Site icon Vistara News

MG Motors : ಎಂಜಿ ಕಾಮೆಟ್​ ಬುಕಿಂಗ್ ಆರಂಭ; ಹಂತಹಂತವಾಗಿ ವಿತರಣೆ ಎಂದ ಕಂಪನಿ

MG Comet Booking

#image_title

ನವ ದೆಹಲಿ: ಎಂಜಿ ಮೋಟಾರ್ಸ್ (MG Motors ) ತನ್ನ ಅತ್ಯಂತ ಸಣ್ಣ ಗಾತ್ರದ ಇವಿ ಎಂಜಿ ಕಾಮೆಟ್​ನ ಬುಕಿಂಗ್ ಪ್ರಾರಂಭಿಸುವುದಾಗಿ ಘೋಷಿಸಿದೆ. ಪೇಸ್, ಪ್ಲೇ ಮತ್ತು ಪುಶ್ ಎಂಬ ಮೂರು ವೇರಿಯೆಂಟ್​​ಗಳಲ್ಲಿ ಹೊಸ ವಿನ್ಯಾಸದ ಇವಿ ಲಭ್ಯವಿರಲಿದೆ. 2023ರ ಮೇ 15ರ ಬಳಿಕ ಗ್ರಾಹಕರು 11,000 ರೂ.ಗಳ ಮುಂಗಡ ಪಾವತಿ ಮಾಡಿ ಬುಕಿಂಗ್ ಮಾಡಿಕೊಳ್ಳಬಹುದು ಎಂದು ಹೇಳಿದೆ. ಮೊದಲು ಬುಕ್ ಮಾಡಿದವರಿಗೆ ಮೊದಲ ಆದ್ಯತೆ ಎಂದು ಕಂಪನಿ ಹೇಳಿದೆ. ಎಂಜಿ ಮೋಟಾರ್ ಇಂಡಿಯಾದ ವೆಬ್ಸೈಟ್ ಮತ್ತು ದೇಶದ 30 ಅಧಿಕೃತ ಡೀಲರ್​ಶಿಪ್​ಗಳ ಮೂಲಕ ಬುಕಿಂಗ್ ಮಾಡಬಹುದು ಎಂಬುದಾಗಿಯೂ ಮಾಹಿತಿ ನೀಡಿದೆ. ಮೇ 2023ರ ಬಳಿಕ ವಿತರಣೆ ಹಂತಹಂತವಾಗಿ ಆರಂಭವಾಗಲಿದೆ. ಮೊದಲ ಹಂತದಲ್ಲಿ ಮುಂಬೈ, ಪುಣೆ, ಬೆಂಗಳೂರು ಮತ್ತು ದೆಹಲಿ ಎನ್​ಸಿಆರ್​​ ಸೇರಿದಂತೆ ಪ್ರಮುಖ ನಗರಗಳಲ್ಲಿ ಇವಿ ಬಿಡುಗಡೆಯಾಗಲಿವೆ.

ಬುಕಿಂಗ್ ಮಾಡಿದ ಗ್ರಾಹಕರು ಆ್ಯಪ್​ ಮೂಲಕ ತಮ್ಮ ಆರ್ಡರ್​ನ ಡೆಲಿವರಿ ದಿನವನ್ನು ತಿಳಿದುಕೊಳ್ಳಬಹುದು ಎಂಬುದಾಗಿ ಕಂಪನಿ ಹೇಳಿದೆ. ಮೈಎಮ್​ಜಿ ಆ್ಯಪ್​ ಮೂಲಕ ‘ಟ್ರ್ಯಾಕಿಂಗ್ ಮತ್ತು ಟ್ರೇಸ್’ ಮಾಡುವ ವಿಶಿಷ್ಟ ವಿಧಾನವನ್ನು ಕಂಪನಿ ಪರಿಚಯಿಸಿದೆ. ಇದೊಂದು ಪಾರದರ್ಶಕ ಕ್ರಮವಾಗಿದೆ. ಬುಕಿಂಗ್​ನಿಂದ ಡೆಲಿವರಿ ತನಕದ ಎಲ್ಲ ಹಂತದ ಮಾಹಿತಿಯೂ ಸ್ಮಾರ್ಟ್​ಫೋನ್​ ಆ್ಯಪ್ ಮೂಲಕ ಲಭಿಸಲಿದೆ ಎಂದು ಕಂಪನಿಯು ಹೇಳಿದೆ.

ಎಂಜಿ ಕಾಮೆಟ್ ಇವಿ ಬುಕಿಂಗ್ ದಿನಾಂಕವನ್ನು ಪ್ರಕಟಿಸಿರುವ ಕುರಿತು ಮಾತನಾಡಿದ ಎಂಜಿ ಮೋಟಾರ್ ಇಂಡಿಯಾದ ಉಪ ವ್ಯವಸ್ಥಾಪಕ ನಿರ್ದೇಶಕ ಗೌರವ್ ಗುಪ್ತಾ “ಭಾರತದ ನಗರ ವಾಸಿಗಳ ನಿರ್ದಿಷ್ಟ ಅಗತ್ಯಗಳನ್ನು ಪೂರೈಸಲು ಎಂಜಿ ಕಾಮೆಟ್ ಇವಿಯನ್ನು ಅಭಿವೃದ್ಧಿಪಡಿಸಲಾಗಿದೆ. ಈ ಕ್ಷೇತ್ರದಲ್ಲಿಯೇ ಮೊದಲು ಎಂಬಂತೆ ಟ್ರ್ಯಾಕ್ ಮತ್ತು ಟ್ರೇಸ್ ಅನುಕೂಲವನ್ನು ಗ್ರಾಹಕರಿಗೆ ನೀಡಲಾಗಿದೆ. ನಮ್ಮ ಗ್ರಾಹಕರು ತಮ್ಮ ಕಾರು ಬುಕಿಂಗ್​ನ ಸ್ಥಿತಿಯನ್ನು ಸುಲಭವಾಗಿ ತಿಳಿದುಕೊಳ್ಳುವುದಕ್ಕೆ ಸಾಧ್ಯವಿದೆ ಎಂದು ಅವರು ಹೇಳಿದ್ದಾರೆ.

ಕಾಮೆಟ್​ ಇವಿ ಎಂಜಿ ಇ-ಶೀಲ್ಡ್ ಎಂಬ ಪ್ಯಾಕೇಜ್​ ಕೂಡ ಹೊಂದಿದೆ, ಇದು ದುರಸ್ತಿ ಮತ್ತು ಸೇವಾ ವೆಚ್ಚಗಳನ್ನು ನೋಡಿಕೊಳ್ಳುವ ಮಾಲೀಕತ್ವದ ಪ್ಯಾಕೇಜ್ ಆಗಿದೆ. 3-3-3-8 ಎಂದು ಕರೆಯಲ್ಪಡುವ ಪ್ಯಾಕೇಜ್ ಹಲವಾರು ಪ್ರಯೋಜನಗಳನ್ನು ಗ್ರಾಹಕರಿಗೆ ಒದಗಿಸುತ್ತದೆ.

ಎಂಜಿ ಕಾಮೆಟ್ ಇವಿಯ ಮಾಲೀಕರು ವ್ಯಾಪಕ ಶ್ರೇಣಿಯ ವಿಸ್ತೃತ ವಾರಂಟಿಗಳು ಮತ್ತು ಸೇವಾ ಪ್ಯಾಕೇಜ್​ಗಳ ಆಯ್ಕೆಯನ್ನೂ ಪಡೆಯಲಿದ್ದಾರೆ. ಈ ಪ್ಯಾಕೇಜ್ ಗಳು 5,000 ರೂ.ಗಳ ಆರಂಭಿಕ ಬೆಲೆಯಲ್ಲಿ ಲಭ್ಯವಿದೆ. ಆಯ್ಕೆ ಮಾಡಲು 80ಕ್ಕೂ ಹೆಚ್ಚು ಆಯ್ಕೆಗಳಿವೆ. ಗ್ರಾಹಕರು ತಮ್ಮ ಅಗತ್ಯಗಳು ಮತ್ತು ಬಜೆಟ್​ಗೆ ಸೂಕ್ತವಾಗುವ ಆಯ್ಕೆಗಳನ್ನು ಪಡೆಯಬಹುದಾಗಿದೆ.

ಇದನ್ನೂ ಓದಿ : Bajaj Pulser : ಹೊಸ ಮಾಡೆಲ್​ನ ಬಜಾಜ್​ ಪಲ್ಸರ್​ ಬೈಕ್​ ಭಾರತದಲ್ಲಿ ಬಿಡುಗಡೆ, ಬೆಲೆಯೂ ಏರಿಕೆ

ಆರಂಭದಲ್ಲಿ, ಕಾಮೆಟ್ ಇವಿ ವಿಶೇಷ ಆರಂಭಿಕ ಬೆಲೆಯಲ್ಲಿ ಲಭ್ಯವಿರುತ್ತದೆ. ಪೇಸ್ ವೇರಿಯೆಂಟ್​ ಬೆಲೆ 7.98 ಲಕ್ಷ ರೂ.ಗಳಿಂದ ಪ್ರಾರಂಭವಾಗುತ್ತದೆ. ಪ್ಲೇ ಮತ್ತು ಪ್ಲಶ್ ವೇರಿಯೆಂಟ್​​ಗಳು ಕ್ರಮವಾಗಿ 9.28 ಲಕ್ಷ ಮತ್ತು 9.98 ಲಕ್ಷ ರೂ.ಗಳ (ಎಕ್ಸ್ ಶೋ ರೂಂ) ಬೆಲೆ ಹೊಂದಿವೆ. ಈ ಕೊಡುಗೆಯು ಮೊದಲ 5,000 ಬುಕಿಂಗ್​​ಗಳಿಗೆ ಮಾತ್ರ ಸೀಮಿತವಾಗಿದೆ.

Exit mobile version