ನವದೆಹಲಿ: ಮಾರುತಿ ಸುಜುಕಿ (Maruti Suzuki) ಇಂಡಿಯಾ ಲಿಮಿಟೆಡ್ (MSIL) ತನ್ನ ಜನಪ್ರಿಯ ಪ್ರೀಮಿಯಂ ಹ್ಯಾಚ್‌ಬ್ಯಾಕ್ (hatchback) ಸ್ವಿಫ್ಟ್‌ನ ಹೊಸ-ಪೀಳಿಗೆ ಮಾದರಿಯನ್ನು (4th-gen Swift) ಶೀಘ್ರ ಮಾರುಕಟ್ಟೆಗೆ ಇಳಿಸಲಿದೆ. ಕಾರನ್ನು ಈಗಾಗಲೇ ಕಂಪನಿ ಪರಿಚಯಿಸಿದ್ದು ಬುಕಿಂಗ್ ಕೂಡ ಆರಂಭಗೊಂಡಿದೆ. ಈ ಕಾರಿನ ಮಾಡೆಲ್ಗಾಗಿ ಕಂಪನಿಯು ಸುಮಾರು 1,450 ಕೋಟಿ ರೂ. ಹೂಡಿಕೆ ಮಾಡಿದ್ದು, ಇದು ಹೊಸ Z-ಸರಣಿ 1.2L ಎಂಜಿನ್ ಜತೆಗೆ ಹಲವಾರು ವೈಶಿಷ್ಟ್ಯಗಳನ್ನು ಹೊಂದಿದೆ. ಸ್ವಿಫ್ಟ್ ನ 4 ನೇ ಪೀಳಿಗೆಯ ಬೆಲೆಗಳು 6.49 ಲಕ್ಷ ರೂ. ನಿಂದ ಪ್ರಾರಂಭವಾಗಿ 9.64 ಲಕ್ಷ ರೂ. ವರೆಗೆ ಇರುತ್ತದೆ. ಇದು ಎಕ್ಸ್ ಶೋರೂಮ್ ಬೆಲೆಯಾಗಿದೆ.
ಆರು ಏರ್‌ಬ್ಯಾಗ್‌ಗಳು, ಎಲ್ಲಾ ಆಸನಗಳಿಗೆ 3 ಪಾಯಿಂಟ್ ಸೀಟ್‌ಬೆಲ್ಟ್‌ಗಳೊಂದಿಗೆ ರಿಮೈಂಡರ್‌ಗಳು, ಎಬಿಎಸ್ ಸೇರಿದಂತೆ ಹಲವು ಸುರಕ್ಷತಾ ಫೀಚರ್ಗಳು ಹೊಚ್ಚ ಹೊಸ ಜೆನ್ 4 ಸ್ವಿಫ್ಟ್ನಲ್ಲಿ ಇರಲಿವೆ. ಪ್ರತಿ ಲೀಟರ್‌ಗೆ 25.75 ಕಿ.ಮೀ. ವರೆಗೆ ಮೈಲೇಜ್ ನೀಡುವ ಮೂಲಕ ಸ್ವಿಫ್ಟ್ ಗ್ರಾಹಕರಿಗೆ ಇನ್ನಷ್ಟು ಹತ್ತಿರವಾಗುವುದು ಖಾತರಿ. ಹೊಸ ಮಾದರಿಯ ಸ್ವಿಫ್ಟ್‌ನ ಬುಕಿಂಗ್ ಮೇ 1ರಿಂದ ಆರಂಭಗೊಂಡಿದ್ದು, 11,000 ರೂಪಾಯಿ ಟೋಕನ್ ಮೊತ್ತ ನೀಡಿ ಕಾಯ್ದಿರಿಸಬಹುದು.
ಹ್ಯಾಚ್ ಬ್ಯಾಕ್ ಸೆಗ್ಮೆಂಟ್ನಲ್ಲಿ ಸ್ವಿಫ್ಟ್ ಪ್ರಾಬಲ್ಯ
19 ವರ್ಷಗಳಿಂದ ಭಾರತದ ರಸ್ತೆಗಳಲ್ಲಿ ಓಡುತ್ತಿರುವ ಸಿಫ್ಟ್ ಕಾರಿನ ಮೊದಲ ಮಾಡೆಲ್ ಅನ್ನು 2005 ರಲ್ಲಿ ಬಿಡುಗಡೆ ಮಾಡಲಾಗಿತ್ತು. ಅಲ್ಲಿಂದ ಇಲ್ಲಿಯವರೆಗೆ 29 ಲಕ್ಷ ಸ್ವಿಫ್ಟ್ ಮಾರಾಟ ಮಾಡಿರುವುದಾಗಿ ಕಂಪನಿ ಹೇಳಿಕೊಂಡಿದೆ. 2011 ರಲ್ಲಿ 2 ನೇ ಪೀಳಿಗೆಯ ಸ್ವಿಫ್ಟ್ ಪರಿಚಯಿಸಲಾಯಿತು. ನಂತರ 2018 ರಲ್ಲಿ 3ನೇ ಪೀಳಿಗೆಯನ್ನು ರಸ್ತೆಗೆ ಇಳಿಯಿತು. ಸ್ವಿಫ್ಟ್ ತನ್ನ ಮೊದಲ 10 ಲಕ್ಷ ಯೂನಿಟ್ಗಳ ಮಾರಾಟವನ್ನು 2013 ರಲ್ಲಿ ಪೂರ್ಣಗೊಳಿಸಿತ್ತು ಮತ್ತು 2018 ರ ವೇಳೆಗೆ 20 ಲಕ್ಷದ ಗಡಿ ದಾಟಿ ಈ ಸೆಗ್ಮೆಂಟ್ನಲ್ಲಿ ಪ್ರಾಬಲ್ಯ ಸಾಧಿಸಿತು.
2047 ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ದೇಶವನ್ನಾಗಿ ಮಾಡುವ ಗುರಿಯನ್ನು ಸರ್ಕಾರ ಹೊಂದಿದೆ. ಆದ್ದರಿಂದ ಮುಂಬರುವ ವರ್ಷಗಳಲ್ಲಿ ಹೆಚ್ಚಿನ ಆರ್ಥಿಕ ಚಟುವಟಿಕೆ ಹೆಚ್ಚಾಗಲಿದ್ದು ಆಟೋಮೊಬೈಲ್ ಕ್ಷೇತ್ರಕ್ಕೆ ಹೆಚ್ಚಿನ ಬೇಡಿಕೆ ಉಂಟಾಗುವ ಸಾಧ್ಯತೆ ಇದೆ. ಭಾರತದಲ್ಲಿ ಬೆಳೆಯಲು ಸಾಕಷ್ಟು ಅವಕಾಶಗಳಿವೆ. ಕಾರಿನ ಮಾಲೀಕತ್ವ ಹೆಚ್ಚಾದಂತೆ ಹ್ಯಾಚ್‌ಬ್ಯಾಕ್ ವಿಭಾಗವು ಗ್ರಾಹಕರಿಗೆ ಹೆಚ್ಚು ಪ್ರಿಯವಾಗಲಿದೆ. ಹೀಗಾಗಿ ಹ್ಯಾಚ್‌ಬ್ಯಾಕ್ ಕಾರುಗಳ ಅಭಿವೃದ್ಧಿಯನ್ನು ವಿಸ್ತರಿಸುತ್ತಿದ್ದೇವೆ ಎಂದು ಮಾರುತಿ ಸುಜುಕಿಯ ಎಂಡಿ ಮತ್ತು ಸಿಇಒ ಹಿಸಾಶಿ ಟೇಕುಚಿ ಹೇಳಿದರು.
ಸುಜುಕಿಗೆ ಪ್ರಮುಖ ಮಾರುಕಟ್ಟೆ
ಭಾರತವು ಸುಜುಕಿಗೆ ಪ್ರಮುಖ ಮಾರುಕಟ್ಟೆಯಾಗಿದೆ. ವೈವಿಧ್ಯಮಯ ಗ್ರಾಹಕರ ಬೇಡಿಕೆಗಳನ್ನು ಪೂರೈಸುವುದು ಮುಖ್ಯವಾಗಿರುವುದರಿಂದ ಹ್ಯಾಚ್ಬ್ಯಅಕ್ ವಿಭಾಗದ ಮೇಲೆ ನಮ್ಮ ಹೆಚ್ಚಿನ ಗಮನವಿದೆ. ಹೊಸ ಸ್ವಿಫ್ಟ್ ಈ ವಿಭಾಗದಲ್ಲಿ ಹೆಚ್ಚಿನ ಪ್ರಾಮುಖ್ಯತೆ ಪಡೆಯಲಿದೆ ಎಂದು ಅವರು ತಿಳಿಸಿದರು.
ಸ್ಪರ್ಧೆಯಲ್ಲಿ ಹಲವು ಕಾರುಗಳು
ಹ್ಯಾಚ್‌ಬ್ಯಾಕ್ ಸ್ವಿಫ್ಟ್ ಗೆ ಪ್ರತಿ ಸ್ಪರ್ಧಿಯಾಗಿ ಹ್ಯುಂಡೈ ಗ್ರಾಂಡ್ ಐ10 ನಿಯೋಸ್, ಟಾಟಾ ಆಲ್ಟ್ರೋಜ್ . ಹ್ಯುಂಡೈ ಎಕ್ಸ್‌ಟರ್ ಮತ್ತು ಟಾಟಾ ಪಂಚ್ ಸೇರಿದಂತೆ ಮೈಕ್ರೋ ಎಸ್‌ಯುವಿಗಳು ಮಾರುಕಟ್ಟೆಯಲ್ಲಿವೆ. ಇವುಗಳು ಇದೇ ಶ್ರೇಣಿಯಲ್ಲಿನ ಬೆಲೆಯನ್ನು ಹೊಂದಿವೆ.
ಕಳೆದ 3- 4 ವರ್ಷಗಳಲ್ಲಿ ಒಟ್ಟು ಪ್ರಯಾಣಿಕ ವಾಹನ ಮಾರಾಟ ಶೇಕಡಾ 47 ರಷ್ಟಿದ್ದು, ಇದರಲ್ಲಿ ಸಣ್ಣ ಕಾರು ಮಾರುಕಟ್ಟೆಯ ಪಾಲು 2024ನೇ ಹಣಕಾಸು ವರ್ಷದಲ್ಲಿ ಸುಮಾರು ಶೇ. 28ರಷ್ಟಾಗಿದೆ. ಮಾರುತಿ ಸುಜುಕಿ ಹ್ಯಾಚ್‌ಬ್ಯಾಕ್ ವಿಭಾಗದ ಬೇಡಿಕೆ 2026 ಅಂತ್ಯ ಅಥವಾ 2027 ರ ವೇಳೆಗೆ ಪುನರುಜ್ಜೀವನಗೊಳ್ಳುವ ನಿರೀಕ್ಷೆಯಿದೆ ಎಂದು ಹಿಸಾಶಿ ಟೇಕುಚಿ ಹೇಳಿದರು.
ಇದನ್ನೂ ಓದಿ: Tata Motors: Tata Ace EV 1000 ಬಿಡುಗಡೆ ಮಾಡಿದ ಟಾಟಾ ಮೋಟರ್ಸ್; ಏನಿದರ ವಿಶೇಷತೆ? ದರ ಎಷ್ಟು?
ಪ್ರೀಮಿಯಂ ಹ್ಯಾಚ್‌ಬ್ಯಾಕ್‌ನ ಬೆಳವಣಿಗೆ ಭಾರತದಲ್ಲಿನ ಒಟ್ಟು ಪ್ರಯಾಣಿಕ ವಾಹನಗಳ ಮಾರಾಟದಲ್ಲಿ ಶೇ. 28ರಷ್ಟು ಪಾಲನ್ನು ಪಡೆದುಕೊಳ್ಳುತ್ತವೆ. ಹಿರಿಯ ಕಾರ್ಯನಿರ್ವಾಹಕ ಅಧಿಕಾರಿ ಪಾರ್ಥೋ ಬ್ಯಾನರ್ಜಿ ಪ್ರಕಾರ, ಪ್ರಸ್ತುತ ಒಟ್ಟು 7 ಲಕ್ಷ ವಾರ್ಷಿಕ ಉತ್ಪಾದನೆ ಹೊಂದಿರುವ ಪ್ರೀಮಿಯಂ ಹ್ಯಾಚ್‌ಬ್ಯಾಕ್ ವಿಭಾಗವು 2030 ರ ವೇಳೆಗೆ 10 ಲಕ್ಷಕ್ಕೆ ಬೆಳೆಯಬಹುದು. ಮಾರುತಿ ಪ್ರಸ್ತುತ ಸ್ವಿಫ್ಟ್ ಮತ್ತು ಬಲೆನೊದಂತಹ ಮಾದರಿಗಳೊಂದಿಗೆ ಪ್ರೀಮಿಯಂ ಹ್ಯಾಚ್‌ಬ್ಯಾಕ್ ವಿಭಾಗದಲ್ಲಿ ಶೇ. 62ರಷ್ಟು ಪಾಲನ್ನು ಹೊಂದಿದೆ.