ನವದೆಹಲಿ: ಸೈಬರ್ ಖದೀಮರು ತಮ್ಮ ಚಾಣಾಕ್ಷತನವನ್ನು ಬಳಸಿಕೊಂಡು ವ್ಯಕ್ತಿಯೊಬ್ಬನಿಂದ ಒಂದೇ ಸಲಕ್ಕೆ 50 ಲಕ್ಷ ರೂಪಾಯಿ ಎಗರಿಸಿದ್ದಾರೆ. ಸೈಬರ್ ಅಪರಾಧಗಳಿಗೆ ಕುಖ್ಯಾತವಾಗಿರುವ ಜಾರ್ಖಂಡ್‌ನ ಜಾಮತಾಡಾ ಪ್ರದೇಶದಿಂದಲೇ ಈ ವಂಚನೆ ನಡೆದಿದೆ ಎಂದು ಹೇಳಲಾಗುತ್ತಿದೆ. ವಿಶೇಷ ಎಂದರೆ, ಮೋಸ ಹೋದ ವ್ಯಕ್ತಿಯಿಂದ ಯಾವುದೇ ಒಟಿಪಿ ಪಡೆಯದೇ, ಹಣಕ್ಕೆ ಕನ್ನ ಹಾಕಿರುವುದು ವಿಶೇಷವಾಗಿದೆ. ಮೋಸ ಹೋದ ವ್ಯಕ್ತಿಯ ಸ್ಮಾರ್ಟ್‌ಫೋನ್‌ಗೆ ಮಿಸ್ ಕಾಲ್ ನೀಡಿಯೇ, ಹಣವನ್ನು ಎಗರಿಸಲಾಗಿದೆ. ಇದಕ್ಕಾಗಿ ಖದೀಮರು, ಸಿಮ್ ಸ್ವ್ಯಾಪ್ ಮಾಡಿರುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ(Cyber Attack).
ಮೇಲ್ನೋಟಕ್ಕೆ ಈ ಸೈಬರ್ ಕ್ರೈಮ್ ಅನ್ನು ಜಾರ್ಖಂಡ್‌ನ ಜಾಮತಾಡಾ ಪ್ರದೇಶದಿಂದಲೇ ಮಾಡಲಾಗಿದೆ ಎಂದು ಭಾವಿಸಲಾಗಿದೆ. ಈ ಘಟನೆಯು ಅಕ್ಟೋಬರ್ 10ರಂದು ನಡೆದಿದ್ದು, ಈಗ ತಡವಾಗಿ ಬೆಳಕಿಗೆ ಬಂದಿದೆ. ಹಣ ಕಳೆದುಕೊಂಡು ವ್ಯಕ್ತಿ, ದಕ್ಷಿಣ ದಿಲ್ಲಿಯ ಸೆಕ್ಯುರಿಟಿ ಸರ್ವೀಸ್ ಕಂಪನಿಯ ನಿರ್ದೇಶಕರಾಗಿದ್ದಾರೆ. ಅಕ್ಟೋಬರ್ 10ರಂದು ಇವರಿಗೆ ಸಂಜೆ 7 ಗಂಟೆಯಿಂದ 8.44ರ ಮಧ್ಯೆ ಮಿಸ್ಡ್ ಕಾಲ್‌ಗಳು ಬಂದಿವೆ. ಪದೇ ಪದೇ ಮಿಸ್ಡ್ ಕಾಲ್ ಬಂದಿದ್ದಕ್ಕೆ ಕೆಲವು ಕಾಲ್‌ಗಳನ್ನು ಸ್ವೀಕರಿಸಿದ್ದಾರೆ, ಮತ್ತೆ ಕೆಲವು ಕಾಲ್ ನಿರ್ಲಕ್ಷ್ಯ ಮಾಡಿದ್ದಾರೆ. ಬಳಿಕ ಬ್ಯಾಂಕಿನಿಂದ ಹಣ ಡ್ರಾ ಮಾಡಿದ ಮೆಸೆಜ್‌ಗಳು ಒಂದೇ ಸವನೆ ಬರಲಾರಂಭಿಸಿವೆ. ಆಗಲೇ ಅವರಿಗೆ ಆರ್‌ಟಿಜಿಎಸ್ ಮೂಲಕವನ್ನು ಹಣವನ್ನು ತೆಗೆಯುತ್ತಿರುವುದು ಗೊತ್ತಾಗಿದೆ. ಈ ಖಾತೆಯು ಕಂಪನಿಯ ಕರೆಂಟ್ ಅಕೌಂಟ್ ಆಗಿದೆ.
ಸಿಮ್ ಸ್ವ್ಯಾಪ್ ಮಾಡಿದ್ರಾ?
50 ಲಕ್ಷ ರೂಪಾಯಿ ಎಗರಿಸಲು ಖದೀಮರು ಸಿಮ್ ಸ್ವ್ಯಾಪ್ ಮಾಡಿರುವ ಸಾಧ್ಯತೆಗಳಿವೆ ಎಂದು ಪೊಲೀಸರು ಅಭಿಪ್ರಾಯಪಟ್ಟಿದ್ದಾರೆ. ಅವರು ಆರ್‌ಟಿಜಿಎಸ್ ಮೂಲಕ ಹಣ ವರ್ಗಾವಣೆಗೆ ಫೋನ್ ಮೂಲಕ ಒಟಿಪಿಯನ್ನು ಸಕ್ರಿಯಗೊಳಿಸಿರಬಹುದು. ಬಹುಶಃ ಸಮಾನಾಂತರ ಕರೆ ಮೂಲಕ ಐವಿಆರ್ ಮೂಲಕ ಒಟಿಪಿ ನಮೂದಿಸುವುದನ್ನು ಅವರು ಕೇಳಿಸಿಕೊಂಡಿರಬಹುದು ಎಂದು ಊಹಿಸಲಾಗಿದೆ.
ಸಿಮ್ ಸ್ವಾಪ್ / ಕ್ಲೋನಿಂಗ್ ಎಂದರೇನು?
ಸಿಮ್ ಸ್ವ್ಯಾಪ್ ಅಥವಾ ಸಿಮ್ ಕ್ಲೋನಿಂಗ್ ಎಂದರೆ, ಈಗಾಗಲೇ ಚಾಲ್ತಿಯಲ್ಲಿರುವ ಸಿಮ್ ಬದಲಿಗೆ ಸಿಮ್ ಪಡೆದುಕೊಂಡು ಅವ್ಯವಹಾರ ಮಾಡುವುದಾಗಿದೆ. ಅಂದರೆ, ಸಿಮ್ ಎಂದರೆ, ಸಬ್‌ಸ್ಕ್ರೈಬರ್ ಐಡೆಂಟಿಟಿ ಮಾಡ್ಯೂಲ್. ಕಾರ್ಡ್ ಪ್ರವೇಶ ಪಡೆಯಲು ಈ ನಂಬರ್ ಬೇಕೇಬೇಕು. ಗ್ರಾಹಕರು ತಮ್ಮ ಖಾತೆಗೆ ಈ ಮೊಬೈಲ್ ನಂಬರ್ ಸಂಯೋಜಿಸಿರುತ್ತಾರೆ. ಖದೀಮರು ಗ್ರಾಹಕರ ಬ್ಯಾಂಕ್ ಖಾತೆಗೆ ಸಂಪರ್ಕಗೊಂಡಿರುವ ನೋಂದಾಯಿತ ಮೊಬೈಲ್ ಸಂಖ್ಯೆಗೆ ನಕಲಿ ಸಿಮ್ ಕಾರ್ಡ್ (ಎಲೆಕ್ಟ್ರಾನಿಕ್-ಸಿಮ್ ಸೇರಿದಂತೆ) ಪಡೆದುಕೊಂಡಿರುತ್ತಾರೆ. ಆಗ, ಅನಧಿಕೃತ ವಹಿವಾಟು ನಡೆಸಲು ಈ ನಕಲಿ ಸಿಮ್‌ಗೆ ಬರುವ ಒಟಿಪಿಯನ್ನು ಬಳಸಿಕೊಳ್ಳುತ್ತಾರೆ.
ಇದನ್ನೂ ಓದಿ | Online Fraud | ಆನ್ ಲೈನ್‌ನಲ್ಲಿ ಉದ್ಯೋಗ ಕೊಡಿಸುವುದಾಗಿ ವಂಚನೆ ಮಾಡುತ್ತಿದ್ದ ಗ್ಯಾಂಗ್ ಅರೆಸ್ಟ್!