Site icon Vistara News

Twitter CEO: ಟ್ವಿಟರ್‌ ಸಿಇಒ ಸ್ಥಾನಕ್ಕೆ ಮಹಿಳೆ; ಲಿಂಡಾ ಯಾಕರಿನೊ ಮುಂಚೂಣಿಯಲ್ಲಿ

Linda Yaccarino

ನ್ಯೂಯಾರ್ಕ್‌: ಟ್ವಿಟರ್‌ ಮಾಲಿಕ ಎಲಾನ್‌ ಮಸ್ಕ್‌ (Elon Musk) ಅವರು ಸಂಸ್ಥೆಯ ಸಿಇಒ (Twitter CEO) ಸ್ಥಾನದಿಂದ ಹಿಂದೆ ಸರಿಯುತ್ತಿದ್ದು, ಆ ಸ್ಥಾನಕ್ಕೆ ಒಬ್ಬರು ಮಹಿಳೆಯನ್ನು ನೇಮಿಸುತ್ತಿದ್ದೇನೆ ಎಂದು ಟ್ವೀಟ್‌ ಮಾಡಿದ್ದಾರೆ. ಈ ಟ್ವೀಟ್‌ ವೈರಲ್‌ ಆಗುವುದರೊಂದಿಗೆ, ಯಾರು ಈ ಹೊಸ ಸಿಇಒ ಎಂಬ ಕುತೂಹಲ ಗರಿಗೆದರಿದೆ.

ಕಳೆದ ವರ್ಷ ತಾವು ಖರೀದಿಸಿದ ದೈತ್ಯ ಸೋಶಿಯಲ್‌ ಮೀಡಿಯಾ ಸಂಸ್ಥೆಯನ್ನು ಮುನ್ನಡೆಸಲು ಅವರು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನೇಮಕಕ್ಕೆ ಮುಂದಾಗಿದ್ದಾರೆ. ಎನ್‌ಬಿಸಿ ಯೂನಿವರ್ಸಲ್‌ನ ಜಾಹೀರಾತು ವಿಭಾಗದ ಮುಖ್ಯಸ್ಥೆ ಲಿಂಡಾ ಯಾಕರಿನೊ (Linda Yaccarino) ಅವರು ಮುಂದಿನ ಟ್ವಿಟರ್ ಸಿಇಒ ಆಗುವ ರೇಸ್‌ನಲ್ಲಿ ಮುಂದಿದ್ದಾರೆ ಎಂದು ವಾಲ್‌ಸ್ಟ್ರೀಟ್ ಜರ್ನಲ್ ವರದಿ ಮಾಡಿದೆ.

“ನಾನು Twitterಗೆ ಹೊಸ CEO ಅನ್ನು ನೇಮಿಸಿಕೊಂಡಿದ್ದೇನೆ ಎಂದು ಘೋಷಿಸಲು ಉತ್ಸುಕನಾಗಿದ್ದೇನೆ. ಆಕೆ 6 ವಾರಗಳಲ್ಲಿ ಕೆಲಸ ಆರಂಭಿಸಲಿದ್ದಾರೆ. ನನ್ನ ಪಾತ್ರವು ಎಕ್ಸಿಕ್ಯೂಟಿವ್‌ ಚೇರ್ ಮತ್ತು ಸಿಟಿಒ ಆಗಿ ಮುಂದುವರಿಯಲಿದೆ. ಉತ್ಪನ್ನ, ಸಾಫ್ಟ್‌ವೇರ್‌ಗಳನ್ನು ನೋಡಿಕೊಳ್ಳುತ್ತದೆ” ಎಂದು ಮಸ್ಕ್ ಟ್ವೀಟ್‌ ಮಾಡಿದ್ದಾರೆ.

ಈ ಲಿಂಡಾ ಯಾಕರಿನೊ ಯಾರು?

ಲಿಂಡಾ ಅವರ ಲಿಂಕ್ಡ್‌ಇನ್ ಪ್ರೊಫೈಲ್‌ನ ಪ್ರಕಾರ, ಯಾಕರಿನೊ 2011ರಿಂದ NBC ಯುನಿವರ್ಸಲ್‌ ಸಂಸ್ಥೆಯಲ್ಲಿದ್ದಾರೆ. ಆ ಸಂಸ್ಥೆಯ ಅಧ್ಯಕ್ಷೆ, ಜಾಗತಿಕ ಜಾಹೀರಾತು ಮತ್ತು ಪಾಲುದಾರಿಕೆ ಮುಖ್ಯಸ್ಥೆ. ಆ ಮುನ್ನ ಅವರು ಕಂಪನಿಯ ಕೇಬಲ್ ಮನರಂಜನೆ ಮತ್ತು ಡಿಜಿಟಲ್ ಜಾಹೀರಾತು ಮಾರಾಟ ವಿಭಾಗದಲ್ಲಿಯೂ ಸೇವೆ ಸಲ್ಲಿಸಿದ್ದರು. ಇದಕ್ಕೂ ಮುನ್ನ ಯಾಕರಿನೊ ಅವರು ಟರ್ನರ್‌ನಲ್ಲಿ 19 ವರ್ಷ ಸೇವೆ ಸಲ್ಲಿಸಿದ್ದರು. ಅಲ್ಲಿ ಅವರು ಜಾಹೀರಾತು ಮಾರಾಟ, ಮಾರ್ಕೆಟಿಂಗ್ ವಿಭಾಗದ ಕಾರ್ಯನಿರ್ವಾಹಕ ಉಪಾಧ್ಯಕ್ಷೆ/ಸಿಒಒ ಆಗಿದ್ದರು.

ಲಿಂಡಾ ಅವರು ಪೆನ್ ಸ್ಟೇಟ್ ಯೂನಿವರ್ಸಿಟಿಯ ಹಳೆಯ ವಿದ್ಯಾರ್ಥಿ. ಲಿಬರಲ್‌ ಆರ್ಟ್ಸ್‌ ಮತ್ತು ದೂರಸಂವಹನ ಅಧ್ಯಯನ ಮಾಡಿದ್ದಾರೆ. ಜಾಹೀರಾತಿನ ಪರಿಣಾಮಕಾರಿತ್ವವನ್ನು ಶೋಧಿಸಲು ಉತ್ತಮ ಮಾರ್ಗಗಳನ್ನು ಹುಡುಕುವುದು ಅವರ ತಜ್ಞತೆ. ಯಾಕರಿನೊ ಅವರು ಟ್ವಿಟರ್‌ನ ಸಿಇಒ ಆಗಲು ಬಯಸಿದ್ದೇನೆ ಎಂದು ಈ ಹಿಂದೆ ತಮ್ಮ ಸ್ನೇಹಿತರಿಗೆ ತಿಳಿಸಿದ್ದರು ಎಂದು ಬ್ಯುಸಿನೆಸ್ ಇನ್ಸೈಡರ್ ವರದಿ ಮಾಡಿತ್ತು. ಟ್ವಿಟರ್‌ನಲ್ಲಿ ಸುಧಾರಣೆ ಆಗಬೇಕು, ಅದಕ್ಕೆ ಮಸ್ಕ್‌ ಸಮಯ ನೀಡಬೇಕು ಎಂದು ಅವರು ಈ ಹಿಂದೆ ಮಸ್ಕ್‌ನನ್ನು ಬೆಂಬಲಿಸಿದ್ದರು.

ಟ್ವಿಟರ್‌ ಸಿಇಒ ಸ್ಥಾನಕ್ಕೆ ಎಲಾ ಇರ್ವಿನ್ ಅವರ ಹೆಸರೂ ಕೇಳಿಬರುತ್ತಿದೆ. ಇರ್ವಿನ್ ಪ್ರಸ್ತುತ Twitterನ ಭದ್ರತೆ ಮತ್ತು ಸುರಕ್ಷತಾ ವಿಭಾಗದ ಮುಖ್ಯಸ್ಥರಾಗಿದ್ದಾರೆ. ಇವರೂ ಎಲಾನ್‌ ಮಸ್ಕ್‌ ಜತೆಗೆ ಉತ್ತಮ ಸಂಬಂಧವನ್ನೇ ಹೊಂದಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: Elon Musk : ಟ್ವಿಟರ್‌ ವೈಯಕ್ತಿಕ ಖಾತೆಯಿಂದ ಎಲಾನ್‌ ಮಸ್ಕ್‌ಗೆ ತಿಂಗಳಿಗೆ 80 ಲಕ್ಷ ರೂ. ಆದಾಯ! ಇದು ಹೇಗೆ?

Exit mobile version