ನವ ದೆಹಲಿ: ರೈಲ್ವೆ ಸಚಿವ ಅಶ್ವಿನ್ ವೈಷ್ಣವ್ ಅವರು ಗುರುವಾರ ದೇಶದ ಮೊದಲ ರೈಲ್ವೆ ತೂಗು ಸೇತುವೆಯ (Railway Bridge) ಚಿತ್ರವನ್ನು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಅಲ್ಲದೆ, ಭವಿಷ್ಯಕ್ಕಾಗಿ ಸಿದ್ಧತೆ ಎಂಬುದಾಗಿ ಬರೆದುಕೊಂಡಿದ್ದಾರೆ.
ಅಶ್ವಿನ್ ಅವರು ಪೋಸ್ಟ್ ಮಾಡಿರುವ ಫೋಟೊಗಳಿಗೆ ಸಾವಿರಾರು ಮಂದಿ ಪ್ರತಿಕ್ರಿಯೆ ನೀಡಿದ್ದಾರೆ. ಅಲ್ಲದೆ, ಇದೊಂದು ಅದ್ಭುತ ಯೋಜನೆ ಎಂಬುದಾಗಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹೌದು, ಇದು ಭಾರತೀಯ ರೈಲ್ವೆ ಕೈಗೆತ್ತಿಕೊಂಡಿರುವ ಇದುವರೆಗಿನ ಅತ್ಯಂತ ಕ್ಲಿಷ್ಟಕರ ರೈಲ್ವೆ ಮಾರ್ಗ ಯೋಜನೆ. ಯಾಕೆಂದರೆ ಪ್ರಾಕೃತಿಕವಾಗಿ ಸವಾಲಿನ ಪ್ರದೇಶವಾಗಿರುವ ಜಮ್ಮು ಮತ್ತು ಕಾಶ್ಮೀರದಲ್ಲಿ ನಿರ್ಮಾಣವಾಗುತ್ತಿದೆ. ರೈಲು ಮಾರ್ಗವು ತೂಗು ಸೇತುವೆಯ ಮೇಲೆ ಹಾದು ಹೋಗುವುದರಿಂದ ನಿರ್ಮಾಣ ಕಾರ್ಯ ಇಲಾಖೆಗೆ ಅತ್ಯಂತ ಸವಾಲಿನದ್ದಾಗಿದೆ.
ಏನಿದು ಯೋಜನೆ?
ಈ ತೂಗು ಸೇತುವೆ ಜಮ್ಮು ಕಾಶ್ಮೀರದ ರಿಯಾಸಿ ಜಿಲ್ಲೆಯಲ್ಲಿ ನಿರ್ಮಾಣಗೊಳ್ಳುತ್ತಿದೆ. ಉದಮ್‌ಪುರ- ಶ್ರೀನಗರ- ಬಾರಾಮುಲ್ಲಾ ರೈಲ್ವೆ ಲಿಂಕ್ (ಯುಎಸ್‌ಬಿಆರ್‌ಎಲ್) ಯೋಜನೆಯಡಿ ಕತ್ರಾದಿಂದ ರಿಯಾಸಿಗೆ ಸಂಪರ್ಕ ಸಾಧಿಸುವ ರೈಲ್ವೆ ಮಾರ್ಗ. ಅಂಜಿ ನದಿಗೆ ಅಡ್ಡಲಾಗಿ ಕಟ್ಟುತ್ತಿರುವ ಈ ಸೇತುವೆಯನ್ನು ಅಂಜಿ ಖಡ್ ಬ್ರಿಜ್ ಎಂದೇ ಕರೆಯುತ್ತಾರೆ. ಇದು ಭಾರತ ಉಪಖಂಡದಲ್ಲಿ ನಡೆಯುತ್ತಿರುವ ಅತ್ಯಂತ ಕಠಿಣ ರೈಲ್ವೆ ಮಾರ್ಗ ಎಂಬುದಾಗಿ ಹೇಳಲಾಗುತ್ತಿದೆ.
ಇದು ಸಂಪೂರ್ಣವಾಗಿ ಉಕ್ಕಿನ ರೋಪ್‌ನಿಂದ ನಿರ್ಮಾಣವಾಗುತ್ತಿರುವ ಬ್ರಿಜ್. ನದಿಯ ಎರಡು ಬದಿಯಲ್ಲಿ ಪಿಲ್ಲರ್‌ಗಳನ್ನು ನಿರ್ಮಿಸಿ ೪೭೩. ೨೫ ಮೀಟರ್ ಉದ್ದದ ಸೇತುವೆ ನಿರ್ಮಾಣ ಮಾಡಲಾಗುತ್ತಿದೆ. ೯೬ ಕೇಬಲ್‌ಗಳ ಸಹಾಯದಿಂದ ನಿರ್ಮಿಸುವ ಸೇತುವೆ ಮೇಲೆ ಹಳಿಗಳನ್ನು ನಿರ್ಮಿಸಲಾಗುತ್ತದೆ. ಸೇತುವೆ ನದಿಯ ಮಟ್ಟದಿಂದ ಸುಮಾರು ೩೩೧ ಮೀಟರ್ ಎತ್ತರವಿದ್ದು, ಐಫೆಲ್ ಟವರ್‌ಗಿಂತಲೂ ಮಿಗಿಲು.
ರೈಲ್ವೆ ಇಲಾಖೆಯು ಕೆಲವು ತಿಂಗಳ ಹಿಂದೆ ಈ ಯೋಜನೆಯ ಬಗ್ಗೆ ಕೂ ಆ್ಯಪ್‌ನಲ್ಲಿ ಚಿತ್ರಗಳನ್ನು ಶೇರ್ ಮಾಡಿಕೊಂಡಿತ್ತು. “ಇದೊಂದು ಎಂಜಿನಿಯರಿಂಗ್ ಅದ್ಬುತ,ʼʼ ಎಂಬುದಾಗಿಯೂ ಹೇಳಿತ್ತು.
ಈ ಬ್ರಿಜ್ ಅನ್ನು ಬಿರುಗಾಳಿ ಮತ್ತು ನಿತ್ಯವೂ ರಭಸದಿಂದ ಬೀಸುವ ಗಾಳಿಯನ್ನು ತಡೆಯುವ ರೀತಿಯಲ್ಲಿ ನಿರ್ಮಿಸಲಾಗಿದೆ. ಕಡಿದಾದ ಕಣಿವೆ ಹಾಗೂ ಪ್ರಪಾತಗಳನ್ನು ಹೊಂದಿರುವ ಈ ಪ್ರದೇಶದಲ್ಲಿ ಸಾಮಾನ್ಯ ರೀತಿಯ ಪಿಲ್ಲರ್ ಬ್ರಿಜ್ ಅಥವಾ ಆರ್ಚ್ ಮಾದರಿಯ ಪಿಲ್ಲರ್‌ಗಳನ್ನು ಎಬ್ಬಿಸಲು ಅಸಾಧ್ಯವಾಗಿರುವ ಕಾರಣ ಕೇಬಲ್ ಬ್ರಿಜ್ ನಿರ್ಮಿಸಲಾಗುತ್ತಿದೆ.
ಇದನ್ನೂ ಓದಿ: Railway Exam | ರೈಲ್ವೆ ನೇಮಕಾತಿ ಬೋರ್ಡ್ ಎಕ್ಸಾಂ ಅಭ್ಯರ್ಥಿಗಳಿಗಾಗಿ ಸ್ಪೆಷಲ್ ರೈಲು