Site icon Vistara News

Deepfake: ಡೀಪ್‌ಫೇಕ್‌ ವಿಡಿಯೊ ಮಾಡುವವರೇ ಎಚ್ಚರ; ಕಠಿಣ ಕ್ರಮಕ್ಕೆ ಕೇಂದ್ರ ನಿರ್ಧಾರ

Rashmika Mandanna Deepfake Photo

Man Who Made Actor Rashmika Mandanna's Deepfake Arrested By Delhi Police

ನವದೆಹಲಿ: ದೇಶದಲ್ಲಿ ನಟಿಯರ ಡೀಪ್‌ಫೇಕ್‌ ವಿಡಿಯೊಗಳು ವೈರಲ್‌ ಆಗಿರುವುದು ತಂತ್ರಜ್ಞಾನದ ದುರ್ಬಳಕೆ ಕುರಿತು ಆತಂಕ ವ್ಯಕ್ತವಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರೇ ಕ್ರಮದ ಅಗತ್ಯವಿದೆ ಎಂದಿದ್ದಾರೆ. ಇದರ ಬೆನ್ನಲ್ಲೇ ಡೀಪ್‌ಫೇಕ್‌ ತಂತ್ರಜ್ಞಾನದ ದುರ್ಬಳಕೆ ಕುರಿತು ಚರ್ಚಿಸಲು ಸಾಮಾಜಿಕ ಜಾಲತಾಣಗಳ ಪ್ರಮುಖರು, ಕೃತಕ ಬುದ್ಧಿಮತ್ತೆ ಆಧಾರಿತ (AI) ಕಂಪನಿಗಳು, ನಾಸ್ಕಾಮ್‌ ಸೇರಿ ಹಲವು ಐಟಿ ದಿಗ್ಗಜರ ಜತೆ ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್‌ ಅವರು ಸಭೆ ನಡೆಸಿದ್ದಾರೆ. ಅಲ್ಲದೆ, ಸಭೆಯ ಬಳಿಕ ಮಾಹಿತಿ ನೀಡಿದ ಅಶ್ವಿನಿ ವೈಷ್ಣವ್‌, “ಡೀಪ್‌ಫೇಕ್‌ ವಿಡಿಯೊ ಮಾಡುವವರಿಗೆ ಕ್ರಮ ತೆಗೆದುಕೊಳ್ಳುವುದು ಸೇರಿ ಹಲವು ನಿರ್ಧಾರ ತೆಗೆದುಕೊಳ್ಳಲಾಗಿದೆ” ಎಂದು ಹೇಳಿದರು.

“ಡೀಪ್‌ಫೇಕ್‌ ಈಗ ಸಮಾಜಕ್ಕೆ ಮಾರಕವಾಗುತ್ತಿದೆ. ಇದು ಸಮಾಜದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಹಾಗಾಗಿ, ಕ್ಷಿಪ್ರವಾಗಿ ಕಠಿಣ ಕ್ರಮ ತೆಗೆದುಕೊಳ್ಳುವ ಅವಶ್ಯಕತೆ ಇದೆ. ಇದರ ದಿಸೆಯಲ್ಲಿ ಮಹತ್ವದ ಸಭೆ ನಡೆಸಲಾಗಿದೆ. ಮುಂಬರುವ ದಿನಗಳಲ್ಲಿ ಡೀಪ್‌ಫೇಕ್‌ ನಿಯಂತ್ರಣದ, ಕ್ರಮ ತೆಗೆದುಕೊಳ್ಳುವುದರ ಕುರಿತು ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ. ಮುಂಬರುವ ಡಿಸೆಂಬರ್‌ನಲ್ಲಿ ಇದರ ಕುರಿತು ಮತ್ತಷ್ಟು ಚರ್ಚಿಸಲಾಗುತ್ತದೆ. ಕೃತಕ ಬುದ್ಧಿಮತ್ತೆ ತಂತ್ರಜ್ಞಾನವನ್ನೂ ಇದಕ್ಕಾಗಿ ಬಳಸಲಾಗುತ್ತದೆ” ಎಂದು ತಿಳಿಸಿದರು.

ಅಶ್ವಿನಿ ವೈಷ್ಣವ್‌ ಸಭೆಯ ನಾಲ್ಕು ತೀರ್ಮಾನಗಳು

  1. ಡೀಪ್‌ಫೇಕ್‌ ವಿಡಿಯೊಗಳನ್ನು ಪತ್ತೆಹಚ್ಚುವುದು, ಪೋಸ್ಟ್‌ ಮಾಡುವವರ ಮೇಲೆ ನಿಗಾ ಇರಿಸುವುದು
  2. ಡೀಪ್‌ಫೇಕ್‌ ವಿಡಿಯೊಗಳನ್ನು ಪೋಸ್ಟ್‌ ಮಾಡುವ, ಅವು ವೈರಲ್‌ ಆಗುವ ಮೊದಲೇ ತಡೆಯುವುದು
  3. ಡೀಫ್‌ಫೇಕ್‌ ವಿಡಿಯೊಗಳು ಹರಿದಾಡುತ್ತಲೇ ರಿಪೋರ್ಟ್‌ ಮಾಡುವ ಮೆಕ್ಯಾನಿಸಂ ಜಾರಿಗೆ ತರುವುದು
  4. ಇಂತಹ ವಿಡಿಯೊಗಳ ಕುರಿತು ಜನರಿಗೆ ಜಾಗೃತಿ ಮೂಡಿಸುವುದು, ಸಾಮಾಜಿಕ ಜಾಲತಾಣಗಳನ್ನೇ ಇದಕ್ಕೆ ಬಳಸುವುದು

ರಶ್ಮಿಕಾ ಮಂದಣ್ಣ ಅವರ ನಕಲಿ ವಿಡಿಯೊ ವೈರಲ್‌ ಆಗಿತ್ತು

ಮೊದಲಿಗೆ ನಟಿ ರಶ್ಮಿಕಾ ಮಂದಣ್ಣ ಅವರ ಡೀಪ್‌ಫೇಕ್‌ ವಿಡಿಯೊ ವೈರಲ್‌ ಆಗಿತ್ತು. ಇದು ದೇಶಾದ್ಯಂತ ಸಂಚಲನ ಮೂಡಿಸಿತ್ತು. ಇದಾದ ಬಳಿಕ ಬಾಲಿವುಡ್‌ ನಟಿಯರಾದ ಕತ್ರಿನಾ ಕೈಫ್‌, ಕಾಜೋಲ್‌ ಅವರ ವಿಡಿಯೊಗಳು ಕೂಡ ವೈರಲ್‌ ಆಗಿದ್ದವು. ಕ್ರಿಕೆಟ್‌ ದಿಗ್ಗಜ ಸಚಿನ್‌ ತೆಂಡೂಲ್ಕರ್‌ ಪುತ್ರಿ ಸಾರಾ ತೆಂಡೂಲ್ಕರ್‌ ಅವರ ಡೀಪ್‌ಫೇಕ್‌ ಫೋಟೊಗಳು ಕೂಡ ವೈರಲ್‌ ಆಗಿವೆ. ಇದರ ಕುರಿತು ಬಾಲಿವುಡ್‌ ನಟ-ನಟಿಯರು, ಗಣ್ಯರು ಆತಂಕ ವ್ಯಕ್ತಪಡಿಸಿದ್ದಾರೆ. ಜನರಿಂದಲೂ ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಲಾಗುತ್ತಿದೆ.

ಇದನ್ನೂ ಓದಿ: G20 Virtual Summit: ಜಿ20 ಶೃಂಗದಲ್ಲಿ ಡೀಪ್‌ಫೇಕ್ ಬಗ್ಗೆ ಆತಂಕ ವ್ಯಕ್ತಪಡಿಸಿದ ಪ್ರಧಾನಿ ಮೋದಿ

ನರೇಂದ್ರ ಮೋದಿ ಅವರು ಈಗಾಗಲೇ ಡೀಪ್‌ಫೇಕ್‌ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. “ಡೀಪ್‌ಫೇಕ್‌ ಸಮಾಜಕ್ಕೆ ಮಾರಕವಾಗುತ್ತಿದೆ. ಇದು ಸಮಾಜದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಇದರ ವಿರುದ್ಧ ಎಲ್ಲರೂ ಸಂಘಟಿತ ಹೋರಾಟ ನಡೆಸಬೇಕು. ಸಾಮಾಜಿಕ ಮಾಧ್ಯಮಗಳಲ್ಲಿ ಇದರ ಕುರಿತು ಜಾಗೃತಿ ಮೂಡಿಸಬೇಕು. ಮಾಧ್ಯಮಗಳು ಕೂಡ ಇದರ ವಿರುದ್ಧ ಹೋರಾಡಬೇಕು” ಎಂದು ಕರೆ ನೀಡಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version