Site icon Vistara News

OpenAI: ಓಪನ್‌ಎಐ ಸಂಸ್ಥೆಯಲ್ಲಿ ಭಾರಿ ಬದಲಾವಣೆ, ಸಂಸ್ಥಾಪಕರಿಬ್ಬರ ನಿರ್ಗಮನ, ಮಿರಾ ನೂತನ ಸಿಇಒ

openai chatgpt sacked

ನ್ಯೂಯಾರ್ಕ್‌: ಇತ್ತೀಚೆಗೆ ಭಾರಿ ಸುದ್ದಿಯಾಗಿದ್ದ ಚಾಟ್‌ಬೋಟ್‌ ChatGPTಯ ಮಾಲೀಕ ಸಂಸ್ಥೆ OpenAIನಲ್ಲಿ ಮೂರು ಪ್ರಮುಖ ಬದಲಾವಣೆಗಳು ಏಕಕಾಲದಲ್ಲಿ ಸಂಭವಿಸಿವೆ. ಸಂಸ್ಥೆಯ ಸಿಇಒ ಸ್ಯಾಮ್ ಆಲ್ಟ್‌ಮ್ಯಾನ್ (Sam Altman) ಅವರನ್ನು ಸಂಸ್ಥೆಯಿಂದ ಹೊರಹಾಕಲಾಗಿದ್ದು, ಸಹ ಸಂಸ್ಥಾಪಕ ಗ್ರೆಗ್ ಬ್ರಾಕ್‌ಮನ್ ಕೂಡ ಹೊರಬಂದಿದ್ದಾರೆ. ಓಪನ್‌ಎಐ ಮಧ್ಯಂತರ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಮೀರಾ ಮುರತಿ (Mira Murati) ಅವರು ಅಧಿಕಾರ ವಹಿಸಿಕೊಂಡಿದ್ದಾರೆ.

OpenAI ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸ್ಯಾಮ್ ಆಲ್ಟ್‌ಮ್ಯಾನ್ ಅವರನ್ನು ಆಡಳಿತ ಮಂಡಳಿ ಸಂಸ್ಥೆಯಿಂದ ಹೊರಹಾಕಿದೆ. 38 ವರ್ಷದ ಆಲ್ಟ್‌ಮ್ಯಾನ್ ಒಂದು ವರ್ಷದ ಹಿಂದೆ ಕೃತಕ ಬುದ್ಧಿಮತ್ತೆಯ ಚಾಟ್‌ಬಾಟ್ ʼಚಾಟ್‌ಜಿಪಿಟಿʼಯನ್ನು ಹೊರತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅದು ಅಭೂತಪೂರ್ವ ಜನಪ್ರಿಯತೆ ಗಳಿಸಿ ಮನೆಮಾತಾಗಿತ್ತು.

“ಆಲ್ಟ್‌ಮ್ಯಾನ್‌ ಅವರ ಪದಚ್ಯುತಿಯನ್ನು ಸುದೀರ್ಘ ವಿಚಾರ ವಿಮರ್ಶೆಯ ಬಳಿಕ ಮಾಡಲಾಗಿದೆ. ಅವರು ಮಂಡಳಿಯೊಂದಿಗಿನ ಅವರ ಸಂವಹನಗಳಲ್ಲಿ ಸ್ಥಿರವಾಗಿಲ್ಲ ಹಾಗೂ ಪ್ರಾಮಾಣಿಕವಾಗಿಲ್ಲ. ಹೀಗಾಗಿ ಮಂಡಳಿಯ ಜವಾಬ್ದಾರಿ ನಿರ್ವಹಣೆಯಲ್ಲಿ ತೊಡಕು ಉಂಟಾಗುತ್ತಿದೆ. OpenAI ಅನ್ನು ಇನ್ನು ಮುಂದೆ ಮುನ್ನಡೆಸುವ ಅವರ ಸಾಮರ್ಥ್ಯದಲ್ಲಿ ಮಂಡಳಿಯು ವಿಶ್ವಾಸ ಹೊಂದಿಲ್ಲ” ಎಂದು ಆಡಳಿತ ಮಂಡಳಿ ಪ್ರಕಟಣೆ ತಿಳಿಸಿದೆ.

“OpenAI ಸ್ಥಾಪನೆ ಮತ್ತು ಬೆಳವಣಿಗೆಗೆ ಸ್ಯಾಮ್ ಅವರ ಕೊಡುಗೆಗಳಿಗಾಗಿ ಕೃತಜ್ಞರಾಗಿದ್ದೇವೆ. ಆದರೆ ನಾವು ಮುಂದುವರಿಯಲು ಹೊಸ ನಾಯಕತ್ವ ಅಗತ್ಯವಾಗಿದೆ ಎಂದು ನಾವು ನಂಬುತ್ತೇವೆ” ಎಂದೂ ಮಂಡಳಿ ಹೇಳಿದೆ.

ಸಹ ಸಂಸ್ಥಾಪಕ ರಾಜೀನಾಮೆ

ಇನ್ನೊಂದು ಬೆಳವಣಿಗೆಯಲ್ಲಿ, ಓಪನ್‌ಎಐಯ ಸಹ-ಸಂಸ್ಥಾಪಕ ಮತ್ತು ಅಧ್ಯಕ್ಷ ಗ್ರೆಗ್ ಬ್ರಾಕ್‌ಮನ್ ಅವರು ಕೂಡ ಸಂಸ್ಥೆಯಿಂದ ತಾವು ನಿರ್ಗಮಿಸುವುದಾಗಿ ಪ್ರಕಟಿಸಿದರು. ಆಲ್ಟ್‌ಮ್ಯಾನ್‌ ಅವರ ಪದಚ್ಯುತಿಯ ನಂತರದ ಕೆಲವೇ ಗಂಟೆಗಳಲ್ಲಿ ಅವರ ಈ ನಿರ್ಧಾರ ಪ್ರಕಟವಾಯಿತು.

“8 ವರ್ಷಗಳ ಹಿಂದೆ ನನ್ನ ಅಪಾರ್ಟ್‌ಮೆಂಟ್‌ನಲ್ಲಿ ಸಂಸ್ಥೆ ಪ್ರಾರಂಭವಾದಾಗಿನಿಂದ ನಾವೆಲ್ಲರೂ ಒಟ್ಟಾಗಿ ನಿರ್ಮಿಸಿದ ಈ ಉತ್ಪನ್ನದ ಬಗ್ಗೆ ನನಗೆ ತುಂಬಾ ಹೆಮ್ಮೆ ಇದೆ. ನಾವು ಒಟ್ಟಿಗೆ ಉತ್ತಮ ಮತ್ತು ಕಠಿಣ ಸಮಯವನ್ನು ಎದುರಿಸಿದೆವು. ಇದನ್ನು ಸಾಧಿಸಿದ್ದೇವೆ. ಎಲ್ಲಾ ಕಾರಣಗಳ ಹೊರತಾಗಿಯೂ ಇನ್ನಷ್ಟು ಮುನ್ನಡೆ ಸಾಧ್ಯವಾಗಬೇಕಿತ್ತು. ಆದರೆ ಇಂದಿನ ಸುದ್ದಿಯ ಆಧಾರದ ಮೇಲೆ ನಾನು ಸಂಸ್ಥೆಯನ್ನು ತ್ಯಜಿಸಿದೆ” ಎಂದಿದ್ದಾರೆ.

ಸಿಇಒ ಆಗಿ ಮೀರಾ ಮುರತಿ

OpenAI ಮಧ್ಯಂತರ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಮುಖ್ಯ ತಂತ್ರಜ್ಞಾನ ಅಧಿಕಾರಿ ಮೀರಾ ಮುರತಿ ಅವರನ್ನು ನೇಮಿಸಲಾಗಿದೆ. ಆಲ್ಟ್‌ಮ್ಯಾನ್ ಅವರ ಹಠಾತ್ ನಿರ್ಗಮನದಿಂದ ಗೊಂದಲಗೊಂಡಿರುವ ಸಂಸ್ಥೆಗೆ ಮುರತಿ ಹೊಸ ನಾಯಕತ್ವ ನೀಡುವ ಮಾತನಾಡಿದ್ದಾರೆ. “ನಾವು ಕೇಂದ್ರೀಕೃತವಾಗಿರುವುದು, ನಮ್ಮ ಪ್ರಮುಖ ಮೌಲ್ಯಗಳಿಗೆ ಬದ್ಧರಾಗಿರುವುದು ಎಂದಿಗಿಂತಲೂ ಹೆಚ್ಚು ಮುಖ್ಯವಾಗಿದೆ” ಎಂದು ಅವರು ಬರೆದಿದ್ದಾರೆ.

ಓಪನ್‌ಎಐಯಲ್ಲಿ ಭಾರಿ ಬಂಡವಾಳ ಹೂಡಿರುವ ಮೈಕ್ರೋಸಾಫ್ಟ್ ಕಾರ್ಪ್, ಆಲ್ಟ್‌ಮ್ಯಾನ್‌ನ ಪದಚ್ಯುತಿಯಲ್ಲಿ ಭಾಗಿಯಾಗಿರಬಹುದು ಎಂಬ ಊಹಾಪೋಹಗಳಿವೆ. ಮೈಕ್ರೋಸಾಫ್ಟ್ ಸಂಸ್ಥೆಯು ಓಪನ್ಎಐನಲ್ಲಿ ಬಿಲಿಯನ್‌ಗಟ್ಟಲೆ ಡಾಲರ್‌ಗಳನ್ನು ಹೂಡಿಕೆ ಮಾಡಿದೆ. ಸರ್ಚ್ ಎಂಜಿನ್ ಬಿಂಗ್ ಸೇರಿದಂತೆ ಕಂಪನಿಯ ತಂತ್ರಜ್ಞಾನವನ್ನು ಅದರೊಂದಿಗೆ ಜೋಡಿಸುತ್ತಿದೆ.

ಜೈವಿಕ ಶಸ್ತ್ರಾಸ್ತ್ರಗಳಲ್ಲಿ AIನ ಸಂಭಾವ್ಯ ಬಳಕೆ, ತಪ್ಪು ಮಾಹಿತಿ ಮತ್ತು ಇತರ ಬೆದರಿಕೆಗಳಂತಹ ಅಪಾಯಗಳನ್ನು ಇದರಲ್ಲಿ ನಿಯಂತ್ರಿಸಲು ಸರ್ಕಾರಿ ಒತ್ತಡ ಹೆಚ್ಚಾಗುತ್ತಿದ್ದು, ಈ ಕುರಿತು ವಿವರಣೆ ನೀಡಲು ಅಮೆರಿಕದ ಕಾಂಗ್ರೆಸ್‌ ಆಲ್ಟ್‌ಮ್ಯಾನ್ ಅವರನ್ನು ಕರೆಸಿತ್ತು. ಅವರು AI ಕುರಿತು ಅದರ ಮುಂದೆ ವಿವರಣೆ ನೀಡಿದ್ದರು.

ಇದನ್ನೂ ಓದಿ: OpenAI ChatGPT: ಚಾಟ್‌ಜಿಪಿಟಿ VS ಇಲಾನ್ ಮಸ್ಕ್‌ನ ಗ್ರೋಕ್‌: ಏನು ವ್ಯತ್ಯಾಸ?

Exit mobile version