವಿದೇಶಿ ವಿನಿಮಯಕ್ಕೆ ಕಡಿವಾಣ ಹಾಕಿದೆ. ಇದು ಕಂಪನಿಗಳಿಗೆ ಅಡಚಣೆ ಉಂಟಾಗಿವೆ.