ಬೆಂಗಳೂರು: ಬೆಂಗಳೂರು ಮೂಲದ ಸ್ಟಾರ್ಟ್ಅಪ್ ಸಿಂಪಲ್ ಎನರ್ಜಿ ಅಂತಿಮವಾಗಿ ತನ್ನ ಒನ್ ಎಲೆಕ್ಟ್ರಿಕ್ ಸ್ಕೂಟರ್ನ ಪ್ರೊಡಕ್ಷನ್-ಸ್ಪೆಕ್ ಆವೃತ್ತಿಯನ್ನು ಬಿಡಗಡೆ ಮಾಡಿದು. ಇದು ಭಾರತದಲ್ಲಿ ಬಿಡುಗಡೆಯಾಗಿರುವ ಅತ್ಯಂತ ದೊಡ್ಡ ಬ್ಯಾಟರಿ ಹೊಂದಿರುವ ಸ್ಕೂಟರ್ ಆಗಿದೆ. ಈ ಸ್ಕೂಟರ್ನ ಬೆಲೆ 1.45 ಲಕ್ಷ ರೂ.ಗಳಿಂದ 1.50 ಲಕ್ಷ ರೂ.ಗಳವರೆಗೆ (ಎಕ್ಸ್ ಶೋರೂಂ, ಬೆಂಗಳೂರು) ಎಂದು ಕಂಪನಿಯು ಘೋಷಿಸಿದೆ.
ಸಿಂಪಲ್ ಒನ್ 5 ಕಿಲೋವ್ಯಾಟ್ ಲಿಥಿಯಂ-ಐಯಾನ್ ಬ್ಯಾಟರಿಯನ್ನು ಹೊಂದಿದ್ದು, ಒಂದು ಬಾರಿ ಚಾರ್ಜ್ ಮಾಡಿದರೆ 212 ಕಿ.ಮೀ ದೂರ ಪ್ರಯಾಣ ಮಾಡಬಹುದು. ಬ್ಯಾಟರಿಗಳನ್ನು ಎರಡು ಪ್ಯಾಕ್ಗಳಾಗಿ ವಿಂಗಡಿಸಲಾಗಿದ್ದು, ಒಂದು ಸ್ಥಿರ ಮತ್ತು ಒಂದು ತೆಗೆದಿಡುವ ಆಯ್ಕೆಯನ್ನು ನೀಡಲಾಗಿದೆ. ಈ ಬ್ಯಾಟರಿಗಳು ಮ್ಯಾಗ್ನೆಟ್ ಮೋಟರ್ ಗೆ ಶಕ್ತಿ ನೀಡುತ್ತದೆ. ಮೋಟಾರ್ 8.5 ಕಿಲೋವ್ಯಾಟ್ ಗರಿಷ್ಠ ಶಕ್ತಿ (4.5 ಕಿಲೋವ್ಯಾಟ್ ನಿರಂತರ) ಮತ್ತು 72 ಎನ್ಎಂ ಟಾರ್ಕ್ ಬಿಡುಗಡೆ ಮಾಡುತ್ತದೆ. ಇದು 2.77 ಸೆಕೆಂಡುಗಳಲ್ಲಿ 0ಯಿಂದ 40 ಕಿ.ಮೀ ವೇಗವನ್ನು ಪಡೆಯುತ್ತದೆ ಹಾಗೂ 105 ಕಿ.ಮೀ ಗರಿಷ್ಠ ವೇಗ ಪಡೆಯಲು ನೆರವಾಗುತ್ತದೆ.
ಪೋರ್ಟಬಲ್ ಮತ್ತು ಹೋಮ್ ಚಾರ್ಜರ್ಗಳನ್ನು ಬಳಸಿಕೊಂಡು 5 ಗಂಟೆ 54 ನಿಮಿಷಗಳಲ್ಲಿ ಬ್ಯಾಟರಿಯನ್ನು 0ಯಿಂದ 80 ಶೇಕಡ ಚಾರ್ಜ್ ಮಾಡಬಹುದು ಎಂದು ಸಿಂಪಲ್ ಎನರ್ಜಿ ಹೇಳಿಕೊಂಡಿದೆ. ಫಾಸ್ಟ್ ಚಾರ್ಜರ್ನೊಂದಿಗೆ ಸ್ಕೂಟರ್ ಅನ್ನು ನಿಮಿಷಕ್ಕೆ 1.5 ಕಿ.ಮೀ ದರದಲ್ಲಿ 80 ಪ್ರತಿಶತದಷ್ಟು ಚಾರ್ಜ್ ಮಾಡಬಹುದು. ಆದರೆ ಫಾಸ್ಟ್ ಚಾರ್ಜಿಂಗ್ ವ್ಯವಸ್ಥೆಯನ್ನು ಇನ್ನೂ ಸಿದ್ಧಪಡಿಸಿಲ್ಲ. ಫಾಸ್ಟ್ ಚಾರ್ಜಿಂಗ್ ನೆಟ್ವರ್ಕ್ ಆಗಸ್ಟ್ ಬಳಿಕದಿಂದ ಕಾರ್ಯಾರಂಭಿಸಲಿದೆ ಎಂದು ಕಂಪನಿ ಹೇಳಿದೆ.
ಇದನ್ನೂ ಓದಿ : Tata Motors : ಆಲ್ಟ್ರೋಜ್ ಐಸಿಎನ್ಜಿಯ ಬೆಲೆ ಪ್ರಕಟ; ಎಷ್ಟಿರಬಹುದು ರೇಟ್?
134 ಕೆ.ಜಿ ತೂಕದ ಸಿಂಪಲ್ ಒನ್ ಭಾರತದಲ್ಲಿ ಮಾರಾಟವಾಗುತ್ತಿರುವ ಅತ್ಯಂತ ಭಾರವಾದ ಇ-ಸ್ಕೂಟರ್ ಎನಿಸಿಕೊಂಡಿದೆ. (ಉತ್ಪಾದನೆಗೆ ಮೊದಲು ಸಿಂಪಲ್ ಒನ್ ಮಾದರಿಯು 20 ಕೆ.ಜಿ ಕಡಿಮೆಯಿತ್ತು). ಸೀಟ್ ಎತ್ತರ 796 ಎಂಎಂನಷ್ಟಿದೆ. 1,335 ಎಂಎಂ ವ್ಹೀಲ್ ಬೇಸ್ ಹೊಂದಿದ್ದು, ಅಥೆರ್ 450 ಎಕ್ಸ್ ಗಿಂತ 40 ಎಂಎಂ ಉದ್ದವಿದೆ. ಇದು ಟ್ಯೂಬ್ ಆಕಾರದ ಸ್ಟೀಲ್ ಚಾಸಿಸ್ ಅನ್ನು ಹೊಂದಿದ್ದು, ಟೆಲಿಸ್ಕೋಪಿಕ್ ಫೋರ್ಕ್ / ಮೊನೊಶಾಕ್ ಸೆಟ್ಅಪ್ ಮೂಲಕ ಜೋಡಿಸಲಾಗಿದೆ. 90 ಸೆಕ್ಷನ್ ರಬ್ಬರ್ನೊಂದಿಗೆ 12 ಇಂಚಿನ ವೀಲ್ಗಳನ್ನು ನೀಡಲಾಗಿದೆ. ಮುಂಭಾಗದಲ್ಲಿ ಮುಂಭಾಗದಲ್ಲಿ 200 ಎಂಎಂ ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದಲ್ಲಿ 190 ಎಂಎಂ ಡಿಸ್ಕ್ ಬ್ರೇಕ್ಗಳನ್ನು ಅಳವಡಿಸಲಾಗಿದೆ.
ಸಿಂಪಲ್ ಒನ್ ವಿಶೇಷತೆಗಳು
ಸಿಂಪಲ್ ಒನ್ 7 ಇಂಚಿನ ಟಿಎಫ್ಟಿ ಡ್ಯಾಶ್ ಹೊಂದಿದೆ. ಇದಕ್ಕೆ ಬ್ಲೂಟೂತ್ ಮೂಲಕ ಪೋನ್ ಸಂಪರ್ಕ ಸಾಧಿಸಬಹುದು. ನ್ಯಾವಿಗೇಷನ್ ಮತ್ತು ಅದರ ಮೇಲಿನ ಮ್ಯೂಸಿಕ್ ಕಂಟ್ರೋಲ್ ಕೂಡ ಸಾಧ್ಯವಿದೆ. ಓವರ್ ದಿ ಏರ್ (ಒಟಿಎ) ಮೂಲಕ ಸಾಫ್ಟ್ವೇರ್ ಅಪ್ಡೇಟ್ ಮಾಡಬಹುದು. ಇಕೋ, ರೈಡ್, ಡ್ಯಾಶ್ ಮತ್ತು ಸೋನಿಕ್ ಎಂಬ ನಾಲ್ಕು ರೈಡಿಂಗ್ ಮೋಡ್ಗಳನ್ನು ನೀಡಲಾಗಿದೆ. ಇದು ಆಲ್ ಎಲ್ಇಡಿ ಲೈಟಿಂಗ್ ಮತ್ತು ಬೂಟ್ಲೈಟ್ ಕೂಡ ಸ್ಕೂಟರ್ನಲ್ಲಿದೆ. 30 ಲೀಟರ್ ಬೂಟ್ ಸಾಮರ್ಥ್ಯದ ಮೂಲಕ ಈ ಸೆಗ್ಮೆಂಟ್ನಲ್ಲಿ ಅಗ್ರ ಸ್ಥಾನ ಪಡೆದುಕೊಂಡಿದೆ.
ಕಪ್ಪು, ಕೆಂಪು, ನೀಲಿ ಮತ್ತು ಬಿಳಿ ಎಂಬ ನಾಲ್ಕು ಸಿಂಗಲ್ ಟೋನ್ ಬಣ್ಣಗಳಲ್ಲಿ ಸಿಂಪಲ್ ಒನ್ ಲಭ್ಯವಿದೆ. ಅದೇ ರೀತಿ ಕೆಂಪು ಅಲಾಯ್ ಚಕ್ರಗಳು ಮತ್ತು ಹೈಲೈಟ್ಗಳೊಂದಿಗೆ ಬಿಳಿ ಮತ್ತು ಕಪ್ಪು ಎಂಬ ಎರಡು ಡ್ಯುಯಲ್ ಟೋನ್ ಬಣ್ಣಗಳಲ್ಲಿಯೂ ಇದೆ. ಡ್ಯುಯಲ್-ಟೋನ್ ಬಣ್ಣಗಳ ಬೆಲೆಯು ಸಿಂಗಲ್-ಟೋನ್ ಬಣ್ಣಗಳಿಗಿಂತ 5,000 ರೂ.ಗಳಷ್ಟು ಅಧಿಕ.
ಸಿಂಪಲ್ ಒನ್ ಬೆಲೆ, ಪ್ರತಿಸ್ಪರ್ಧಿ ಸ್ಕೂಟರ್ಗಳು
ಸಿಂಪಲ್ ಒನ್ ಸ್ಕೂಟರ್ಗೆ 1.45 ಲಕ್ಷ ರೂ.ಗಳಿಂದ 1.50 ಲಕ್ಷ ರೂ.ಗಳವರೆಗೆ ( ಬೆಂಗಳೂರು ಎಕ್ಸ್ ಶೋರೂಂ) ಬೆಲೆ ನಿಗದಿ ಮಾಡಲಾಗಿದೆ. ಈ ಮೂಲಕವೂ ಭಾರತದ ದುಬಾರಿ ಇ-ಸ್ಕೂಟರ್ ಎನಿಸಿಕೊಂಡಿದೆ. ವೇಗದ 750 ವ್ಯಾಟ್ ಚಾರ್ಜರ್ಗೆ 13,000 ರೂಪಾಯಿ ಪಾವತಿ ಮಾಡಬೇಕು. ಇದು ಸೆಪ್ಟೆಂಬರ್ನಿಂದ ಲಭ್ಯ.
ಓಲಾ ಎಸ್ 1 ಪ್ರೊ, ಏಥರ್ 450 ಎಕ್ಸ್, ಟಿವಿಎಸ್ ಐಕ್ಯೂಬ್ ಎಸ್, ಬಜಾಜ್ ಚೇತಕ್ ಮತ್ತು ವಿಡಾ ವಿ 1 ಪ್ರೊ ಸ್ಕೂಟರ್ಗಳಿಗೆ ಪೈಪೋಟಿ ಒಡ್ಡಲಿದೆ. ಸ್ಕೂಟರ್ನ ವಿತರಣೆ ಜೂನ್ 6 ರಂದು ಬೆಂಗಳೂರಿನಲ್ಲಿ ಪ್ರಾರಂಭವಾಗಲಿದೆ. ಶೀಘ್ರದಲ್ಲೇ ಇತರ ನಗರಗಳಲ್ಲಿ ವಿತರಣೆ ಶುರುವಾಗಲಿದೆ. ಮುಂದಿನ 8ರಿಂದ 10 ತಿಂಗಳಲ್ಲಿ ಭಾರತದಲ್ಲಿ ‘140 ರಿಂದ 150’ ಶೋರೂಂಗಳನ್ನು ಸ್ಥಾಪಿಸುವ ಗುರಿಯನ್ನು ಸಿಂಪಲ್ ಒನ್ ಹೊಂದಿದೆ.