ನವದೆಹಲಿ: ಟಾಟಾ ಮೋಟಾರ್ಸ್ ಕಳೆದ ಮೇನಲ್ಲಿ 76,210 ವಾಹನಗಳನ್ನು ಮಾರಾಟ ಮಾಡಿದ್ದು, ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಮೂರು ಪಟ್ಟು ಹೆಚ್ಚಳವಾಗಿದೆ.
2021ರ ಮೇನಲ್ಲಿ ಟಾಟಾ ಮೋಟಾರ್ಸ್ 24,552 ವಾಹನಗಳನ್ನು ಮಾರಾಟ ಮಾಡಿತ್ತು. ಕಂಪನಿಯ ಪ್ಯಾಸೆಂಜರ್ ವೆಹಿಕಲ್ ಗಳ ಮಾರಾಟ ಇಮ್ಮಡಿಯಾಗಿದ್ದು, 43,341ಕ್ಕೆ ಹೆಚ್ಚಳವಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 15,181 ವಾಹನಗಳು ಬಿಕರಿಯಾಗಿತ್ತು.
ಇದೇ ರೀತಿ ಕಂಪನಿಯ ದೇಶೀಯ ವಾಣಿಜ್ಯ ವಾಹನಗಳ ಮಾರಾಟ 9,371 ರಿಂದ 31,414ಕ್ಕೆ ಏರಿಕೆಯಾಗಿದೆ. ಟಾಟಾ ಮೋಟಾರ್ಸ್‌ನ ನೆಕ್ಸಾನ್, ಸಫಾರಿ ವಾಹನಗಳ ಮಾರಾಟ ಚುರುಕಾಗಿತ್ತು. ಕಂಪನಿಯು 3,453 ಎಲೆಕ್ಟ್ರಿಕ್ ವಾಹನಗಳನ್ನೂ ಕಳೆದ ತಿಂಗಳು ಮಾರಾಟ ಮಾಡಿತ್ತು.
ಮಾರುತಿ ಸುಜುಕಿಯ 1.61 ಲಕ್ಷ ವಾಹನಗಳ ಮಾರಾಟ
ದೇಶದ ಅತಿ ದೊಡ್ಡ ಕಾರುಗಳ ಉತ್ಪಾದಕ ಮಾರುತಿ ಸುಜುಕಿ, 1.61 ಲಕ್ಷ ವಾಹನಗಳನ್ನು ಮೇನಲ್ಲಿ ಮಾರಾಟ ಮಾಡಿದೆ. ಕಂಪನಿಯು 2021ರ ಮೇನಲ್ಲಿ 46,555 ವಾಹನಗಳನ್ನು ವಿಕ್ರಯಿಸಿತ್ತು. ಏಪ್ರಿಲ್‌ನಲ್ಲಿ ಮಾರುತಿ ಸುಜುಕಿ 1.34 ಲಕ್ಷ ವಾಹನಗಳನ್ನು ಗ್ರಾಹಕರಿಗೆ ವರ್ಗಾಯಿಸಿತ್ತು.
2022ರ ಮೇ ತಿಂಗಳಿನ ಸೇಲ್ಸ್ ಅನ್ನು 2021ರ ಮೇಗೆ ಹೋಲಿಸಬಾರದು. ಆಗ ಕೋವಿಡ್ ಬಿಕ್ಕಟ್ಟಿನ ಪರಿಣಾಮ ಮಾರಾಟಕ್ಕೆ ಗಣನೀಯ ಪ್ರತಿಕೂಲ ಪರಿಣಾಮ ಉಂಟಾಗಿತ್ತು ಎಂದು ಕಂಪನಿ ಹೇಳಿದೆ.