ನವ ದೆಹಲಿ: ಚಾಲಕ ರಹಿತ ವಿಮಾನದ ಮೊದಲ ಹಾರಾಟವನ್ನು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO) ಚಿತ್ರದುರ್ಗದಲ್ಲಿ ಯಶಸ್ವಿಯಾಗಿ ನಡೆಸಿದೆ.
ಮಾನವರಹಿತ ವೈಮಾನಿಕ ವಾಹನವನ್ನು (UAV) `ಅಟಾನಮಸ್ ಫ್ಲೈಯಿಂಗ್ ವಿಂಗ್ ಟೆಕ್ನಾಲಜಿ ಡೆಮಾನ್‌ಸ್ಟ್ರೇಟರ್’ ಎಂದು ಕರೆಯಲಾಗುತ್ತದೆ. ಕರ್ನಾಟಕದ ಚಿತ್ರದುರ್ಗದ ವೈಮಾನಿಕ ಟೆಸ್ಟ್ ರೇಂಜ್‌ನಲ್ಲಿ ಇದರ ಹಾರಾಟ ನಡೆಸಲಾಯಿತು.
ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯು ಸ್ವಾಯತ್ತ ಫ್ಲೈಯಿಂಗ್ ವಿಂಗ್ ಟೆಕ್ನಾಲಜಿ ಡೆಮಾನ್‌ಸ್ಟ್ರೇಟರ್‌ನ ಪ್ರಾಯೋಗಿಕ ಹಾರಾಟವನ್ನು ಯಶಸ್ವಿಯಾಗಿ ನಡೆಸಿದೆ ಎಂದು ಶುಕ್ರವಾರ ಪ್ರಕಟಿಸಲಾಗಿದೆ. ಈ ವಿಮಾನ ಸಂಪೂರ್ಣ ಸ್ವಾಯತ್ತ ಮೋಡ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. ಟೇಕ್-ಆಫ್, ವೇ ಪಾಯಿಂಟ್ ನ್ಯಾವಿಗೇಷನ್, ಸುರಕ್ಷಿತ ಭೂಸ್ಪರ್ಶ ಸೇರಿದಂತೆ ಈ ಹಾರಾಟ ಪರಿಪೂರ್ಣವಾಗಿತ್ತು. ಭವಿಷ್ಯದಲ್ಲಿ ಚಾಲಕರಹಿತ ವಿಮಾನಗಳ ಅಭಿವೃದ್ಧಿಗೆ ನಿರ್ಣಾಯಕ ತಂತ್ರಜ್ಞಾನವನ್ನು ಹೊಂದುವ ನಿಟ್ಟಿನಲ್ಲಿ ಈ ಹಾರಾಟವು ಪ್ರಮುಖ ಮೈಲುಗಲ್ಲು. ರಕ್ಷಣಾ ತಂತ್ರಜ್ಞಾನದ ಸ್ವಾವಲಂಬನೆಯಲ್ಲಿ ಇದೊಂದು ಮಹತ್ವದ ಹೆಜ್ಜೆ ಎಂದು ಡಿಆರ್‌ಡಿಒ ಬಣ್ಣಿಸಿದೆ.
ಡಿಆರ್‌ಡಿಒ ಅಡಿಯಲ್ಲಿರುವ ಪ್ರಮುಖ ಸಂಶೋಧನಾ ಪ್ರಯೋಗಾಲಯ, ಬೆಂಗಳೂರು ಮೂಲದ ವೈಮಾನಿಕ ಅಭಿವೃದ್ಧಿ ಸಂಸ್ಥೆ(ಎಡಿಇ)ಯಿಂದ ಇದನ್ನು ವಿನ್ಯಾಸಗೊಳಿಸಿ ಅಭಿವೃದ್ಧಿಪಡಿಸಲಾಗಿದೆ. ಯುಎವಿಯು ಸಣ್ಣ, ಟರ್ಬೋಫ್ಯಾನ್ ಎಂಜಿನ್‌ನಿಂದ ಚಾಲಿತವಾಗಿದೆ ಎಂದು ನವ ದೆಹಲಿಯ ಡಿಆರ್‌ಡಿಒ ಪ್ರಧಾನ ಕಚೇರಿ ತಿಳಿಸಿದೆ. ವಿಮಾನದ ಏರ್‌ಫ್ರೇಮ್, ಅಂಡರ್‌ಕ್ಯಾರೇಜ್, ಫ್ಲೈಟ್ ಕಂಟ್ರೋಲ್‌ಗಳು ಮತ್ತು ಏವಿಯಾನಿಕ್ಸ್ ಸಿಸ್ಟಮ್ ಅನ್ನು ಸ್ಥಳೀಯವಾಗಿ ಅಭಿವೃದ್ಧಿಪಡಿಸಲಾಗಿದೆ.
ಈ ನಡುವೆ ಡಿಆರ್‌ಡಿಒಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅಭಿನಂದನೆ ತಿಳಿಸಿದ್ದಾರೆ. ʻʻಚಿತ್ರದುರ್ಗ ಎಟಿಆರ್‌ನಿಂದ ಸ್ವಾಯತ್ತ ಫ್ಲೈಯಿಂಗ್ ವಿಂಗ್ ಟೆಕ್ನಾಲಜಿ ಡೆಮಾನ್‌ಸ್ಟ್ರೇಟರ್‌ನ ಯಶಸ್ವಿ ಚೊಚ್ಚಲ ಹಾರಾಟಕ್ಕಾಗಿ DRDOಗೆ ಅಭಿನಂದನೆಗಳು. ಇದು ಸ್ವಾಯತ್ತ ವಿಮಾನಗಳ ಅಭಿವೃದ್ಧಿ ಕಡೆಗೆ ಪ್ರಮುಖ ಹೆಜ್ಜೆ. ನಿರ್ಣಾಯಕ ಮಿಲಿಟರಿ ವ್ಯವಸ್ಥೆಗಳ ವಿಷಯದಲ್ಲಿ ಆತ್ಮನಿರ್ಭರ ಭಾರತಕ್ಕೆ ದಾರಿ ಮಾಡಿಕೊಡಲಿದೆʼʼ ಎಂದು ಟ್ವೀಟ್ ಮಾಡಿದ್ದಾರೆ. ಈ ಸಾಧನೆಗಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೂಡ ಡಿಆರ್‌ಡಿಒಗೆ ಅಭಿನಂದನೆ ಸಲ್ಲಿಸಿದ್ದಾರೆ.
ಇದನ್ನೂ ಓದಿ: ಅಣ್ವಸ್ತ್ರ ಹೊತ್ತೊಯ್ಯೋ ಪೃಥ್ವಿ 2 ಖಂಡಾಂತರ ಕ್ಷಿಪಣಿ ಪರೀಕ್ಷೆ ಯಶಸ್ವಿ, ಇಲ್ಲಿದೆ ಸಾಮರ್ಥ್ಯದ ವಿವರ