Site icon Vistara News

Maruti Suzuki : ಮಾರುತಿ ಕಂಪನಿಯ ಅತಿ ದೊಡ್ಡ ಕಾರಿನ ಬುಕಿಂಗ್​ ಆರಂಭ

Maruti Suzuki Invicto

#image_title

ಬೆಂಗಳೂರು: ಭಾರತದ ಅತಿದೊಡ್ಡ ಕಾರು ತಯಾರಕ ಕಂಪನಿಯಾದ ಮಾರುತಿ ಸುಜುಕಿ ತನ್ನ ಅತ್ಯಂತ ದುಬಾರಿ ಮತ್ತು ಪ್ರೀಮಿಯಂ ಮಾಡೆಲ್​ ಇನ್ವಿಕ್ಟೊ ಎಂಪಿವಿ ಕಾರಿನ ಬುಕಿಂಗ್ ಆರಂಭಿಸಿದೆ. ಮಾರುತಿ ಸುಜುಕಿಯ ಅಧಿಕೃತ ವೆಬ್​ಸೈಟ್​ ಮತ್ತು ನೆಕ್ಸಾ ಶೋರೂಮ್​ನಲ್ಲಿ ಗ್ರಾಹಕರು 25,000 ರೂಪಾಯಿ ಪಾವತಿಸಿ ಇನ್ವಿಕ್ಟೋ ಕಾರನ್ನು ಕಾಯ್ದಿರಿಸಬಹುದು. ಇದು ಮಾರುತಿ ಸುಜುಕಿಯ ಸಂಗ್ರಹಗಳ ಪೈಕಿ ಗರಿಷ್ಠ ಮೊತ್ತದ ಕಾರಾಗಿದೆ. ಇದು ಗ್ರ್ಯಾಂಡ್​ ವಿಟಾರಾಗಿಂತಲೂ ಉನ್ನತ ದರ್ಜೆಯ ಕಾರಾಗಿದೆ. ಈ ಹೊಸ ಬ್ರಾಂಡ್​ಗೆ ಟೊಯೋಟಾ ಇನ್ನೋವಾ ಹೈಕ್ರಾಸ್ ನ ತಾಂತ್ರಿಕತೆಯನ್ನು ಎರವಲು ಪಡೆಯಲಾಗಿದೆ. ಜುಲೈ 5ರಂದು ಈ ಕಾರನ್ನು ಕಂಪನಿ ಬಿಡುಗಡೆ ಮಾಡಲಿದೆ.

ಬಾಹ್ಯ ವಿನ್ಯಾಸದ ಬಗ್ಗೆ ಹೇಳುವುದಾದರೆ, ಇನ್ವಿಕ್ಟೋ ಕಾರು ಟೊಯೊಟಾ ಇನ್ನೋವಾ ಹೈಕ್ರಾಸ್ ರೀತಿಯೇ ಇರಲಿದೆ. ಆದರೆ ಬ್ರಾಂಡ್ ಭಿನ್ನತೆಗಾಗಿ ಕೆಲವು ಫೀಚರ್​ಗಳ ವ್ಯತ್ಯಾಸ ಇರಲಿದೆ. ಮುಂಭಾಗದ ಗ್ರಿಲ್, ಇದು ಎರಡು ಕ್ರೋಮ್ ಸ್ಲಾಟ್​​ಗಳನ್ನು ಹೊಂದಿರಲಿದೆ. ಅದು ಹೆಡ್​ಲೈಟ್​ ತನಕವೂ ವಿಸ್ತರಿಸಿಕೊಂಡಿರುತ್ತದೆ. ಹೆಚ್ಚುವರಿಯಾಗಿ, ಮಾರುತಿ ಸುಜುಕಿ ಕಾರಿನ ಬಂಪರ್​ಗೂ ಸಣ್ಣ ತಿರುವು ಕೊಟ್ಟಿದೆ. ಹೊಸ ಮಾದರಿಯ ಹೆಡ್ ಲೈಟ್ ಮತ್ತು ಟೈಲ್ ಲೈಟ್ ನೊಂದಿಗೆ ಕಂಗೊಳಿಸಲಿದೆ. ಜತೆಗೆ ವಿಶೇಷ ಮಾದರಿಯ ಅಲಾಯ್ ವ್ಹೀಲ್ ವಿನ್ಯಾಸ ಹೊಂದಿರಲಿದೆ.

ಇನ್ವಿಕ್ಟೊ ಕಾರಿನ ಇಂಟೀರಿಯರ್​ನಲ್ಲೂ ಕೆಲವೊಂದು ಬದಲಾವಣೆಗಳನ್ನು ನಿರೀಕ್ಷೆ ಮಾಡಬಹುದು. ಪ್ರೀಮಿಯಂ ಅನುಭವವನ್ನು ನೀಡುವ ನಡುವೆ ಬೆಲೆಯೊಂದಿಗೆ ಸಮತೋಲನವನ್ನು ಸಾಧಿಸುವ ಗುರಿಯನ್ನೂ ಕಂಪನಿ ಹೊಂದಿದೆ. ಅಡ್ವಾನ್ಡ್ಸ್​​ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್ (ಅಡಾಸ್​) ಲಭ್ಯತೆ ಬಗ್ಗೆ ಖಾತರಿಯಿಲ್ಲ. ಉಳಿದಂತೆ ಎಕ್ಸ್​ಟೀರಿಯರ್​ ರೀತಿಯಲ್ಲೇ ಇಂಟೀರಿಯರ್​ ಕೂಡ ಟೊಯೊಟಾ ಇನ್ನೋವಾದಂತೆಯೇ ಉಳಿಯಲಿದೆ. ವೆಂಟಿಲೇಟೆಡ್ ಫ್ರಂಟ್ ಸೀಟ್​್ಗಳು, ವೈರ್​​ಲೆಸ್ ಚಾರ್ಜರ್, ಪನೋರಮಿಕ್ ಸನ್​​ರೂಫ್, 9 ಇಂಚಿನ ಟಚ್ ಸ್ಕ್ರೀನ್ ಇನ್ಫೋಟೈನ್ ಮೆಂಟ್ ಸಿಸ್ಟಮ್, ವೈರ್​​ಲೆಸ್ ಆಪಲ್ ಕಾರ್ ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಮತ್ತು ಪೂರ್ಣ-ಟಿಎಫ್ಟಿ​​ ಇನ್ಸ್ ಟ್ರೂಮೆಂಟ್ ಕನ್ಸೋಲ್ ಇರಲಿದೆ.

ಎಂಜಿನ್​ ಹೇಗಿರಬಹುದು?

ಇನ್ವಿಕ್ಟೋದ ಹೈ ಎಂಡ್ ವೇರಿಯೆಂಟ್​​ಗಳು ದೃಢವಾದ 2.0-ಲೀಟರ್​ನ ಸ್ಟ್ರಾಂಗ್-ಹೈಬ್ರಿಡ್ ಎಂಜಿನ್​ ಹೊಂದಿರಲಿದೆ. ಇದು 183 ಬಿಎಚ್​​ಪಿ ಪವರ್​ ಬಿಡುಗಡೆ ಮಾಡಲಿದೆ. ಇ-ಸಿವಿಟಿ ಟ್ರಾನ್ಸ್ ಮಿಷನ್ ಇರಲಿದೆ. ಎಂಟ್ರಿ ಲೆವೆಲ್ ಟ್ರಿಮ್ ಗಳು 2.0-ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್​ ಪೆಟ್ರೋಲ್ ಎಂಜಿನ್ ಹೊಂದಿರಲಿದೆ. ಈ ಎಂಜಿನ್ 173 ಬಿಎಚ್​ಪಿ ಪವರ್​ ಬಿಡುಗಡೆ ಮಾಡುತ್ತದೆ. ಇದರಲ್ಲೂ ಆಟೋಮ್ಯಾಟಿಕ್​ (ಸಿವಿ) ಗೇರ್​ಬಾಕ್ಸ್​ ಇರಬಹುದು. ಎಲ್ಲದಿಕ್ಕಿಂತ ಹೆಚ್ಚಾಗಿ ಕೇವಲ ಆಟೋಮ್ಯಾಟಿಕ್ ಗೇರ್​ಬಾಕ್ಸ್​ ಹೊಂದಿರುವ ಮಾರುತಿ ಸುಜುಕಿಯ ಮೊದಲ ಕಾರು ಎನಿಸಿಕೊಳ್ಳಲಿದೆ.

ಇದನ್ನೂ ಓದಿ : Hyundai Exter: ಹ್ಯುಂಡೈ ಕಂಪನಿಯ ಹೊಸ ಎಕ್ಸ್​ಟೆರ್​ ಕಾರಿನ ವಿನ್ಯಾಸ ಹೇಗಿದೆ?

ಬೆಂಗಳೂರಿನ ಬಿಡದಿಯಲ್ಲಿರುವ ಟೋಯೊಟಾ ಕಿರ್ಲೊಸ್ಕರ್ ಘಟಕದಲ್ಲಿ ಇನ್ವಿಕ್ಟೊ ಉತ್ಪಾದನೆಯಾಗಲಿದೆ ಎಂದು ಹೇಳಲಾಗುತ್ತಿದೆ. ಮಾರುತಿಯ ಕಾರುಗಳನ್ನು ಉತ್ಪಾದನೆ ಮಾಡುವ ಉದ್ದೇಶಕ್ಕೆ ಕಂಪನಿಯು ಹೆಚ್ಚುವರಿ ಅವಧಿಯನ್ನು ಮೀಸಲಿರಿಸಿದೆ ಎಂದು ಹೇಳಲಾಗಿದೆ. ಫ್ಲ್ಯಾಟ್​ಫಾರ್ಮ್ ಹಂಚಿಕೊಂಡಿರುವುದಕ್ಕಾಗಿ ಮಾರುತಿ ಸುಜುಕಿ ಕಂಪನಿಯು ಟೋಯೊಟಾಗೆ ರಾಯಲ್ಟಿಯನ್ನು ಪಾವತಿ ಮಾಡಲಿದೆ.

ಬೆಲೆ ಎಷ್ಟಿರಬಹುದು?

ಇನ್ವಿಕ್ಟೊದ ವೇರಿಯೆಂಟ್​ಗಳು ಇನ್ನೋವಾ ಹೈಕ್ರಾಸ್​ನಷ್ಟೇ ಬೆಲೆಯನ್ನು ಹೊಂದಿರಬಹುದು. ಕೇವಲ ಪೆಟ್ರೋಲ್​ ಎಂಜಿನ್​ ಮಾತ್ರ ಹೊಂದಿರುವ ಹೈಕ್ರಾಸ್​ ಬೆಲೆ 18.55 ಲಕ್ಷ ರೂ.ಗಳಿಂದ 19.45 ಲಕ್ಷ ರೂ.ಗಳವರೆಗೆ (ಎಕ್ಸ್ ಶೋ ರೂಂ, ಮುಂಬೈ) ಇದೆ. ಹೈಬ್ರಿಡ್ ಎಂಜಿನ್​ ಹೊಂದಿರುವ ಹೈಕ್ರಾಸ್​ ಕಾರುಗಳು ರೂ.25.03 ಲಕ್ಷದಿಂದ ರೂ.29.99 ಲಕ್ಷ (ಎಕ್ಸ್ ಶೋ ರೂಂ, ಮುಂಬೈ) ನಡುವೆ ಇದೆ. ರಾಯಲ್ಟಿ ಮತ್ತು ಇನ್ನಿತರ ಸೇವೆಗಳಿಗೆ ಟೋಯೋಟಾಗೆ ಹಣ ಪಾವತಿ ಮಾಡಬೇಕಾಗಿರುವ ಕಾರಣ ಮಾರುತಿಯ ಇನ್ವಿಕ್ಟೊ ಸ್ವಲ್ಪ ಹೆಚ್ಚಿನ ದರವನ್ನು ಹೊಂದಿರಬಹುದು ಎನ್ನಲಾಗಿದೆ.

Exit mobile version