ಬೆಂಗಳೂರು: ಮಹೀಂದ್ರಾ ಕಂಪನಿಯು ಎಕ್ಸ್ ಯುವಿ 700 (1,08,306 ಯುನಿಟ್ ಗಳು) ಮತ್ತು ಎಕ್ಸ್ ಯುವಿ 400 (3,560 ಯುನಿಟ್ ಗಳು) ಒಟ್ಟು 1.10 ಲಕ್ಷ ಯುನಿಟ್ ಗಳನ್ನು ಹಿಂಪಡೆಯಲು ನಿರ್ಧರಿಸಿದೆ/ ಎಕ್ಸ್ ಯುವಿ 700 ಈಗಾಗಲೇ ಕೆಲವು ಹಿಂಪಡೆಯುವಿಕೆಗಳನ್ನು ಕಂಡಿದ್ದರೂ, ಈ ವರ್ಷದ ಆರಂಭದಲ್ಲಿ ಬಿಡುಗಡೆಯಾದ ನಂತರ ಎಕ್ಸ್ ಯುವಿ 400 ಇದೇ ಮೊದಲ ಬಾರಿಗೆ ವಾಪಸ್ ಪಡೆಯಲಾಗುತ್ತಿದೆ. ವೈರಿಂಗ್ ಸವೆತದ ಸಂಭಾವ್ಯ ಅಪಾಯದಿಂದಾಗಿ ಎಕ್ಸ್ ಯುವಿ 700 ಅನ್ನು ಹಿಂಪಡೆಯಲಾಗಿದೆ ಬ್ರೇಕ್ ಪೊಟೆಂಟಿಯೋಮೀಟರ್ ನ ಸ್ಪ್ರಿಂಗ್ ಸಮಸ್ಯೆಗಾಗಿ ಎಕ್ಸ್ ಯುವಿ 400 ಕಾರನ್ನು ವಾಪಸ್ ಪಡೆಯಲಾಗಿದೆ.
ವೈರಿಂಗ್ ಹಾರ್ನೆಸ್ ಸವೆತಕ್ಕೆ ಒಳಗಾಗಿರುವ ಕಾರುಗಳನ್ನು ಜೂನ್ 8, 2021 ಮತ್ತು ಜೂನ್ 28, 2023 ರ ನಡುವೆ ತಯಾರಿಸಲಾಗಿದೆ. ಎಕ್ಸ್ ಯುವಿ 700 ಅನ್ನು ಆಗಸ್ಟ್ 2021ರಲ್ಲಿ ಮಾತ್ರ ಬಿಡುಗಡೆ ಮಾಡಿರುವುದರಿಂದ, ಇಲ್ಲಿಯವರೆಗೆ ಮಾರಾಟವಾದ ಎಕ್ಸ್ ಯುವಿ 700 ನ ಬಹುತೇಕ ಎಲ್ಲಾ ಯುನಿಟ್ ಗಳು ಈ ವಾಪಸ್ಗೆ ಅನ್ವಯವಾಗುತ್ತದೆ ಎಂದು ಹೇಳಲಾಗಿದೆ.
ಇದನ್ನೂ ಓದಿ: Mahindra : ಮಹೀಂದ್ರಾ ಮಾಲೀಕತ್ವದ ಕಂಪನಿಯಿಂದ 40 ಕೋಟಿ ರೂಪಾಯಿಯ ಕಾರು ಬಿಡುಗಡೆ
ಎಕ್ಸ್ ಯುವಿ 400 ಇವಿಗೆ ಸಂಬಂಧಿಸಿದಂತೆ, ಬ್ರೇಕ್ ಪೊಟೆಂಟಿಯೋಮೀಟರ್ ನ ಸ್ಪ್ರಿಂಗ್ ರಿಟರ್ನ್ ಸಮಸ್ಯೆ ಇರುವ ಕಾರಣಕ್ಕೆ ಪರಿಶೀಲಿಸಲು ವಾಪಸ್ ಕರೆಸಿಕೊಳ್ಳಲಾಗಿದೆ. ಇದರರ್ಥ ಚಾಲಕ ಬ್ರೇಕ್ ಪೆಡಲ್ ಅನ್ನು ಬಿಡುಗಡೆ ಮಾಡಿದರೂ ಬ್ರೇಕ್ ಪ್ಯಾಡ್ ಗಳು ಡಿಸ್ಕ್ ಬಿಡುತ್ತಿರಲಿಲ್ಲ. ಎಕ್ಸ್ ಯುವಿ 400 ಇವಿಯ ಬಾಧಿತ ಘಟಕಗಳನ್ನು ಫೆಬ್ರವರಿ 16-ಜೂನ್ 5, 2023 ರ ನಡುವೆ ತಯಾರಿಸಲಾಗಿದೆ.
ಈ ಕುರಿತು ಮಹೀಂದ್ರಾ ತನ್ನ ಅಧಿಕೃತ ಹೇಳಿಕೆಯನ್ನು ಬಿಡುಗಡೆ ಮಾಡಿದೆ. “ತನ್ನ ಗ್ರಾಹಕರಿಗೆ ತೊಂದರೆಯಿಲ್ಲದ ಅನುಭವವನ್ನು ಖಚಿತಪಡಿಸಿಕೊಳ್ಳುವ ಪ್ರಯತ್ನದಲ್ಲಿ, ಕಂಪನಿಯು ಸಮಸ್ಯೆ ಇರುವ ವಾಹನಗಳನ್ನು ದುರಸ್ತಿ ಮಾಡಿಕೊಡುವ ಕಾರ್ಯಕ್ಕೆ ಮುಂದಾಗಿದೆ. ಈ ಕ್ರಮವು ವಾಹನ ಹಿಂಪಡೆಯುವಿಕೆಯ ಸ್ವಯಂಪ್ರೇರಿತ ನಿಯಮಕ್ಕೆ ಪೂರಕವಾಗಿದೆ. ತಪಾಸಣೆ ಮತ್ತು ನಂತರದ ಸರಿಪಡಿಸುವಿಕೆಯನ್ನು ಎಲ್ಲಾ ಗ್ರಾಹಕರಿಗೆ ಉಚಿತವಾಗಿ ನಡೆಸಲಾಗುವುದು. ಅವರನ್ನು ಕಂಪನಿಯು ವೈಯಕ್ತಿಕವಾಗಿ ಸಂಪರ್ಕಿಸಲಿದೆ ಎಂದು ಹೇಳಿದೆ.
ಮೂರು ತಿಂಗಳಲ್ಲಿ ಮೂರು ಬಾರಿ ಕೆಟ್ಟು ನಿಂತ ಇವಿ ಕಾರು, ಧರಣಿ ಕುಳಿತ ಮಾಲೀಕ!
ಚೆನ್ನೈನ ಕ್ರೋಮ್ಪೇಟ್ ಮೂಲದ ಮಹೀಂದ್ರಾ ಎಕ್ಸ್ ಯುವಿ 400 ಇವಿ ಕಾರಿನ ಮಾಲೀಕರೊಬ್ಬರು ಕಾರು ಪದೇಪದೆ ಕೆಟ್ಟು ನಿಲ್ಲುತ್ತದೆ ಎಂದು ಕೋಪಗೊಂಡು ಶೋರೂಮ್ (Mahindra Car) ಮುಂದೆ ಧರಣಿ ಕುಳಿತ ಪ್ರಸಂಗ ನಡೆದಿದೆ. ತಮ್ಮ ಮೂರು ತಿಂಗಳಷ್ಟು ಹೊಸ ವಾಹನವು ಮೂರು ಬಾರಿ ಅರ್ಧ ದಾರಿಯಲ್ಲಿ ಕೆಟ್ಟು ನಿಂತಿದೆ. ಆದರೆ, ಅದಕ್ಕೆ ಪೂರಕವಾಗಿರುವ ಮಾರ್ಗದರ್ಶನ ಕಂಪನಿ ಕಡೆಯಿಂದ ಸಿಗುತ್ತಿಲ್ಲ. ಹೀಗಾಗಿ ಧರಣಿ ಕುಳಿತಿದ್ದೇನೆ ಎಂಬುದಾಗಿ ಕಾರಿನ ಮಾಲೀಕರು ಹೇಳಿಕೊಂಡಿದ್ದಾರೆ.
ಮಹೀಂದ್ರಾ ಎಕ್ಸ್ ಯುವಿ 400 ಇವಿ ಮಾಲೀಕ ತಮ್ಮ ಕೋಪ ಮತ್ತು ಬ್ರಾಂಡ್ ಮತ್ತು ಅದರ ಉತ್ಪನ್ನ ಎರಡರಲ್ಲೂ ನಂಬಿಕೆ ಕಳೆದುಕೊಂಡಿರುವ ಬಗ್ಗೆ ಬ್ಯಾನರ್ ಬರೆದುಕೊಂಡು ಅದರ ಕೆಳಗೆ ಧರಣಿ ಕುಳಿತಿದ್ದಾರೆ. ಅದೇ ರೀತಿ ತಮಗೆ ಆಗಿರುವ ಮಾನಸಿಕ ತೊಂದರೆ ಮತ್ತು ಪರಿಹರಿಸಲಾಗದ ಸಮಸ್ಯೆಗಳನ್ನು ಉಲ್ಲೇಖಿಸಿ ಕಂಪನಿಯ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುವುದಾಗಿಯೂ ಅವರು ಹೇಳಿದ್ದಾರೆ. ಇವಿ ಕಾರನ್ನು ಖರೀದಿಸಲು ನಾನು 21 ಲಕ್ಷ ರೂ.ಗಳನ್ನು ವ್ಯಯಿಸಿದ್ದೇನೆ. ಮಾಸಿಕ 32,000 ರೂ.ಗಳ ಇಎಂಐ ಪಾವತಿಸುತ್ತಿದ್ದೇನೆ. ವಿದೇಶಿ ಬ್ರಾಂಡ್ ಗಳಿಗಿಂತ ಮಹೀಂದ್ರಾವನ್ನು ಆಯ್ಕೆ ಮಾಡಿಕೊಂಡಿರುವುದು ಅಭಿಮಾನದಿಂದ. ಆದರೆ ಕಂಪನಿಯ ಸೂಕ್ತ ನೆರವು ನೀಡದ ಕಾರಣ ಭ್ರಮ ನಿರಸನಗೊಂಡಿದ್ದೇನೆ ಎಂಬುದಾಗಿ ಅವರು ಬರೆದುಕೊಂಡಿದ್ದಾರೆ.
ಈ ಗ್ರಾಹಕರು ಎದುರಿಸುತ್ತಿರುವ ಸಮಸ್ಯೆಯ ನಿಖರ ಸ್ವರೂಪವು ಗೊತ್ತಿಲ್ಲ. ಮಾಲೀಕರಿಗೂ ಆ ಬಗ್ಗೆ ಸ್ಪಷ್ಟತೆ ಇಲ್ಲ. ಆದರೆ, ದಾರಿ ಮಧ್ಯದಲ್ಲಿ ಕೆಟ್ಟು ನಿಂತಿದೆ ಎಂಬುದಾಗಿ ಅವರು ಹೇಳಿಕೊಂಡಿದ್ದಾರೆ. ಈ ಮಾಡೆಲ್ನ ಕಾರು ಹಲವಾರು ಬಾರಿ ಕೆಟ್ಟು ನಿಂತಿರುವ ಬಗ್ಗೆ ದೂರುಗಳು ಕೇಳಿ ಬಂದಿವೆ ಎನ್ನಲಾಗಿದೆ. ಶೋ ರೂಮ್ಗೆ ಟೋಯಿಂಗ್ ಮಾಡುವುದು ಅನಿವಾರ್ಯವಾಗಿದೆ ಎನ್ನಲಾಗುತ್ತಿದೆ.