ಮುಂಬಯಿ : 50 ವರ್ಷದ ಹಿಂದೆ ಭಾರತದಲ್ಲಿ ಜನ ಮೆಚ್ಚುಗೆ ಗಳಿಸಿದ್ದ ಹಾಗೂ ಜನರ ಜೀವನಾಡಿಯಾಗಿದ್ದ ಕೈನೆಟಿಕ್ ಮೊಪೆಡ್ (Kinetic Luna) ಎಲೆಕ್ಟ್ರಿಕ್ ಅವತಾರದಲ್ಲಿ ರಸ್ತೆಗಿಳಿಯಲಿದೆ. ಬೇಡಿಕೆ ಕಡಿಮೆಯಾದ ಕಾರಣ 2000ರಲ್ಲಿ ಈ ಸ್ಕೂಟರ್ನ ಉತ್ಪಾದನೆಯನ್ನು ನಿಲ್ಲಿಸಲಾಗಿತ್ತು. ಇದೀಗ ಮತ್ತೆ ಬ್ಯಾಟರಿ ಚಾಲಿತ ವಾಹನವಾಗಿ ಜನರ ಮನಸ್ಸು ಗೆಲ್ಲಲು ಮುಂದಾಗಿದೆ.
ಕೈನೆಟಿಕ್ ಎಂಜಿನಿಯರಿಂಗ್ ಲಿಮಿಟೆಡ್ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಮಾರುಕಟ್ಟೆಗೆ ಇಳಿಸುವುದಾಗಿ ಪ್ರಕಟಿಸಿದ್ದು, ಚಾಸಿಸ್ ಹಾಗೂ ಇನ್ನಿತರ ಬಿಡಿಭಾಗಗಳ ಉತ್ಪಾದನೆ ಆರಂಭಿಸಿದೆ. ಕೈನೆಟಿಕ್ ಗ್ರೀನ್ ಎನರ್ಜಿ ಆ್ಯಂಡ್ ಪವರ್ ಸೊಲ್ಯೂಶನ್ ಮೂಲಕ ಇದರ ಮಾರಾಟ ನಡೆಯಲಿದೆ.
ಮಹಾರಾಷ್ಟ್ರದ ಅಹಮದ್ನಗರದಲ್ಲಿರುವ ಉತ್ಪಾದನಾ ಘಟಕದಲ್ಲಿ ಚಾಸಿಸ್, ಮೇನ್ ಸ್ಟಾಂಡ್, ಸೈಡ್ ಸ್ಟಾಂಡ್ ಮತ್ತು ಸ್ವಿಂಗ್ ಆರ್ಮ್ಗಳ ಉತ್ಪಾದನೆ ಆರಂಭಗೊಂಡಿದೆ ಎಂಬುದಾಗಿ ಕಂಪನಿಯು ಹೇಳಿದೆ. ಅದೇ ರೀತಿ ತಿಂಗಳಿಗೆ 5 ಸಾವಿರ ದ್ವಿ ಚಕ್ರ ವಾಹನಗಳ ಉತ್ಪಾದನೆ ಮಾಡುವುದಾಗಿ ಹೇಳಿಕೊಂಡಿದೆ.
ಕಂಪನಿಯ ಪ್ರಕಾರ ಕೈನೆಟಿಕ್ ಮೊಪೆಡ್ ಜನಪ್ರಿಯತೆಯ ಉತ್ತುಂಗದಲ್ಲಿದ್ದಾಗ ದಿನವೊಂದಕ್ಕೆ 2000ಕ್ಕೂ ಅಧಿಕ ಉತ್ಪನ್ನಗಳನ್ನು ಮಾರಾಟ ಮಾಡುತ್ತಿತ್ತು. ಎಲೆಕ್ಟ್ರಿಕ್ ಮೊಪೆಡ್ ಕೂಡಾ ಅದೇ ಜನಪ್ರಿಯತೆ ಗಳಿಸಿಕೊಳ್ಳಲಿದೆ ಎಂದು ಹೇಳಿದೆ. ಅದೇ ರೀತಿ ಮುಂದಿನ ಮೂರು ವರ್ಷದಲ್ಲಿ ವಾರ್ಷಿಕ 30 ಕೋಟಿ ರೂಪಾಯಿ ವಹಿವಾಟು ನಡೆಸುವ ಗುರಿಯನ್ನು ಹೊಂದಿದೆ.
ಕೈನೆಟಿಕ್ ಎಲೆಕ್ಟ್ರಿಕ್ ಲಿಮಿಟೆಡ್ ಹೊಸ ಮೊಪೆಡ್ನ ವಿಶೇಷತೆಗಳ ಬಗ್ಗೆ ಇನ್ನೂ ಯಾವುದೇ ಮಾಹಿತಿ ಪ್ರಕಟಿಸಿಲ್ಲ. ಆದರೆ, ಗ್ರಾಮಾಂತರ ಪ್ರದೇಶದ ಬೇಡಿಕೆಗಳಿಗೆ ಅನುಗುಣವಾಗಿ ಸ್ಕೂಟರ್ ಬಿಡುಗಡೆ ಮಾಡುವ ಉದ್ದೇಶ ಹೊಂದಿದೆ. ದೈನಂದಿನ ಪ್ರಯಾಣ ಹಾಗೂ ಲಗೇಜ್ ತೆಗೆದುಕೊಂಡು ಹೋಗಲು ಅನುಕೂಲ ಮಾಡಿಕೊಡುವ ಉದ್ದೇಶ ಹೊಂದಿದೆ.
ಇದನ್ನೂ ಓದಿ | LML STAR | ಎಲ್‌ಎಮ್‌ಎಲ್ ಕಂಪನಿಯ ಎಲೆಕ್ಟ್ರಿಕ್ ಸ್ಕೂಟರ್‌ಗಳಿಗೆ ಬುಕಿಂಗ್ ಆರಂಭ