Site icon Vistara News

Bill gates: ಭಾರತ ಜಗತ್ತಿಗೇ ಭರವಸೆ: ಬಿಲ್‌ ಗೇಟ್ಸ್ ಮುಕ್ತ ಶ್ಲಾಘನೆ

Bill gates

ಕ್ಯಾಲಿಫೋರ್ನಿಯಾ: ಭಾರತ ಭವಿಷ್ಯದ ಭರವಸೆ ನೀಡುತ್ತಿರುವ ರಾಷ್ಟ್ರವಾಗಿದೆ ಎಂದು ಸಾಫ್ಟ್‌ವೇರ್‌ ದೈತ್ಯ ಮೈಕ್ರೋಸಾಫ್ಟ್‌ (Microsoft) ಸ್ಥಾಪಕ ಬಿಲ್‌ ಗೇಟ್ಸ್‌ (Bill gates) ಹೇಳಿದ್ದಾರೆ.

ತಮ್ಮ ಬ್ಲಾಗ್‌ ʼಗೇಟ್ಸ್‌ ನೋಟ್ಸ್‌ʼನಲ್ಲಿ ಅವರು ಈ ಬಗ್ಗೆ ವಿಸ್ತೃತವಾಗಿ ಬರೆದಿದ್ದು, ಭವಿಷ್ಯದ ತಂತ್ರಜ್ಞಾನ ಹಾಗೂ ಉದ್ಯಮ ಕ್ಷೇತ್ರದಲ್ಲಿ ಭಾರತ ವಹಿಸಬಹುದಾದ ಮಹತ್ವದ ಪಾತ್ರದ ಕುರಿತು ಬೆಳಕು ಚೆಲ್ಲಿದ್ದಾರೆ. ಜಗತ್ತಿನ ಎಲ್ಲ ದೇಶಗಳಂತೆಯೇ ಭಾರತದಲ್ಲೂ ಸೀಮಿತ ಸಂಪನ್ಮೂಲಗಳಿವೆ. ಆದರೆ ಅಂಥ ಸೀಮಿತ ಅವಕಾಶದಲ್ಲೂ ಹೇಗೆ ಪ್ರಗತಿ ಸಾಧಿಸಬಹುದು ಎಂದು ಭಾರತ ತೋರಿಸಿಕೊಟ್ಟಿದೆ ಎಂದು ಅವರು ಹೇಳಿದ್ದಾರೆ.

ಜಗತ್ತು ಹಲವು ಸಮಸ್ಯೆಗಳನ್ನು ಎದುರಿಸುತ್ತಿರುವ ಸಂದರ್ಭದಲ್ಲೂ, ಅವುಗಳನ್ನು ಪರಿಹಾರ ಮಾಡಬಹುದು ಎಂಬ ಭರವಸೆಯನ್ನು ಭಾರತ ಸಾಧ್ಯವಾಗಿಸಿ ತೋರಿಸಿದೆ. ಹಲವೊಮ್ಮೆ ಜಗತ್ತಿನ ದೊಡ್ಡ ಸಮಸ್ಯೆಗಳನ್ನು ಪರಿಹರಿಸಲು ಸಾಕಷ್ಟು ಸಮಯ ಅಥವಾ ಹಣ ಇಲ್ಲವೆಂದು ಹೇಳಲಾಗುತ್ತಿತ್ತು. ಆದರೆ ಆ ಭಾವನೆ ಸರಿಯಲ್ಲವೆಂದು ಭಾರತ ಸಾಬೀತುಪಡಿಸಿದೆ. ಅದಕ್ಕೆ ಭಾರತದ ಪ್ರಗತಿಗಿಂತಲೂ ದೊಡ್ಡ ಸಾಕ್ಷಿ ಬೇಡ ಎಂದು ಅವರು ಹೇಳಿದ್ದಾರೆ.

ಭಾರತ ನನಗೆ ಭರವಸೆಯ ಸೆಲೆಯಾಗಿದೆ. ಅದು ಇಷ್ಟರಲ್ಲೇ ಜಗತ್ತಿನ ಅತ್ಯಧಿಕ ಜನಸಂಖ್ಯೆಯ ದೇಶವಾಗಲಿದೆ. ಜನಸಂಖ್ಯೆ ಸಮಸ್ಯೆ ಎಂದು ತಿಳಿಯಲಾಗುತ್ತಿತ್ತು. ಆದರೆ ತಾನು ದೊಡ್ಡ ಸವಾಲುಗಳನ್ನು ಬಗೆಹರಿಸಬಲ್ಲೆ ಎಂದು ಭಾರತ ತೋರಿಸಿದೆ. ಇಲ್ಲಿ ಪೋಲಿಯೋ ನಿರ್ಮೂಲನೆ, ಎಚ್‌ಐವಿ ಹರಡುವಿಕೆ ತಡೆ, ಬಡತನ ಇಳಿಕೆ, ಶಿಶು ಮರಣ ಪ್ರಮಾಣ ಇಳಿಕೆ, ಸ್ವಚ್ಛತೆ ಹಾಗೂ ವಾಣಿಜ್ಯ ಸೇವೆಗಳ ಹೆಚ್ಚಳ ಎಲ್ಲವೂ ಸಾಧ್ಯವಾಗಿದೆ ಎಂದು ಬಿಲ್‌ ಬರೆದುಕೊಂಡಿದ್ದಾರೆ.

ಸಂಶೋಧನೆಗಳು ಅಗತ್ಯವುಳ್ಳವರಿಗೆ ತಲುಪುವಂಥ ಮೂಲವ್ಯವಸ್ಥೆಯನ್ನೂ ಭಾರತ ಅಳವಡಿಸಿಕೊಂಡಿದೆ. ಮಾರಕ ವಿಧದ ಡಯೇರಿಯಾ ಅನ್ನು ಹಬ್ಬಿಸುವ ರೊಟಾವೈರಸ್‌ ವ್ಯಾಕ್ಸಿನ್‌ ಅನ್ನು ಎಲ್ಲ ಮಕ್ಕಳಿಗೂ ತಲುಪಿಸಲು ಅಸಾಧ್ಯ ಎಂದು ಗೊತ್ತಾದಾಗ ಭಾರತ ಸ್ವತಃ ಅದನ್ನು ತಯಾರಿಸಲು ಮುಂದಾಯಿತು. ತಜ್ಞರು ಹಾಗೂ ಸಂಶೋಧಕರು, ಗೇಟ್ಸ್‌ ಫೌಂಡೇಶನ್‌ ಜತೆ ಸೇರಿಸಿಕೊಂಡು ಲಸಿಕೆಯ ವ್ಯಾಪಕ ಹಂಚಿಕೆಗೆ ವ್ಯವಸ್ಥೆ ಸೃಷ್ಟಿಸಿಕೊಂಡಿತು. 2021ರಲ್ಲಿ ದೇಶದ ಒಂದು ವರ್ಷದೊಳಗಿನ 83% ಮಕ್ಕಳಿಗೆ ಇದನ್ನು ಕೊಡಲಾಗಿದೆ. ಈ ಕಡಿಮೆ ದರದ ಲಸಿಕೆಯನ್ನು ಈಗ ಜಗತ್ತಿನೆಲ್ಲೆಡೆಯ ಮಕ್ಕಳಿಗೂ ನೀಡಲಾಗುತ್ತದೆ ಎಂದು ಬಿಲ್‌ ಶ್ಲಾಘಿಸಿದ್ದಾರೆ.

ಇದನ್ನೂ ಓದಿ: Bill Gates : 67 ವರ್ಷದ ಬಿಲ್‌ ಗೇಟ್ಸ್‌ ಡೇಟಿಂಗ್‌ ಮಾಡುತ್ತಿರುವ ಪೌಲಾ ಯಾರು?

ಭಾರತೀಯ ಕೃಷಿ ಅಧ್ಯಯನ ಸಂಸ್ಥೆ (ಐಎಆರ್‌ಐ)ಯಲ್ಲಿ ಗೇಟ್ಸ್‌ ಫೌಂಡೇಶನ್‌ ಹಣ ಹೂಡಿಕೆ ಮಾಡಿದೆ. ಐಎಆರ್‌ಐ ಇತ್ತೀಚೆಗೆ 10%ನಷ್ಟು ಅಧಿಕ ಇಳುವರಿ ನೀಡುವ ಬಟಾಣಿ ತಳಿಯೊಂದನ್ನು ಆವಿಷ್ಕರಿಸಿದೆ. ಇದು ಹೆಚ್ಚಿನ ಇಳುವರಿ ಕೊಡುವುದಲ್ಲದೆ ಬರಪೀಡಿತ ಪ್ರದೇಶಗಳಿಗೂ ಆಗುತ್ತದೆ. ಇದು ಈಗಾಗಲೇ ರೈತರಿಗೆ ಲಭ್ಯವಿದೆ. ಹೀಗೆ, ತಾಪಮಾನ ಏರುತ್ತಿರುವ ಜಗತ್ತಿನ ನಡುವೆ ಭಾರತ ತನ್ನ ಜನತೆಗೆ ಆಹಾರ ಒದಗಿಸಲು ಹೆಚ್ಚಿನ ಸಿದ್ಧತೆ ಮಾಡಿಕೊಳ್ಳುತ್ತಿದೆ. ಜಾಗತಿಕ ತಾಪಮಾನ ಏರಿಕೆ, ಬಡತನ ಮುಂತಾದವುಗಳನ್ನು ಎದುರಿಸಲು ನಮ್ಮಲ್ಲಿ ಸಾಧನಗಳಿಲ್ಲ ಎಂದು ನಾವು ಭಾವಿಸಿದ್ದೇವೆ. ಆದರೆ ಐಎಆರ್‌ಐನಂಥ ಸಂಸ್ಥೆಗಳು ಅದನ್ನು ಸುಳ್ಳು ಮಾಡುತ್ತಿವೆ ಎಂದು ಗೇಟ್ಸ್‌ ಬರೆದಿದ್ದಾರೆ.

ಗೇಟ್ಸ್‌ ಅವರ ಬ್ಲಾಗ್‌ ಅನ್ನು ಪ್ರಧಾನಿ ನರೇಂದ್ರ ಮೋದಿ (Narendra Modi) ಕೂಡ ಶೇರ್‌ ಮಾಡಿಕೊಂಡಿದ್ದಾರೆ. ಮುಂದಿನ ವಾರ ತಂತ್ರಜ್ಞಾನದ ಆವಿಷ್ಕಾರಗಳ ಅವಲೋಕನಕ್ಕಾಗಿ ತಾನು ಭಾರತಕ್ಕೆ ಭೇಟಿ ನೀಡುತ್ತಿರುವುದಾಗಿಯೂ ಗೇಟ್ಸ್‌ ತಿಳಿಸಿದ್ದಾರೆ.

ಇದನ್ನೂ ಓದಿ: Bill Gates Makes Roti: ಬಿಲ್‌ ಗೇಟ್ಸ್‌ ರೊಟ್ಟಿ ಲಟ್ಟಿಸಿದ್ದಕ್ಕೆ ಮೋದಿ ಮೆಚ್ಚುಗೆ, ಸಿರಿಧಾನ್ಯದ ರೊಟ್ಟಿ ಮಾಡಿ ಎಂದೂ ಸಲಹೆ

Exit mobile version