ನವ ದೆಹಲಿ: 2030ರ ರ ವೇಳ ಭಾರತದಲ್ಲಿ 2 ಕೋಟಿಗೂ ಅಧಿಕ ಬ್ಯಾಟರಿ ಚಾಲಿತ (Eelectric Vehicles) ವಾಹನಗಳಿರುತ್ತವೆ. ಇದರಿಂದ ಎಲೆಕ್ಟ್ರಿಕ್ ವಾಹನಗಳ ಉತ್ಪಾದನಾ ಕ್ಷೇತ್ರ ಹಿಗ್ಗಲಿದೆ ಹಾಗೂ ಹೂಡಿಕೆ ಪ್ರಮಾಣವೂ ಹೆಚ್ಚಲಿದೆ ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಭಾನುವಾರ (ಫೆಬ್ರವರಿ 12) ಅಭಿಪ್ರಾಯಪಟ್ಟಿದ್ದಾರೆ. ಇದರಿಂದ ಪರಿಸರಕ್ಕೆ ಪ್ರಯೋಜನ ಸಿಗುವ ಜತೆಗೆ ಭಾರತದ ಆರ್ಥಿಕತೆಗೂ ನೆರವಾಗಲಿದೆ ಎಂದು ಅವರು ಹೇಳಿದರು.
ಎಲೆಕ್ಟ್ರಿಕ್ ವಾಹನಗಳು ಹಾಗೂ ಭವಿಷ್ಯದ ಸಾರಿಗೆ ಕುರಿತು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇವಿ ವಾಹನಗಳ ಉತ್ಪಾದನಾ ಕ್ಷೇತ್ರದಲ್ಲಿ ವಿದೇಶಿ ಹೂಡಿಕೆಗಳು ಹೆಚ್ಚಾಗಲಿವೆ. ಇದರಿಂದ ಭಾರತದಲ್ಲಿ ಉದ್ಯೋಗದ ಅವಕಾಶಗಳೂ ವ್ಯಾಪಕವಾಗಲಿವೆ. ಪರಿಸರ ಸ್ನೇಹಿ ಎಂಬುದು ಒಂದು ಲಾಭವಾದರೆ ಜನರಿಗೂ ಅದರ ಲಾಭ ಸಿಗುವುದು ಭಾರತದ ಪಾಲಿಗೆ ಪೂರಕ ಸಂಗತಿ ಎಂದು ಅವರು ಹೇಳಿದರು.
ಭಾರತದಲ್ಲಿ ಶಬ್ದ ಹಾಗೂ ವಾಯು ಮಾಲಿನ್ಯದಲ್ಲಿ ವಾಹನಗಳ ಪಾಲು ಶೇಕಡಾ 40. ಹೀಗಾಗಿ ಎಲೆಕ್ಟ್ರಿಕ್ ವಾಹನಗಳ ಹೆಚ್ಚಳದಿಂದಾಗಿ ಈ ಎರಡೂ ಸಮಸ್ಯೆಗೆ ಪರಿಹಾರ ಸಿಗಲಿದೆ. ಸ್ವಚ್ಛ ಸಾರಿಗೆ ವ್ಯವಸ್ಥೆಗೆ ಈ ಬದಲಾವಣೆಯಿಂದ ನೆರವಾಗಲಿದೆ ಎಂದು ಹೇಳಿದರು.
ಇಂಧನ ಸ್ವಾವಲಂಬನೆ ಸಾಧ್ಯ
ಎಲೆಕ್ಟ್ರಿಕ್ ವಾಹನಗಳ ಹೆಚ್ಚಳದಿಂದಾಗಿ ಇಂಧನ ಸ್ವಾವಲಂಬನೆಯೂ ಸಾಧ್ಯ ಎಂಬುದಾಗಿ ಗಡ್ಕರಿ ಇದೇ ವೇಳೆ ನುಡಿದರು. ಸುಮಾರು 18 ಲಕ್ಷ ಕೋಟಿ ರೂಪಾಯಿ ಮೊತ್ತವನ್ನು ವಿದೇಶಗಳಿಂದ ಇಂಧನ ಆಮದಿಗಾಗಿ ವಿನಿಯೋಗಿಸಲಾಗುತ್ತಿದೆ. ಶೇ 80ರಷ್ಟು ಪೆಟ್ರೋಲ್ ವಿದೇಶದಿಂದ ತರುವ ಕಾರಣ ಈ ಹೊರೆ ಅನುಭವಿಸಲಾಗುತ್ತದೆ. ಎಲೆಕ್ಟ್ರಿಕ್ ವಾಹನಗಳ ಬಳಕೆಯಿಂದ ಆರ್ಥಿಕ ಹೊರೆಯೂ ತಗ್ಗಲಿದೆ ಎಂದು ಅವರು ಹೇಳಿದರು.
ಇದನ್ನೂ ಓದಿ : Union Budget 2023 : ಲೀಥಿಯಮ್ ಬ್ಯಾಟರಿ ತಯಾರಿಗೆ ಬೆಂಬಲ, ಇನ್ನು ಮುಂದೆ ಇವಿ ವಾಹನಗಳು ಅಗ್ಗ
ಇದೇ ವೇಳೆ ಅವರು ರಾಜ್ಯ ಸರಕಾರಗಳು, ಎಲೆಕ್ಟ್ರಿಕ್ ವಾಹನಗಳಿಗೆ ಬೇಕಾಗಿರುವ ಬ್ಯಾಟರಿಗಳ ಪೂರೈಕೆಗೆ ಅನುಗುಣವಾಗಿ ನಿಯಮಗಳನ್ನು ರೂಪಿಸಬೇಕು ಎಂಬುದಾಗಿ ಸಲಹೆ ನೀಡಿದರು.