ಬೆಂಗಳೂರು: ನಿಮ್ಮ ಕಾರು ಅಥವಾ ಇನ್ಯಾವುದೇ ವಾಹನಗಳಲ್ಲಿ ಟೈರ್ಗಳು (Car Tyre) ಬಹುಮುಖ್ಯ ಭಾಗ. ಎಂಜಿನ್ ಸೃಜಿಸುವ ಶಕ್ತಿಯನ್ನು ಟೈರ್ಗೆ ರವಾನಿಸಿ ತಿರುಗುವಂತೆ ಮಾಡಿದಾಗ ಮಾತ್ರ ವಾಹನ ಮುಂದಕ್ಕೆ ಹೋಗುತ್ತದೆ. ಅದೂ ಅಲ್ಲದೆ, ವಾಹನ ಮತ್ತು ನೆಲದ ಜತೆ ಸಂಪರ್ಕ ಹೊಂದಿರುವ ಪ್ರಮುಖ ಭಾಗವೇ ಟೈರ್. ಎಂಥದ್ದೇ ಒರಟು ರಸ್ತೆಯಲ್ಲಿ ಸಲೀಸಾಗಿ ಪ್ರಯಾಣ ಮಾಡುವಂತಾದರೆ ಅದರ ಸಂಪೂರ್ಣ ಕ್ರೆಡಿಟ್ ಟೈರ್ಗಳಿಗೆ ಸಲ್ಲುತ್ತದೆ. ಆದರೆ, ವಾಹನದೊಳಗಿನ ಎಸಿ, ಮ್ಯೂಸಿಕ್ ಸಿಸ್ಟಮ್ ಕೊಡುವಷ್ಟು ಗಮನವನ್ನು ಬಹುತೇಕ ಮಂದಿ ಟೈರ್ಗಳಿಗೆ ಕೊಡುವುದಿಲ್ಲ. ಇಂಥ ವರ್ತನೆ ಅಪಘಾತಗಳಿಗೆ ಕಾರಣವಾಗುವ ಜತೆಗೆ ಪ್ರಯಾಣವನ್ನೇ ಯಾತನಾಮಯ ಮಾಡಬಹುದು.
ಮಣ್ಣಾಗಾಲಿ, ಟಾರು ರಸ್ತೆಯೇ ಆಗಲಿ ವಾಹನ ಸವಾರಿ ಅನುಭವ ಹೆಚ್ಚಿಸುವಲ್ಲಿ ನಿಮ್ಮ ಕಾರಿನ ಟೈರ್ ಗಳು ಪ್ರಮುಖ ಪಾತ್ರವಹಿಸುತ್ತವೆ. ಇಳಿಜಾರು ಅಥವಾ ಏರು ರಸ್ತೆಯಲ್ಲಿ, ವಾಹನ ಜಾರದಂತೆಯೂ ಟೈರ್ಗಳು ನೋಡಿಕೊಳ್ಳುತ್ತದೆ. ಇಷ್ಟೆಲ್ಲ ಅಗತ್ಯವಿರುವ ಟೈರ್ಗಳು ಹಳೆಯದಾದರೂ, ಸವೆದು ಹೋದರೂ ಮಾಲೀಕರು ಅದರ ಕಡೆಗೆ ಗಮನ ಹರಿಸುವುದಿಲ್ಲ. ಈ ರೀತಿ ಟೈರ್ಗಳ ಬಗ್ಗೆ ಕಾಳಜಿ ವಹಿಸದ ಕಾರಣ ಟೈರ್ಗಳು ಬೇಗ ಹಾಳಾಗಿ ಪ್ರಯಾಣದ ಖುಷಿ ನಾಶವಾಗುತ್ತದೆ. ಹಾಗಾದರೆ ಟೈರ್ಗಳ ಜೀವಿತಾವಧಿ ಹೇಗೆ ಹೆಚ್ಚಿಸುವುದು ಎಂಬ ಕೆಲವು ಸಲಹೆಗಳು ಇಲ್ಲಿವೆ. ಅದೇ ರೀತಿ ಕಾರಿನ ಟೈರ್ ಗಳನ್ನು ಯಾವಾಗ ಬದಲಾಯಿಸಬೇಕು ಎಂಬುದರ ಮಾಹಿತಿಯೂ ಇಲ್ಲಿದೆ.
ಹಠಾತ್ ಬ್ರೇಕಿಂಗ್ ಮತ್ತು ಏಕಾಏಕಿ ವೇಗವರ್ಧನೆಯನ್ನು ತಪ್ಪಿಸಿ
ಹಾರ್ಡ್ ಆಕ್ಸಿಲರೇಶನ್ (ಏಕಾಏಕಿ ವೇಗ ಹೆಚ್ಚಿಸುವುದು) ಅಥವಾ ಹೆವಿ ಬ್ರೇಕಿಂಗ್ ನಿಮ್ಮ ಕಾರಿನ ಟೈರ್ ಗಳ ಜೀವಿತಾವಧಿಯ ಮೇಲೆ ಪರಿಣಾಮ ಬೀರುತ್ತದೆ. ವೇಗವನ್ನು ಹೆಚ್ಚಿಸುವಾಗ ಅಥವಾ ತುಂಬಾ ಗಟ್ಟಿಯಾಗಿ ಬ್ರೇಕಿಂಗ್ ಮಾಡುವಾಗ ಹೆಚ್ಚಿನ ಘರ್ಷಣೆ ಉತ್ಪತ್ತಿಯಾಗುವುದು ಇದಕ್ಕೆ ಕಾರಣ. ಅಪಘಾತಗಳನ್ನು ತಪ್ಪಿಸಲು ಬ್ರೇಕ್ ಹಾಕುವುದು ಅನಿವಾರ್ಯ. ಆದರೆ, ಅನಗತ್ಯವಾಗಿ ಭಾರಿ ವೇಗವರ್ಧನೆ ಅಥವಾ ಅತಿಯಾದ ಬ್ರೇಕಿಂಗ್ ಪ್ರಯೋಗಿಸದೇ ಇರುವುದು ಉತ್ತಮ. ಟೈರ್ನ ಟ್ರೆಡ್ ಸಮರ್ಪಕವಾಗಿದ್ದರೆ ವಾಹನ ಸವಾರಿಯ ಅನುಭವ ಹೆಚ್ಚುತ್ತದೆ ಹಾಗೂ ಅವಘಡದಿಂದ ದೂರವಿರಲೂ ಸಾಧ್ಯವಾಗುತ್ತದೆ.
ಕಂಪನಿ ಶಿಫಾರಸು ಮಾಡಿದ ಟೈರ್ ಮತ್ತು ರಿಮ್ ಮಾತ್ರ ಬಳಸಿ
ಅನೇಕ ವಾಹನ ಬಳಕೆದಾರರು ಸೌಂದರ್ಯ ಹೆಚ್ಚಳ ಹಾಗು ಆಕರ್ಷಣೆಗಾಗಿ ತಮ್ಮ ಕಾರಿನ ರಿಮ್ ಮತ್ತು ಟೈರ್ಗಳನ್ನು ಬದಲಾಯಿಸುತ್ತಾರೆ. ದೊಡ್ಡ ಗಾತ್ರದ ರಿಮ್ ಬಳಸುತ್ತಾರೆ. ಈ ತಪ್ಪು ಮಾಡಲೇಬಾರದು. ವಾಹನ ತಯಾರಿಕಾ ಕಂಪನಿಯು ಶಿಫಾರಸು ಮಾಡಿದ ಟೈರ್ ಮತ್ತು ರಿಮ್ಗಳನ್ನು ಮಾತ್ರ ಬಳಸಬೇಕು. ಒಂದು ವೇಳೆ ಬದಲಾಯಿಸಬೇಕಾದರೆ ಟೈರ್- ಸ್ಪೆಷಲಿಸ್ಟ್ ಅನ್ನು ಸಂಪರ್ಕಿಸಿ. ಹೆಚ್ಚು ಅಗಲವಾದ ಟೈರ್ ಗಳನ್ನು ಬಳಸುವುದು (ಕಡಿಮೆ ಪ್ರೊಫೈಲ್ ಹೊಂದಿರುವವು) ಅದರದ್ದೇ ಅದ ಪ್ರಯೋಜನಗಳನ್ನು ಹೊಂದಿದೆ, ಆದರೆ ಟೈರ್ ಹಾಗೂ ಇಂಧನ ಮೈಲೇಜ್ ಕೊಡುವುದು ಕಡಿಮೆ.
ಸರಿಯಾದ ಗಾಳಿಯ ಒತ್ತಡ
ವಾಹನಗಳ ಟೈರ್ ನಲ್ಲಿ ಸೂಕ್ತ ಪ್ರಮಾಣದ ಗಾಳಿಯ ಒತ್ತಡವನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯ. ಆದ್ದರಿಂದ, ಟೈರ್ ಗಳ ಅತಿಯಾದ ಅಥವಾ ಕಡಿಮೆ ಗಾಳಿಯ ಒತ್ತಡದಲ್ಲಿ ಓಡುವುದನ್ನು ತಪ್ಪಿಸುವುದು ಉತ್ತಮ. ಕಂಪನಿಯು ನಿಗದಿ ಮಾಡಿದ ಗಾಳಿಯ ಒತ್ತಡವನ್ನೇ ಟೈರ್ಗಳಲ್ಲಿ ಮೆಂಟೇನ್ ಮಾಡಬೇಕು. ವಾಹನದ ಚಾಲಕನ ಬಾಗಿಲು, ಡ್ರೈವರ್-ಸೈಡ್ ಬಿ-ಪಿಲ್ಲರ್ ಅಥವಾ ಬಳಕೆದಾರ ಕೈಪಿಡಿಯಲ್ಲಿ ಕಂಪನಿ ಶಿಫಾರಸು ಮಾಡಿದ ಟೈರ್ ಪ್ರೆಶರ್ ಮಾಹಿತಿ ನೀಡಿರಲಾಗುತ್ತದೆ. ಕಡಿಮೆ ಗಾಳಿಯು ಟೈರ್ ಗಳಲ್ಲಿ ಹೆಚ್ಚಿನ ಸವೆತಕ್ಕೆ ಕಾರಣವಾಗುತ್ತದೆ. ಅಲ್ಲದೆ, ಇದು ವೇಗವರ್ಧನೆ ಮತ್ತು ಬ್ರೇಕಿಂಗ್ ಮೇಲೆ ಪರಿಣಾಮ ಬೀರುತ್ತದೆ. ಮತ್ತೊಂದೆಡೆ, ಅತಿಯಾದ ಗಾಳಿಯ ಒತ್ತಡ ಬ್ರೇಕಿಂಗ್ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಜೊತೆಗೆ, ಟೈರ್ ಸ್ಫೋಟಗೊಳ್ಳುವ ಸಾಧ್ಯತೆ ಹೆಚ್ಚಿರುತ್ತವೆ. ಸಿಮೆಂಟ್ ರಸ್ತೆಗಳಲ್ಲಿ ನಿಮ್ಮ ಕಾರನ್ನು ಬಳಸಲು ಹೊರಟರೆ ಟೈರ್ಗಳ ಗಾಳಿಯ ಒತ್ತಡ ಸ್ವಲ್ಪ ಹೆಚ್ಚಿಸಬೇಕು. ಏಕೆಂದರೆ ಸಿಮೆಂಟ್ ರಸ್ತೆಗಳಲ್ಲಿ ವೇಗವನ್ನು ಹೆಚ್ಚಿಸುವಾಗ ಅಥವಾ ಬ್ರೇಕಿಂಗ್ ಮಾಡುವಾಗ ಹೆಚ್ಚಿನ ಘರ್ಷಣೆ ಉಂಟಾಗುತ್ತದೆ.
ನಿಯಮಿತ ವೀಲ್ ಅಲೈನ್ಮೆಂಟ್
ವಾಹನ ಚಕ್ರಗಳನ್ನು ಆಗಾಗ ಅಲೈನ್ಮೆಂಟ್ ಗೆ ಒಳಪಡಿಸುವುದರಿಂದ ಹೆಚ್ಚಿನ ಲಾಭವಿದೆ. ವೇಗವಾಗಿ ಹೋಗುವಾಗ ಉಂಟಾಗುವ ಘರ್ಷಣೆಗಳಿಂದಾಗಿ ಸಾಮಾನ್ಯವಾಗಿ ಅಲೈನ್ಮೆಂಟ್ ಏರುಪೇರಾಗುತ್ತದೆ. ಇದು ಟೈರ್ಗಳು ಓರೆ ಕೋರೆ ಸವೆಯಲು ಕಾರಣವಾಗುತ್ತದೆ. ಹೀಗಾಗಿ ನಿಯಮಿತವಾಗಿ ಟೈರ್ ಅಲೈನ್ಮೆಂಟ್ ಮಾಡಿಸುವುದು ಉತ್ತಮ. ಸಸ್ಪೆನ್ಷನ್ನಲ್ಲಿ ಸಮಸ್ಯೆ ಇದ್ದರೂ ಈ ಪ್ರಕ್ರಿಯೆಯಲ್ಲಿ ಗೊತ್ತಾಗುತ್ತದೆ. ಆದ್ದರಿಂದ, ವಾಹನದ ಟೈರ್ ಗಳು ಮತ್ತು ನಿಮ್ಮ ಕಾರಿನ ಸಸ್ಪೆಂಷನ್ ಘಟಕಗಳು ಉತ್ತಮ ಸ್ಥಿತಿಯಲ್ಲಿವೆ ಎಂದು ಖಚಿತಪಡಿಸಿಕೊಳ್ಳಲು ವೀಲ್ ಅಲೈನ್ ಮೆಂಟ್ ಅನ್ನು ಆಗಾಗ ಮಾಡಿದಬೇಕು. ಇದರಿಂದ ಟೈರ್ಗಳು ಹೆಚ್ಚು ಬಾಳಿಕೆ ಬರುತ್ತವೆ.
ಟೈರ್ಗಳನ್ನು ಹಿಂದೆ ಮುಂದೆ ಬದಲಾಯಿಸಿ (ರೊಟೇಷನ್)
ಎಲ್ಲಾ ಟೈರ್ ಗಳ ಟ್ರೆಡ್ ಸವೆತವನ್ನು ಏಕ ರೂಪದಲ್ಲಿ ಇರುವಂತೆ ನೋಡಿಕೊಳ್ಳುವುದಕ್ಕೆ ಇದು ಉತ್ತಮ ಮಾರ್ಗವಾಗಿದೆ. ವಾಸ್ತವವಾಗಿ, ಲೈವ್ ಆಕ್ಸಲ್ ನಲ್ಲಿರುವ (ಎಂಜಿನ್ನಿಂದ ಶಕ್ತಿ ರವಾನೆಯಾಗುವ) ಚಕ್ರಗಳ ಟೈರ್ ಗಳು ಹೆಚ್ಚಿದ ಸವೆತಕ್ಕೆ ಒಳಗಾಗುತ್ತವೆ. ವೇಗೋತ್ಕರ್ಷದ ಸಮಯದಲ್ಲಿ ಕಡಿಮೆ ಘರ್ಷಣೆಯ ಉತ್ಪಾದನೆಯಿಂದಾಗಿ ಫ್ರೀ ಆಕ್ಸಲ್ ನಲ್ಲಿರುವ ಟೈರ್ಗಳು ಕಡಿಮೆ ಸವೆತ ಕಾಣುತ್ತದೆ. ಆದ್ದರಿಂದ, ನಿಯಮಿತವಾಗಿ ಚಕ್ರಗಳನ್ನು ಬದಲಾಯಿಸಬೇಕು ಅದೇ ರೀತಿ ಸ್ಪೇರ್ ಟೈರ್ಗಳನ್ನೂ ನಿಯಮಿತವಾಗಿ ಬಳಸಬೇಕು. ಇದು ಎಲ್ಲಾ ಐದು ಟೈರ್ ಗಳಲ್ಲಿ ಸಮ ರೀತಿಯಲ್ಲಿ ಥ್ರೆಡ್ ಸವೆತವನ್ನು ಖಚಿತಪಡಿಸಿಕೊಳ್ಳಲು ನೆರವಾಗುತ್ತದೆ.
ವಾಹನದ ಟೈರ್ಗಳನ್ನು ಯಾವಾಗ ಬದಲಾಯಿಸಬೇಕು?
ನಿಮ್ಮ ಕಾರಿನ ಟೈರ್ ಗಳ ಮೇಲೆ ಎಷ್ಟು ಥ್ರೆಡ್ ಇವೆ ಎಂಬುದು ಅದರ ಆರೋಗ್ಯವನ್ನು ಸೂಚಿಸುತ್ತದೆ. ರಸ್ತೆ ಮೇಲಿರುವ ಎಲ್ಲ ವಾಹನಗಳ ಟೈರ್ ಸೂಕ್ತ ಥ್ರೆಡ್ ಇರಲೇಬೇಕು. ಈ ಅಭ್ಯಾಸ ಅನೇಕ ರೀತಿಯಲ್ಲಿ ಅಗತ್ಯ. ನಿಮ್ಮ ಕಾರನ್ನು ವಿವಿಧ ರಸ್ತೆ ಮೇಲ್ಮೈಗಳಲ್ಲಿ ಆರಾಮವಾಗಿ ಓಡಿಸಲು ಸಹಾಯ ಮಾಡುತ್ತದೆ. ರಸ್ತೆಯ ಮೇಲಿನ ಹಿಡಿತಕ್ಕೆ ಥ್ರೆಡ್ ಕಾರಣ; ಕಾರ್ನರಿಂಗ್, ವೇಗ ಹೆಚ್ಚಳ ಮತ್ತು ಬ್ರೇಕಿಂಗ್ಗೆ ಸಹಾಯ ಮಾಡುತ್ತದೆ. ಒದ್ದೆಯಾದ ಮೇಲ್ಮೈಗಳಲ್ಲಿ, ಥ್ರೆಡ್ ನೀರನ್ನು ಟೈರ್ ಗಳಿಂದ ದೂರ ಹೋಗುವಂತೆ ಮಾಡುತ್ತದೆ. ಬ ಪ್ರಸ್ತುತ ಬರುವ ಟೈರ್ಗಳಲ್ಲಿ ಥ್ರೆಡ್ ಸವೆತ ಇಂಡಿಕೇಟರ್ಗಳಿರುತ್ತವೆ. ನಿಮ್ಮ ವಾಹನದ ಟೈರ್ ಗಳನ್ನು ಯಾವಾಗ ಬದಲಾಯಿಸಬೇಕೆಂದು ನಿರ್ಧರಿಸಲು ಅದು ನಿಮಗೆ ಸಹಾಯ ಮಾಡುತ್ತದೆ. ನಿಮ್ಮ ಟೈರ್ ಗಳಲ್ಲಿ ಅಂತಹ ಯಾವುದೇ ಸೂಚಕವಿಲ್ಲದಿದ್ದರೆ ಸವೆತದ ಸ್ಥಿತಿಯನ್ನು ನಿರ್ಣಯಿಸಲು ನೀವು ನಾಣ್ಯದ ತಂತ್ರವನ್ನು ಬಳಸಬಹುದು. ನಾಣ್ಯವೊಂದನ್ನು ಥ್ರೆಡ್ಗಳ ನಡುವೆ ಇಟ್ಟು ನೋಡಿ. ಹಾಗೂ ಅದನ್ನು ಸದಾ ಕಾರಿನಲ್ಲಿಟ್ಟುಕೊಳ್ಳಿ. ಹೊಸ ಟೈರ್ ಹಾಕುವಾಗ ನಾಣ್ಯ ಎಷ್ಟು ಆಳಕ್ಕೆ ಹೋಗುತ್ತಿತ್ತೊ ಅದರ ಅರ್ಧಕ್ಕಿಂತಲೂ ಕಡಿಮೆಯಾಗಿದ್ದರೆ ಟೈರ್ ಬದಲಾಯಿಸುವ ಸಮಯ ಬಂದಿದೆ ಎಂದರ್ಥ.
ಇದನ್ನೂ ಓದಿ : Hydrogen fuel cell Bus : ದೆಹಲಿಯಲ್ಲಿ ಸಂಚರಿಸಲಿದೆ ಅತ್ಯಾಧುನಿಕ ಹೈಡ್ರೋಜನ್ ಬಸ್, ಏನಿದರ ಪ್ರಯೋಜನ?
ಅಸಮವಾಗಿರುವ ಸವತೆ ಕಂಡು ಬಂದರೆ
ಹಾರ್ಡ್ ಬ್ರೇಕಿಂಗ್ ಮತ್ತು ಏಕಾಏಕಿ ಸ್ಪೀಡ್ ಹೆಚ್ಚಿಸುವ ಕಾರಣ ಟೈರ್ನ ಥ್ರೆಡ್ ಅಸಮ ಸವೆತಕ್ಕೆ ಒಳಗಾಗುತ್ತವೆ. ಕೆಲವು ಭಾಗಗಳಲ್ಲಿ ಟ್ರೆಡ್ ನ ಅಸಮ ಸವೆತವಿದ್ದರೆ, ಟೈರ್ ಗಳನ್ನು ಬದಲಾಯಿಸುವ ಬಗ್ಗೆ ಯೋಚಿಸಲು ಪ್ರಾರಂಭಿಸುವ ಸಮಯವಾಗಿರುತ್ತದೆ ಅಸಮರ್ಪಕ ಗಾಳಿಯ ಒತ್ತಡವೂ ಅಸಮ ಟೈರ್ ಸವೆತಕ್ಕೆ ಮತ್ತೊಂದು ಕಾರಣ. ಹೀಗಾಗಿ ಟೈರ್ಗಳ ಕಾಳಜಿ ಮಾಡುವ ಅಭ್ಯಾಸ ಇಲ್ಲದಿದ್ದರೆ ವರ್ಷಕ್ಕೆ ಒಂದು ಬಾರಿ ಟೈರ್ಗಳಲ್ಲಿ ಅಸಮರ್ಪಕ ಸವತೆ ಇದೆಯಾ ಎಂಬುದನ್ನು ಪರಿಣತರ ಬಳಿಗೆ ಹೋಗಿ ಪರೀಕ್ಷೆ ಮಾಡಿಸಿಕೊಳ್ಳಬೇಕು. ಒಂದೇ ಒಂದು ಕಡೆ ಹೆಚ್ಚು ಸವತೆ ಇದೆ ಎಂದಾದರೆ ತಕ್ಷಣ ಟೈರ್ ಬದಲಾಯಿಸಿ.
ಹಾನಿಗೊಳಗಾದ ಸೈಡ್ ವಾಲ್
ನಿಮ್ಮ ವಾಹನದ ಟೈರ್ ಗಳು ಹಾನಿಗೊಳಗಾದ ಸೈಡ್ ವಾಲ್ ಹೊಂದಿವೆಯೇ ಹೊಂದಿದ್ದರೆ ತಕ್ಷಣ ಬದಲಾವಣೆ ನಿರ್ಧಾರ ತೆಗೆದುಕೊಳ್ಳಬಹುದು. ಟೈರ್ ನ ಸೈಡ್ ವಾಲ್ ವಾಹನ ಸಂಪೂರ್ಣ ಭಾರವನ್ನು ಹೊರಬೇಕಾಗುತ್ತದೆ. ಹೀಗಾಗಿ ಅದು ಸದಾ ಬಲಿಷ್ಠವಾಗಿರಬೇಕಾಗುತ್ತದೆ. ಆದ್ದರಿಂದ, ಸೈಡ್ ವಾಲ್ ಗೆ ಹಾನಿಯಾದರೆ ಬಹಳ ಗಂಭೀರವಾಗಿ ಪರಿಗಣಿಸಬೇಕು. ಸೈಡ್ ವಾಲ್ ನಲ್ಲಿ ಯಾವುದೇ ಉಬ್ಬು, ಬಿರುಕು ಅಥವಾ ಗುಳ್ಳೆಗಳು ಎದ್ದಿದ್ದರೆ ಅಪಾಯದ ಸಂಕೇತವಾಗಿರುತ್ತವೆ. ಇದು ಸ್ಫೋಟಗೊಂಡು ಅಪಘಾತ ಉಂಟು ಮಾಡಬಹುದು. ವಾಹನಗಳು ಅತಿವೇಗದಲ್ಲಿ ಚಲಿಸುವಾಗ ಸಿಕ್ಕಾಪಟ್ಟೆ ಒತ್ತಡವು ಟೈರ್ಗಳ ಮೇಲೆ ಬೀಳುತ್ತದೆ. ಅತಿ ವೇಗದಲ್ಲಿ ಓಡುವ ವಾಹನವನ್ನು ನಿಯಂತ್ರಣಕ್ಕೆ ತರುವಾಗಲೂ ಇದೇ ರೀತಿಯ ಒತ್ತಡ ಎದುರಾಗುತ್ತದೆ. ಸೈಡ್ ವಾಲ್ ಹಾಳಾಗಿದ್ದಾರೆ ತಕ್ಷಣ ಒತ್ತಡ ತಾಳಲಾರದೆ ಸ್ಫೋಟಗೊಳ್ಳುತ್ತದೆ.