Site icon Vistara News

Mid Size SUV ಕಾರು ಬಿಡುಗಡೆಗೆ ಮಾರುತಿ ಸುಜುಕಿ ಸಿದ್ಧತೆ

Mid size SUV

ಮುಂಬಯಿ: ಭಾರತದ ಕಾರು ಮಾರುಕಟ್ಟೆಯಲ್ಲಿ ಅರ್ಧಕ್ಕಿಂತಲೂ ಹೆಚ್ಚು ಪಾಲು ಪಡೆದುಕೊಂಡಿರುವ ಮಾರುತಿ ಸುಜುಕಿ ಕಂಪನಿಯು ಇದುವರೆಗೂ Mid Size SUV ಕಾರೊಂದನ್ನು ಮಾರುಕಟ್ಟೆಗೆ ಬಿಟ್ಟಿಲ್ಲ. ಟಾಟಾ, ಮಹೀಂದ್ರಾ, ಕಿಯಾ ಮತ್ತು ಹ್ಯುಂಡೈ ಸೇರಿದಂತೆ ಪ್ರಮುಖ ಕಂಪನಿಗಳು ಈ ಸೆಗ್ಮೆಂಟ್‌ನಲ್ಲಿ ಹಲವು ಕಾರುಗಳನ್ನು ಮಾರುಕಟ್ಟೆಗೆ ಬಿಟ್ಟು ಯಶಸ್ಸು ಪಡೆದುಕೊಂಡಿವೆ. ಈ ಕೊರತೆ ನೀಗಿಸುವ ಉದ್ದೇಶದಿಂದ ಮಾರುತಿ ಸುಜುಕಿ ಕಂಪನಿಯು ಜುಲೈ ಮೂರನೇ ವಾರದಲ್ಲಿ Mid Size SUV ಕಾರೊಂದನ್ನು ಘೋಷಣೆ ಮಾಡಲಿದೆ.

ಭಾರತದ ಕಾರು ಮಾರುಕಟ್ಟೆಯಲ್ಲಿನ ʼರಾಜʼ ಎಂದು ಎನಿಸಿಕೊಂಡಿರುವ ಹೊರತಾಗಿಯೂ, ಇತ್ತೀಚಿನ ದಿನಗಳಲ್ಲಿ ಮಾರುತಿ ಸುಜುಕಿಗೆ ಪ್ರತಿಸ್ಪರ್ಧಿಗಳ ಸಂಖ್ಯೆ ಹೆಚ್ಚಾಗಿವೆ. ಹೀಗಾಗಿ ತಮ್ಮೆಲ್ಲ ಕಾರಿನ ಸುಧಾರಿತ ಆವೃತ್ತಿಗಳನ್ನು ಮಾರುಕಟ್ಟೆಗೆ ನಿರಂತರವಾಗಿ ಪರಿಚಯಿಸಲು ಆರಂಭಿಸಿದೆ ಮಾರುತಿ. ಬಲೆನೊ, ಎರ್ಟಿಗಾ ತಿಂಗಳುಗಳ ಹಿಂದೆ ಮಾರುಕಟ್ಟೆಗೆ ಬಂದಿದ್ದರೆ, ಗುರುವಾರ ಬ್ರೆಜಾ ಎಸ್‌ಯುವಿ ಸಾಕಷ್ಟು ಸುಧಾರಣೆಯೊಂದಿಗೆ ರಸ್ತೆಗೆ ಇಳಿದಿದೆ. ಕಂಪನಿ ನೀಡಿದ ಮಾಹಿತಿ ಪ್ರಕಾರ ಬಿಡುಗಡೆಯ ಮೊದಲೇ ೪೫ ಸಾವಿರ ಬುಕಿಂಗ್‌ ಕೂಡ ಸಿಕ್ಕಿದೆ. ಏತನ್ಮಧ್ಯೆ, Mid Size SUV ಕಾರನ್ನೂ ರಸ್ತೆಗೆ ಇಳಿಸಲು ಮುಂದಾಗಿದೆ.

ಮಾರುತಿ ಸುಜುಕಿಯ ಬ್ರೆಜಾ ಕಾಂಪಾಕ್ಟ್‌ ಎಸ್‌ಯುವಿ ಮಾರುಕಟ್ಟೆಯಲ್ಲಿ ದೊಡ್ಡ ಮಟ್ಟದ ಅಭಿಮಾನಿ ಬಳಗವನ್ನು ಹೊಂದಿದೆ. ಈ ಸೆಗ್ಮೆಂಟ್‌ನಲ್ಲೂ ನಾನಾ ಕಂಪನಿಯ ಕಾರುಗಳು ರಸ್ತೆಗಳಿದಿದ್ದು, ಬ್ರೆಜಾಗೆ ಪೈಪೋಟಿ ನೀಡುತ್ತಿವೆ. ಆದರೆ, ಪ್ರತಿಸ್ಪರ್ಧಿ ಕಂಪನಿಗಳು ರಾಜ್ಯಭಾರ ಮಾಡುತ್ತಿರುವ ಸೆಗ್ಮೆಂಟ್‌ಗಳಿಗೆ ಪ್ರವೇಶ ಮಾಡಲು ತಡ ಮಾಡಿದ ಕಾರಣ ಒಟ್ಟು ಮಾರುಕಟ್ಟೆಯಲ್ಲಿ ಹಿನ್ನಡೆಗೆ ಒಳಗಾಗುತ್ತಿದೆ.

ಬ್ರೆಜಾ ಕಾರು ಬಿಡುಗಡೆ ಕಾರ್ಯಕ್ರಮದ ವೇಳೆ ಮಾತನಾಡಿದ ಮಾರುತಿ ಸುಜುಕಿಯ ಮಾರಾಟ ವಿಭಾಗದ ಹಿರಿಯ ಅಧಿಕಾರಿ ಶಶಾಂಕ್‌ ಶ್ರೀವಾಸ್ತವ “ಖಂಡಿತವಾಗಿಯೂ ಹೌದು, Mid Size SUV ಕಾರೊಂದನ್ನು ಜುಲೈ ಮಧ್ಯದಲ್ಲಿ ಗ್ರಾಹಕರಿಗೆ ಪರಿಚಯಿಸಲಿದ್ದೇವೆ. ಆಗಸ್ಟ್‌ನಲ್ಲಿ ಅದರ ಉತ್ಪಾದನೆ ಅರಂಭವಾಗಲಿದೆ. ಈ ವಿಭಾಗವು ಭಾರತದ ಕಾರು ಮಾರುಕಟ್ಟೆಯಲ್ಲಿ ಶೇಕಡ ೧೮ ಪಾಲು ಪಡೆದುಕೊಂಡಿದೆ,ʼʼ ಎಂದು ಹೇಳಿದ್ದಾರೆ.

“ಎಸ್‌ಯುವಿ ಬಿಟ್ಟು ಉಳಿದ ಕಾರುಗಳ ಮಾರುಕಟ್ಟೆಯಲ್ಲಿ ಮಾರುತಿ ಶೇಕಡ ೬೭ ಪಾಲು ಪಡೆದುಕೊಂಡಿದೆ. ಆದರೆ, ಒಟ್ಟು ಮಾರುಕಟ್ಟೆಯಲ್ಲಿ ಶೇಕಡ ೫೦ ಪಾಲು ಹೊಂದಿದ್ದೇವೆ. ಈ ಕುಸಿತಕ್ಕೆ Mid Size SUV ಕಾರುಗಳು ಇಲ್ಲದಿರುವುದೇ ಕಾರಣ,ʼʼ ಎಂದು ಅವರು ಹೇಳಿದ್ದಾರೆ.

“ಮಾರುತಿ ಸುಜುಕಿ ಎಂಟ್ರಿ ಲೆವೆಲ್‌ ಎಸ್‌ಯುವಿ ವಿಭಾಗದಲ್ಲಿ ಬ್ರೆಜಾವನ್ನು ಮಾತ್ರ ಹೊಂದಿದೆ. ಎಸ್‌-ಕ್ರಾಸ್‌ ಸೇರಿದರೆ ಕೇವಲ ಎರಡು ಕಾರುಗಳು ಮಾತ್ರ ನಮ್ಮಲ್ಲಿವೆ. ಮಾರುಕಟ್ಟೆಯಲ್ಲಿ ಒಟ್ಟು ೪೮ ಮಾದರಿಯ ಎಸ್‌ಯುವಿಗಳು ಇರುವಾಗ ಮಾರುತಿ ಕೇವಲ ಎರಡು ಕಾರುಗಳನ್ನು ಹೊಂದಿದೆ. ಹೀಗಾಗಿ ಈ ಸೆಗ್ಮೆಂಟ್‌ನಲ್ಲಿ ಪ್ರಗತಿ ಕಾಣಬೇಕಾದರೆ ಇನ್ನಷ್ಟು ಕಾರುಗಳನ್ನು ಮಾರುಕಟ್ಟೆಗೆ ಇಳಿಸಬೇಕಾಗಿದೆ,ʼʼ ಎಂದು ಶ್ರೀವಾಸ್ತವ ಅವರು ಹೇಳಿದ್ದಾರೆ.

ಸುಜುಕಿಯ Mid Size SUV ಕಾರು ಟೊಯೊಟ ಕಂಪನಿಯ ʼಅರ್ಬನ್‌ ಕ್ರೂಸರ್‌ ಹೈರೈಡರ್‌ʼ ಬಿಡುಗಡೆ ದಿನವೇ ಘೋಷಣೆಯಾಗಲಿದೆ. ಅರ್ಬನ್‌ ಕ್ರೂಸರ್‌ ಕಾರು ಮಾರುತಿ ಜತೆಗಿನ ಟೊಯೊಟಾ ಕಂಪನಿಯ ಒಪ್ಪಂದವಾಗಿದ್ದು, ಬ್ರೆಜಾದ ವಿನ್ಯಾಸ ಹಾಗೂ ತಂತ್ರಜ್ಞಾನವನ್ನು ನೀಡಲಾಗಿದೆ. ಈ ಕಾರು ಬೆಂಗಳೂರಿನ ಟೊಯೊಟ ಉತ್ಪಾದನಾ ಘಟಕದಲ್ಲಿ ತಯಾರಾಗುತ್ತದೆ.

ಇದನ್ನೂ ಓದಿ: Maruti Suzuki Brezza 2022 ಬಿಡುಗಡೆ: ಹೊಸದೇನಿದೆ?

Exit mobile version