ಬೆಂಗಳೂರು: ಮಾನ್ಸೂನ್ ಮಾರುತ ಭಾರತದ ಎಲ್ಲೆಡೆಗೆ ವ್ಯಾಪಿಸಿದ್ದು, ಮಳೆ ಸುರಿಯಲು ಅರಂಭಿಸಿದೆ. ಕರ್ನಾಟಕದ ಕೆಲವು ಕಡೆ ಬಿಡದೇ ಮಳೆ ಸುರಿಯುತ್ತಿದ್ದು ಮಳೆಗಾಲಕ್ಕೆ ಬೇಕಾಗಿರುವ ಎಲ್ಲ ಸಿದ್ಧತೆಗಳನ್ನು ಮುಗಿಸಿಕೊಂಡಿದ್ದಾರೆ. ಹೀಗಾಗಿ ಕಾರಿನ ಮಾಲೀಕರು ನೀವಾಗಿದ್ದರೆ ಮಳೆಗಾಲಕ್ಕೆ ಅಗತ್ಯವಾಗಿರುವ ಮೆಂಟೇನೆನ್ಸ್ (Monsoon car care tips) ಕೂಡ ಬೇಕಾಗಿದೆ. ಹಾಗಾದರೆ ಮಾನ್ಸೂನ್ ಪ್ರಾರಂಭವಾಗುವ ಮೊದಲು ನೀವು ಪರಿಶೀಲಿಸಬೇಕಾದ ಅಥವಾ ಸರಿಪಡಿಸಬೇಕಾದ ಕೆಲವು ಪ್ರಮುಖ ಅಂಶಗಳು ಈ ಕೆಳಗಿನಂತಿವೆ.
ಹಳೆ ಟೈರ್ಗಳನ್ನು ಬದಲಾಯಿಸಿ
ಟೈರ್ಗಳ ಬಗ್ಗೆ ಹೆಚ್ಚಿನ ಕಾರು ಮಾಲೀಕರು ನಿರ್ಲಕ್ಷ್ಯ ವಹಿಸುತ್ತಾರೆ. ಆದರೆ, ಟೈರ್ಗಳು ಚಾಲನೆ ವೇಳೆ ದೊಡ್ಡ ಪರಿಣಾಮ ಬೀರುವ ಭಾಗವಾಗಿರುತ್ತವೆ. ಅದರಲ್ಲೂ ಮಳೆಗಾಲದಲ್ಲಿ ಸಾಕಷ್ಟ್ರು ಪ್ರಮಾಣದ ಥ್ರೆಡ್ ಇರಬೇಕಾಗುತ್ತದೆ. ಒಣ ರಸ್ತೆಗಳಿಗೆ ಹೋಲಿಸಿದರೆ ಒದ್ದೆಯಾದ ರಸ್ತೆಗಳಲ್ಲಿ ವಾಹನ ಜಾರುವುದು ಹೆಚ್ಚು. ನೀರು ತುಂಬಿದ ರಸ್ತೆಗಳು, ಸೋರಿಕೆಯಾದ ತೈಲ ಮತ್ತು ಇತರ ವಾಹನ ನೀರಿನೊಂದಿಗೆ ಬೆರೆತಾಗ ಇನ್ನಷ್ಟು ಪರಿಸ್ಥಿತಿ ಹಾಳಾಗುತ್ತದೆ. ಹೀಗಾಗಿ ಮಳೆಗಾಲದಲ್ಲಿ ರೋಡ್ ಗ್ರಿಪ್ ಚೆನ್ನಾಗಿರಬೇಕು ಅಥವಾ ಸ್ಕಿಡ್ ಆಗಬಾರದು ಎಂದಾದರೆ ಥ್ರೆಡ್ ಚೆನ್ನಾಗಿರುವ ಟೈರ್ಗಳು ಬೇಕು.
ಇತ್ತೀಚಿನ ದಿನಗಳಲ್ಲಿ, ಹೆಚ್ಚಿನ ಟೈರ್ಗಳು ಥ್ರೆಡ್ ವೇರ್ ಇಂಡಿಕೇಟರ್ ಗಳೊಂದಿಗೆ ಬರುತ್ತವೆ. ಟೈರ್ನ ಗ್ರೌವ್ ಗಳ ನಡುವೆ ಒಂದು ಸಣ್ಣ ರಬ್ಬರ್ ಬಾರ್. ಟೈರ್ ರಬ್ಬರ್ ಸವೆಯುತ್ತಿದ್ದ ಹಾಗೆಯೇ ಟ್ರೆಡ್ ಇಂಡಿಕೇಟರ್ ತೆಳುವಾಗಲು ಪ್ರಾರಂಭಿಸುತ್ತದೆ. ಒಂದು ವೇಳೆ ಇಂಡಿಕೇಟರ್ ಕಳಚಿಕೊಂಡರೆ ಟೈರ್ ಬದಲಾಯಿಸಲೇಬೇಕು.
ಟೈರ್ನ ಗಾಳಿಯ ಒತ್ತಡ ಸರಿಯಾಗಿರಲಿ
ಯಾವುದೇ ಋತುವಾಗಿದ್ದರೂ ಟೈರ್ನಲ್ಲಿ ಸೂಚಿಲಾಗಿರುವ ಗಾಳಿ ಒತ್ತಡ ಇರಲೇಬೇಕಿ. ಆದರೆ, ಮಳೆಗಾಲದಲ್ಲಿ, ಟೈರ್ ಒತ್ತಡವು ನಿರ್ಣಾಯಕ. ರಸ್ತೆಯ ಮೇಲ್ಮೈಯಲ್ಲಿ ನೀರು ಇದ್ದರೆ ಮತ್ತು ಟೈರ್ ಕಡಿಮೆ ಉಬ್ಬಿದರೆ, ಜಾರು ಜಾರಿಕೊಂಡು ಹೋಗುವುದು ಖಚಿತ. ಮಳೆಗಾಲದ ನೀರು ಟೈರ್ ಮತ್ತು ರಸ್ತೆಯ ಮೇಲ್ಮೈ ನಡುವೆ ನೀರು ಒಂದು ಪದರ ರೂಪಿಸುತ್ತದೆ. ಇದು ವಾಹನವು ಸ್ಕಿಡ್ ಆಗಲು ಕಾರಣವಾಗುತ್ತದೆ.
ಹೆಡ್ಲೈಟ್ಗಳನ್ನು ಸರಿಪಡಿಸಿ
ಮಳೆಗಾಲದಲ್ಲಿ ಚಾಲಕನಿಗೆ ರಸ್ತೆ ಸ್ಪಷ್ಟವಾಗಿ ಕಾಣುವುದಿಲ್ಲ. ಲೈಟ್ಗಳು ಮಸುಕಾಗಿದ್ದರೆ ಗೋಚರತೆ ಇನ್ನಷ್ಟು ಕಡಿಮೆಯಾಗುತ್ತದೆ. ಹೀಗಾಗಿ ಮಳೆಗಾಲಕ್ಕೆ ಮೊದಲು ಎಲ್ಲಾ ಲೈಟ್ಗಳನ್ನು ಪರಿಶೀಲಿಸಬೇಕು. ಹೆಡ್ ಲ್ಯಾಂಪ್ ಗಳು, ಟೈಲ್ ಲ್ಯಾಂಪ್, ಹೈ-ಸ್ಟಾಪ್ ಲ್ಯಾಂಪ್ ಮತ್ತು ಫಾಗ್ ಲ್ಯಾಂಪ್ ಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ಖಚಿತಪಡಿಸಿಕೊಳ್ಳಿ.
ಬೀಡಿಂಗ್ಗಳನ್ನು ಬದಲಾಯಿಸಿ
ಕಾರಿನ ಡೋರ್ಗಳ ಸುತ್ತಲೂ ರಬ್ಬರ್ ಬೀಡಿಂಗ್ಗಳನ್ನು ಹಾಕಿರಲಾಗುತ್ತದೆ. ಬೇಸಿಗೆ ಬಿಸಿಯಲ್ಲಿ ರಬ್ಬರ್ ಗಟ್ಟಿಯಾಗಿ ಪುಡಿಯಾಗುತ್ತದೆ. ಇದರಿಂದ ಮಳೆಗಾಲದಲ್ಲಿ ನೀರು ಕಾರಿನೊಳಗೆ ಸೋರಿಕೆಯಾಗಬಹುದು. ಹೀಗಾಗಿ ಮಳೆಗಾಲದಲ್ಲಿ ಡೊರ್ ಹಾಗೂ ಗ್ಲಾಸ್ಗಳ ಬದಿಯಲ್ಲಿರುವ ಬೀಡಿಂಗ್ಗಳನ್ನು ಪರಿಶೀಲಿಸಿ. ಪುಡಿಯಾಗಿದ್ದರೆ ಅದನ್ನು ತಕ್ಷಣ ಬದಲಿಸಿ.
ವಾಹನದ ಕೆಳಭಾಗ ಪರೀಕ್ಷಿಸಿ
ಕಾರಿನ ಮೇಲ್ಮೈ ತುಕ್ಕು ಹಿಡಿದರೆ ಗಮನಕ್ಕೆ ಬರುತ್ತದೆ. ಆದರೆ, ಕೆಳಭಾಗದಲ್ಲಿ ತುಕ್ಕು ಹಿಡಿದಿದ್ದರೆ ಗೊತ್ತಾಗುವುದಿಲ್ಲ. ಹೀಗಾಗಿ ಕೆಳಭಾಗವನ್ನು ಮಳೆಗಾಲಕ್ಕೆ ಮೊದಲು ಪರೀಕ್ಷೆ ಮಾಡಬೇಕು. ರಸ್ಟಿಂಗ್ ಆರಂಭವಾಗಿದ್ದರೆ ತಕ್ಷಣ ರಿಪೇರಿ ಮಾಡಿ. ಇಲ್ಲವಾದರೆ ರಸ್ತೆಯಲ್ಲಿ ವೇಗವಾಗಿ ತೂತು ಅಥವಾ ತುಕ್ಕು ಹಿಡಿದ ಜಾಗದ ಮೂಲಕ ಒಳಗೆ ನೀರು ನುಗ್ಗಬಹುದು.
ಬ್ರೇಕ್ ಪ್ಯಾಡ್ಗಳನ್ನು ಬದಲಾಯಿಸಿ
ಮಾನ್ಸೂನ್ ಮೆಂಟೇನೆನ್ಸ್ ವೇಳೆ ಬ್ರೇಕ್ ಗಳ ಸ್ಥಿತಿಯನ್ನು ಪರಿಶೀಲಿಸುವುದು ಕಡ್ಡಾಯ. ಕಾರು ಸೂಕ್ತ ರೀತಿಯಲ್ಲಿ ನಿಲ್ಲುತ್ತದೆಯೇ ಎಂಬುದನ್ನು ಪರಿಶೀಲನೆ ನಡೆಸಬೇಕು. ಬ್ರೇಕ್ ಪ್ಯಾಡ್ಗಳು ಮತ್ತು ಬ್ರೇಕ್ ಫ್ಲ್ಯೂಡ್ ಪರಿಶೀಲಿಸಬೇಕು. ಒದ್ದೆಯಾದ ರಸ್ತೆಗಳಲ್ಲಿ ಬ್ರೇಕ್ ಹಿಡಿಯುವುದು ಕಡಿಮೆ. ಆದ್ದರಿಂದ, ಉತ್ತಮ ಸ್ಥಿತಿಯಲ್ಲಿರುವ ಬ್ರೇಕ್ ಗಳು ವಾಹನವನ್ನು ಸುರಕ್ಷಿತವಾದ ಅಂತರದಲ್ಲಿ ನಿಲ್ಲಿಸಲು ಸಹಾಯ ಮಾಡುತ್ತದೆ.
ಎಸಿ ವ್ಯವಸ್ಥೆ ಪರಿಶೀಲಿಸಿ
ಮಳೆಗಾಲದಲ್ಲಿ ಹವಾಮಾನವು ತಂಪಾಗಿರುವ ಹೊರತಾಗಿಯೂ ಎಸಿ ವ್ಯವಸ್ಥೆಯ ಕಾರ್ಯನಿರ್ವಹಣೆ ಬಹಳ ಮುಖ್ಯ. ಮುಂಭಾಗದ ಡಿ-ಫಾಗರ್ ವ್ಯವಸ್ಥೆ ಎಸಿಯನ್ನು ಅವಲಂಬಿಸಿದೆ. ಎಸಿ ವ್ಯವಸ್ಥೆ ವಿಫಲವಾದರೆ, ವಿಂಡ್ಶೀಲ್ಡ್ ಮೇಲೆ ಮಂಜು ಹಿಡಿಯುತ್ತದೆ. ಇದು ಚಾಲಕನ ಗೋಚರತೆಯನ್ನು ಕಡಿಮೆ ಮಾಡುತ್ತದೆ.
ವೈಪರ್ ಬ್ಲೇಡ್ ಗಳು
ಬೇಸಿಗೆಯಲ್ಲಿ ನಿಷ್ಕ್ರಿಯವಾಗಿರುವ ವೈಪರ್ ಬ್ಲೇಡ್ಗಳು ನಿಷ್ಪ್ರಯೋಜಕವಾಗಬಹುದು. ಶಾಖ ಮತ್ತು ಹವಾಮಾನದಿಂದಾಗಿ, ವೈಪರ್ ಬ್ಲೇಡ್ಗಳು ಗಾಜನ್ನು ಒರೆಸುವ ದಕ್ಷತೆಯನ್ನು ಕಳೆದುಕೊಳ್ಳುತ್ತವೆ. ಮಳೆಗಾಲದಲ್ಲಿ ವೈಪರ್ ಬ್ಲೇಡ್ ಗಳನ್ನು ಪರಿಶೀಲಿಸುವುದು ಮತ್ತು ಅಗತ್ಯವಿದ್ದರೆ ಅವುಗಳನ್ನು ಬದಲಾಯಿಸುವುದು ಮುಖ್ಯ. ನಿಮ್ಮ ವೈಪರ್ ಬ್ಲೇಡ್ ಗಳನ್ನು ಯಾವಾಗಲೂ ಸ್ವಚ್ಛವಾಗಿರಿಸಿಕೊಳ್ಳಿ.
ಬ್ಯಾಟರಿ ಪರಿಶೀಲಿಸಿ
ಸರಿಯಾಗಿ ಕಾರ್ಯನಿರ್ವಹಿಸುವ ಬ್ಯಾಟರಿಯನ್ನು ಕಾರಲ್ಲಿ ಇರುವುದು ಅತ್ಯಗತ್ಯ. ಆದರೂ ಇದು ಮಳೆಗಾಲದಲ್ಲಿ ಇನ್ನಷ್ಟು ಮುಖ್ಯ, ಮಳೆ ಮತ್ತು ಮೋಡ ಕವಿದ ವಾತಾವರಣದಿಂದಾಗಿ ಕಡಿಮೆ ಗೋಚರತೆ ಉಂಟಾಗುವ ಕಾರಣ ನಿಮ್ಮ ವೈಪರ್ ಗಳು ಮತ್ತು ಲೈಟ್ಗಳನ್ನು ಹೆಚ್ಚು ಬಳಸಬೇಕಾಗುತ್ತ.ಎ ಇದು ಬ್ಯಾಟರಿಯ ಮೇಲೆ ದೊಡ್ಡ ಹೊರೆಯನ್ನು ಮಾಡುತ್ತದೆ. ಹೀಗಾಗಿ ಸರಿಯಾಗಿ ಚಾರ್ಜ್ ಆಗುವ ಬ್ಯಾಟರಿ ಇರುವುದು ಅಗತ್ಯ. ಒಂದು ವೇಳೆ ಇಲ್ಲದಿದ್ದರೆ ತಕ್ಷಣದಲ್ಲೇ ಬದಲಾಯಿಸಿ.
ಇದನ್ನೂ ಓದಿ : TVS Bike : ಸೆಪ್ಟೆಂಬರ್ 5ಕ್ಕೆ ಲಾಂಚ್ ಆಗಲಿದೆ ಟಿವಿಎಸ್ನ ಹೊಸ ಬೈಕ್, ಕುತೂಹಲ ಮೂಡಿಸಿ ಘೋಷಣೆ
ವೈರಿಂಗ್ಗಳು ಪರಿಶೀಲಿಸಿ
ಕಾರಿನ ವೈರಿಂಗ್ಗಳನ್ನು ಮಳೆಗಾಲದಲ್ಲಿ ಪರಿಶೀಲಿಸುವುದು ಉತ್ತಮ. ಲೈಟ್ ಸೇರಿದಂತೆ ಕಾರಿನಾದ್ಯಂತ ಸುತ್ತುವರಿದಿರುವ ವೈರ್ಗಳು ಕಟ್ ಆಗಿದ್ದರೆ ಅಥವಾ ಓಪನ್ ಆಗಿದ್ದರೆ ಮಳೆಗಾದಲ್ಲಿ ನೀರು ಬಿದ್ದಾಗ ಅಪಾಯ ಉಂಟಾಗುತ್ತದೆ. ಶಾರ್ಟ್ ಸರ್ಕೀಟ್ ಆಗಿ ಇಡೀ ವೈರಿಂಗ್ ವ್ಯವಸ್ಥೆ ತೊಂದರೆ ಒಳಪಡುತ್ತದೆ. ಹೀಗಾಗಿ ಮಳೆಗಾಲದಲ್ಲಿ ಕಡ್ಡಾಯವಾಗಿ ಕಾರಿನ ವೈರಿಂಗ್ ಸರಿಪಡಿಸಬೇಕು.
ಈ ಎಲ್ಲ ಸ್ಪೇರ್ಗಳು ಜತೆಗಿರಲಿ
ಮಳೆಗಾಲದಲ್ಲಿ ನಿಮ್ಮ ಕಾರಿನಲ್ಲಿ ಕೆಲವು ವಸ್ತುಗಳನ್ನು ಇಟ್ಟುಕೊಳ್ಳುವುದು ಉತ್ತಮ ಅಭ್ಯಾಸ. ಇವುಗಳಲ್ಲಿ ವೈಪರ್ ಬ್ಲೇಡ್ ಗಳು ಮತ್ತು ಫ್ಯೂಸ್ ಗಳಂತಹ ಬಿಡಿಭಾಗಗಳು ಇರಬೇಕು. ರಿಫ್ಲೆಕ್ಟರ್ಗಳು. ವೈದ್ಯಕೀಯ ಕಿಟ್ ನಂತಹ ಪ್ರಮಾಣಿತ ಉಪಕರಣಗಳನ್ನು ಇಟ್ಟುಕೊಳ್ಳಬೇಕು . ಬಟ್ಟೆಗಳು, ಹೆಚ್ಚುವರಿ ಶೂಗಳು, ಛತ್ರಿ / ರೇನ್ಕೋಟ್ ಮತ್ತು ಟವೆಲ್ನಂಥ ವಸ್ತುಗಳುಇದ್ದರೆ ಉತ್ತಮ. ನೀವು ಮಳೆಯಲ್ಲಿ ಸಿಕ್ಕಿಬಿದ್ದರೆ ಮತ್ತು ಮಳೆ ಬೀಳಲು ಪ್ರಾರಂಭಿಸಿದರೆ ನಿಮಗೆ ಈ ಎಲ್ಲ ವಸ್ತುಗಳು ಅಗತ್ಯವಾಗಬಹುದು.