ಬೆರಳು- ಚುಚ್ಚುವಿಕೆಯ ಮೂಲಕ ಮೆದುಳಿನ ಕ್ಯಾನ್ಸರ್ ಗೆಡ್ಡೆಗಳನ್ನು (brain tumor) ಪತ್ತೆಹಚ್ಚುವ ಪರೀಕ್ಷೆಯನ್ನು ವಿಜ್ಞಾನಿಗಳು (medical news) ಅಭಿವೃದ್ಧಿಪಡಿಸಿದ್ದಾರೆ. COVID-19 ಸಾಂಕ್ರಾಮಿಕ ಸಮಯದಲ್ಲಿ ನಡೆಸಿದ ಪರೀಕ್ಷೆಯಂತೆಯೇ ಇದು ಇರಲಿದ್ದು, ವಿಶ್ವದ ಮೊದಲ ಲ್ಯಾಟರಲ್ ಫ್ಲೋ ಟೆಸ್ಟ್ (Lateral flow test) ಆಗಿರಲಿದೆ.
ರೋಗಿಗಳು ಮನೆಯಲ್ಲಿಯೇ ಬಳಸಬಹುದಾದ ಸರಳ ಪರೀಕ್ಷಾ ಕಿಟ್ (home test kit) ಅನ್ನು ಸೃಷ್ಟಿಸುವುದು ಸಂಶೋಧಕರ ಗುರಿ. ಆಕ್ರಮಣಕಾರಿ, ಮರುಕಳಿಸಿ ಬರುವ ಗೆಡ್ಡೆಗಳನ್ನು ಇದು ಪತ್ತೆಹಚ್ಚಲು ನೆರವಾಗಲಿದೆ ಎಂದು ಸಂಶೋಧಕರು ಹೇಳಿದ್ದಾರೆ. ಮೆದುಳಿನ ಕ್ಯಾನ್ಸರ್ ಪ್ರಸ್ತುತ ಜಾಗತಿಕವಾಗಿ ವರ್ಷಕ್ಕೆ ಸುಮಾರು 2,00,000 ಸಾವುಗಳಿಗೆ ಕಾರಣವಾಗುತ್ತಿದೆ.
ಆರಂಭಿಕ ಚಿಕಿತ್ಸೆಯ ನಂತರ ಕೆಲವೊಮ್ಮೆ ಗೆಡ್ಡೆಗಳು ಮರುಕಳಿಸುತ್ತವೆ. ಆದರೆ ಮರುಕಳಿಸುವಿಕೆಯ ಅನಿರೀಕ್ಷಿತ ಟೈಮಿಂಗ್‌ನಿಂದಾಗಿ ಅವುಗಳನ್ನು ಪತ್ತೆಹಚ್ಚುವುದು ಸವಾಲಾಗುತ್ತಿತ್ತು. ಹೊಸ ಪರೀಕ್ಷೆಯು ಸರಳವಾಗಿದ್ದು, ಬೆರಳಿನ ಚುಚ್ಚುವಿಕೆಯಿಂದ ಮಾಡಬಹುದು. ಇದು ಸಾವಿರಾರು ಜನರ ಜೀವನದಲ್ಲಿ ಸಕಾರಾತ್ಮಕ ಬದಲಾವಣೆ ತರುವ ಸಾಧ್ಯತೆಯಿದೆ ಎಂದು ಸಂಶೋಧಕರು ಹೇಳಿದ್ದಾರೆ.
ಈ ಪರೀಕ್ಷೆಯು MRI ಸ್ಕ್ಯಾನ್‌ಗಳ ಅಗತ್ಯವನ್ನು ಕಡಿಮೆ ಮಾಡಲಿದ್ದು, ಆ ಮೂಲಕ ಮತ್ತು ರೋಗಿಗಳಿಗೆ ಕಡಿಮೆ ವೆಚ್ಚದ ಪರಿಣಾಮಕಾರಿ ಪರ್ಯಾಯವನ್ನು ಒದಗಿಸಲಿದೆ. ಆ ಮೂಲಕ ಆರೋಗ್ಯ ವ್ಯವಸ್ಥೆಗಳ ಮೇಲಿನ ಹೊರೆಯನ್ನು ಗಣನೀಯವಾಗಿ ಕಡಿಮೆ ಮಾಡಲಿದೆ. ನಾಟಿಂಗ್‌ಹ್ಯಾಮ್ ಟ್ರೆಂಟ್ ವಿಶ್ವವಿದ್ಯಾನಿಲಯದ (NTU) ವಿಜ್ಞಾನಿಗಳ ತಂಡ ಈ ಸಂಶೋಧನೆಯನ್ನು ಮುನ್ನಡೆಸುತ್ತಿದೆ. ವೈದ್ಯಕೀಯ ಸಂಶೋಧನಾ ಮಂಡಳಿಯಿಂದ ಧನಸಹಾಯ ಪಡೆದಿದ್ದು, ಶೆಫೀಲ್ಡ್ ವಿಶ್ವವಿದ್ಯಾಲಯದ ಸಂಶೋಧಕರೂ ಸೇರಿದ್ದಾರೆ.
NTUನ ಪ್ರೊಫೆಸರ್ ಫಿಲಿಪ್ ವಿಲ್ಸನ್ ಈ ಬಗ್ಗೆ ಹೇಳುವುದು ಹೀಗೆ: “ಮೆದುಳಿನ ಗೆಡ್ಡೆಗಳನ್ನು ಮೊದಲು ರೋಗನಿರ್ಣಯ ಮಾಡುವಾಗ ಲಭ್ಯವಿರುವ ಅತ್ಯುತ್ತಮ ಚಿಕಿತ್ಸಾ ಕ್ರಮಗಳನ್ನು ಅನುಸರಿಸಬೇಕು. ಆದರೆ, ನಂತರದ ಮರುಕಳಿಸುವಿಕೆಗಳು ಪ್ರಮುಖ ಸಮಸ್ಯೆ. ಕೆಲವೊಮ್ಮೆ ಅವು ಬೇಗನೆ ಮತ್ತು ಆಕ್ರಮಣಕಾರಿಯಾಗಿ ಹಿಂತಿರುಗುತ್ತವೆ. ಚಿಕಿತ್ಸೆಯ ಆರು ತಿಂಗಳ ನಂತರ ನೀವು ಎಂಆರ್‌ಐ ಮಾಡಿದರೆ, ಆ ಹೊತ್ತಿಗಾಗಲೇ ಗೆಡ್ಡೆಯು ಗಮನಾರ್ಹವಾಗಿ ಮರುಕಳಿಸಿರುವ ಸಾಧ್ಯತೆಯೂ ಇದೆ. ಈ ಹೊಸ ತಂತ್ರಜ್ಞಾನವು ರೋಗಿಗಳಿಗೆ ಮನೆಯಲ್ಲಿಯೇ ಸುಲಭವಾಗಿ ಬಳಸಬಹುದಾದ ರೀತಿಯಲ್ಲಿ ನಿಯಮಿತ, ಕೈಗೆಟುಕುವ ಪರೀಕ್ಷೆಯನ್ನು ಒದಗಿಸುತ್ತದೆ. ಇದನ್ನು ಇತರ ರೀತಿಯ ಕ್ಯಾನ್ಸರ್‌ಗಳಿಗೂ ಅನ್ವಯಿಸಬಹುದು. ಇದು ವಿಶ್ವಾದ್ಯಂತ ಲಕ್ಷಾಂತರ ಜೀವಗಳನ್ನು ಉಳಿಸಲು ಸಹಾಯ ಮಾಡುತ್ತದೆ.ʼʼ
ಗೆಡ್ಡೆಗೆ ನಿರ್ದಿಷ್ಟವಾಗಿರುವ ರಕ್ತದಲ್ಲಿನ ಅಣುಗಳನ್ನು ಪತ್ತೆಹಚ್ಚಲು ಮತ್ತು ಅದರ ಮರುಕಳಿಕೆಯ ಆರಂಭಿಕ ಸೂಚನೆಯನ್ನು ನೀಡಲು ಸಾಧ್ಯವಾಗುವಂತಹ ಲ್ಯಾಟರಲ್ ಫ್ಲೋ ಪರೀಕ್ಷೆಗಳನ್ನು ಸೃಷ್ಟಿಸುವತ್ತ ಸಂಶೋಧಕರು ಗಮನಹರಿಸಿದ್ದಾರೆ. ಅಧ್ಯಯನವು ಕ್ಲಿನಿಕಲ್ ಪ್ರಯೋಗಗಳಿಗೆ ಇಳಿಯುವ ಮೊದಲು ಸಂಶೋಧಕರು ಮೂಲ ಮಾದರಿಗಳ ಮೇಲೆ ಕೆಲಸ ಮಾಡುತ್ತಿದ್ದಾರೆ. ಮೆದುಳಿನ ಗೆಡ್ಡೆಯ ಅತ್ಯಂತ ಮಾರಣಾಂತಿಕ ವಿಧವಾದ ಗ್ಲಿಯೊಬ್ಲಾಸ್ಟೊಮಾ (GBM) ನಂತಹ ಕ್ಯಾನ್ಸರ್‌ಗಳನ್ನು ಪತ್ತೆಹಚ್ಚುವ ಗುರಿಯನ್ನು ತಂತ್ರಜ್ಞಾನ ಹೊಂದಿದೆ.
ಇದನ್ನೂ ಓದಿ: Science News: 800 ಕೋಟಿ ವರ್ಷ ಹಳೆಯ ರೇಡಿಯೋ ಅಲೆಗಳ ಪತ್ತೆ