ಮುಂಬಯಿ: ಏಪ್ರಿಲ್ 1ರ ಬಳಿಕ ಪ್ರಯಾಣಿಕರ ಕಾರು ತಯಾರಿಕಾ ಕಂಪನಿಗಳು ಬಿಎಸ್6 ಎರಡನೇ ಹಂತದ ಮಾನದಂಡಗಳನ್ನು ಪಾಲಿಸಬೇಕು ಎಂಬ ಕೇಂದ್ರ ಸರಕಾರದ ಸೂಚನೆಯ ಅನ್ವಯ ಟಾಟಾ ಮೋಟಾರ್ಸ್ (Tata Motors) ತನ್ನೆಲ್ಲ ಕಾರುಗಳ ಎಂಜಿನ್ಗಳನ್ನು ಅಪ್ಗ್ರೇಡ್ ಮಾಡುತ್ತಿದೆ. ಭಾರತದಲ್ಲಿರುವ ಪ್ರಮುಖ ಕಾರು ತಯಾರಿಕ ಕಂಪನಿಗಳಾ ಮಾರುತಿ ಸುಜುಕಿ, ಹ್ಯುಂಡೈ ಹಾಗೂ ಮಹೀಂದ್ರಾ ಈ ಮಾದರಿಯ ಅಪ್ಗ್ರೇಡ್ ಮಾಡುತ್ತಿದೆ. ಅಂತೆಯೇ ಟಾಟಾ ಮೋಟಾರ್ಸ್ ಕೂಡ ತನ್ನ ಕೆಲಸ ಆರಂಭಿಸಿದೆ. ಇದಕ್ಕಾಗಿ ಹೆಚ್ಚಿನ ಹೂಡಿಕೆ ಅಗತ್ಯವಿರುವ ಕಾರಣ ಏಪ್ರಿಲ್ 1ರಿಂದ ಟಾಟಾ ಕಾರುಗಳ ಬೆಲೆ ಏರಿಕೆಯಾಗಲಿದೆ.
ಕಾರುಗಳಲ್ಲಿ ರಿಯಲ್ ಟೈಮ್ ಡ್ರೈವಿಂಗ್ ಎಮಿಷನ್ ಪತ್ತೆಗೆ ಸಾಧನವನ್ನು ಅಳವಡಿಸಬೇಕು ಹಾಗೂ ಎಥನಾಲ್ ಮಿಶ್ರಿತ ಇ20 ಪೆಟ್ರೋಲ್ನಿಂದ ಚಲಿಸುವ ಎಂಜಿನ್ಗಳನ್ನು ಸಿದ್ಧಪಡಿಸಬೇಕು ಎಂದು ಬಿಎಸ್6 ಹೊಸ ಮಾನದಂಡದಲ್ಲಿ ಹೇಳಲಾಗಿದೆ. ಪರಿಸರ ಮಾಲಿನ್ಯ ತಡೆಗಟ್ಟುವ ನಿಟ್ಟಿನಲ್ಲಿ ಸರಕಾರ ಈ ಕ್ರಮ ಕೈಗೊಂಡಿದೆ. ಎಲ್ಲ ಕಾರು ಕಂಪನಿಗಳು ಇದನ್ನು ಪಾಲಿಸಬೇಕಾಗುತ್ತದೆ. ಅದೇ ರೀತಿಯಲ್ಲಿ ಟಾಟಾ ಮೋಟಾರ್ಸ್ ಕೂಡ ಎಂಜಿನ್ ಉನ್ನತೀಕರಣದ ಕೆಲಸದಲ್ಲಿ ತೊಡಗಿದೆ.
ಟಾಟಾ ಮೋಟಾರ್ಸ್ನ ಮ್ಯಾನೇಜಿಂಗ್ ಡೈರೆಕ್ಟರ್ ಶೈಲೇಶ್ಚಂದ್ರ ಅವರು ಈ ಕುರಿತು ಮಾತನಾಡಿ, ಕಂಪನಿಯ ಎಲ್ಲ ಕಾರುಗಳ ಎಂಜಿನ್ಗಳನ್ನು ಬಿಎಸ್6 ಎರಡನೇ ಹಂತದ ಮಾನದಂಡಗಳಿಗೆ ಪೂರಕವಾಗಿ ತಯಾರಿಸಲಾಗುತ್ತದೆ. ಅದೇ ರೀತಿ ವಾಹನಗಳ ದಕ್ಷತೆಯನ್ನು ಹೆಚ್ಚಿಸುವ ನಿಟ್ಟಿನಲ್ಲೂ ಕೆಲಸ ಮಾಡುತ್ತಿದ್ದೇವೆ. ಹೊಸ ತಾಂತ್ರಿಕತೆ ಹಾಗೂ ಫೀಚರ್ಗಳನ್ನು ಸೇರಿಸಿಕೊಳ್ಳುತ್ತಿದ್ದೇವೆ. ಬೆಲೆ ಹೆಚ್ಚಳದ ಕುರಿತು ತಕ್ಷಣವೇ ಹೇಳವುದಕ್ಕೆ ಸಾಧ್ಯವಿಲ್ಲ. ಕಳೆದ ತಿಂಗಳು ಸ್ವಲ್ಪ ಮಟ್ಟಿಗೆ ಬೆಲೆ ಏರಿಕೆ ಮಾಡಲಾಗಿದೆ. ಮುಂದೆಯೂ ಸ್ವಲ್ಪ ಮಟ್ಟಿಗೆ ಏರಿಕೆ ಕಾಣಬಹುದು ಎಂದು ಹೇಳಿದ್ದಾರೆ.
ಇದನ್ನೂ ಓದಿ : 7 Seater Cars : ಭಾರತದಲ್ಲಿ 15 ಲಕ್ಷ ರೂಪಾಯಿ ಒಳಗೆ ದೊರೆಯುವ ಏಳು ಸೀಟ್ಗಳ ಕಾರುಗಳ ಪಟ್ಟಿ ಇಲ್ಲಿದೆ
ವಾಹನಗಳಿಂದ ದೊಡ್ಡ ಪ್ರಮಾಣದಲ್ಲಿ ಪರಿಸರ ಮಾಲಿನ್ಯ ಉಂಟಾಗುತ್ತಿರುವ ಹಿನ್ನೆಲೆಯಲ್ಲಿ ಅದರ ನಿಯಂತ್ರಣಕ್ಕೆ ಕೇಂದ್ರ ಸರಕಾರ ಪಣ ತೊಟ್ಟಿದೆ. ಜತೆಗೆ ಹೆಚ್ಚುತ್ತಿರುವ ಪೆಟ್ರೋಲಿಯಮ್ ಉತ್ಪನ್ನಗಳ ಬೇಡಿಕೆಯನ್ನು ನಿಭಾಯಿಸಲು ಪರಿಶ್ರಮಪಡುತ್ತಿದೆ. ಪರಿಸರ ಮಾಲಿನ್ಯ ನಿಯಂತ್ರಣಕ್ಕೆ ಆರ್ಡಿಇ ತಾಂತ್ರಿಕತೆಯನ್ನು ಬಳಸಲು ಸೂಚಿಸಿದೆ. ಕ್ಯಾಟಲಿಟಿಕ್ ಕನ್ವರ್ಟರ್ ಹಾಗೂ ಆಕ್ಸಿಜರ್ ಸೆನ್ಸರ್ ಮೂಲಕ ವಾಹನಗಳು ಓಡುತ್ತಿರುವಾಗ ಎಷ್ಟು ಪ್ರಮಾಣದ ವಿಷಾನಿಲ ಹೊರಗೆ ಸೂಸುತ್ತಿವೆ ಎಂಬುದನ್ನು ಅರಿಯುವ ತಾಂತ್ರಿಕತೆ ಇದು. ಅದೇ ರೀತಿ ಭಾರತದಲ್ಲಿ ಪೆಟ್ರೋಲ್ ಬೆಲೆ ದಿನದಿಂದ ದಿನಕ್ಕೆ ಏರುತ್ತಿದೆ. ಹೀಗಾಗಿ ಜೈವಿಕ ಅನಿಲವಾಗಿರುವ ಎಥೆನಾಲ್ ಅನ್ನು ಶೇಕಡಾ 20ರಷ್ಟು ಸಾಮಾನ್ಯ ಪೆಟ್ರೋಲ್ಗೆ ಮಿಶ್ರಣ ಮಾಡಿ ಬಳಸುವುದು ಸರಕಾರದ ಯೋಜನೆಯಾಗಿದೆ. ಅದಕ್ಕಾಗಿ ಎಂಜಿನ್ನಲ್ಲಿ ಸಣ್ಣ ಮಾರ್ಪಾಟು ಮಾಡಲಾಗುತ್ತದೆ. ಹೊಸ ಮಾದರಿಯ ಎಂಜಿನ್ಗಳಿಗೆ ಎಥೆನಾಲ್ ಮಿಶ್ರಿತ ಪೆಟ್ರೋಲ್ ಬಳಸಲು ಸಾಧ್ಯ.