ನವ ದೆಹಲಿ: ಮಾರುತಿ ಸುಜುಕಿ 1 ಲಕ್ಷ ಕೋಟಿ ರೂ. ಆದಾಯ ಗಳಿಸಿದ ಭಾರತದ ಮೊಟ್ಟ ಮೊದಲ ಪ್ಯಾಸೆಂಜರ್ ಕಾರು ಕಂಪನಿಯಾಗಿ ಹೊರಹೊಮ್ಮಿದೆ. (Maruti Suzuki) ಜಾಗತಿಕ ಮಟ್ಟದಲ್ಲಿ ಆದಾಯದ ಲೆಕ್ಕದಲ್ಲಿ ಟಾಪ್ 30 ಆಟೊಮೊಬೈಲ್ ಕಂಪನಿಗಳ ಸಾಲಿಗೆ ಮಾರುತಿ ಸುಜುಕಿಯೂ ಸೇರಿದೆ. ಟಾಟಾ ಮೋಟಾರ್ಸ್ ಕೂಡ ಜಾಗತಿಕ ಮಟ್ಟದಲ್ಲಿ ಟಾಪ್ 30 ಆದಾಯವಿರುವ ( Maruti 1st car company to cross Rs 1 lakh crore revenue mark ) ಆಟೊಮೊಬೈಲ್ ಕಂಪನಿಗಳ ಪಟ್ಟಿಯಲ್ಲಿದೆ. ಅದು 17ನೇ ರ‍್ಯಾಂಕ್ ಗಳಿಸಿದೆ.
ಟಾಟಾ ಮೋಟಾರ್ಸ್‌ನ ಮೂರನೇ ಒಂದರಷ್ಟು ಆದಾಯ ಜಾಗ್ವಾರ್ ಲ್ಯಾಂಡ್ ರೋವರ್ ಕಾರುಗಳ ಮಾರಾಟದಿಂದ ಸಿಗುತ್ತಿದೆ. ಮಾರುತಿ ಸುಜುಕಿ ಮುಂಬರುವ ದಿನಗಳಲ್ಲಿ ತನ್ನ ವಹಿವಾಟನ್ನು ಮತ್ತಷ್ಟು ವಿಸ್ತರಿಸಲಿದೆ ಎಂದು ಕಂಪನಿಯ ಅಧ್ಯಕ್ಷ ಆರ್ ಸಿ ಭಾರ್ಗವ ತಿಳಿಸಿದ್ದಾರೆ.
ಮಾರುತಿ ಸುಜುಕಿ ವಾರ್ಷಿಕ 10 ಲಕ್ಷ ಕಾರು ತಯಾರಿಕೆ ಸಾಮರ್ಥ್ಯದ ಹೊಸ ಘಟಕವನ್ನು ಸ್ಥಾಪಿಸಲಿದೆ. ಕಾರುಗಳ ರಫ್ತು ಬೇಡಿಕೆ ಹೆಚ್ಚಳವಾಗುವ ಸಾಧ್ಯತೆ ಇರುವುದು ಇದಕ್ಕೆ ಕಾರಣ.
ಭಾರತದಲ್ಲಿ ಎಲೆಕ್ಟ್ರಿಕ್ ಕಾರುಗಳಿಗೆ ದಿನದಿಂದ ದಿನಕ್ಕೆ ಬೇಡಿಕೆ ಹೆಚ್ಚಾಗುತ್ತಿದೆ. ಪರಿಸರಕ್ಕೆ ಪೂರಕವಾಗಿರುವ ಇಂಥ ಕಾರುಗಳ ಖರೀದಿಗೆ ಗ್ರಾಹಕರು ಕೂಡ ಮನಸ್ಸು ಮಾಡುತ್ತಿದ್ದಾರೆ. ಚಾರ್ಜಿಂಗ್ ಸ್ಟೇಷನ್ ಸೇರಿದಂತೆ ಉಳಿದ ಮೂಲ ಸೌಕರ್ಯಗಳು ಅಭಿವೃದ್ಧಿಯಾದರೆ ಇನ್ನಷ್ಟು ಮಂದಿ ಇವಿ ಕಾರುಗಳ ಬಗ್ಗೆ ಒಲವು ತೋರುವುದು ಖಚಿತ. ಇಂಥದ್ದೊಂದು ಸಮಯಕ್ಕೆ ಕಾದು ಕುಳಿತಿದ್ದ ಮಾರುತಿ ಸುಜುಕಿ ಕಂಪನಿ 2030ರ ಒಳಗೆ ಆರು ಎಲೆಕ್ಟ್ರಿಕ್ ಕಾರುಗಳನ್ನು ಮಾರುಕಟ್ಟೆಗೆ ಇಳಿಸುವ ಉದ್ದೇಶ ಹೊಂದಿದೆ.
ಮಾರುತಿ ಸುಜುಕಿ ಕಂಪನಿಯ ಮಾರುಕಟ್ಟೆ ವಿಭಾಗದ ಹಿರಿಯ ಅಧಿಕಾರಿ ಶಶಾಂಕ್ ಶ್ರೀವಾಸ್ತವ್ ಈ ಕುರಿತು ಮಾಹಿತಿ ನೀಡಿದ್ದು, ವಿಭಿನ್ನ ಸೆಗ್ಮೆಂಟ್ಗಳಲ್ಲಿ ಆರು ಎಲೆಕ್ಟ್ರಿಕ್ ಕಾರುಗಳನ್ನು ಮಾರುಕಟ್ಟೆಗೆ ಇಳಿಸಲಿದ್ದೇವೆ ಎಂದು ಹೇಳಿದ್ದಾರೆ. ಮಾರುತಿ ಸುಜುಕಿ ಕಂಪನಿ ಕಳೆದ ಜನವರಿಯಲ್ಲಿ ಗ್ರೇಟರ್ ನೊಯ್ಡಾದಲ್ಲಿ ನಡೆದ ಆಟೋ ಎಕ್ಸ್ಪೋದಲ್ಲಿ ಮೊಟ್ಟ ಮೊದಲ ಇವಿ ಕಾನ್ಸೆಪ್ಟ್ ಬಿಡುಗಡೆ ಮಾಡಿತ್ತು.