ನವದೆಹಲಿ: ಸೋಷಿಯಲ್ ಮೀಡಿಯಾಗಳ (Social Media) ಪೈಕಿ ಫೇಸ್‌ಬುಕ್ (Facebook) ಮತ್ತು ಇನ್‌ಸ್ಟಾಗ್ರಾಮ್ (Instagram) ಸದ್ಯ ಜಗತ್ತಿನ ಅತ್ಯಂತ ಜನಪ್ರಿಯ ವೇದಿಕೆಗಳಾಗಿವೆ. ಬಹುಶಃ ಈ ಸೋಷಿಯಲ್ ಮೀಡಿಯಾಗಳನ್ನು ಬಳಸದೇ ಇರುವ ವ್ಯಕ್ತಿಯೇ ಇಲ್ಲದಿರಬಹುದು. ಅಷ್ಟರ ಮಟ್ಟಿಗೆ ಈ ವೇದಿಕೆಗಳು ಬಳಕೆಯಾಗುತ್ತಿವೆ. ಈಗಿನ ವಿಷಯ ಎಂದರೆ, ಮೆಟಾ (Meta) ಕಂಪನಿಯು ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್‌ಗಳಿಗಾಗಿ ಜೂನ್ 7ರಿಂದ ಭಾರತದಲ್ಲಿ ದೃಢೀಕೃತ ಬ್ಯಾಡ್ಜ್ ಸೇವೆ ಆರಂಭಿಸಿದೆ. ಅಂದರೆ, ಬಳಕೆದಾರರು ಈಗ ತಮ್ಮ ಖಾತೆಗಳಿಗೆ ಬ್ಲೂಟಿಕ್ ಮಾರ್ಕ್ (Blue Tick Mark) ಪಡೆದುಕೊಳ್ಳಬಹುದು.
ಗ್ರಾಹಕರು ದುಡ್ಡು ಕೊಟ್ಟು ಈ ಬ್ಲೂಟಿಕ್ ಮಾರ್ಕ್ ಖರೀದಿಸಬಹುದು. ಮೆಟಾ ವೆರಿಫೈಡ್ ಸಬ್ಸ್‌ಕ್ರಿಪ್ಷನ್ ಆಧರಿತ ಸೇವೆಯ ಅನ್ವಯ ಬಳಕೆದಾರರು ತಿಂಗಳಿಗೆ 699 ರೂ. ಪಾವತಿಸಿದರೆ ಬ್ಲೂ ಟಿಕ್ ದೊರೆಯಲಿದೆ. ಇದು ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ ಎರಡಕ್ಕೂ ಅನ್ವಯ. ತಿಂಗಳಿಗೆ 500 ರೂ. ವೆಬ್‌ಬೇಸ್ಡ್ ಚಂದಾದಾರಿಕೆ ಸೇವೆಯನ್ನು ಆರಂಭಿಸುವ ಬಗ್ಗೆಯೂ ಮೆಟಾ ಪ್ಲಾನ್ ಮಾಡುತ್ತಿದೆ. ಚಂದಾದಾರಿಕೆಯನ್ನು ಪಡೆಯುವುದರಿಂದ ಬಳಕೆದಾರರಿಗೆ ಬ್ಲೂಟಿಕ್ ಜತೆಗೆ ಇನ್ನೂ ಹೆಚ್ಚಿನ ಸೇವೆಗಳು ಕೂಡ ಲಭ್ಯವಾಗುತ್ತವೆ.
ಆದರೆ, ಬಹಳಷ್ಟು ಬಳಕೆದಾರರಿಗೆ ಈ ಬ್ಲೂಟಿಕ್ ಸೇವೆಯನ್ನು ಹೇಗೆ ಪಡೆದುಕೊಳ್ಳಬೇಕು ಎಂಬ ಬಗ್ಗೆ ಮಾಹಿತಿ ಇರುವುದಿಲ್ಲ. ಆ ಬಗ್ಗೆ ಇಲ್ಲಿ ಮಾಹಿತಿ ನೀಡಿದ್ದೇವೆ. ಓದಿ.
ಇದಕ್ಕಾಗಿ ಮೊದಲಿಗೆ ನೀವು ಇನ್‌ಸ್ಟಾಗ್ರಾಮ್ ಅಥವಾ ಫೇಸ್‌ಬುಕ್‌ನಲ್ಲಿ ಖಾತೆ ಹೊಂದಿರಬೇಕು. ಖಾತೆ ಹೊಂದಿದ್ದರೆ, ಇನ್‌ಸ್ಟಾಗ್ರಾಮ್ ಅಥವಾ ಫೇಸ್‌ಬುಕ್ ಓಪನ್ ಮಾಡಿ. ಬ್ಲೂಟಿಕ್ ಬೇಕಾಗಿರುವ ನಿಮ್ಮ ಪ್ರೊಫೈಲ್ ಮೇಲೆ ಕ್ಲಿಕ್ ಮಾಡಿ. ಬಳಿಕ Settingsಗೆ ಹೋಗಿ Accounts Center ಆಯ್ಕೆ ಮಾಡಿಕೊಳ್ಳಿ. ಅಲ್ಲಿರುವ Meta Verified ಆಪ್ಷನ್ ಆಯ್ಕೆ ಮಾಡಿಕೊಳ್ಳಿ. ಒಂದು ವೇಳೆ, ಈ ಆಪ್ಷನ್ ನಿಮಗೆ ಕಾಣದಿದ್ದರೆ, ನಿಮ್ಮ ಆ್ಯಪ್ ಅಪ್‌ಗ್ರೇಡ್ ಮಾಡಿಕೊಳ್ಳಬೇಕಾಗುತ್ತದೆ. ಬಳಿಕ ಪೇಮೆಂಟ್ ಯಾವ ರೀತಿ ಮಾಡಲು ಇಚ್ಛಿಸುತ್ತೀರಿ ಎಂಬುದನ್ನು ಆಯ್ಕೆ ಮಾಡಿಕೊಳ್ಳಿ. ನಿಮ್ಮ ಗುರುತನ್ನು ಖಚಿತಪಡಿಸುವುದಕ್ಕಾಗಿ ಕೇಳಲಾಗುವ ಎಲ್ಲ ಸೂಚನೆಗಳನ್ನು ಫಾಲೋ ಮಾಡಿ. ನಿಮ್ಮ ಗುರುತು ಅಧಿಕೃತೆ ಪೂರ್ಣಗೊಂಡ ಬಳಿಕವಷ್ಟೇ ನಿಮಗೆ ಖಾತೆಗೆ ದೃಢೀಕೃತ ಬ್ಯಾಡ್ಜ್ ದೊರೆಯುತ್ತದೆ.
ಖಾತೆ ದೃಢೀಕರಣ ಮಾಡುವುದು ಹೇಗೆ?
ಭಾರತದಲ್ಲಿ ಇನ್‌ಸ್ಟಾಗ್ರಾಮ್ ಮತ್ತು ಫೇಸ್‌ಬುಕ್ ಖಾತೆ ದೃಢೀಕರಣ ಮಾಡಿಕೊಳ್ಳಬೇಕಿದ್ದರೆ, ಮೆಟಾ ದೃಢೀಕರಣ ಮಾಡಿಕೊಳ್ಳಬೇಕಾಗುತ್ತದೆ. ಇದಕ್ಕಾಗಿ ಖಾತೆದಾರರು 18 ಅಥವಾ ಅದಕ್ಕಿಂತ ಮೇಲ್ಪಟ್ಟವರಾಗಿರಬೇಕು. ಹಾಗೆಯೇ, ಸರ್ಕಾರ ಒದಗಿಸುವ ಯಾವುದಾದರೂ ಅಧಿಕೃ ಗುರುತು ಪತ್ರ ಪಡೆದುಕೊಂಡಿರಬೇಕು. ಈ ಪತ್ರದಲ್ಲಿರುವ ಹೆಸರು, ಫೋಟೋ ಇನ್‌ಸ್ಟಾಗ್ರಾಮ್ ಮತ್ತು ಫೇಸ್‌ಬುಕ್‌ನಲ್ಲಿರುವ ನಿಮ್ಮ ಖಾತೆಯ ಹೆಸರು ಮತ್ತು ಫೋಟೋಗೆ ಮ್ಯಾಚ್ ಆಗಬೇಕಾಗುತ್ತದೆ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಬೇಕು.
ತಂತ್ರಜ್ಞಾನ ಇನ್ನಷ್ಟು ಕುತೂಹಲಕಾರಿ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.