ನವ ದೆಹಲಿ : ಮಹೀಂದ್ರಾ ಆಂಡ್ ಮಹೀಂದ್ರಾ ಕಂಪನಿಯು ಮತ್ತೊಂದು ಬಾರಿ ತನ್ನ ಬಹುಬೇಡಿಕೆಯ ಎಸ್‌ಯುವಿ ಕಾರುಗಳಾದ Mahindra XUV ಹಾಗೂ ಥಾರ್‌ನ ಬೆಲೆಯನ್ನು ಏರಿಕೆ ಮಾಡಿದೆ. ಬೆಲೆ ಏರಿಕೆಯ ಹೊಸ ನಿರ್ಧಾರ ಹಬ್ಬದ ಋತು ಆರಂಭಕ್ಕೆ ಮೊದಲು ಘೋಷಣೆಯಾಗಿದೆ. ಈ ಮೂಲಕ ಪ್ರಸಕ್ತ ವರ್ಷದಲ್ಲಿ ಮೂರನೇ ಬಾರಿ ಈ ಕಾರುಗಳ ಬೆಲೆಯನ್ನು ಹೆಚ್ಚಳ ಮಾಡಿದೆ. ಈ ಹಿಂದೆ ಜನವರಿ ಹಾಗೂ ಏಪ್ರಿಲ್‌ನಲ್ಲಿ ಈ ಕಾರುಗಳ ಬೆಲೆ ಏರಿಕೆ ಮಾಡಲಾಗಿತ್ತು. ೧೦ ಸಾವಿರ ರೂಪಾಯಿಯಿಂದ ೬೩ ಸಾವಿರ ರೂಪಾಯಿ ತನಕ ನಾನಾ ಆವೃತ್ತಿಯ ಕಾರುಗಳ ಬೆಲೆಯನ್ನು ಏರಿಕೆ ಮಾಡಲಾಗಿದೆ. Mahindra XUV ೭೦೦ ಕಾರು ಕಳೆದ ವರ್ಷ ಆಗಸ್ಟ್‌ನಲ್ಲಿ ಬಿಡುಗಡೆಯಾಗಿದ್ದರೆ, ಥಾರ್ ಕಂಪನಿ ೨೦೨೦ರಲ್ಲಿ ಬಿಡುಗಡೆಯಾಗಿತ್ತು. ಈ ಎರಡೂ ಕಾರುಗಳಿಗೆ ಭರ್ಜರಿ ಬೇಡಿಕೆಯಿದೆ.
Mahindra XUV ೭೦೦ ಪೆಟ್ರೋಲ್ ಆವೃತ್ತಿಯ ಕಾರಿಗೆ ಕಂಪನಿ ೨೨ ಸಾವಿರ ರೂಪಾಯಿಯಿಂದ ೩೫ ಸಾವಿರ ರೂಪಾಯಿ ತನಕ ಬೆಲೆ ಏರಿಕೆ ಮಾಡಲಾಗಿದೆ. ಡೀಸೆಲ್ ಆವೃತ್ತಿಯ ಕಾರಿನ ಬೆಲೆಯನ್ನು ೨೦ ಸಾವಿರ ರೂಪಾಯಿಂದ ೩೭ ಸಾವಿರ ರೂಪಾಯಿ ತನಕ ಏರಿಕೆ ಮಾಡಲಾಗಿದೆ. ಹೊಸ ದರ ಪಟ್ಟಿಯ ಪ್ರಕಾರ Mahindra XUV ೭೦೦ ಬೇಸ್ ವೇರಿಯೆಂಟ್‌ನ ಬೆಲೆ ೧೩.೪೫ ಲಕ್ಷ ರೂಪಾಯಿಗಳಾದರೆ, ಟಾಪ್ ಎಂಡ್ ಕಾರಿನ ಬೆಲೆ ೨೩.೧೦ ಲಕ್ಷ ರೂಪಾಯಿ (ಎಕ್ಸ್ ಶೋರೂಮ್).
ಥಾರ್ ಬೆಲೆ ಎಷ್ಟು?
ಥಾರ್ ಕಾರಿನ ಬೆಲೆಯನ್ನು ೨೮ ಸಾವಿರ ರೂಪಾಯಿ ತನಕ ಏರಿಕೆ ಮಾಡಲಾಗಿದೆ. ಹೊಸ ದರ ಪಟ್ಟಿಯ ಪ್ರಕಾರ ಬೇಸ್ ವೇರಿಯೆಂಟ್ ಕಾರಿನ ಬೆಲೆ ೧೩.೫೯ ಲಕ್ಷ ರೂಪಾಯಿಗಳಾದರೆ, ಟಾಪ್ ಎಂಡ್ ಕಾರಿನ ಬೆಲೆ ೧೫.೫೮ ರೂಪಾಯಿ. (ಎಕ್ಸ್ ಶೋರೂಮ್)
ಇದನ್ನೂ ಓದಿ | India Cars | ಹಬ್ಬದ ಋತುವಿನಲ್ಲಿ ಈ ಎಲ್ಲ ಕಂಪನಿಯ ಕಾರುಗಳು ಮಾರುಕಟ್ಟೆ ಪ್ರವೇಶಿಸಲಿವೆ