Site icon Vistara News

Rishabh Pant Accident | ಕಾರುಗಳು ಅಪಘಾತಕ್ಕೆ ಒಳಗಾದಾಗ ಬೆಂಕಿ ಹೊತ್ತಿಕೊಳ್ಳುವುದು ಯಾಕೆ? ಅದಕ್ಕೆ ಪರಿಹಾರವೇನು?

ಬೆಂಗಳೂರು : ಶುಕ್ರವಾರ ಮುಂಜಾನೆ ವೇಳೆಗೆ ಭಾರತದ ಕ್ರಿಕೆಟ್​ ಅಭಿಮಾನಿಗಳೆಲ್ಲರೂ ಬೆಚ್ಚಿ ಬೀಳುವಂಥ ಸುದ್ದಿಯೊಂದು ಬಂತು. ವಿಕೆಟ್​ಕೀಪರ್​ ಬ್ಯಾಟರ್ ರಿಷಭ್​ ಪಂತ್ (Rishabh Pant Accident) ಅವರ ಕಾರು ಅಪಘಾತಕ್ಕೆ ಒಳಗಾಗಿ ಸಂಪೂರ್ಣವಾಗಿ ಸುಟ್ಟು ಹೋಗಿದೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ತೀವ್ರ ನಿಗಾ ವಿಭಾಗದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು. ಈ ವೇಳೆ ಎಲ್ಲರೂ ರಿಷಭ್​ಗಾಗಿ ಪ್ರಾರ್ಥನೆ ಮಾಡಿದ್ದರು. ಅದರ ಫಲ ದೊರಕಿದ್ದು, ಸಾಮಾನ್ಯ ಮಟ್ಟದ ಗಾಯಗಳೊಂದಿಗೆ ರಿಷಭ್​ ಅವರು ಆರೋಗ್ಯವಾಗಿದ್ದಾರೆ. ಆದರೆ, ಡಿವೈಡರ್​ಗೆ ಗುದ್ದಿದ ಅವರ ಕಾರಿಗೆ ಬೆಂಕಿ ಹೊತ್ತಿಕೊಂಡಿದ್ದು ಯಾಕೆ ಎಂಬ ಪ್ರಶ್ನೆ ಎಲ್ಲರಿಗೂ ಮೂಡಿತು. ಅದಕ್ಕೇನು ಕಾರಣ ಎಂಬುದನ್ನು ಇಲ್ಲಿ ವಿವರಿಸಲಾಗಿದೆ.

ಕಾರುಗಳು ದೊಡ್ಡ ಮಟ್ಟದ ಅಪಘಾತಕ್ಕೆ ಒಳಗಾದಾಗ ಬೆಂಕಿ ಹೊತ್ತಿಕೊಳ್ಳುವುದು ಸಾಮಾನ್ಯ. ಅಪಘಾತದ ಸಂದರ್ಭದಲ್ಲಿ ಕಾರಿನ ಲೋಹಗಳ ನಡುವೆ ಉಂಟಾಗುವ ಘರ್ಷಣೆ ಬೆಂಕಿಯ ಕಿಡಿ ಉಂಟಾಗಿ ಬಹುಬೇಗನೆ ಕಾರನ್ನು ವ್ಯಾಪಿಸುತ್ತದೆ. ಅಂತೆಯೇ ಆಧುನಿಕ ಕಾರುಗಳ ನಿರ್ಮಾಣಕ್ಕೆ ಬಳಸುವ ವಸ್ತುಗಳಾದ ಪ್ಲಾಸ್ಟಿಕ್​, ಎಲೆ್ಕ್ಟ್ರಿಕಲ್​ ವೈರಿಂಗ್, ಫ್ಯಾಬ್ರಿಕ್​ಗಳಿಗೆ ಬೇಗ ಬೆಂಕಿ ಅಂಟಿಕೊಳ್ಳುತ್ತವೆ. ಅಪಘಾತದ ಸಂದರ್ಭದಲ್ಲಿ ಇಂಧನ ಸೋರಿಕೆ ಉಂಟಾಗಿ ಅದಕ್ಕೂ ಬೆಂಕಿ ತಗುಲುತ್ತದೆ. ಅಪಘಾತದ ವೇಳೆ ಎಂಜಿನ್​ ಮತ್ತು ಬ್ಯಾಟರಿಗಳು ಅತಿಯಾಗಿ ಬಿಸಿಯಾಗಿ ಬೆಂಕಿ ಕಿಡಿಯಾಗಿ ಪರಿವರ್ತನೆಗೊಳ್ಳುವುದು ಕೂಡ ಕಾರುಗಳು ಭಸ್ಮವಾಗಲು ಕಾರಣವಾಗುತ್ತದೆ.

ಪರಿಹಾರ ಏನು?

ಬೆಂಕಿ ಹಿಡಿದಿರುವ ಕಾರಿನಿಂದ ಹೊರಕ್ಕೆ ಬರುವುದು ಮೊದಲ ಆದ್ಯತೆಯಾಗಬೇಕು. ಹಿಂದೆ ಮುಂದೆ ಯೋಚನೆ ಮಾಡದೇ ಅಥವಾ ಮಾನಸಿಕ ಆಘಾತದಿಂದ ಹೊರಕ್ಕೆ ಬಂದು ಗಟ್ಟಿಯಾದ ಸಾಧನದಿಂದ ಗಾಜು ಒಡೆದು ಕಾರಿನಿಂದ ಹೊರಕ್ಕೆ ಜಿಗಿಯಬೇಕು. ಅಗ್ನಿಶಾಮಕ ಸಾಧನವನ್ನು ಯಾವಾಗಲೂ ಜತೆಯಲ್ಲಿ ಇಟ್ಟುಕೊಂಡಿರಬೇಕು ಹಾಗೂ ಇದರಿಂದ ಅಪಾಯ ಹೆಚ್ಚು. ಬೆಂಕಿಗೆ ಬೇಗ ಆಹುತಿಯಾಗಬಲ್ಲ ಯಾವುದೇ ವಸ್ತುಗಳನ್ನು ಪ್ರಯಾಣಿಕರ ಕಾರಿನಲ್ಲಿ ಕೊಂಡೊಯ್ಯಬಾರದು.

ಸಹಾಯ ಮಾಡಿ

ನೀವು ಜವಾಬ್ದಾರಿಯುತ ನಾಗರಿಕರಾಗಿದ್ದರೆ ಇಂಥ ಅಪಘಾತಗಳು ನಡೆದಾಗ ಕಾರಿನೊಳಗೆ ಯಾರಾದರೂ ಸಿಲುಕಿದ್ದರೆ ಅವರನ್ನು ಮೊದಲು ರಕ್ಷಿಸಬೇಕು. ರಿಷಭ್​ ಪಂತ್ ಪ್ರಕರಣದಲ್ಲಿ ಸ್ಥಳೀಯರು ಕಾರಿನೊಳಗಿಂದ ಅವರಿಗೆ ಬರಲು ನೆರವಾಗಿದ್ದರು. ಅದೇ ರೀತಿ ಬೆಂಕಿ ಬಿದ್ದ ಕಾರಿನಲ್ಲಿ ಯಾರಾದರೂ ಸಿಲುಕಿದ್ದರೆ ಅವರಿಗೆ ನೆರವಾಗಿ. ಪ್ರಯಾಣಿಕರು ಒಳಗೆ ಪ್ರಜ್ಞೆ ಕಳೆದುಕೊಂಡಿದ್ದರೆ ಗಟ್ಟಿಯಾದ ವಸ್ತುವಿನಲ್ಲಿ ಗಾಜು ಒಡೆದು ಸೀಟ್​ ಬೆಲ್ಟ್​ ಕತ್ತರಿಸಿ ಅವರನ್ನು ಹೊರಕ್ಕೆ ತನ್ನಿ.

ಪ್ರಥಮ ಚಿಕಿತ್ಸಾ ಪೆಟ್ಟಿಗೆ ಇರಲಿ

ಕಾರಿನಲ್ಲಿ ಪ್ರಥಮ ಚಿಕಿತ್ಸೆಯ ಪೆಟ್ಟಿಯನ್ನು ಸದಾ ಕೊಂಡೊಯ್ಯಬೇಕು. ಬೆಂಕಿ ತಗುಲಿದಾಗ ಆಗುವ ಉರಿಯನ್ನು ತಪ್ಪಿಸಲು ಬೇಕಾದ ಜೆಲ್​ ಬಳಸಿಕೊಳ್ಳಿ. ಸಣ್ಣ ಪುಟ್ಟ ಬ್ಯಾಂಡೇಜ್​ಗಳನ್ನು ಜತೆಗೆ ಇಟ್ಟುಕೊಳ್ಳಿ.

ಕಾರಿನಿಂದ ದೂರ ಇರಿ

ಬೆಂಕಿ ಹೊತ್ತಿಕೊಂಡ ಕಾರಿನಿಂದ ಅಂತರ ಕಾಪಾಡಿಕೊಂಡು ನಿಲ್ಲಬೇಕು. ಕಾರಿನಿಂದ ಹೊರಕ್ಕೆ ಬಂದ ಬಳಿಕ ಬೆಲೆ ಬಾಳುವ ವಸ್ತುಗಳಿವೆ ಎಂಬ ನೆಪ ಹೇಳಿ ಸುತ್ತಮುತ್ತ ನಿಲ್ಲಬಾರದು. ಬೆಂಕಿಯ ಕೆನ್ನಾಲಗೆ ಯಾವತ್ತೂ ಬೇಕಾದರೂ ಚಾಚಿಕೊಳ್ಳಬಹುದು. ಸಣ್ಣ ಪುಟ್ಟ ಸ್ಫೋಟಗಳು ಆಗಬಹುದು. ಹತ್ತಿರದಲ್ಲಿ ಇನ್ಯಾವುದೇ ವಾಹನಗಳನ್ನು ನಿಲ್ಲಿಸಬಾರದು.

ಸಹಾಯಕ್ಕಾಗಿ ಕರೆ ಮಾಡಿ

ವಾಹನಗಳಿಗೆ ಬೆಂಕಿ ತಗುಲಿದ ತಕ್ಷಣ ಅಗ್ನಿ ಶಾಮಕ ದಳಕ್ಕೆ ಕರೆ ಮಾಡಿ. ಅಲ್ಲದೆ ಸ್ಥಳೀಯ ಪೊಲೀಸರಿಗೆ ಕರೆ ಮಾಡಿ ಟ್ರಾಫಿಕ್ ಜಾಮ್​ ಉಂಟಾಗದಂತೆ ನೋಡಿಕೊಳ್ಳಲು ಹೇಳಿ. ಇದರಿಂದ ವಾಹನ ಸಂಚಾರದ ಮಾರ್ಗವನ್ನು ಬದಲಾಯಿಸಿ ಆಂಬ್ಯುಲೆನ್ಸ್​ ಹಾಗೂ ಅಗ್ನಿ ಶಾಮಕ ದಳದ ವಾಹನ ಬರಲು ಅನುಕೂಲ ಮಾಡಿಕೊಡಬಹುದು. ನಷ್ಟ ಪರಿಹಾರಕ್ಕಾಗಿ ಇನ್ಯೂರೆನ್ಸ್​ ಕಂಪನಿಗೂ ಮಾಹಿತಿ ನೀಡಿ.

ಇದನ್ನೂ ಓದಿ | Rishabh Pant | ಪಂತ್​ ಚಲಾಯಿಸುತ್ತಿದ್ದ ಕಾರು ನಿಯಂತ್ರಣ ತಪ್ಪಲು ಕಳಪೆ ರಸ್ತೆ ಕಾರಣ ಎಂದ ಸ್ಥಳೀಯರು

Exit mobile version