ನವದೆಹಲಿ: 15 ವರ್ಷಗಳಷ್ಟು ಹಳೆಯದಾದ ಎಲ್ಲ ಸರ್ಕಾರಿ ವಾಹನಗಳನ್ನು 2023ರ ಏಪ್ರಿಲ್‌ನಿಂದ ಸ್ಥಗಿತಗೊಳಿಸಲು ಕೇಂದ್ರ ಸರ್ಕಾರವು ನಿರ್ಧರಿಸಿದೆ(Vehicle Scrap Policy). ಈ ನಿಯಮವು ರಾಜ್ಯ ಸರ್ಕಾರಿ ವಾಹನಗಳಿಗೂ ಅನ್ವಯವಾಗುತ್ತದೆ. ಬಸ್ಸುಗಳು ಸೇರಿದಂತೆ ಸರ್ಕಾರಿ ಕಚೇರಿಗಳು ಬಳಸುವ ಎಲ್ಲ ವಾಹನಗಳನ್ನು ಸ್ಕ್ರ್ಯಾಪ್ ಮಾಡಲಾಗುತ್ತಿದೆ. ಈ ಸಂಬಂಧ ಕೇಂದ್ರ ರಸ್ತೆ ಸಾರಿಗೆ ಸಚಿವಾಲಯವು ಸಂಬಂಧಿಸಿದ ಕಚೇರಿಗಳಿಗೆ ನೋಟಿಸ್ ಜಾರಿ ಮಾಡಿದೆ. ಇದೇ ವೇಳೆ, ಖಾಸಗಿ ವಾಹನಗಳ ಮಾಲೀಕರು ಪ್ರತಿಕ್ರಿಯೆಗಳನ್ನು ಪಡೆಯಲಾಗುತ್ತಿದೆ.
ವೈಯಕ್ತಿಕ ಮತ್ತು ವಾಣಿಜ್ಯ ಉದ್ದೇಶಕ್ಕೆ ಬಳಸುವ ವಾಹನಗಳ ಸ್ಕ್ರ್ಯಾಪಿಂಗ್ ಸ್ವಯಂಪ್ರೇರಿತವಾಗಿದೆ. ವಾಹನಗಳ ಮಾಲೀಕರೇ ಈ ಬಗ್ಗೆ ನಿರ್ಧರಿಸಬೇಕಾಗುತ್ತದೆ. ಆದರೆ, ಸರ್ಕಾರಿ ಸ್ವಾಮ್ಯದ ಕೈಗಾರಿಕೆಗಳು, ಸಾರ್ವಜನಿಕ ಸಂಸ್ಥೆಗಳಿಗೆ ಸೇರಿದ ಸರ್ಕಾರಿ ವಾಹನಗಳು 15 ವರ್ಷ ಮೀರಿದ್ದರೆ, ಅಂಥ ವಾಹನಗಳನ್ನು ಮುಂದಿನ ವರ್ಷ ಏಪ್ರಿಲ್‌ನಿಂದ ಸ್ಕ್ರ್ಯಾಪ್ ಮಾಡುವುದು ಕಡ್ಡಾಯವಾಗಿದೆ ಎಂದು ಕೇಂದ್ರ ಹೆದ್ದಾರಿ ಮತ್ತು ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಹೇಳಿದ್ದಾರೆ.
ಇದೇ ವೇಳೆ, ವೆಹಿಕಲ್ ಸ್ಕ್ರ್ಯಾಪಿಂಗ್ ನೀತಿಯ ಜಾರಿಯ ಬಗ್ಗೆ ಪ್ರಧಾನಿ ಕಾರ್ಯಾಲಯವೂ ಸೇರಿದಂತೆ ನೀತಿ ಆಯೋಗ, ಹಣಕಾಸು ಸಚಿವಾಲಯದ ಜತೆ ಉನ್ನತ ಸಭೆಯನ್ನು ನಡೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯಗಳು ತಮ್ಮ ಸಾರಿಗೆ ಸಂಸ್ಥೆಯ ಬಸ್‌ಗಳನ್ನು ಬದಲಿಸಿ, ಆಧುನಿಕ ಬಸ್‌ಗಳನ್ನು ಬಳಸುವ ಬಗ್ಗೆ ಪ್ರೋತ್ಸಾಹಿಸಲಾಗುತ್ತಿದೆ.
ಇದನ್ನೂ ಓದಿ | ಇನ್ನು ಐದು ವರ್ಷದಲ್ಲಿ ದೇಶದಲ್ಲಿ ಪೆಟ್ರೋಲ್ ಬ್ಯಾನ್ ಆಗುತ್ತಾ? ನಿತಿನ್ ಗಡ್ಕರಿ ಹೇಳಿದ್ದೇನು?