ತಿರುವನಂತಪುರ: ಸಾರ್ವಜನಿಕ ರಸ್ತೆಗಳಲ್ಲಿ ವಾಹನಗಳ ರೇಸಿಂಗ್ ತೀವ್ರ ಅಪಾಯಕಾರಿ. ಆದರೂ ಅಂತಹ ಚಟುವಟಿಕೆಗಳಲ್ಲಿ ಯುವ ಚಾಲಕರಲ್ಲಿ ತೊಡಗಿಕೊಳ್ಳುವ ಪ್ರವೃತ್ತಿ ಸುದ್ದಿಯಾಗುತ್ತಿರುತ್ತವೆ. ಈ ರೇಸ್ಗಳು ಪ್ರತಿಕೂಲ ಫಲಿತಾಂಶಗಳಲ್ಲಿ ಕೊನೆಗೊಳ್ಳುವುದೇ ಹೆಚ್ಚು. ಇಂಥ ಕೆಲಸದಲ್ಲಿ ತೊಡಗುವವರು ಕಾನೂನು ಕುಣಿಕೆಗೆ ಸಿಲುಕಿ ಸಮಸ್ಯೆಯನ್ನೂ ಎದುರಿಸುತ್ತಾರೆ ಅಥವಾ ಅಪಘಾತಗಳಲ್ಲಿ ಸಿಲುಕಿ ಜೀವನ ಹಾಳು ಮಾಡಿಕೊಳ್ಳುತ್ತಾರೆ. ಹೆಚ್ಚಿನ ಸಂದರ್ಭಗಳಲ್ಲಿ, ಇಂಥ ರೇಸ್ಗಳನ್ನು ಒಂದೇ ರೀತಿಯ ವಾಹನಗಳನ್ನು ಹೊಂದಿರುವ ಸ್ನೇಹಿತರ ಗುಂಪುಗಳು ನಡೆಸುತ್ತವೆ. ಅಂತೆಯೇ ಕೇರಳದ ಕೊಚ್ಚಿಯಲ್ಲಿ ಫೋಕ್ಸ್ವ್ಯಾಗನ್ ಪೊಲೊ ಜಿಟಿ ಮತ್ತು ಮಿನಿ ಕೂಪರ್ ಕಾರುಗಳಲ್ಲಿ ಅಪರಿಚಿತ ವ್ಯಕ್ತಿಗಳಿಬ್ಬರು ಪರಸ್ಪರ ರೇಸಿಂಗ್ ಮಾಡಿದ್ದು ವರದಿಯಾಗಿದೆ. ದುರಂತವೆಂದರೆ ಪೋಲೊ ಕಾರು ಅಪಘಾತಕ್ಕೀಡಾಗಿ ಬೆಂಕಿ ಹೊತ್ತಿಕೊಂಡು ಸಂಪೂರ್ಣ ಭಸ್ಮವಾಗಿದೆ. ಪೊಲೀಸರು ಎರಡು ಕಾರುಗಳ ಮಾಲೀಕರ ಮೇಲೆ ಕೇಸ್ ಹಾಕಿದ್ದಾರೆ.
ಏಷ್ಯಾನೆಟ್ ನ್ಯೂಸ್ ತನ್ನ ಯೂಟ್ಯೂಬ್ ಚಾನೆಲ್ನಲ್ಲಿ ಘಟನೆಯ ವೀಡಿಯೊವನ್ನು ಅಪ್ಲೋಡ್ ಮಾಡಿದೆ. ಕೊಚ್ಚಿಯ ಪ್ರತಿಷ್ಠಿತ ವಸತಿ ಪ್ರದೇಶವಾದ ಪನಂಪಿಲ್ಲಿಯಲ್ಲಿ ಘಟನೆ ನಡೆದಿದೆ. ಮಿನಿ ಕೂಪರ್ ಮತ್ತು ಫೋಕ್ಸ್ ವ್ಯಾಗನ್ ಪೊಲೊ ಹ್ಯಾಚ್ ಬ್ಯಾಕ್ ಕಾರುಗಳು ರೇಸ್ನಲ್ಲಿ ತೊಡಗಿರುವ ದೃಶ್ಯಗಳನ್ನು ರಸ್ತೆಯ ಪಕ್ಕದ ಸಿಸಿಟಿವಿ ಕ್ಯಾಮೆರಾಗಳು ಸೆರೆಹಿಡಿದಿವೆ. ಮಿನಿ ಕೂಪರ್ ಕಪ್ಪು ಮತ್ತು ಕೆಂಪು ಫಿನಿಶ್ ಅನ್ನು ಹೊಂದಿದ್ದರೆ ಪೊಲೊ ಮ್ಯಾಟ್ ಬೂದು ಬಣ್ಣದ್ದಾಗಿತ್ತು. ವಿಚಿತ್ರವೆಂದರೆ ಸಂಗತಿಯೆಂದರೆ, ವಸತಿ ಪ್ರದೇಶದೊಳಗಿನ ಜನನಿಬಿಡ ರಸ್ತೆಗಳಲ್ಲಿಯೇ ರೇಸ್ ನಡೆಸಿದ್ದಾರೆ. ರಸ್ತೆಯ ಕೊನೆಯಲ್ಲಿ ಕಾರುಗಳು ತಿರುವು ಪಡೆಯಬೇಕಾಗಿತ್ತು. ಮಿನಿ ಕೂಪರ್ ಚಾಲಕ ಹೇಗೋ ಬಚಾವಾಗಿದ್ದ. ಆದರೆ, ಫೋಕ್ಸ್ ವ್ಯಾಗನ್ ಪೊಲೊ ಚಾಲಕ ಸಣ್ಣ ಸೇತುವೆಯೊಂದಕ್ಕೆ ಬಲವಾಗಿ ಗುದ್ದಿದ್ದ.
ಇದನ್ನೂ ಓದಿ : Maruti Suzuki : ಹೊಸ ಎಂಪಿವಿ ಕಾರು ಇನ್ವಿಕ್ಟೊ ಹೈಬ್ರಿಡ್ ಅವತಾರದಲ್ಲಿ ಮಾತ್ರ ಲಭ್ಯ
ಕಾರು ಅಪ್ಪಳಿಸಿದ ವೇಗಕ್ಕೆ ತಕ್ಷಣವೇ ಬೆಂಕಿ ಹೊತ್ತಿಕೊಂಡಿತು. ಅದೃಷ್ಟವಶಾತ್, ಚಾಲಕ ಮತ್ತು ಪ್ರಯಾಣಿಕರಿಬ್ಬರೂ ಕಾರಿನಿಂದ ಇಳಿದು ಪರಾರಿಯಾಗಲು ಯಶಸ್ವಿಯಾದರು. ಕಾರಿನ ಬಾನೆಟ್ ಕೆಳಗೆ ಕಾಣಿಸಿಕೊಂಡ ಹೊಗೆ ಕೆಲವೇ ನಿಮಿಷಗಳಲ್ಲಿ, ಇಡೀ ವಾಹನವನ್ನು ಸುಟ್ಟು ಹಾಕಿತು. ಅಗ್ನಿಶಾಮಕ ಇಲಾಖೆ ತಕ್ಷಣ ಬಂದರೂ ಕಾರನ್ನು ಉಳಿಸಲು ಸಾಧ್ಯವಾಗಲಿಲ್ಲ. ಮಿನಿ ಕೂಪರ್ ಮತ್ತು ಫೋಕ್ಸ್ ವ್ಯಾಗನ್ ಪೊಲೊ ಕಾರುಗಳ ಚಾಲಕರು ಅಪರಿಚಿತರಾಗಿದ್ದರು. ಒಂದು ಕಾರು ಇನ್ನೊಂದನ್ನು ಓವರ್ ಟೇಕ್ ಮಾಡಲು ಪ್ರಯತ್ನಿಸಿತ್ತು. ಆ ಚಾಲಕ ಮಣಿಯಲು ನಿರಾಕರಿಸಿದ್ದ. ಈ ವೇಳೆ ಉಂಟಾದ ಜಿದ್ದಿನಿಂದ ಅಪಾಯಕಾರಿ ರೇಸ್ ಶುರುವಾಗಿತ್ತು.
ಬಿತ್ತು ಕೇಸ್
ಪೊಲೀಸ್ ಅಧಿಕಾರಿಗಳು ಎರಡೂ ವಾಹನಗಳ ಮಾಲೀಕರನ್ನು ಗುರುತಿಸಿದ್ದಾರೆ. ಎರ್ನಾಕುಲಂ ದಕ್ಷಿಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪ್ರಕರಣವು ಐಪಿಸಿಯ ಸೆಕ್ಷನ್ 279 (ಸಾರ್ವಜನಿಕ ರಸ್ತೆಯಲ್ಲಿ ಅತಿವೇಗದ ಚಾಲನೆ ಅಥವಾ ಸವಾರಿ) ಮತ್ತು ಮೋಟಾರು ವಾಹನ ಕಾಯ್ದೆಯ ಸೆಕ್ಷನ್ 189 (ರಾಜ್ಯ ಸರ್ಕಾರದ ಲಿಖಿತ ಅನುಮತಿಯಿಲ್ಲದೆ ರೇಸ್ ಅಥವಾ ವೇಗದ ಪ್ರಯೋಗಗಳಲ್ಲಿ ಭಾಗವಹಿಸುವುದು) ಅಡಿಯಲ್ಲಿ ದಾಖಲಾಗಿದೆ.
ಟ್ರ್ಯಾಕ್ನಲ್ಲ ಮಾತ್ರ ರೇಸ್ ಮಾಡಿ
ಸಾರ್ವಜನಿಕ ರಸ್ತೆಗಳಲ್ಲಿ ರೇಸಿಂಗ್ ಮಾಡುವುದು ಕಾನೂನುಬಾಹಿರ ಕೃತ್ಯ. ಇದು ಸಾರ್ವಜನಿಕರಿಗೆ ಗೊತ್ತಿರುವ ವಿಷಯ. ಆದರೂ ತಪ್ಪು ಮಾಡುತ್ತಾರೆ. ತಮ್ಮ ವಾಹನಗಳ ಸಾಮರ್ಥ್ಯಗಳನ್ನು ಪರೀಕ್ಷಿಸಲು ನಿಜವಾಗಿಯೂ ಬಯಸಿದರೆ, ರೇಸ್ ಟ್ರ್ಯಾಕ್ ಗಳನ್ನು ಅಥವಾ ಗೊತ್ತುಪಡಿಸಿದ ಮುಚ್ಚಿದ ರಸ್ತೆಯಲ್ಲಿ ಮಾಡಬೇಕು. ಸಾರ್ವಜನಿಕ ರಸ್ತೆಗಳಲ್ಲಿ ಅಜಾಗರೂಕ ಚಾಲನೆಯಲ್ಲಿ ತೊಡಗುವುದು ಅವರ ಜೀವಕ್ಕೆ ಅಪಾಯವನ್ನುಂಟುಮಾಡುವುದಲ್ಲದೆ ಇತರ ರಸ್ತೆ ಬಳಕೆದಾರರ ಸುರಕ್ಷತೆಗೆ ಅಪಾಯವನ್ನುಂಟುಮಾಡುತ್ತದೆ.