Site icon Vistara News

ChatGpt Jobs: ಚಾಟ್‌ಜಿಪಿಟಿಯಿಂದ ಭಾರಿ ಉದ್ಯೋಗ ಸೃಷ್ಟಿ, ಇವರಿಗೆ ಸಿಗಲಿದೆ 2.75 ಕೋಟಿ ರೂ. ಸಂಬಳ

ChatGPT

ನವದೆಹಲಿ: ಚಾಟ್‌ಜಿಪಿಟಿ (ChatGpt Jobs) ಚಾಟ್‌ಬಾಟ್‌ ಬಗ್ಗೆಯೇ ಈಗ ಎಲ್ಲಡೆ ಮಾತು ಕೇಳಿಬರುತ್ತಿವೆ. ಅದರಲ್ಲೂ, ಕೃತಕ ಬುದ್ಧಿಮತ್ತೆಯಿಂದ (Artificial Intelligence) ಇದು ಕಾರ್ಯನಿರ್ವಹಿಸುತ್ತಿರುವ ಕಾರಣ ಚಾಟ್‌ಜಿಪಿಟಿ ತಂತ್ರಜ್ಞಾನವನ್ನು ಬಹುತೇಕರು ಬಳಸುತ್ತಿದ್ದಾರೆ. ಹಾಗೆಯೇ, ಇದು ಯಾವುದೇ ವಿಷಯದ ಬಗ್ಗೆ ಲೇಖನ ಬರೆಯುವುದರಿಂದ ಹಿಡಿದು, ಕೋಡಿಂಗ್‌ವರೆಗೆ ಎಲ್ಲ ಕೆಲಸ ಮಾಡುತ್ತಿರುವ ಕಾರಣ ಮುಂದೊಂದು ದಿನ ಚಾಟ್‌ಜಿಪಿಟಿಯು ಉದ್ಯೋಗ ಕಸಿಯಲಿದೆ ಎಂಬ ಚರ್ಚೆಗಳು ಕೇಳಿಬರುತ್ತಿವೆ. ಮಾನವ ಸಂಪನ್ಮೂಲ ಕುಸಿಯುತ್ತದೆ, ಉದ್ಯೋಗ ಕಸಿಯುತ್ತದೆ ಎಂದೇ ಹೇಳಲಾಗುತ್ತಿದೆ. ಆದರೆ, ಜಾಟ್‌ಜಿಪಿಟಿ ಹಾಗೂ ಕೃತಕ ಬುದ್ಧಿಮತ್ತೆಯು ಭಾರಿ ಪ್ರಮಾಣದಲ್ಲಿ ಉದ್ಯೋಗ ಸೃಷ್ಟಿಸಲಿವೆ. ಅದರಲ್ಲೂ, ವಾರ್ಷಿಕ 2 ಕೋಟಿ ರೂಪಾಯಿಗೂ ಅಧಿಕ ಸಂಬಳ ಇರುವ ಉದ್ಯೋಗಗಳನ್ನು ಸೃಷ್ಟಿಸಲಿವೆ ಎಂದು ತಿಳಿದುಬಂದಿದೆ.

ಹೌದು, ಚಾಟ್‌ಜಿಪಿಟಿ ಹಾಗೂ ಕೃತಕ ಬುದ್ಧಿಮತ್ತೆಯಿಂದ ಹೆಚ್ಚು ಸಂಬಳ ಇರುವ ಉದ್ಯೋಗ ಸೃಷ್ಟಿಯಾಗಲಿದೆ ಎಂದು ಜಾಗತಿಕ ಮಟ್ಟದ ಬ್ಲೂಮ್‌ಬರ್ಗ್‌ ಸಂಸ್ಥೆಯ ವರದಿ ತಿಳಿಸಿದೆ. ಅದರಲ್ಲೂ, ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ಹೆಚ್ಚು ಬಳಕೆಯಿಂದ ಹೆಚ್ಚು ಉದ್ಯೋಗ ಸೃಷ್ಟಿಯಾಗಲಿವೆ. ಅದರಲ್ಲೂ, ಪ್ರಾಂಪ್ಟ್‌ ಎಂಜಿನಿಯರ್‌ಗಳಿಗಂತೂ ವಾರ್ಷಿಕ 2.75 ಕೋಟಿ ರೂಪಾಯಿವರೆಗೆ ಸಂಬಳ ಸಿಗಲಿದೆ. ಚಾಟ್‌ಜಿಪಿಟಿ ಹಾಗೂ ಕೃತಕ ಬುದ್ಧಿಮತ್ತೆ ತಂತ್ರಜ್ಞಾನದಿಂದ ಪ್ರಾಂಪ್ಟ್‌ ಎಂಜಿನಿಯರ್‌ಗಳಿಗೆ ಭಾರಿ ಬೇಡಿಕೆ ಉಂಟಾಗಲಿದೆ. ಅವರಿಗೆ ಭಾರಿ ಸಂಬಳ ಸಿಗಲಿದೆ ಎಂದು ವರದಿಯಲ್ಲಿ ತಿಳಿಸಿದೆ.

ಪ್ರಾಂಪ್ಟ್‌ ಎಂಜಿನಿಯರ್‌ಗಳ ಕೆಲಸವೇನು?

ಪ್ರಾಂಪ್ಟ್‌ ಎಂಜಿನಿಯರ್‌ ಆಗಿರುವವರು ಕೃತಕ ಬುದ್ಧಿಮತ್ತೆ ಟೂಲ್ಸ್‌ ಹಾಗೂ ಚಾಟ್‌ಬಾಟ್‌ಗಳಿಗೆ ಪ್ರಶ್ನೆಗಳನ್ನು ನೀಡುತ್ತಾರೆ. ಪ್ರಶ್ನೆಗಳನ್ನು ಇವರೇ ಸಿದ್ಧಪಡಿಸುತ್ತಾರೆ. ಕೃತಕ ಬುದ್ಧಿಮತ್ತೆ ಉಪಯೋಗಿಸಿಕೊಂಡು ಚಾಟ್‌ಬಾಟ್‌ಗಳು ಸರಿಯಾದ ಉತ್ತರ ನೀಡಲು, ಶುದ್ಧವಾದ ಭಾಷೆಯಲ್ಲಿ, ಉತ್ತಮ ಪದಬಳಕೆ, ಸರಿಯಾದ ವಾಕ್ಯರಚನೆ ಸೇರಿ ಹಲವು ರೀತಿಯಲ್ಲಿ ಸಮರ್ಪಕವಾಗಿ ಕಾರ್ಯನಿರ್ವಹಿಸಲು ಪ್ರಾಂಪ್ಟ್‌ ಎಂಜಿನಿಯರ್‌ಗಳ ಪಾತ್ರ ಹಿರಿದಾಗಿದೆ. ಮತ್ತೊಂದು ಮಹತ್ವದ ವಿಷಯ ಏನೆಂದರೆ, ಭಾಷೆ ಹಾಗೂ ತಂತ್ರಜ್ಞಾನದ ಬಗ್ಗೆ ಮಾಹಿತಿ ಇದ್ದರೆ, ಎಂಜಿನಿಯರಿಂಗ್‌, ತಂತ್ರಜ್ಞಾನದ ವಿಷಯದಲ್ಲಿ ಪದವಿ ಪಡೆದವರೇ ಬೇಕಿಲ್ಲ ಎಂದು ವರದಿ ತಿಳಿಸಿದೆ. ಹಾಗಾಗಿ, ಭಾಷೆ, ವಿಶ್ಲೇಷಣೆ, ತಂತ್ರಜ್ಞಾನದ ಬಳಕೆ ಗೊತ್ತಿದ್ದವರೂ ಪ್ರಾಂಪ್ಟ್‌ ಎಂಜಿನಿಯರ್‌ ಆಗಬಹುದಾಗಿದೆ.

ಚಾಟ್‌ಜಿಪಿಟಿ ಬಳಕೆಯಿಂದ ಇತ್ತೀಚೆಗೆ ಹಲವು ರೀತಿಯಲ್ಲಿ ಜನರಿಗೆ ಉಪಯೋಗವಾಗುತ್ತಿದೆ. ಕೆಲ ದಿನಗಳ ಹಿಂದಷ್ಟೇ ಬೆಂಗಳೂರು ಮೂಲದ ಕ್ಯಾಪಿಟಲ್‌ ಮೈಂಡ್‌ (Capital Mind) ಎಂಬ ಕಂಪನಿಯು ಉದ್ಯೋಗಿಗಳಿಗೆ ಉಚಿತವಾಗಿ ಚಾಟ್‌ಜಿಪಿಟಿ ಸಬ್‌ಸ್ಕ್ರಿಪ್ಶನ್‌ ನೀಡಿದೆ. ಇತ್ತೀಚೆಗೆ ಚಾಟ್‌ಜಿಪಿಟಿ ಬಳಕೆಯಿಂದ ಕಂಪನಿಯ ನೌಕರರ ಕಾರ್ಯದಕ್ಷತೆ ಹಾಗೂ ಉತ್ಪಾದಕೆಯು ಜಾಸ್ತಿಯಾದ ಕಾರಣ ಚಾಟ್‌ಜಿಪಿಟಿಯ ನೋಂದಣಿಯ ಶುಲ್ಕವನ್ನು ಕಂಪನಿಯೇ ಭರಿಸಲಿದೆ ಎಂದು ಘೋಷಿಸಲಾಗಿದೆ. ಚಾಟ್‌ಜಿಪಿಟಿಯ ನೋಂದಣಿ ಶುಲ್ಕವು ಮಾಸಿಕ 1,640‌ ರೂ. (20 ಡಾಲರ್) ಆಗಲಿದೆ. ಇಷ್ಟನ್ನೂ ಕಂಪನಿಯೇ ನೀಡುತ್ತಿದೆ.

ಇದನ್ನೂ ಓದಿ: Viral News : ಚಾಟ್‌ಜಿಪಿಟಿ ಬಗ್ಗೆ ಪಾಠ ಮಾಡಿ ಮೂರೇ ತಿಂಗಳಲ್ಲಿ 28 ಲಕ್ಷ ರೂ. ದುಡಿದ!

Exit mobile version