ಬರ್ಲಿನ್: ಜರ್ಮನಿಯ ಐಷಾರಾಮಿ ಕಾರು ಉತ್ಪಾದಕ ಮರ್ಸಿಡಿಸ್ ವಿಶ್ವಾದ್ಯಂತ ತನ್ನ 10 ಲಕ್ಷ ಬೆನ್ಜ್ ಕಾರುಗಳನ್ನು ಹಿಂತೆಗೆದುಕೊಳ್ಳಲು ನಿರ್ಧರಿಸಿದೆ. ಈ ಕಾರುಗಳ ಬ್ರೇಕಿಂಗ್ ಸಿಸ್ಟಮ್‌ನಲ್ಲಿ ದೋಷ ಇರುವ ಸಾಧ್ಯತೆ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಂಡಿದೆ.
ಕಳೆದ 2004 ಮತ್ತು 2015ರ ನಡುವೆ ಉತ್ಪಾದನೆಯಾದ suv ಶ್ರೇಣಿಯಲ್ಲಿನ ML ಮತ್ತು GL ಮತ್ತು R-Class ಲಕ್ಸುರಿ ಮಿನಿವ್ಯಾನ್ ಅನ್ನು ಹಿಂತೆಗೆದುಕೊಂಡಿದೆ. ವಿಶ್ವಾದ್ಯಂತ 993,407 ಕಾರುಗಳನ್ನು ಕಂಪನಿ ಹಿಂತೆಗೆದುಕೊಂಡಿದೆ. ಈ ಪೈಕಿ 70,000 ಕಾರುಗಳು ಜರ್ಮನಿಯಲ್ಲಿವೆ.
ಕಂಪನಿಯು ಕಾರುಗಳನ್ನು ಪರಿಶೀಲಿಸಿ ಅಗತ್ಯವಿದ್ದರೆ ಬಿಡಿ ಭಾಗಗಳನ್ನು ಬದಲಿಸಿ ಮಾಲೀಕರಿಗೆ ಹಿಂತಿರುಗಿಸಲಿದೆ. ಪರಿಶೀಲನೆ ಆಗುವ ತನಕ ಗ್ರಾಹಕರು ಅಂಥ ಕಾರುಗಳನ್ನು ಚಲಾಯಿಸದಿರುವಂತೆ ಕಂಪನಿ ಮನವಿ ಮಾಡಿದೆ. ಈ ಪರಿಶೀಲನೆಯನ್ನು ಉಚಿತವಾಗಿ ಮಾಡಿಕೊಡಲಾಗುವುದು ಎಂದು ಮರ್ಸಿಡಿಸ್ ತಿಳಿಸಿದೆ.
ಕಂಪನಿ ಕಳೆದ ಕೆಲ ತಿಂಗಳುಗಳಿಂದ ತನ್ನ ಕಾರುಗಳ ಮಾದರಿಗಳನ್ನು ಪರಿಶೀಲಿಸುತ್ತಿದ್ದು, ನಾನಾ ಕಾರಣಗಳಿಗೋಸ್ಕರ ಹಿಂತೆಗೆದುಕೊಂಡಿದೆ. ಗ್ರಾಹಕರು ಇದಕ್ಕಾಗಿ ಆತಂಕ ಪಡಬೇಕಿಲ್ಲ. ಜವಾಬ್ದಾರಿಯುತ ಉತ್ಪಾದಕನಾಗಿ ಕಾರ್ಯನಿರ್ಹಹಿಸುತ್ತಿರುವುದಾಗಿ ಕಂಪನಿ ತಿಳಿಸಿದೆ.