Site icon Vistara News

Mobile Data Saving: ಮೊಬೈಲ್ ಡೇಟಾ ಉಳಿಸಲು ಇಲ್ಲಿದೆ ಕೆಲವು ಸರಳ ಉಪಾಯಗಳು!

Mobile data

ಆಂಡ್ರಾಯ್ಡ್ (Android) ಸ್ಮಾರ್ಟ್ ಫೋನ್‌ಗಳು (smart phones) ಈಗ ಎಲ್ಲರ ಬದುಕಿನ ಅವಿಭಾಜ್ಯ ಅಂಗವಾಗಿದೆ. ಒಂದು ಕ್ಷಣ ಕೈಕೊಟ್ಟರೂ, ಎಲ್ಲಾದರೂ ಕಳೆದು ಹೋದರೂ ಓಡುತ್ತಿದ್ದ ಬದುಕು ಒಂದು ಕ್ಷಣ ನಿಂತಂತಾಗುತ್ತದೆ. ಇಂತಹ ಮೊಬೈಲ್‌ ಬಗ್ಗೆ ಕೆಲವೊಂದು ವಿಷಯಗಳನ್ನು ಪ್ರತಿಯೊಬ್ಬರೂ ತಿಳಿದುಕೊಂಡಿರಬೇಕು. ಅವುಗಳಲ್ಲಿ ಮೊಬೈಲ್ ಡೇಟಾ (mobile data saving) ಕೂಡ ಒಂದಾಗಿದೆ.

ಮೊಬೈಲ್ ನಲ್ಲಿ ಡೇಟಾ ಎನ್ನುವುದು ಅದರ ಉಸಿರಿದ್ದಂತೆ. ನಿರಂತರ ಸಂಪರ್ಕದಲ್ಲಿರಲು, ಮಾಹಿತಿಯನ್ನು ಪ್ರವೇಶಿಸಲು ಮತ್ತು ಪ್ರಯಾಣದಲ್ಲಿರುವಾಗ ಮಲ್ಟಿಮೀಡಿಯಾ (Multimedia) ವಿಷಯವನ್ನು ಆನಂದಿಸಲು ಇದು ನಮಗೆ ಅವಕಾಶ ಮಾಡಿಕೊಡುತ್ತದೆ. ಆದರೆ ಮೊಬೈಲ್ ಡೇಟಾದ ಮೇಲೆ ಹೆಚ್ಚಿನ ಅವಲಂಬನೆ ಸೀಮಿತ ಡೇಟಾ (Limited data) ಯೋಜನೆಗಳನ್ನು ಹೊಂದಿರುವವರಿಗೆ ದುಬಾರಿಯಾಗಬಹುದು. ಇದಕ್ಕಾಗಿಯೇ ಮೊಬೈಲ್ ಡೇಟಾವನ್ನು ಹೇಗೆ ಉಳಿಸುವುದು ಎನ್ನುವುದನ್ನು ತಿಳಿದುಕೊಂಡಿರಬೇಕು.

ಮೊಬೈಲ್ ಡೇಟಾವನ್ನು ಕಡಿಮೆ ಬಳಕೆ ಮಾಡುವುದು ಹೇಗೆ ಎಂಬುದನ್ನು ಕಲಿಯುವುದು ಬಹಳ ಮುಖ್ಯ. ಇದಕ್ಕಾಗಿ ಮೊಬೈಲ್ ಡೇಟಾ ಬಳಕೆಯ ಅಭ್ಯಾಸದಲ್ಲಿ ಕೆಲವು ಸಣ್ಣಪುಟ್ಟ ಬದಲಾವಣೆಗಳನ್ನು ಮಾಡಿಕೊಂಡರೆ ಅನಗತ್ಯವಾಗಿ ಡೇಟಾ ನಷ್ಟವಾಗುವುದನ್ನು ತಡೆಯಬಹುದು.

ಇದನ್ನು ಓದಿ: Kishan Bagaria: ಒಂದೇ ಒಂದು ಆ್ಯಪ್​ ಅಭಿವೃದ್ಧಿ ಮಾಡಿ ರಾತ್ರೋರಾತ್ರಿ ಕೋಟ್ಯಾಧೀಶ್ವರನಾದ ಅಸ್ಸಾಂ ಯುವಕ!


1. ಬಳಕೆಯ ಮೇಲ್ವಿಚಾರಣೆ ಮಾಡಿ

ಸಾಮಾನ್ಯವಾಗಿ ಡೇಟಾ ಬಳಕೆಯನ್ನು ಕಡಿಮೆ ಮಾಡುವ ಮೊದಲ ಹಂತವೆಂದರೆ ಬಳಕೆಯನ್ನು ಟ್ರ್ಯಾಕ್ ಮಾಡುವುದು. ಹೆಚ್ಚಿನ ಮೊಬೈಲ್ ಸಾಧನಗಳು ಡೇಟಾ ಬಳಕೆಯ ಮಾನಿಟರ್ ಮಾಡುತ್ತದೆ. ಅದು ನಿಮ್ಮ ಡೇಟಾ ಬಳಕೆಯ ಮೇಲೆ ಕಣ್ಣಿಡಲು ಅನುವು ಮಾಡಿಕೊಡುತ್ತದೆ. ನಿರ್ದಿಷ್ಟ ಮಿತಿಯನ್ನು ತಲುಪಿದಾಗ ಎಚ್ಚರಿಕೆಗಳನ್ನು ನೀಡುತ್ತದೆ.


2. ವೈ-ಫೈ ಬಳಸಿ

ಮೊಬೈಲ್ ಡೇಟಾ ಬಳಕೆಯನ್ನು ಕಡಿಮೆ ಮಾಡಲು ವೈ-ಫೈ ಉತ್ತಮ ಮಾರ್ಗವಾಗಿದೆ. ದೊಡ್ಡ ಫೈಲ್‌ಗಳನ್ನು ಡೌನ್‌ಲೋಡ್ ಮಾಡಲು ಅಥವಾ ವೀಡಿಯೊಗಳನ್ನು ಸ್ಟ್ರೀಮ್ ಮಾಡಲು ಮನೆ, ಕಚೇರಿ, ಕಾಫಿ ಶಾಪ್‌ಗಳಲ್ಲಿ ಇರುವ ವೈ ಫೈಗಳನ್ನು ಬಳಸಿ. ಇದು ಮೊಬೈಲ್ ಡೇಟಾವನ್ನು ಹೆಚ್ಚಾಗಿ ಬಳಸುವುದನ್ನು ತಪ್ಪಿಸಲು ಸಹಾಯ ಮಾಡುತ್ತದೆ.

3. ಅಪ್ಲಿಕೇಶನ್‌ ನಿಯಂತ್ರಿಸಿ

ಮೊಬೈಲ್ ಡೇಟಾವನ್ನು ಉಳಿಸಲು ಸಹಾಯ ಮಾಡಲು ಕೆಲವು ಅಪ್ಲಿಕೇಶನ್‌ಗಳನ್ನು ವಿನ್ಯಾಸಗೊಳಿಸಲಾಗಿದೆ. ಕೆಲವೊಂದು ಅಪ್ಲಿಕೇಶನ್‌ಗಳು ಡೇಟಾವನ್ನು ಕುಗ್ಗಿಸಿದರೆ, ಇನ್ನು ಕೆಲವು ಅಪ್ಲಿಕೇಶನ್ ಗಳು ಬಳಸುವ ಡೇಟಾದ ಪ್ರಮಾಣವನ್ನು ಕಡಿಮೆ ಮಾಡುತ್ತದೆ. ಇದರಲ್ಲಿ ಕ್ರೋಮ್ ಡೇಟಾ ಸೇವರ್, ಒಪೇರಾ ಮ್ಯಾಕ್ಸ್ ಮತ್ತು ಒನಾವೊ ಎಕ್ಸ್‌ಟೆಂಡ್ ಕೂಡ ಸೇರಿವೆ.


4. ಅಪ್ಡೇಟ್ ನಿಷ್ಕ್ರಿಯಗೊಳಿಸಿ

ಹೆಚ್ಚಿನ ಮೊಬೈಲ್ ಸಾಧನಗಳಲ್ಲಿ ಇರುವ ಅಪ್ಲಿಕೇಶನ್‌ಗಳು ನಿರಂತರ ಅಪ್ಡೇಟ್ ಆಗುತ್ತಿರುತ್ತದೆ. ಇದನ್ನು ಸ್ವಯಂಚಾಲಿತವಾಗಿ ಮಾಡುವುದನ್ನು ನಿಷ್ಕ್ರಿಯಗೊಳಿಸಿದರೆ ಬಹಳಷ್ಟು ಡೇಟಾವನ್ನು ಉಳಿಸಬಹುದು. ವೈಫೈ ಸಂಪರ್ಕವಿದ್ದಾಗ ಮಾತ್ರ ಅಪ್ಲಿಕೇಶನ್‌ ಗಳನ್ನು ಅಪ್ಡೇಟ್ ಮಾಡಿಕೊಳ್ಳಿ.


5. ಸ್ವಯಂ-ಪ್ಲೇ ನಿಷ್ಕ್ರಿಯಗೊಳಿಸಿ

ಹೆಚ್ಚಿನ ಸಾಮಾಜಿಕ ಮಾಧ್ಯಮ ಅಪ್ಲಿಕೇಶನ್‌ಗಳು ಸ್ವಯಂ-ಪ್ಲೇ (self play) ವಿಡಿಯೋ ವೈಶಿಷ್ಟ್ಯವನ್ನು ಹೊಂದಿರುತ್ತದೆ. ಅದು ಹೆಚ್ಚಿನ ಡೇಟಾವನ್ನು ತಿನ್ನುತ್ತದೆ. ಇದನ್ನು ತಡೆಯಲು ಸಾಮಾಜಿಕ ಮಾಧ್ಯಮ ಅಪ್ಲಿಕೇಶನ್‌ಗಳಲ್ಲಿ ಸ್ವಯಂ-ಪ್ಲೇ ವಿಡಿಯೋ ವೈಶಿಷ್ಟ್ಯವನ್ನು ನಿಷ್ಕ್ರಿಯಗೊಳಿಸಿ.

6. ಆಫ್‌ಲೈನ್ ಆಯ್ಕೆ ಮಾಡಿ

ಆಫ್‌ಲೈನ್‌ನಲ್ಲಿ ವಿಡಿಯೊ ನೋಡುವುದು ಮತ್ತು ಡಾಟಾ ಸಂಗ್ರಹ ಇರುವಾಗ ಡೌನ್‌ಲೋಡ್ ಮಾಡುವುದು ಡೇಟಾ ಬಳಕೆಯನ್ನು ಕಡಿಮೆ ಮಾಡುವ ಅತ್ಯುತ್ತಮ ಮಾರ್ಗವಾಗಿದೆ. ವೈ-ಫೈಗೆ ಸಂಪರ್ಕಗೊಂಡಿರುವಾಗ ನಿಮ್ಮ ಮೆಚ್ಚಿನ ಹಾಡು, ಚಲನಚಿತ್ರ ಮತ್ತು ಟಿವಿ ಕಾರ್ಯಕ್ರಮಗಳನ್ನು ಡೌನ್‌ಲೋಡ್ ಮಾಡಬಹುದು ಮತ್ತು ಮೊಬೈಲ್ ಡೇಟಾವನ್ನು ಬಳಸದೆಯೇ ಅವುಗಳನ್ನು ಅನಂತರ ವೀಕ್ಷಿಸಬಹುದು.

7. Lite ಆವೃತ್ತಿಗಳನ್ನು ಬಳಸಿ

ಅಪ್ಲಿಕೇಶನ್‌ಗಳ ಲೈಟ್ ಆವೃತ್ತಿಗಳು ಕಡಿಮೆ ಡೇಟಾವನ್ನು ಬಳಸುತ್ತವೆ. ಅವುಗಳು ಕಡಿಮೆ ಡೇಟಾವನ್ನು ಬಳಸುವಂತೆ ವಿನ್ಯಾಸಗೊಳಿಸಲಾಗಿದೆ. ಉದಾಹರಣೆಗೆ Facebook Lite, Messenger Lite ಮತ್ತು YouTube Go ಮೊದಲಾದವುಗಳು ಮೊಬೈಲ್ ಡೇಟಾವನ್ನು ಕಡಿಮೆ ಬಳಸುತ್ತದೆ.

8. ಹಿನ್ನೆಲೆ ಡೇಟಾ ಬಳಕೆ ನಿರ್ಬಂಧಿಸಿ

ಕೆಲವು ಅಪ್ಲಿಕೇಶನ್‌ಗಳು ಬಳಸದಿದ್ದರೂ ಹಿನ್ನೆಲೆಯಲ್ಲಿ ಡೇಟಾವನ್ನು ಬಳಸುತ್ತವೆ. ಇದನ್ನು ತಡೆಗಟ್ಟಲು ನಿರಂತರ ಸಂಪರ್ಕದ ಅಗತ್ಯವಿಲ್ಲದ ಅಪ್ಲಿಕೇಶನ್‌ಗಳಿಗೆ ಹಿನ್ನೆಲೆ ಡೇಟಾ ಬಳಕೆಯನ್ನು ನಿರ್ಬಂಧಿಸಿ. ಇದು ಡೇಟಾವನ್ನು ಉಳಿಸಲು ಮತ್ತು ಮೊಬೈಲ್ ಬ್ಯಾಟರಿ ಅವಧಿಯನ್ನು ವಿಸ್ತರಿಸಲು ಸಹಾಯ ಮಾಡುತ್ತದೆ.

Exit mobile version