ಬೆಂಗಳೂರು: ಬೇಸಿಗೆಯ ಬಿಸಿ ಏರುತ್ತಿದ್ದ ಹಾಗೆ ಬಳಲಿಕೆ ಹೆಚ್ಚಾಗುತ್ತದೆ. ಹಲವಾರು ಸೋಂಕುಗಳು ಮನುಷ್ಯನನ್ನು ಕಾಡುತ್ತವೆ. ಇದೇ ರೀತಿಯ ಸತತ ಬಿಸಿಲಿನ ಪ್ರಭಾವಕ್ಕೆ ನಿಮ್ಮ ವಾಹನಗಳೂ ಹಾಳಾಗಬಹುದು (Summer Car Care). ನಿರಂತರವಾಗಿ ಬಿಸಿಲಿಗೆ ನಿಲ್ಲಿಸಿದ ಪರಿಣಾಮ ಕಾರಿನ ಬಾಳಿಕೆಯೂ ಕಡಿಮೆಯಾಗಬಹುದು. ಹಾಗಾದರೆ ಬೇಸಿಗೆಯಲ್ಲಿ ಕಾರಿಗೆ ಆಗುವ ಪ್ರಮುಖ ಹಾನಿಗಳು ಯಾವುದೆಲ್ಲ ಎಂಬದನ್ನು ನೋಡೋಣ.
ಬಿರುಕು ಬಿಡುವುದು
ಸತತವಾಗಿ ಕಾರನ್ನು ಬಿಸಿಲಿಗೆ ನಿಲ್ಲಿಸಿದರೆ ಇಂಟೀರಿಯರ್ನಲ್ಲಿ ಹೆಚ್ಚು ಹಾನಿಯಾಗಬಹುದು. ಬಿಸಿಲಿನ ತಾಪಕ್ಕೆ ಕಾರಿನ ಡ್ಯಾಶ್ಬೋರ್ಡ್, ಸೀಟ್ಗಳು ಹಾಗೂ ಫೈಬರ್ ಭಾಗಗಳು ಬಿರುಕು ಬಿಟ್ಟುಕೊಳ್ಳುತ್ತವೆ. ಇಂಟೀರಿಯರ್ನಲ್ಲಿ ಬಿರುಕು ಬಿಟ್ಟರೆ ಅದನ್ನು ರಿಪೇರಿ ಮಾಡಲು ಸಾಧ್ಯವಿಲ್ಲ. ಮಾಡಿದರೂ ದೊಡ್ಡ ಮೊತ್ತವನ್ನು ಅದಕ್ಕಾಗಿ ವೆಚ್ಚ ಮಾಡಬೇಕಾಗುತ್ತೆ.
ಕಳೆಗುಂದಬಹುದು
ಕಾರಿನ ಸೀಟ್ಗಳು ಹಾಗೂ ಡೋರ್ ಪ್ಯಾನೆಲ್ಗಳಿಗೆ ಫ್ಯಾಬ್ರಿಕ್ಗಳನ್ನು ಬಳಸಿರುತ್ತಾರೆ. ಸತತವಾಗಿ ಬಿಸಿಲು ತಾಗಿದರೆ ಈ ಭಾಗಗಳೆಲ್ಲವೂ ಕಳೆಗುಂದುವ ಸಾಧ್ಯತೆಗಳಿವೆ. ಡೋರ್ ಪ್ಯಾನೆಲ್ಗಳನ್ನು ಅಷ್ಟೊಂದು ಸುಲಭವಾಗಿ ಬದಲಾಯಿಸಲು ಸಾಧ್ಯವಿಲ್ಲ ಹಾಗೂ ರಿಪೇರಿ ಮಾಡುವುದಾದರೂ ದೊಡ್ಡ ಮೊತ್ತವನ್ನು ವಿನಿಯೋಗ ಮಾಡಬೇಕಾಗುತ್ತದೆ.
ಏರ್ಬ್ಯಾಗ್ಗಳಿಗೆ ಹಾನಿ
ಏರ್ ಬ್ಯಾಗ್ಗಳು ಕಾರಿನಲ್ಲಿರುವ ಪ್ರಯಾಣಿಕರ ಸುರಕ್ಷತಾ ಸಾಧನ. ಈ ಏರ್ ಬ್ಯಾಟ್ಗಳನ್ನು ಡ್ಯಾಶ್ಬೋರ್ಡ್ ಒಳಗೆ ಹಾಗೂ ಕ್ಯಾಬಿನ್ ಪ್ಯಾನೆಲ್ಗಳ ಒಳಗೆ ಇರಿಸಿರುತ್ತಾರೆ. ಕಾರಿನ ಮೇಲೆ ಸತತವಾಗಿ ಬಿಸಿಲು ಬಿದ್ದಾಗ ಈ ಏರ್ಬ್ಯಾಗ್ಗೆ ಒಳಗಿನಿಂದನೇ ಹಾನಿಯಾಗುವ ಸಾಧ್ಯತೆಗಳಿವೆ. ಅಪಘಾತದ ವೇಳೆ ಈ ಏರ್ಬ್ಯಾಗ್ಗಳು ತೆರೆದುಕೊಳ್ಳದಿರಬಹುದು.
ಬೆಲ್ಟ್ಗಳಿಗೆ ಹಾಗೂ ಹೋಸ್ಗಳಿಗೆ ಹಾನಿ
ಕಾರಿನ ಎಂಜಿನ್ನಲ್ಲಿ ರಬ್ಬರ್ನ ಬೆಲ್ಟ್ಗಳಿರುತ್ತವೆ. ಪ್ರಮುಖವಾಗಿ ಫ್ಯಾನ್ಗೆ ಕನೆಕ್ಟ್ ಆಗಿತ್ತದೆ. ಜತೆಗೆ ಕೆಲವೊಂದು ಹೋಸ್ ಪೈಪ್ಗಳೂ ಇರುತ್ತವೆ. ಸತತವಾಗಿ ಬಿಸಿಲು ಬಿದ್ದರೆ ಬೆಲ್ಟ್ ಹಾಗೂ ಹೋಸ್ ಪೈಪ್ಗಳು ಬೇಗ ಹಾನಿಗೆ ಒಳಗಾಗುತ್ತವೆ. ಎಂಜಿನ್ ತಿರುಗುತ್ತಿರುವ ವೇಳೆ ಈ ಬೆಲ್ಟ್ ಹಾಗೂ ಹೋಸ್ ಪೈಪ್ಗಳು ಬೇಗ ತಣ್ಣಗಾಗುತ್ತವೆ. ಆದರೆ, ನಿಂತಲ್ಲೇ ನಿಂತಾಗ ತಣ್ಣಗಾಗದೇ ಬೇಗ ಹಾಳಾಗುತ್ತವೆ.
ಕೂಲೆಂಟ್ಗಳಿಗೆ ಹಾನಿ
ಬಿಸಿಲಿನ ಝಳಕ್ಕೆ ದ್ರವ ವಸ್ತುಗಳು ಆವಿಯಾಗುವುದು ಮಾಮೂಲಿ. ಅಂತೆಯೇ ಕಾರಿನ ಎಂಜಿನ್ ಸೇರಿದಂತೆ ನಾನಾ ಕಡೆ ದ್ರವ ವಸ್ತುಗಳಿರುತ್ತವೆ. ಎಂಜಿನ್ ಕೂಲೆಂಟ್ಗಳು, ವೈಪರ್ ಲಿಕ್ವಿಡ್ ಇದರಲ್ಲಿ ಪ್ರಮುಖವಾದದ್ದರು. ಕೂಲೆಂಟ್ಗಳು ಎಂಜಿನ್ ತಣ್ಣಗಾಗಿಸುವ ಕೆಲಸ ಮಾಡುತ್ತದೆ. ಒಂದು ವೇಳೆ ಕೂಲೆಂಟ್ ಆವಿಯಾಗಿ ಕಡಿಮೆಯಾದರೆ ಎಂಜಿನ್ಗೆ ಡ್ಯಾಮೇಜ್ ಉಂಟಾಗುವ ಸಾಧ್ಯತೆಗಳು ಇರುತ್ತವೆ.