Site icon Vistara News

Safe Drive Tips: ಜೀವ ಅಮೂಲ್ಯ; ಕಾರು ಓಡಿಸುವಾಗ ಈ ಸಂಗತಿಗಳನ್ನು ಮರೆಯಬೇಡಿ!

Safe Drive Tips

ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರ ಮನೆಯಲ್ಲಿ ಕಾರುಗಳು (car) ಇದ್ದೇ ಇವೆ. ಕೆಲವರು ಕಾರು ಓಡಿಸುವುದು (drive) ಕಲಿತಿದ್ದರೂ ರಸ್ತೆಯಲ್ಲಿ (road) ಕಾರು ಓಡಿಸಲು ಹಿಂಜರಿಯುತ್ತಾರೆ. ಕಾರುಗಳು ಇವತ್ತು ಎಲ್ಲರಿಗೂ ಬೇಕೇ ಬೇಕು ಎನ್ನುವಷ್ಟು ಅನಿವಾರ್ಯವಾಗಿದೆ. ಇದಕ್ಕೆ ಕಾರಣ ಪ್ರಯಾಣ ಹೆಚ್ಚು ಸುರಕ್ಷಿತ (Safe Drive Tips) ಎನ್ನುವ ಭಾವನೆ. ಹೀಗಾಗಿ ಕಚೇರಿ ಕೆಲಸ, ಸ್ನೇಹಿತರ ಭೇಟಿ, ಸಣ್ಣಪುಟ್ಟ ಪ್ರಯಾಣಕ್ಕೂ ಹೆಚ್ಚಿನವರು ತಮ್ಮಲ್ಲಿರುವ ಕಾರುಗಳನ್ನೇ ತೆಗೆದುಕೊಂಡು ಹೋಗಲು ಇಷ್ಟ ಪಡುತ್ತಾರೆ.

ಅನೇಕ ಬಾರಿ ಕಾರು ಚಾಲನೆ ಮಾಡುವಾಗ ಕೆಲವೊಂದು ವಿಷಯಗಳ ಬಗ್ಗೆ ನಾವು ಗಮನ ಹರಿಸುವುದಿಲ್ಲ. ಇದು ಅಪಘಾತಗಳ ಅಪಾಯವನ್ನು ಹೆಚ್ಚಿಸುತ್ತದೆ. ಕಾರು ಚಾಲನೆ ಮಾಡುವಾಗ ಕೆಲವು ವಿಷಯಗಳನ್ನು ನಾವು ನೆನಪಿನಲ್ಲಿ ಇಟ್ಟುಕೊಂಡರೆ ಅಪಘಾತಗಳಿಂದ ನಮ್ಮನ್ನು ನಾವು ಮಾತ್ರವಲ್ಲ ನಮ್ಮ ಕಾರುಗಳನ್ನೂ ರಕ್ಷಿಸಬಹುದು.

ಸಂಚಾರ ನಿಯಮಗಳನ್ನು ಅನುಸರಿಸಿ

ಕಾರು ಚಾಲನೆ ಮಾಡುವಾಗ ಯಾವಾಗಲೂ ಸಂಚಾರ ನಿಯಮಗಳನ್ನು ಅನುಸರಿಸಿ. ವೇಗದ ಮಿತಿಗಳನ್ನು ಅನುಸರಿಸುವುದು, ಕೆಂಪು ದೀಪಗಳನ್ನು ಗಮನಿಸಿ ನಿಲ್ಲಿಸುವುದು ಮತ್ತು ಸ್ಟಾಪ್ ಚಿಹ್ನೆಗಳನ್ನು ಪಾಲಿಸುವುದು ಇದರಲ್ಲಿ ಸೇರಿದೆ. ಇದಲ್ಲದೆ, ಜೀಬ್ರಾ ಕ್ರಾಸಿಂಗ್‌ಗಳಲ್ಲಿ ಪಾದಚಾರಿಗಳಿಗೆ ದಾರಿ ಮಾಡಿಕೊಡುವುದು ಮತ್ತು ತಪ್ಪು ದಿಕ್ಕಿನಲ್ಲಿ ವಾಹನ ಚಲಾಯಿಸದಿರುವುದು ಸಹ ಮುಖ್ಯವಾಗಿದೆ.


ಯಾವಾಗಲೂ ಸೀಟ್ ಬೆಲ್ಟ್ ಧರಿಸಿ

ಕಾರು ಚಾಲನೆ ಮಾಡುವಾಗ ಯಾವಾಗಲೂ ಸೀಟ್ ಬೆಲ್ಟ್ ಧರಿಸುವುದು ಮುಖ್ಯ. ನಿಮ್ಮ ಮತ್ತು ನಿಮ್ಮೊಂದಿಗೆ ಪ್ರಯಾಣಿಸುವ ಜನರ ಸುರಕ್ಷತೆಗೆ ಇದು ಬಹಳ ಮುಖ್ಯವಾಗಿದೆ. ಸೀಟ್ ಬೆಲ್ಟ್‌ಗಳು ಅಪಘಾತದಲ್ಲಿ ಗಂಭೀರವಾಗಿ ಗಾಯಗೊಳ್ಳುವುದರಿಂದ ನಮ್ಮನ್ನು ರಕ್ಷಿಸುತ್ತದೆ.

ಮದ್ಯಪಾನ ಮಾಡಿ ವಾಹನ ಚಾಲನೆ ಮಾಡಬೇಡಿ

ಆಲ್ಕೋಹಾಲ್ ಅಥವಾ ಡ್ರಗ್ಸ್ ಸೇವಿಸಿದ ಅನಂತರ ವಾಹನ ಚಲಾಯಿಸುವುದು ತುಂಬಾ ಅಪಾಯಕಾರಿ. ಇದು ಮನಸ್ಸನ್ನು ಕ್ರಿಯಾಶೀಲವಾಗದಂತೆ ಮಾಡುತ್ತದೆ. ಇದರಿಂದ ಕಾರಿನ ಮೇಲೆ ನಿಯಂತ್ರಣವನ್ನು ಕಳೆದುಕೊಳ್ಳಬಹುದು. ಇದು ಅಪಘಾತಗಳ ಅಪಾಯವನ್ನು ಹೆಚ್ಚಿಸುತ್ತದೆ.

ಮೊಬೈಲ್ ಫೋನ್ ಬಳಸಬೇಡಿ

ಕರೆ ಮಾಡಲು ಅಥವಾ ಸಂದೇಶಗಳನ್ನು ಕಳುಹಿಸಲು ಚಾಲನೆ ಮಾಡುವಾಗ ಮೊಬೈಲ್ ಫೋನ್ ಬಳಸಬೇಡಿ. ಇದು ನಿಮ್ಮ ಗಮನವನ್ನು ರಸ್ತೆಯಿಂದ ಬೇರೆಡೆಗೆ ತಿರುಗಿಸುತ್ತದೆ ಮತ್ತು ಇದರಿಂದ ರಸ್ತೆ ಅಪಘಾತಕ್ಕೆ ಬಲಿಯಾಗಬಹುದು.

ಸುಸ್ತಾಗಿದ್ದಾಗ ಅಥವಾ ನಿದ್ದೆ ಬಂದಾಗ ವಾಹನ ಚಲಾಯಿಸಬೇಡಿ

ಹೆಚ್ಚು ದಣಿದಿದ್ದರೆ ಅಥವಾ ನಿದ್ರೆ ಬರುತ್ತಿದ್ದರೆ ವಾಹನ ಚಲಾಯಿಸಬೇಡಿ. ಆಯಾಸವು ಡ್ರೈವಿಂಗ್ ಮಾಡುವಾಗ ನಿಮಗೆ ನಿದ್ರೆ ಬರುವಂತೆ ಮಾಡುತ್ತದೆ. ಇದು ಕಾರಿನ ನಿಯಂತ್ರಣ ತಪ್ಪಲು ಕಾರಣವಾಗಬಹುದು. ಇದು ಅಪಘಾತದ ಅಪಾಯವನ್ನು ಹೆಚ್ಚಿಸುತ್ತದೆ.

ಹೆಚ್ಚಿನ ವೇಗದಲ್ಲಿ ಚಾಲನೆ ಮಾಡಬೇಡಿ

ರಸ್ತೆ ಪರಿಸ್ಥಿತಿಗಳು ಮತ್ತು ಹವಾಮಾನದ ಪ್ರಕಾರ ವಾಹನದ ವೇಗವನ್ನು ನಿಯಂತ್ರಿಸಿ. ಹೆಚ್ಚಿನ ವೇಗದಲ್ಲಿ ಚಾಲನೆ ಮಾಡುವುದು ತುಂಬಾ ಅಪಾಯಕಾರಿ. ವಿಶೇಷವಾಗಿ ಮಳೆ ಅಥವಾ ಮಂಜಿನಂತಹ ಕೆಟ್ಟ ಹವಾಮಾನ ಪರಿಸ್ಥಿತಿಗಳಲ್ಲಿ ಹೆಚ್ಚು ವೇಗವಾಗಿ ಚಾಲನೆ ಮಾಡುವುದನ್ನು ತಪ್ಪಿಸಿ.

ಸುರಕ್ಷಿತ ಅಂತರವನ್ನು ಕಾಪಾಡಿಕೊಳ್ಳಿ

ಇತರ ವಾಹನಗಳಿಂದ ಯಾವಾಗಲೂ ಸುರಕ್ಷಿತ ಅಂತರವನ್ನು ಕಾಯ್ದುಕೊಳ್ಳಿ. ಇದರಿಂದ ಎದುರಿನ ವಾಹನ ಹಠಾತ್ತನೆ ನಿಂತರೆ ಸಕಾಲದಲ್ಲಿ ಬ್ರೇಕ್ ಹಾಕುವ ಅವಕಾಶ ಸಿಗುತ್ತದೆ.

ಇದನ್ನೂ ಓದಿ: Tata Motors: ನೆಕ್ಸಾನ್, ಪಂಚ್‌ ಮೂಲಕ ಎಸ್‌ಯುವಿ ಮಾರುಕಟ್ಟೆಯಲ್ಲಿ ಮುನ್ನಡೆ ಸಾಧಿಸಿದ ಟಾಟಾ ಮೋಟಾರ್ಸ್

ಓವರ್ ಟೇಕ್ ಮಾಡುವಾಗ ಜಾಗರೂಕರಾಗಿರಿ

ಓವರ್‌ಟೇಕ್ ಮಾಡುವಾಗ ಯಾವಾಗಲೂ ಜಾಗರೂಕರಾಗಿರಿ. ರಸ್ತೆಯಲ್ಲಿ ಓವರ್‌ಟೇಕ್ ಮಾಡಲು ಸಾಕಷ್ಟು ಸ್ಥಳವಿದೆ ಮತ್ತು ಮುಂಭಾಗದಿಂದ ಯಾವುದೇ ವಾಹನ ಬರುತ್ತಿಲ್ಲ ಎಂದು ಖಚಿತಪಡಿಸಿಕೊಂಡ ಬಳಿಕವೇ ಓವರ್ ಟೇಕ್ ಮಾಡಿ.


ರಸ್ತೆ ಚಿಹ್ನೆಗಳಿಗೆ ಗಮನ ಕೊಡಿ

ರಸ್ತೆ ಚಿಹ್ನೆ ಮತ್ತು ಗುರುತುಗಳತ್ತ ಯಾವಾಗಲೂ ಗಮನ ಕೊಡಿ. ಈ ಚಿಹ್ನೆಗಳು ನಿಮಗೆ ರಸ್ತೆ ನಿಯಮಗಳು ಮತ್ತು ಅಪಾಯಗಳ ಬಗ್ಗೆ ಮಾಹಿತಿಯನ್ನು ನೀಡುತ್ತವೆ.

Exit mobile version