Site icon Vistara News

ನಮ್ಮ ಚಳ್ಳಕೆರೆ; ಭಾರತದ ಭವಿಷ್ಯದ ವಿಜ್ಞಾನ ಕೇಂದ್ರ

challakere science city

ಗಿರೀಶ್ ಲಿಂಗಣ್ಣ
ಬಾಬಾ ಅಟಾಮಿಕ್ ರಿಸರ್ಚ್ ಸೆಂಟರ್ (ಬಿಎಆರ್‌ಸಿ), ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ), ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ), ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಓ) ಈ ನಾಲಕ್ಕೂ ಸಂಸ್ಥೆಗಳು ಜೊತೆಯಾಗಿ ಕರ್ನಾಟಕದ ಚಿತ್ರದುರ್ಗದಲ್ಲಿ 8,000 ಎಕರೆ ಭೂ ಪ್ರದೇಶದಲ್ಲಿ ಹೊಸದಾದ ಪಟ್ಟಣ ನಿರ್ಮಾಣ ಕಾರ್ಯದಲ್ಲಿ ತೊಡಗಿಕೊಂಡಿವೆ. ಭಾರತದ ಪ್ರಮುಖ ವಿಜ್ಞಾನ ಸಂಸ್ಥೆಗಳು ಈಗ ಚಿತ್ರದುರ್ಗದ ಚಳ್ಳಕೆರೆಗೆ ಕಾಲಿಡುತ್ತಿರುವುದರಿಂದ, ಚಿತ್ರದುರ್ಗ ಭವಿಷ್ಯದ ಭಾರತದ ವಿಜ್ಞಾನ ಕೇಂದ್ರವಾಗಿ ರೂಪುಗೊಳ್ಳಬಹುದಾಗಿದೆ.

ಬೆಂಗಳೂರಿನಿಂದ 200 ಕಿಲೋಮೀಟರ್ ದೂರದಲ್ಲಿರುವ ಚಳ್ಳಕೆರೆಯಲ್ಲಿ 8,000 ಎಕರೆಗೂ ಹೆಚ್ಚಿನ ಜಾಗದಲ್ಲಿ ಐಐಎಸ್‌ಸಿ, ಡಿಆರ್‌ಡಿಓ, ಇಸ್ರೊ ಹಾಗೂ ಬಿಎಆರ್‌ಸಿ ಸಂಸ್ಥೆಗಳನ್ನು ಒಳಗೊಂಡ ನೂತನ ಪಟ್ಟಣ ನಿರ್ಮಾಣಗೊಳ್ಳುತ್ತಿದೆ. ಈ ಪ್ರದೇಶವು ಒಂದು ವಿನೂತನ ಪಟ್ಟಣವಾಗಿ ರೂಪುಗೊಳ್ಳಲಿದ್ದು, ಭಾರತದ ಅತಿದೊಡ್ಡ ವಿಜ್ಞಾನ ಕೇಂದ್ರಗಳಲ್ಲಿ ಒಂದಾಗಲಿದೆ.

ಬೆಂಗಳೂರು ನಗರ ಈಗಾಗಲೇ ಮಿತಿಮೀರಿ ಬೆಳೆದು, ಅಪಾರವಾದ ಜನಸಾಂದ್ರತೆಯನ್ನು ಹೊಂದಿದೆ. ಆದ್ದರಿಂದ ಸರ್ಕಾರ ಇನ್ನೂ ಹೆಚ್ಚಿನ ಯೋಜನೆಗಳನ್ನು ಬೆಂಗಳೂರಿಗೆ ತಂದು ಸುರಿಯುವುದು ಬೇಡ ಎಂದು ನಿರ್ಧರಿಸಿದೆ. ಇದರಿಂದಾಗಿ, ಕರ್ನಾಟಕದ ಬೇರೆ ನಗರಗಳು, ಪಟ್ಟಣಗಳೂ ಸಹ ಹೆಚ್ಚಿನ ಪ್ರಯೋಜನ ಪಡೆದುಕೊಳ್ಳಲಿವೆ. ಪ್ರಸ್ತುತ ವಿಜ್ಞಾನ ಕೇಂದ್ರದ ಯೋಜನೆಯ ಮೂಲಕ ಚಿತ್ರದುರ್ಗ ಹಾಗೂ ಸುತ್ತಲಿನ ಪ್ರದೇಶಗಳಲ್ಲೂ ಬದಲಾವಣೆ ಕಂಡುಬರಲಿದೆ.

ಚಿತ್ರದುರ್ಗ ಜಿಲ್ಲೆಯು ಪೂರ್ತಿಯಾಗಿ ಬಂಡೆಗಲ್ಲಿನ ಭೂಪ್ರದೇಶವನ್ನು ಹೊಂದಿದ್ದು, ವೇದಾವತಿ ನದಿ ಕಣಿವೆಯಲ್ಲಿ ಬೆಳೆದಿದೆ. ಚಿತ್ರದುರ್ಗದ ವಾಯುವ್ಯ ದಿಕ್ಕಿನಲ್ಲಿ ತುಂಗಭದ್ರಾ ನದಿ ಹರಿಯುತ್ತದೆ. ಈ ಯೋಜನೆ ಜಾರಿಗೊಂಡ ಬಳಿಕ, ಚಿತ್ರದುರ್ಗಕ್ಕೆ ಹೆಚ್ಚಿನ ಅಭಿವೃದ್ಧಿಯ ವೇಗ ಲಭ್ಯವಾಗಲಿದ್ದು, ಚಿತ್ರದುರ್ಗದ ಸುತ್ತಮುತ್ತಲಿನ ರಸ್ತೆಗಳು ಹಾಗೂ ಚಿತ್ರದುರ್ಗ – ಬೆಂಗಳೂರು ಮಧ್ಯದ ರಸ್ತೆಯೂ ಅಭಿವೃದ್ಧಿ ಹೊಂದುವ ಎಲ್ಲಾ ಸಾಧ್ಯತೆಗಳಿವೆ.

ಡಿಆರ್‌ಡಿಓ ಯುಎವಿ ಯೋಜನೆ

ಮಾನವರಹಿತ ವೈಮಾನಿಕ ವಾಹನ (UAV)

ಈಗಾಗಲೇ ಲಭ್ಯವಿರುವ ಮಾಹಿತಿಗಳ ಪ್ರಕಾರ, ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ಅತ್ಯಾಧುನಿಕ ಅನ್ ಮ್ಯಾನ್ಡ್ ಏರಿಯಲ್ ವೆಹಿಕಲ್ (ಯುಎವಿ – ಮಾನವ ರಹಿತ ವಿಮಾನ) ಯೋಜನೆಯನ್ನು ಆಯೋಜಿಸುತ್ತಿದ್ದು, ಭಾರತದ ಸೇನಾಪಡೆಗಳಿಗೆ ಅಂತಹಾ ಆಧುನಿಕ ವಿಮಾನಗಳನ್ನು, ಹಾರಾಟ ಉಪಕರಣಗಳನ್ನು ತಯಾರಿಸುವ ಹಾಗೂ ಪರೀಕ್ಷಿಸುವ ಕೇಂದ್ರವನ್ನು ಒಳಗೊಳ್ಳಲಿದೆ.

ಇದರೊಡನೆ, ಪ್ರಸ್ತುತ ಪಟ್ಟಣದಲ್ಲಿ ಮಾನವ ರಹಿತ ವಿಮಾನಗಳ ಹಾರಾಟ, ಭೂಸ್ಪರ್ಶಕ್ಕೆ ಅಗತ್ಯವಿರುವ ಏರ್ ಸ್ಟ್ರಿಪ್ ಅನ್ನು ಹೊಂದಿರಲಿದೆ. ಸಣ್ಣ ಗಾತ್ರದ ಮಾನವ ಚಾಲಿತ ವಿಮಾನಗಳೂ ಇಲ್ಲಿ ಹಾರಾಟ ನಡೆಸಲು ಸಾಧ್ಯವಿದೆ.

ಏರೋನಾಟಿಕಲ್ ಟೆಸ್ಟ್ ರೇಂಜ್

ಚಿತ್ರದುರ್ಗದ ಏರೋನಾಟಿಕಲ್ ಟೆಸ್ಟ್ ರೇಂಜ್ (ಎಟಿಆರ್) ಡಿಆರ್‌ಡಿಓದ ಒಂದು ಹೊರಾಂಗಣ ಪರೀಕ್ಷಾ ಮತ್ತು ಮೌಲ್ಯಮಾಪನ ಕೇಂದ್ರವಾಗಿದೆ. ಇದು ಸಂಪೂರ್ಣವಾಗಿ ಮಾನವ ಚಾಲಿತ ಹಾಗೂ ಮಾನವ ರಹಿತ ವಿಮಾನಗಳ ಸಂಶೋಧನೆಗೆ ಉಪಯೋಗವಾಗಲಿದೆ. ಪ್ರಸ್ತುತ ಎಟಿಆರ್ ಏರೋನಾಟಿಕಲ್ ಡೆವಲಪ್ಮೆಂಟ್ ಎಸ್ಟಾಬ್ಲಿಷ್ಮೆಂಟ್ (ಎಡಿಇ) ಆಡಳಿತದಲ್ಲಿ ಕಾರ್ಯ ನಿರ್ವಹಿಸುತ್ತಿದೆ.

ಏರ್ ಟ್ರಾಫಿಕ್ ಡಿಸ್ಪ್ಲೇ ಸಿಸ್ಟಮ್ ಹೊಂದಿರುವ ಎಟಿಆರ್ ಚಿತ್ರದುರ್ಗದಲ್ಲಿ ರೇಂಜ್ ಕಂಟ್ರೋಲ್ ಸೆಂಟರ್ (ಆರ್‌ಸಿಸಿ) ವ್ಯವಸ್ಥೆಯೂ ಇದೆ. ಇಲ್ಲಿ ಒಂದು ರೇಡಾರ್ ಸೆಂಟರ್ ಇದ್ದು, ಅಲ್ಲಿ ಪ್ರೈಮರಿ ಹಾಗೂ ಸೆಕೆಂಡರಿ ಸರ್ವೈಯಲೆನ್ಸ್ ರೇಡಾರ್‌ಗಳು, ಮಿಷನ್ ವೀಡಿಯೋ ಡಿಸ್ಟ್ರಿಬ್ಯೂಷನ್ ಹಾಗೂ ಡಿಸ್ಪ್ಲೇ ಸಿಸ್ಟಮ್, ಮಾನವ ರಹಿತ ವೈಮಾನಿಕ ವಾಹನಗಳಾದ ರುಸ್ತುಂ -1 ಹಾಗೂ ರುಸ್ತುಂ – 2 ಗಳನ್ನು ಒಳಗೊಂಡ ಎರಡು ಹ್ಯಾಂಗರ್‌ಗಳು ಇವೆ. ಪ್ರಸ್ತುತ ಈ ರನ್ ವೇ 2.2 ಕಿಲೋಮೀಟರ್ ಉದ್ದವಾಗಿದ್ದು, ಇದರ ಯಾವ ತುದಿಯಿಂದಲೂ ವಿಮಾನಗಳು ಭೂಸ್ಪರ್ಶ ಮಾಡಬಹುದು, ಹಾರಾಟ ನಡೆಸಬಹುದಾಗಿದೆ.

ಎಟಿಆರ್ ಮುಂದಿನ ದಿನಗಳಲ್ಲಿ ಏರೋಸ್ಟಾಟ್ಸ್, ಗಾಳಿಯಿಂದ ನೆಲಕ್ಕೆ ದಾಳಿ ನಡೆಸುವ ಆಯುಧಗಳು, ಪ್ಯಾರಾಶೂಟ್‌ಗಳು, ಹಾಗೂ ಮಾನವ ರಹಿತ ವಿಮಾನಗಳ ಪರೀಕ್ಷೆಗಳನ್ನು ನಡೆಸುವ ಉದ್ದೇಶ ಹೊಂದಿದೆ. ಆದರೆ ಬ್ಯಾಲಿಸ್ಟಿಕ್ ಕ್ಷಿಪಣಿಗಳ ಪರೀಕ್ಷಾ ಉಡಾವಣೆ ಈ ಕೇಂದ್ರದಲ್ಲಿ ನಡೆಸುವುದಿಲ್ಲ.

ಚಿತ್ರದುರ್ಗದ ಸಮೀಪದಲ್ಲಿರುವ ಚಳ್ಳಕೆರೆ ಎಟಿಆರ್ ನಲ್ಲಿ ಇಲ್ಲಿಯ ತನಕ ತಪಸ್ ಬಿಎಚ್ – 201 ವಿಮಾನದ 65 ಹಾರಾಟಗಳು ಪೂರ್ಣಗೊಂಡಿವೆ. ಟ್ಯಾಕ್ಟಿಕಲ್ ಏರ್‌ಬಾರ್ನ್ ಪ್ಲಾಟ್‌ಫಾರ್ಮ್ ಫಾರ್ ಏರಿಯಲ್ ಸರ್ವಯಲೆನ್ಸ್ ಬಿಯಾಂಡ್ ಹಾರಿಜ಼ಾನ್ – 201 (ತಪಸ್ ಬಿಎಚ್ – 201) ಒಂದು ಮೀಡಿಯಂ ಆಲ್ಟಿಟ್ಯೂಡ್ ಲಾಂಗ್ ಎಂಡ್ಯುರೆನ್ಸ್ (ಎಂಎಎಲ್ಇ) ಮಾನವ ರಹಿತ ವಿಮಾನವಾಗಿದ್ದು, ಸಂಪೂರ್ಣವಾಗಿ ಭಾರತದಲ್ಲಿ ಎಡಿಇಯಿಂದ ನಿರ್ಮಾಣಗೊಂಡಿದೆ. ಇನ್ನೊಂದೆಡೆ, ಎಟಿಆರ್ ನಲ್ಲಿ ಜಾಗತಿಕ ಗುಣಮಟ್ಟದ ಆ್ಯಕ್ಟಿವ್ ಇಲೆಕ್ಟ್ರಾನಿಕಲಿ ಸ್ಕ್ಯಾನಿಂಗ್ ಆಂಟೆನಾ ಅರೇ ವ್ಯವಸ್ಥೆಯೂ ಮುಂದಿನ ದಿನಗಳಲ್ಲಿ ಲಭ್ಯವಾಗಲಿದೆ.

ಬಿಎಆರ್‌ಸಿ ಕೇಂದ್ರ

ಬಾಬಾ ಅಟಾಮಿಕ್ ರಿಸರ್ಚ್ ಸೆಂಟರ್ ಭಾರತದ ಒಂದು ಪ್ರಮುಖ ಶಕ್ತಿ ಕೇಂದ್ರವಾಗಿ ಹೊರಹೊಮ್ಮಲಿದೆ. ಇಲ್ಲಿ ಧಾತು ಪುಷ್ಟೀಕರಣದ ಕಾರ್ಯ ಕೈಗೊಳ್ಳಲಾಗುವುದು. ಕೈಗಾದ ಬಳಿಕ, ಚಳ್ಳಕೆರೆಯ ಬಿಎಆರ್‌ಸಿ ಕೇಂದ್ರವು ಭಾರತದ ಎರಡನೇ ಪ್ರಮುಖ ಅಣುಶಕ್ತಿ ಕೇಂದ್ರವಾಗಲಿದೆ. ಇಲ್ಲಿ ಅಣುಶಕ್ತಿ ಸ್ಥಾವರಗಳಿಗೆ ಶಕ್ತಿ ನೀಡುವ ಥೋರಿಯಂ, ಯುರೇನಿಯಂನಂತಹ ಧಾತುಗಳನ್ನು ಪುಷ್ಟೀಕರಿಸಲಾಗುವುದು.

ರಾಜ್ಯದಲ್ಲಿ ಇಸ್ರೋದ ಮತ್ತೊಂದು ಕೇಂದ್ರ

ಇಸ್ರೋ ಸಂಸ್ಥೆಯ ಮುಖ್ಯ ಉದ್ದೇಶ ರಿಮೋಟ್ ಸೆನ್ಸಿಂಗ್ ಹಾಗೂ ಸಂವಹನದ ಗುರಿ ಸಾಧಿಸುವುದಾಗಿದೆ. ಈ ಯೋಜನೆಯ ಗುರಿ ಹೈದರಾಬಾದಿನಲ್ಲಿರುವ ನ್ಯಾಷನಲ್ ರಿಮೋಟ್ ಸೆನ್ಸಿಂಗ್ ಏಜೆನ್ಸಿಗೆ ಸರಿಸಮವಾಗಿ ಕೆಲಸ ಮಾಡುವುದಾಗಿದ್ದು, ಈ ಕೇಂದ್ರ ಯುರೋಪಿನ ಬಾಹ್ಯಾಕಾಶ ಕೇಂದ್ರಗಳು ಹಾಗೂ ಅಮೆರಿಕಾದ ಬಾಹ್ಯಾಕಾಶ ಕೇಂದ್ರಗಳೊಡನೆ ಸಂಪರ್ಕ ಹೊಂದಿರಲಿದ್ದು, ಅವುಗಳ ಮಧ್ಯ ಹೆಚ್ಚಿನ ಪ್ರಮಾಣದ ಮಾಹಿತಿ ವಿನಿಮಯವಾಗಲಿದೆ.

ಟು ಸ್ಟೇಜ್ ಟು ಆರ್ಬಿಟ್ ಮಾದರಿಯ ಮರುಬಳಕೆಯ ಲಾಂಚ್ ವೆಹಿಕಲ್ ನಿರ್ಮಾಣಕ್ಕಾಗಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು ಈ ಮಹತ್ವಾಕಾಂಕ್ಷೆಯ ಈ ನೂತನ ಕೇಂದ್ರವನ್ನು ಏಪ್ರಿಲ್ ಅಂತ್ಯದ ಮೊದಲು ನಿರ್ಣಾಯಕ ಹಂತಕ್ಕೆ ತರಲಿದೆ. ಭಾರತದ ಈ ಮರುಬಳಸಬಹುದಾದ ಉಡಾವಣಾ ವಾಹನದ ತಂತ್ರಜ್ಞಾನವನ್ನು ಇಸ್ರೋ ಚಿತ್ರದುರ್ಗದ ಏರ್ ಸ್ಟ್ರಿಪ್ನಲ್ಲಿ ಪರೀಕ್ಷೆಗೆ ಒಳಪಡಿಸಲಿದೆ.

ಈ ಆರ್‌ಎಲ್‌ವಿ ಲ್ಯಾಂಡಿಂಗ್ ಎಕ್ಸ್ಪರಿಮೆಂಟ್ ಅಥವಾ ಆರ್‌ಎಲ್‌ವಿಎಲ್ಇಎಕ್ಸ್ ಪರೀಕ್ಷೆಯು ರೆಕ್ಕೆಯನ್ನು ಹೊಂದಿರುವ, ಮಾನವ ರಹಿತ ಹಾರಾಟದ ಮೂಲ ಮಾದರಿಯನ್ನು 2.3ರಿಂದ 2.4 ಕಿಲೋಮೀಟರ್ ಎತ್ತರಕ್ಕೆ ಹೆಲಿಕಾಪ್ಟರ್ ಮೂಲಕ ಒಯ್ದು, ಆ ಬಳಿಕ ಅದನ್ನು ಏರ್ ಸ್ಟ್ರಿಪ್‌ನಲ್ಲಿ ಭೂಸ್ಪರ್ಶ ಮಾಡುವಂತೆ ಬಿಡಲಾಗುವುದು.

“ಈ ಮೂಲ ಮಾದರಿಯನ್ನು ಏರ್ ಸ್ಟ್ರಿಪ್‌ನಿಂದ 3.7 ಕಿಲೋಮೀಟರ್ ದೂರದಲ್ಲಿ ಬಿಡುಗಡೆಗೊಳಿಸಲಾಗುವುದು. ಆ ನಂತರ ಈ ದೂರವನ್ನು ಅದು ಅದರ ಪಾಡಿಗೆ ವೇಗವನ್ನು ಗಳಿಸಿಕೊಳ್ಳುತ್ತಾ, ನಿಯಂತ್ರಣ ಉಳಿಸಿಕೊಳ್ಳುತ್ತಾ, ಯಾವುದೇ ವಿಮಾನದಂತೆ ಕೆಳಗಡೆ ಆಗಮಿಸಿ, ಹಿಂದಿನ ಚಕ್ರಗಳು ಮೊದಲು ಭೂಸ್ಪರ್ಶವಾಗುವಂತೆ ನೆಲಕ್ಕೆ ಇಳಿಯಬೇಕು. ಆ ಬಳಿಕ ಬ್ರೇಕಿಂಗ್ ಉದ್ದೇಶಕ್ಕೆ ಒಂದು ಪ್ಯಾರಾಶೂಟ್ ಸಹ ಬಳಕೆಗೆ ಬರುತ್ತದೆ” ಎಂದು ಇಸ್ರೋ ಅಧ್ಯಕ್ಷರಾದ ಎಸ್ ಸೋಮನಾಥ್ ವಿವರಿಸಿದ್ದಾರೆ.

ಈ ಹಿಂದೆ, 2020ರಲ್ಲಿ ಇಸ್ರೋ 2,700 ಕೋಟಿ ರೂ ವೆಚ್ಚದಲ್ಲಿ ಹ್ಯುಮನ್ ಸ್ಪೇಸ್ ಫ್ಲೈಟ್ ಇನ್ಫ್ರಾಸ್ಟ್ರಕ್ಚರ್ ಸೆಂಟರ್ ನಿರ್ಮಾಣಕ್ಕಾಗಿ ಮನವಿ ಸಲ್ಲಿಸಿತ್ತು. ಈ ಕೇಂದ್ರವೂ ಸಹ ಚಿತ್ರದುರ್ಗ ಜಿಲ್ಲೆಯಲ್ಲೇ ನಿರ್ಮಾಣಗೊಳ್ಳಲಿದ್ದು, ಇದು ಮುಂದಿನ ಮೂರು ವರ್ಷಗಳಲ್ಲಿ ಕಾರ್ಯಸನ್ನದ್ಧವಾಗಲಿದೆ.

ಭಾರತೀಯ ವಿಜ್ಞಾನ ಸಂಸ್ಥೆಯ ಕೇಂದ್ರ

ಭಾರತೀಯ ವಿಜ್ಞಾನ ಸಂಸ್ಥೆ ಒಂದು ವೃತ್ತಾಕಾರದ, ಸಿಂಕ್ರೊಟ್ರಾನ್ ಎಂಬ ಬಹುದೊಡ್ಡ ಕಾಂತೀಯ ವ್ಯವಸ್ಥೆಯನ್ನು 2,000 ಕೋಟಿ ರೂಗಳ ವೆಚ್ಚದಲ್ಲಿ ನಿರ್ಮಾಣಗೊಳಿಸಲು ಯೋಜನೆ ಹಾಕಿಕೊಂಡಿದೆ. ಈ ಕೇಂದ್ರದಲ್ಲಿ ಇಲೆಕ್ಟ್ರಾನ್‌ಗಳು ಬೆಳಕಿನ ವೇಗದಲ್ಲಿ ಚಲಿಸುತ್ತಿರುತ್ತವೆ. ಇಲ್ಲಿ ಇನ್ನೂ ಉತ್ತಮ ಉಪಯುಕ್ತ ಔಷಧ ಅನ್ವೇಷಣೆಯ ಕುರಿತು ಪ್ರಯೋಗಗಳು ಹಾಗೂ ಸಂಶೋಧನೆಗಳು, ಮೆಡಿಕಲ್ ಇಮೇಜಿಂಗ್ ಉಪಕರಣಗಳು, ಕ್ಯಾನ್ಸರ್ ರೋಗ ಚಿಕಿತ್ಸೆಗೆ ಚಿಕಿತ್ಸಾ ವಿಧಾನಗಳ ಸಂಶೋಧನೆಗಳು ಹಾಗೂ ಔಷಧಿಗಳಿಗೆ ಜೀವಂತ ಜೀವಕೋಶಗಳು ಹೇಗೆ ವರ್ತಿಸುತ್ತವೆ ಎಂಬುದನ್ನು ತಿಳಿದುಕೊಳ್ಳುವ ಪ್ರಯೋಗಗಳು ನಡೆಯಲಿವೆ.

ಸಿಂಕ್ರೋಟ್ರಾನ್ ಒಂದೇ ಅಂದಾಜು ನೂರು ಎಕರೆಗಳ ಭೂಪ್ರದೇಶವನ್ನು ವ್ಯಾಪಿಸಿರಲಿದ್ದು, ಅದಕ್ಕೆ ಒಂದು ವೃತ್ತಾಕಾರದ ಸುರಂಗವನ್ನೂ ಜೋಡಿಸಲಾಗುವುದು. ಆದರೆ ಈ ಕೇಂದ್ರವು ನೆಲದಾಳದಲ್ಲಿಯೂ ಇರಬಹುದು ಅಥವಾ ನೆಲದ ಮೇಲೂ ಇರಬಹುದಾಗಿದ್ದು, ಜಿನಿವಾದಲ್ಲಿರುವ ಸಿಇಆರ್‌ಎನ್ ಕೇಂದ್ರವನ್ನು ಹೋಲಲಿದೆ. ಸಿಇಆರ್‌ಎನ್ ಅತ್ಯಧಿಕ ಶಕ್ತಿಯ ಭೌತಶಾಸ್ತ್ರ ವಿಷಯದ ಸಂಶೋಧನೆ ಕೈಗೊಳ್ಳುತ್ತಿದ್ದು, ಚಿತ್ರದುರ್ಗದ ಐಐಎಸ್‌ಸಿ ಕೇಂದ್ರ 2.5ರಿಂದ 6 ಗಿಗಾ ಇಲೆಕ್ಟ್ರಾನ್ ವೋಲ್ಟ್ ವ್ಯಾಪ್ತಿಯಲ್ಲಿ ಜೀವಶಾಸ್ತ್ರ ಹಾಗೂ ವಸ್ತು ವಿಜ್ಞಾನದ ಕುರಿತು ಸಂಶೋಧನೆ ನಡೆಸಲಿದೆ.

ಏನು ಈ ಸಿಂಕ್ರೋಟ್ರಾನ್?

ಸರಳವಾಗಿ ಹೇಳಬೇಕೆಂದರೆ, ಈ ಸಿಂಕ್ರೋಟ್ರಾನ್ ಎನ್ನುವುದು ಒಂದು ಮುಚ್ಚಿಕೊಂಡಿರುವ, ಅತಿದೊಡ್ಡ ವೃತ್ತಾಕಾರದ ಕಾಂತೀಯ ಸುರಂಗದಂತೆ ಕಂಡುಬರುತ್ತದೆ. ಇದನ್ನು ನೆಲದ ಆಳದಲ್ಲಿ ಅಥವಾ ಭೂಮಿಯ ಮೇಲೂ ಸಹ ನಿರ್ಮಾಣಗೊಳಿಸಬಹುದಾಗಿದೆ. ಇದರೊಳಗೆ ಪ್ರೋಟಾನ್ ಹಾಗೂ ಇಲೆಕ್ಟ್ರಾನ್‌ನಂತಹ ಕಣಗಳು ಬೆಳಕಿನ ವೇಗದಲ್ಲಿ ಚಲಿಸುವಂತೆ ಮಾಡಲು ಶಕ್ತಿ ನೀಡಲಾಗಿರುತ್ತದೆ. ಈ ಕಾಂತೀಯ ಕ್ಷೇತ್ರ ಇಂತಹಾ ಕಣಗಳನ್ನು ಹೇಗೆ ಚಲಿಸುತ್ತದೆಂದರೆ ಅವುಗಳು ವಿದ್ಯುತ್ ಕ್ಷೇತ್ರದಿಂದ ಶಕ್ತಿಯನ್ನು ಗಳಿಸುತ್ತವೆ. ಆ ಬಳಿಕ ಈ ಕಣಗಳನ್ನು ಚಲಿಸುತ್ತಿರುವ ಕಣದ ಕಿರಣದೊಡನೆ ಹುಷಾರಾಗಿ ಜೋಡಿಸಲಾಗುತ್ತದೆ.

ಐಐಎಸ್ಸಿ ಕೇಂದ್ರವು ವಿಜ್ಞಾನದಲ್ಲಿ ಹಲವು ಮೂಲಭೂತ ಪ್ರಯೋಗಗಳನ್ನು ಕೈಗೊಳ್ಳಲಿದ್ದು, ಅವುಗಳು ಕ್ಯಾನ್ಸರ್ ಚಿಕಿತ್ಸೆ, ಮೆಡಿಕಲ್ ಇಮೇಜಿಂಗ್ ಹಾಗೂ ಔಷಧಿ ಸಂಶೋಧನೆಯ ಮೇಲೆ ಪರಿಣಾಮ ಬೀರಲಿವೆ.

ಚಿತ್ರದುರ್ಗ ಬೆಂಗಳೂರಿನಿಂದ 200 ಕಿಲೋಮೀಟರ್ ದೂರದಲ್ಲಿದ್ದು, ವಿಜ್ಞಾನ ನಗರಿ ಎಂದು ಹೆಸರು ಸಂಪಾದಿಸುತ್ತಿದೆ. ಅದಕ್ಕೆ ಕಾರಣವೆಂಬಂತೆ ಚಿತ್ರದುರ್ಗ ಈಗ ನಾಲಕ್ಕು ಪ್ರಮುಖ ವಿಜ್ಞಾನ ಕೇಂದ್ರಗಳ ಆಶ್ರಯ ತಾಣವಾಗುತ್ತಿದೆ. ಚಿತ್ರದುರ್ಗ ಈಗ ಜಗತ್ತಿನ ಪ್ರಮುಖ ವಿಜ್ಞಾನ ಕೇಂದ್ರವಾಗುವ ಹಾದಿಯಲ್ಲಿ ಯಶಸ್ವಿಯಾಗಿ ಸಾಗುತ್ತಿದ್ದು, ಇನ್ನು ಮುಂದಿನ ದಿನಗಳಲ್ಲಿ ವೈಜ್ಞಾನಿಕ ಸಂಶೋಧನೆ ಹಾಗೂ ಅಭಿವೃದ್ಧಿಯಲ್ಲಿ ತನ್ನ ಹಾಗೂ ಭಾರತದ ಹೆಸರಿನ ಛಾಪು ಮೂಡಿಸಲಿದೆ.

– ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕರು

ಇದನ್ನೂ ಓದಿ|UAV |ಭಾರತೀಯ ಸೇನೆಯ ಚಾಲಕರಹಿತ ವಿಮಾನ ಚಿತ್ರದುರ್ಗದಲ್ಲಿ ಮೊದಲ ಯಶಸ್ವಿ ಹಾರಾಟ

Exit mobile version