ನವ ದೆಹಲಿ: ಪ್ರಸಕ್ತ ಸಾಲಿನಲ್ಲಿ ಸ್ಮಾರ್ಟ್‌ಫೋನ್ ಶಿಪ್‌ಮೆಂಟ್(ರಿಟೇಲರ್ಸ್‌ಗೆ ಫೋನ್ ರವಾನೆ) ಹೆಚ್ಚಳವಾಗಿದೆ. ಪ್ರಸಕ್ತ ವರ್ಷದ ಎರಡನೇ ತ್ರೈಮಾಸಿಕದಲ್ಲಿ ಶೇ.16ರಷ್ಟು ಸ್ಮಾರ್ಟ್‌ಫೋನ್ ರವಾನೆಯು ಹೆಚ್ಚಾಗಿದೆ. ಒಟ್ಟಾರೆ 4.4 ಕೋಟಿ ಸ್ಮಾರ್ಟ್‌ಫೋನ್‌ಗಳನ್ನು ಕಂಪನಿಗಳು ವಿಲೇವಾರಿ ಮಾಡಿವೆ ಎಂದು ಕೌಂಟರ್‌ಪಾಯಿಂಟ್ ಸಂಶೋಧನಾ ಸಂಸ್ಥೆ ತಿಳಿಸಿದೆ. ಸ್ಮಾರ್ಟ್‌ಫೋನ್ ಶಿಪ್‌ಮೆಂಟ್(Smartphone Shipment)ನಲ್ಲಿ ಶೇ.24ರಷ್ಟು ಬೆಳವಣಿಗೆಯೊಂದಿಗೆ ಒಪ್ಪೋ ಕಂಪನಿ ಅಗ್ರಸ್ಥಾನಿಯಾಗಿದೆ. ನಂತರ ಸ್ಥಾನದಲ್ಲಿ ಸ್ಯಾಮ್ಸಂಗ್ ಇದೆ. ಭಾರತೀಯ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಚೀನಾ ಮೂಲದ ಕಂಪನಿಗಳು ತಮ್ಮ ಅಗ್ರಗಣ್ಯ ಸ್ಥಾನವನ್ನು ಕಾಯ್ದುಕೊಂಡು ಬರುವುದು ಇತ್ತೀಚಿನ ವರ್ಷಗಳಲ್ಲಿ ಸಾಮಾನ್ಯವಾಗಿದೆ.
ಪ್ರಾಡಕ್ಟ್ ಲಿಂಕ್ಡ್ ಇನ್ಸೆಂಟಿವ್(ಪಿಎಲ್ಐ) ಸ್ಕೀಮ್‌ಗಳ ಕಾರಣದಿಂದಾಗಿ ಕಂಪನಿಗಳು ತಮ್ಮ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸಿಕೊಂಡಿವೆ ಎಂದು ಕೌಂಟರ್‌ಪಾಯಿಂಟ್ ಅಧ್ಯಯನ ವರದಿಯಲ್ಲಿ ತಿಳಿಸಲಾಗಿದೆ. ಪ್ರಸಕ್ತ ಸಾಲಿನ ಮೊದಲ ತ್ರೈಮಾಸಿಕದಲ್ಲಿ ಮೇಡ್ ಇನ್ ಇಂಡಿಯಾ ಸ್ಮಾರ್ಟ್‌ಫೋನ್ ರವಾನೆ ಬೆಳವಣಿಗೆಯ ಶೇ.7ರಷ್ಟು ಏರಿಕೆಯಾಗಿತ್ತು.
ಕಳೆದ ವರ್ಷಕ್ಕೆ ಹೋಲಿಸಿದರೆ ಮೇಡ್ ಇನ್ ಇಂಡಿಯಾ ಸ್ಮಾರ್ಟ್‌ಫೋನ್‌ಗಳ ರವಾನೆಯಲ್ಲಿ ಏರಿಕೆಯಾಗಿದೆ. ಎರಡನೇ ತ್ರೈಮಾಸಿಕ ಅವಧಿಯಲ್ಲಿ ಭಾರತೀಯ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಸಾಕಷ್ಟು ಹೂಡಿಕೆ ಹೆಚ್ಚಾಗಿದೆ. ಹೊಸ ತಯಾರಿಕಾ ಘಟಕಗಳು ತಲೆ ಎತ್ತಿವೆ. ಈಗಾಗಲೇ ಅಸ್ತಿತ್ವದಲ್ಲಿರುವ ಉತ್ಪಾದನಾ ಘಟಕಗಳು ವಿಸ್ತರಣೆಯನ್ನು ಕಂಡಿವೆ. ಇತ್ತೀಚೆಗಷ್ಟೇ ಒಪ್ಪೋ ವಿಹಾನ್ ಎಂಬ ಹೊಸ ಉಪಕ್ರಮದ ಬಗ್ಗೆ ಘೋಷಣೆ ಮಾಡಿತ್ತು. ಈ ಪ್ರಾಜೆಕ್ಟ್‌ನಡಿ ಕಂಪನಿಯು ಮುಂದಿನ ಐದು ವರ್ಷಗಳಲ್ಲಿ 60 ಮಿಲಿಯನ್ ಡಾಲರ್ ಹೂಡಿಕೆ ಮಾಡಲಿದೆ. ವಿಶೇಷವಾಗಿ, ಈ ಮೂಲಕ ಸ್ಥಳೀಯ ಪೂರೈಕೆಯ ಸರಪಳಿಯನ್ನು ಅದು ಬಲಪಡಿಸಲಿದೆ. ಸ್ಯಾಮ್ಸಂಗ್ ಕೂಡ ತನ್ನ ಪ್ರೀಮಿಯಂ ಸ್ಮಾರ್ಟ್‌ಫೋನ್ ಉತ್ಪಾದನೆಯನ್ನು ಹೆಚ್ಚಿಸಿದೆ ಈ ಎಲ್ಲ ಕಾರಣಗಳಿಂದಾಗಿ ಪ್ರಸಕ್ತ ಸಾಲಿನ ಎರಡನೇ ತ್ರೈಮಾಸಿಕದಲ್ಲಿ, ಕಳೆದ ವರ್ಷಕ್ಕೆ ಹೋಲಿಸಿದರೆ ಸಾಕಷ್ಟು ಹೆಚ್ಚಳವಾಗಿದೆ ಎಂದು ಕೌಂಟರ್‌ಪಾಯಿಂಟ್ ತಿಳಿಸಿದೆ.
ಕಂಪನಿಗಳು ಪ್ರಕಾರ, ಮೇಡ್ ಇನ್ ಇಂಡಿಯಾ ಸ್ಮಾರ್ಟ್‌ಫೋನ್ ಶಿಪ್‌ಮೆಂಟ್‌ನಲ್ಲಿ ಚೀನಾ ಮೂಲದ ಒಪ್ಪೋ ಶೇ.24 ಪಾಲಿನೊಂದಿಗೆ ಅಗ್ರಸ್ಥಾನದಲ್ಲಿದೆ. ನಂತರದ ಸ್ಥಾನದಲ್ಲಿ ದಕ್ಷಿಣ ಕೊರಿಯಾದ ಟೆಕ್ ದೈತ್ಯ ಸ್ಯಾಮ್ಸಂಗ್ ಮೊಬೈಲ್‌ಗಳಿವೆ. ಭಾರತೀಯ ಟೆಕ್ ಬ್ರ್ಯಾಂಡ್ ಲಾವಾ ಮೇಡ್ ಇನ್ ಇಂಡಿಯಾ ಫೀಚರ್ ಫೋನ್ ವಿಭಾಗದಲ್ಲಿ ಅಗ್ರಸ್ಥಾನಕ್ಕೇರಿದೆ. ಅದು ಈ ವಿಭಾಗದಲ್ಲಿ ಶೇ.21ರಷ್ಟು ಪಾಲು ಪಡೆದುಕೊಂಡಿದೆ. ವೀಯರೇಬಲ್ ಸೆಗ್ಮೆಂಟ್‌ನಲ್ಲಿ ಶೇ.16ರಷ್ಟು ಪಾಲಿನೊಂದಿಗೆ ಟಿಡಬ್ಲೂಎಸ್ ಮುಂಚೂಣಯಲ್ಲಿದೆ. ನಂತರದಲ್ಲಿ ನೆಕ್‌ಬ್ಯಾಂಡ್ಸ್ ಮತ್ತು ಸ್ಮಾರ್ಟ್‌ವಾಚ್‌ಗಳಿವೆ.
ಇದನ್ನೂ ಓದಿ | Google | ಚೀನಾದಿಂದ ಭಾರತಕ್ಕೆ ಪಿಕ್ಸೆಲ್ ಸ್ಮಾರ್ಟ್‌ಫೋನ್ ಉತ್ಪಾದನಾ ಘಟಕ ಸ್ಥಳಾಂತರಕ್ಕೆ ಗೂಗಲ್ ಚಿಂತನೆ