ನವದೆಹಲಿ: ಉದ್ಯಮಿ ಎಲಾನ್ ಮಸ್ಕ್ (Elon Musk) ಒಡೆತನದ ಸಾಮಾಜಿಕ ಜಾಲತಾಣ ಎಕ್ಸ್ (Social media X) ಈ ವರ್ಷದ ಮಾರ್ಚ್ 26ರಿಂದ ಏಪ್ರಿಲ್ 25ರ ನಡುವೆ ಭಾರತದಲ್ಲಿ 1,84,241 ಖಾತೆಗಳನ್ನು ನಿಷೇಧಿಸಿದೆ. ಮಕ್ಕಳ ಲೈಂಗಿಕ ಶೋಷಣೆ ಮತ್ತು ಒಮ್ಮತವಿಲ್ಲದ ನಗ್ನತೆಯನ್ನು ಉತ್ತೇಜಿಸಿದ್ದಕ್ಕಾಗಿ ಹೆಚ್ಚಿನ ಖಾತೆಗಳನ್ನು ಬ್ಯಾನ್ ಮಾಡಲಾಗಿದೆ. ಜತೆಗೆ ದೇಶದಲ್ಲಿ ಭಯೋತ್ಪಾದನೆಯನ್ನು ಉತ್ತೇಜಿಸಲಾಗುತ್ತದೆ ಎನ್ನುವ ಕಾರಣಕ್ಕೆ 1,303 ಖಾತೆಗಳನ್ನು ನಿಷ್ಕ್ರಿಯಗೊಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಮೈಕ್ರೋ ಬ್ಲಾಗಿಂಗ್ ಪ್ಲಾಟ್‌ಫಾರ್ಮ್ ಎಕ್ಸ್ ಹೊಸ ಐಟಿ ನಿಯಮ 2021ರ ಪ್ರಕಾರ ತನ್ನ ಮಾಸಿಕ ವರದಿ ಬಿಡುಗಡೆ ಮಾಡಿದೆ. ಅದರಲ್ಲಿ ಈ ಅಂಕಿ-ಅಂಶ ಬಹಿರಂಗಗೊಂಡಿದೆ. ಅದರಂತೆ ಈ ವೇಳೆ ಭಾರತೀಯ ಬಳಕೆದಾರರಿಂದ ಸುಮಾರು 18,562 ದೂರುಗಳ ಬಂದಿತ್ತು ಎಂದು ಸಂಸ್ಥೆ ಹೇಳಿದೆ.
ನಿಷೇಧಿತ ಖಾತೆಗಳು
ಭಾರತದಲ್ಲಿ ದಾಖಲಾದ ದೂರುಗಳ ಪೈಕಿ ನಿರ್ಬಂಧಗಳ ಉಲ್ಲಂಘನೆ (7,555), ದ್ವೇಷಪೂರಿತ ನಡವಳಿಕೆ (3,353), ಸೂಕ್ಷ್ಮ ವಯಸ್ಕ ವಿಷಯ (3,335) ಮತ್ತು ನಿಂದನೆ/ಕಿರುಕುಳ (2,402) ಹೆಚ್ಚಿನ ಸಂಖ್ಯೆಯಲ್ಲಿವೆ. ಇದಕ್ಕೂ ಹಿಂದಿನ ಬಾರಿ ಅಂದರೆ ಫೆಬ್ರವರಿ 26 ಮತ್ತು ಮಾರ್ಚ್ 25ರ ನಡುವೆ ದೇಶದಲ್ಲಿ 2,12,627 ಎಕ್ಸ್ ಖಾತೆಗಳನ್ನು ನಿಷೇಧಿಸಲಾಗಿತ್ತು. ಈ ಪೈಕಿ ಭಯೋತ್ಪಾದನೆಯನ್ನು ಉತ್ತೇಜಿಸಿದ್ದಕ್ಕಾಗಿ 1,235 ಖಾತೆಗಳನ್ನು ತೆಗೆದು ಹಾಕಲಾಗಿತ್ತು.
ಎಕ್ಸ್‌ಮೇಲ್ ಮೂಲಕ ಜಿಮೇಲ್‌ಗೆ ಪೈಪೋಟಿ
ಚಾಟ್‌ಜಿಪಿಟಿಗೆ (ChatGPT) ಪ್ರತಿಯಾಗಿ ತನ್ನದೇ ಆದ ಎಐ ಆವೃತ್ತಿಯನ್ನು ಬಿಡುಗಡೆ ಮಾಡಿದ ನಂತರ ಉದ್ಯಮಿ ಎಲಾನ್ ಮಸ್ಕ್ (Elon Musk) ಅವರು ಎಕ್ಸ್‌ಮೇಲ್ (Xmail) ಸೇವೆ ಆರಂಭಿಸುವುದನ್ನು ಖಚಿತಪಡಿಸಿದ್ದಾರೆ. ಎಕ್ಸ್‌ಮೇಲ್, ಗೂಗಲ್‌ನ (Google) ಜನಪ್ರಿಯ ಜಿಮೇಲ್‌ಗೆ (Gmail) ಪೈಪೋಟಿ ನೀಡಲಿದೆ. ಈ ಮಧ್ಯೆ, ಗೂಗಲ್ ತನ್ನ ಜಿಮೇಲ್ ಸೇವೆಯನ್ನು ಸ್ಥಗಿತಗೊಳಿಸಲಿದೆ ಎಂಬ ವದಂತಿ ಕೆಲ ಕಾಲ ಆತಂಕಕ್ಕೆ ಕಾರಣವಾಯಿತು. ಆದರೆ ಈ ಕುರಿತು ಸ್ಪಷ್ಟನೆ ನೀಡಿರುವ ಗೂಗಲ್, ಜಿಮೇಲ್ ಸ್ಥಗಿತವಾಗುತ್ತಿಲ್ಲ. ಈ ಹಿಂದೆ ಎಚ್‌ಟಿಎಂಎಲ್ ಆಗಿದ್ದ ಡಿಫಾಲ್ಟ್ ಜಿಮೇಲ್ ಇಂಟರ್‌ಫೇಸ್ ಅನ್ನು ಮತ್ತಷ್ಟು ವರ್ಣರಂಜಿತಗೊಳಿಸಲಿದೆ. ಈ ಬದಲಾವಣೆ ಜನವರಿ 24ರಿಂದಲೇ ನಡೆಯುತ್ತಿದೆ ಎಂದು ಸ್ಪಷ್ಟಪಡಿಸಿದೆ.
ಎಕ್ಸ್‌ನಲ್ಲಿನ ಸಂಭಾಷಣೆಯೊಂದರಲ್ಲಿ ಮಸ್ಕ್ ಅವರು ‘ಎಕ್ಸ್‌ಮೇಲ್’ ಎಂದು ಕರೆಯಲ್ಪಡುವ ಉತ್ಪನ್ನವು ‘ಬರುತ್ತಿದೆ’ ಎಂದು ಹೇಳಿದ್ದಾರೆ. ಗೂಗಲ್ ಜಿಮೇಲ್ ಸ್ಥಗಿತವಾಗಲಿದೆ ಎಂಬ ನಕಲಿ ದಾಖಲೆಯು ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿರುವಾಗಲೇ ಎಕ್ಸ್‌ಮೇಲ್ ಆರಂಭದ ಕುರಿತು ಮಸ್ಕ್ ಹೇಳಿಕೆಯು ಭಾರೀ ಕುತೂಹಲಕ್ಕೆ ಕಾರಣವಾಗಿದೆ.
ಇಷ್ಟಾಗಿಯೂ ಎಕ್ಸ್‌ಮೇಲ್ ಆರಂಭದ ಕುರಿತು ಹೆಚ್ಚೇನೂ ಅವರು ಮಾಹಿತಿಯನ್ನು ನೀಡಿಲ್ಲ. ಈ ಸೇವೆ ಯಾವಾಗ ಆರಂಭವಾಗಲಿದೆ ಎಂಬ ಬಗ್ಗೆ ಯಾವುದೇ ವಿವರವನ್ನು ನೀಡಿಲ್ಲ. ಎಕ್ಸ್‌ನ ಸೆಕ್ಯುರಿಟಿ ಇಂಜಿನಿಯರಿಂಗ್ ತಂಡದ ಹಿರಿಯ ಸದಸ್ಯರಾದ ನಾಥನ್ ಮೆಕ್‌ಗ್ರಾಡಿ ಅವರು ಎಕ್ಸ್‌ಮೇಲ್ ಲಾಂಚ್ ದಿನಾಂಕದ ಬಗ್ಗೆ ಪ್ರಶ್ನಿಸಿದ ನಂತರ ಈ ದೃಢೀಕರಣವು ಬಂದಿದೆ. ಅವರ ಟ್ವೀಟ್‌ಗೆ ಪ್ರತಿಕ್ರಿಯಿಸಿದ ಮಸ್ಕ್, ಎಕ್ಸ್ ಮೇಲ್ ಶೀಘ್ರವೇ ಚಾಲ್ತಿಗೆ ಬರಲಿದೆ ಎಂದು ದೃಢಿಕರಿಸಿದರು.
ಇದನ್ನೂ ಓದಿ: OpenAI ChatGPT: ಚಾಟ್‌ಜಿಪಿಟಿ VS ಇಲಾನ್ ಮಸ್ಕ್‌ನ ಗ್ರೋಕ್: ಏನು ವ್ಯತ್ಯಾಸ?