Site icon Vistara News

Viral News : 5 ಕೋಟಿ ರೂಪಾಯಿ ಮೌಲ್ಯದ ರೈಲು ಎಂಜಿನ್​ ಅನ್ನೇ ಕದ್ದೊಯ್ದ ಕಳ್ಳರು!

Train Engine

ಮುಂಬಯಿ: ಭಾರತದಲ್ಲಿ, ವಾಹನ ಕಳ್ಳತನ ಸಾಮಾನ್ಯ ಸಂಗತಿ. ಮನೆಗಳ ಮುಂಭಾಗದಿಂದ, ಪಾರ್ಕಿಂಗ್ ಸ್ಥಳಗಳಿಂದ ಮತ್ತು ಕೆಲವೊಮ್ಮೆ ಹಾಡಹಗಲೇ ಬೈಕ್​, ಕಾರುಗಳನ್ನು ಕಳವು ಮಾಡಿದ ಹಲವಾರು ಪ್ರಕರಣಗಳು ವರದಿಯಾಗಿವೆ. ಆದರೆ, ರೈಲಿನ ಎಂಜಿನ್​ ಕದ್ದ ಪ್ರಕರಣಗಳನ್ನು ಕೇಳಿರಲಿಕ್ಕಿಲ್ಲ.. ಆದರೆ ಕೆಲವು ದಿನಗಳ ಹಿಂದೆ ಅಂಥದ್ದೂ ಒಂದು ಘಟನೆ ನಡೆದಿದ್ದು, ಮುಂಬಯಿಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ(Viral News). ಸಾಗಾಟ ಮಾಡುವ ಸಮಯದಲ್ಲಿ 5 ಕೋಟಿ ರೂಪಾಯಿ ಮೌಲ್ಯದ ಎಂಜಿನ್ ಎತ್ತಿಕೊಂಡು ಹೋಗಿದ್ದು ಬಳಿಕ ಪೊಲೀಸರು ರಾಜಸ್ಥಾನದಿಂದ ಅದನ್ನು ಪತ್ತೆ ಹಚ್ಚಿದ್ದರು. ಕೆಲವು ವರದಿಗಳ ಪ್ರಕಾರ ಸಾಗಾಟದ ಗುತ್ತಿಗೆ ಪಡೆದಿದ್ದ ಉಪಗುತ್ತಿಗೆದಾರನೇ ರೈಲು ಎಂಜಿನ್ ಅನ್ನು ಕದ್ದಿದ್ದ. ಆದರೆ, ಕಾಣೆಯಾದ ವಸ್ತುವಿನ ಗಾತ್ರದ ಕಾರಣಕ್ಕೆ ಈ ಸುದ್ದಿ ಸಾಕಷ್ಟು ಗಮನ ಸೆಳೆದಿದೆ.

ಎಂಜಿನ್​ ಸಾಗಾಟ ಮಾಡಲು ಭಾರತೀಯ ರೈಲ್ವೆಯಿಂದ ಶ್ರೀ ಜೆಬಿ ಗ್ರೇನ್ ಡೀಲರ್ಸ್ ಸಂಸ್ಥೆ ಗುತ್ತಿಗೆ ಪಡೆದುಕೊಂಡಿತ್ತು. ಮುಂಬಯಿಯಿಂದ ಹರಿಯಾಣದ ಕಲ್ಕಾಗೆ ರೈಲು ಎಂಜಿನ್ ಅನ್ನು ಸಾಗಿಸಿ ಅಲ್ಲಿಂದ ವಾಪಸ್​ ಮತ್ತೊಂದು ಎಂಜಿನ್​ ಎತ್ತಿಕೊಂಡು ಬರಬೇಕಾಗಿತ್ತು. ಶ್ರೀ ಜೆಬಿ ಗ್ರೇನ್ ಡೀಲರ್ ಏಪ್ರಿಲ್​ 27ರಂದು ರಾಧಾ ರೋಡ್ ವೇಸ್ ಎಂಬ ಉಪ ಗುತ್ತಿಗೆ ಸಂಸ್ಥೆಗೆ ಸಾಗಾಟದ ಕೆಲಸವನ್ನು ವಹಿಸಿತ್ತು. ಉಪಗುತ್ತಿಗೆ ಕಂಫನಿ ರೈಲಿನ ಎಂಜಿನ್ ಅನ್ನು ಮುಂಬಯಿಯಿಂದ ಕಲ್ಕಾಗೆ ಯಶಸ್ವಿಯಾಗಿ ಸಾಗಿಸಿತ್ತು. ಕಲ್ಕಾ ತಲುಪಿದ ನಂತರ, ಅದೇ ಟ್ರಕ್​ನಲ್ಲಿ 5 ಕೋಟಿ ರೂ.ಗಳ ಮೌಲ್ಯದ ಜಡ್​ಡಿಎಂ 3 ರೈಲು ಎಂಜಿನ್ ಲೋಡ್​ ಮಾಡಲಾಗಿತ್ತು. ಅದನ್ನು ಇದನ್ನು ಕಲ್ಕಾದಿಂದ ಮುಂಬಯಿಗೆ ಸಾಗಿಸಬೇಕಾಗಿತ್ತು. ಈ ಯೋಜನೆಯ ಒಟ್ಟಾರೆ ಸಾರಿಗೆ ವೆಚ್ಚವನ್ನು 4.25 ಲಕ್ಷ ರೂಪಾಯಿ.

ಎರಡೂ ಗುತ್ತಿಗೆ ಸಂಸ್ಥೆಗಳು ಒಪ್ಪಂದಕ್ಕೆ ಸಹಿ ಹಾಕಿದ್ದವು. ಅಂತೆಯೇ ಉಪ ಗುತ್ತಿಗೆದಾರನಿಗೆ ಏಪ್ರಿಲ್ 29 ರಂದು 2 ಲಕ್ಷ ರೂ.ಗಳನ್ನು ಮುಂಗಡವಾಗಿ ಪಾವತಿಸಲಾಗಿತ್ತು. ಮೇ 6ರಂದು ಹೆಚ್ಚುವರಿ 1 ಲಕ್ಷ ರೂ.ಗಳನ್ನು ಪಾವತಿಸಲಾಗಿತ್ತು. ಮೇ 19ರಂದು ರಾಧಾ ರೋಡ್​ವೇಸ್​ಗೆ ಮತ್ತೊಂದು ಲಕ್ಷ ರೂ. ಪಾವತಿ ಮಾಡಿದ ಜೆಬಿ ಗ್ರೇನ್ ಡೀಲರ್ ಎಂಜಿನ್ ವಿತರಣೆಗಾಗಿ ವಿತರಣೆಗೆ ಕಾಯುತ್ತಿತ್ತು ಆದರೆ, ನಿಗದಿತ ಸಮಯಕ್ಕೆ ಎಂಜಿನ್​ ತಲುಪಿರಲಿಲ್ಲ. ಕಲ್ಕಾದಲ್ಲಿನ ಅಧಿಕಾರಿಗಳನ್ನು ಸಂಪರ್ಕಿಸಿದಾಗ ಎಂಜಿನ್ ಈಗಾಗಲೇ ಲೋಡ್ ಆಗಿದ್ದನ್ನು ಖಚಿತಪಡಿಸಿದ್ದರು. ಹೀಗಾಗಿ ಕಳ್ಳತನದ ಅನುಮಾನ ಮೂಡಿತು.

ಯಾಕಾಯಿತು ಕಣ್ಮರೆ

ವಾಸ್ತವದಲ್ಲಿ ಇದು ಕಳ್ಳತನವಲ್ಲ. ಗುತ್ತಿಗೆ ಪಡೆದ ಸಂಸ್ಥೆಗಳ ನಡುವಿನ ಹಣಕಾಸಿನ ವಿವಾದವಾಗಿತ್ತು. ಹಣ ಸರಿಯಾಗಿ ಕೊಟ್ಟಿಲ್ಲವೆಂದು ರೈಲು ಎಂಜಿನ್​​ ತಲುಪಿಸಿರಲಿಲ್ಲ. ಜೆಬಿ ಗ್ರೇನ್ ಡೀಲರ್ ಮಾಲೀಕರು ರಾಧಾ ರೋಡ್ ವೇಸ್ ಮಾಲೀಕ ಶ್ರೀ ಶರ್ಮಾ ಅವರನ್ನು ಸಂಪರ್ಕಿಸಿ ರೈಲು ಎಂಜಿನ್ ಎಲ್ಲಿ ಎಂದು ಕೇಳಿದಾಗ ಬಾಕಿ ಇರುವ 1 ಲಕ್ಷ ರೂ.ಗಳನ್ನು ಪಾವತಿಸದ ಕಾರಣ ರೈಲು ಎಂಜಿನ್​ ಕೊಡುವುದಿಲ್ಲ ಎಂದು ಹೇಳಿದ್ದರು. ಜೆಬಿ ಗ್ರೇನ್ ಮಾಲೀಕ ಗುಪ್ತಾ ಎಂಜಿನ್ ವಿತರಿಸಿದ ನಂತರವೇ ಬಾಕಿ ಮೊತ್ತವನ್ನು ನೀಡುವುದು ಎಂದು ಹಠ ಹಿಡಿದಿದ್ದರು.

ಇದನ್ನೂ ಓದಿ : Viral Video : ಹಾವನ್ನು ಹಗ್ಗದಂತೆ ಮನೆಯೊಳಗೆ ಎಳೆದೊಯ್ದ ಮಗು! ಚೀರಾಡಿದ ಮಕ್ಕಳು

ಜುಲೈ 2 ರಂದು ಗುಪ್ತಾ ವಡಾಲಾ ಟಿಟಿ ಪೊಲೀಸ್ ಠಾಣೆಗೆ ತೆರಳಿ ಶರ್ಮಾ ವಿರುದ್ಧ 420 ಪ್ರಕರಣ ದಾಖಲಿಸಿದ್ದರು ಈ ಪ್ರಕರಣದ ಬಗ್ಗೆ ಕೇಳಿ ಪೊಲೀಸ್ ಅಧಿಕಾರಿಗಳು ಮೊದಲಿಗೆ ಆಶ್ಚರ್ಯಚಕಿತರಾಗಿದ್ದರು. ಬಹುಶಃ ಇದೇ ಮೊದಲ ಬಾರಿಗೆ ರೈಲು ಎಂಜಿನ್ ಕಾಣೆಯಾದ ಪ್ರಕರಣ ಅವರ ಮುಂದೆ ಬಂದಿತ್ತು. ಪೊಲೀಸರು ತಕ್ಷಣ ಶರ್ಮಾ ಅವರನ್ನು ಕರೆಸಿ ಮಾತನಾಡಿದ್ದರು. ಬಳಿಕ ಎಂಜಿನ್ ಅನ್ನು ರಾಜಸ್ಥಾನದ ಪೆಟ್ರೋಲ್ ಬಂಕ್​ನಲ್ಲಿ ಇಟ್ಟಿರುವುದನ್ನು ಪತ್ತೆ ಹಚ್ಚಿ ಬಳಿಕ ಅದನ್ನು ಮುಂಬೈಗೆ ಸಾಗಿಸಿದ್ದರು.

ಪೊಲೀಸ್​​ ಅಧಿಕಾರಿಯೊಬ್ಬರು ಈ ಕುರಿತು ಪ್ರತಿಕ್ರಿಯೆ ನೀಡಿದ್ದು, ಏಪ್ರಿಲ್ 2023ರಲ್ಲಿ ಪರೇಲ್ ವರ್ಕ್ ಶಾಪ್​ನಿಂದ ಕಲ್ಕಾಗೆ ಸಾಗಿಸುವಾಗ ಎಂಜಿನ್ ಉಂಟಾದ ಹಾನಿಯು ವಿವಾದದ ಮೂಲ ಕಾರಣವಾಗಿದೆ. ಹಾನಿಯಿಂದಾಗಿ ರೈಲ್ವೆ ವಿಧಿಸಿದ ದಂಡದ ಬಗ್ಗೆ ಶ್ರೀ ಜೆಬಿ ಗ್ರೇನ್ ಡೀಲರ್ಸ್ ಅಸೋಸಿಯೇಷನ್ ಮತ್ತು ರಾಧಾ ರೋಡ್ವೇಸ್ ನಡುವೆ ವಿವಾದ ಉಂಟಾಗಿತ್ತು ಎಂದು ಹೇಳಲಾಗಿದೆ.

Exit mobile version