Site icon Vistara News

Chinese Apps Ban: ಚೀನಿ ಲಿಂಕ್ ಹೊಂದಿರುವ 138 ಬೆಟ್ಟಿಂಗ್, 94 ಸಾಲ ನೀಡಿಕೆ ಆ್ಯಪ್ ನಿಷೇಧಿಸಿದ ಭಾರತ

Chinese Apps Ban, India bans 138 betting apps, 94 loan lending app

ನವದೆಹಲಿ: ಚೀನಾ ಲಿಂಕ್ ಹೊಂದಿರುವ 138 ಬೆಟ್ಟಿಂಗ್ ಆ್ಯಪ್ ಮತ್ತು 94 ಲೋನ್ ಲೆಂಡಿಂಗ್ ಆ್ಯಪ್‌ಗಳನ್ನು ಭಾರತ ಸರ್ಕಾರವು ನಿಷೇಧಿಸಿದೆ. ಕಳೆದ ಎರಡು ವರ್ಷದಿಂದ ಭಾರತ ಸರ್ಕಾರವು, ಭದ್ರತೆಯ ದೃಷ್ಟಿಯಿಂದ ಚೀನಾ ಮೂಲದ ಅನೇಕ ಆ್ಯಪ್‌ಗಳನ್ನು ನಿಷೇಧಿಸುತ್ತಾ ಬಂದಿದೆ. ಇದೀಗ ಆ ಪಟ್ಟಿಗೆ ಮತ್ತೆ 232 ಆ್ಯಪ್‌ಗಳು ಸೇರ್ಪಡೆಯಾಗಿವೆ(Chinese Apps Ban).

ಎಲೆಕ್ಟ್ರಾನಿಕ್ಸ್ ಮ್ತತು ಮಾಹಿತಿ ತಂತ್ರಜ್ಞಾನ(Ministry of Electronics and Information Technology – MeitY) ಸಚಿವಾಲಯವು ಈ ಚೀನಿ ಆ್ಯಪ್‌ಗಳ ಮೇಲೆ ನಿಷೇಧ ಹೇರಿದೆ. ಗೃಹ ಸಚಿವಾಲಯ ಆದೇಶದ ಮೂಲಕ ಈ ಕ್ರಮವನ್ನು ಕೈಗೊಳ್ಳಲಾಗಿದೆ ಎಂದು ಎಲೆಕ್ಟ್ರಾನಿಕ್ಸ್ ಸಚಿವಾಲಯು ತಿಳಿಸಿದೆ. ಭಾರತದ ಸಾರ್ವಭೌಮತ್ವ ಮತ್ತು ಸಮಗ್ರತೆಗೆ ಪೂರ್ವಾಗ್ರಹ ಪಡಿಸುವ ಸಂಗತಿಗಳನ್ನು ಒಳಗೊಂಡಿರುವ ಕಾರಣ ಈ ಅಪ್ಲಿಕೇಶನ್‌ಗಳು ಐಟಿ ಕಾಯಿದೆಯ ಸೆಕ್ಷನ್ 69 ಅನ್ನು ಉಲ್ಲಂಘಿಸುತ್ತವೆ ಎಂಬುದು ಖಚಿತಪಟ್ಟ ಮೇಲೆ, ನಿಷೇಧಿಸುವ ನಿರ್ಧಾರ ಕೈಗೊಳ್ಳಲಾಗಿದೆ.

ಇದನ್ನೂ ಓದಿ: WhatsApp | ವಾಟ್ಸ್ಆ್ಯಪ್‌ನಿಂದ ಸೆಪ್ಟೆಂಬರ್‌ನಲ್ಲಿ 26 ಲಕ್ಷ ಖಾತೆಗಳಿಗೆ ನಿಷೇಧ

ದೇಶದ ಸಾರ್ವಭೌಮತೆಗೆ ಬೆದರಿಕೆಯೊಡ್ಡುವ ಚೀನಿ ಆ್ಯಪ್‌ಗಳನ್ನು ಕೇಂದ್ರ ಸರ್ಕಾರವು ಕಳೆದ ಕೆಲವು ವರ್ಷಗಳಿಂದ ನಿಷೇಧಿಸುತ್ತಾ ಬಂದಿದೆ. ಈ ಹಿಂದೆ ಕೇಂದ್ರ ಸರ್ಕಾರವು, ಭಾರತದಲ್ಲಿ ಭಾರೀ ಬಳಕೆಯಲ್ಲಿದ್ದ TikTok, Xender, Shein, Camscanner ಸೇರಿದಂತೆ ಅನೇಕ ಆ್ಯಪ್‌ಗಳನ್ನು ನಿಷೇಧಿಸಿತ್ತು. 2020ರಲ್ಲಿ ಭಾರತವು 59 ಮೊಬೈಲ್ ಆ್ಯಪ್ ನಿಷೇಧಿಸಿತ್ತು. ಅದೇ ವರ್ಷ ಸೆಪ್ಟೆಂಬರ್‌ನಲ್ಲಿ ಐಟಿ ಕಾಯಿದೆಯ ಸೆಕ್ಷನ್ 69A ಅಡಿಯಲ್ಲಿ 118 ಹೆಚ್ಚಿನ ಅಪ್ಲಿಕೇಶನ್‌ಗಳನ್ನು ಬ್ಯಾನ್ ಮಾಡಲಾಗಿತ್ತು.

Exit mobile version