Site icon Vistara News

WhatsApp: ವಾಟ್ಸಾಪ್‌ ಖಾತೆಗೆ ನಿಮ್ಮ ಇ ಮೇಲ್ ಅಡ್ರೆಸ್ ಲಿಂಕ್ ಮಾಡಬಹುದು! ಆದರೆ…?

WhatsApp new feature lets you search users by their username Says Report

ನವದೆಹಲಿ: ಜನಪ್ರಿಯ ಮೆಸೇಜಿಂಗ್ ಆ್ಯಪ್ ವಾಟ್ಸಾಪ್ (WhatsApp) ತನ್ನ ಬಳಕೆದಾರರಿಗೆ ಮತ್ತೊಂದು ಫೀಚರ್ (New Feature) ಅಪ್‌ಡೇಟ್ ಮಾಡುತ್ತಿದೆ. ಐಒಎಸ್‌ ಸಾಧನಗಳಲ್ಲಿ (iOS Devices) ಬಳಕೆದಾರರು ತಮ್ಮ ಇ ಮೇಲ್ ವಿಳಾಸವನ್ನು (e-mail) ವಾಟ್ಸಾಪ್‌ ಖಾತೆಗೆ ಲಿಂಕ್ ಮಾಡಲು ಅನುಮತಿಸುವ ಅವಕಾಶವನ್ನು ಕಲ್ಪಿಸಲಾಗುತ್ತಿದೆ. ಮೆಸೇಜಿಂಗ್ ಅಪ್ಲಿಕೇಶನ್ ಪ್ರಸ್ತುತ ಬಳಕೆದಾರರು ತಮ್ಮ ನೋಂದಾಯಿತ ಫೋನ್ ಸಂಖ್ಯೆಯನ್ನು ಬಳಸಿಕೊಂಡು, ತಮ್ಮ ಖಾತೆಗೆ ಲಾಗ್ ಇನ್ ಮಾಡಲು ಅನುಮತಿಸುತ್ತದೆ. ಇಮೇಲ್ ವಿಳಾಸವನ್ನು ಸೇರಿಸುವುದರಿಂದ ವಾಟ್ಸಾಪ್‌ಗೆ ಪ್ರವೇಶದ ಹೆಚ್ಚುವರಿ ಮಾರ್ಗವನ್ನು ಸೃಷ್ಟಿಸಿದಂತಾಗಲಿದೆ. ವಿಶೇಷ ಎಂದರೆ, ಇಮೇಲ್ ವಿಳಾಸಗಳು ಕಾಂಟಾಕ್ಟ್ಸ್‌ನಲ್ಲಿ ಗೋಚರಿಸುವುದಿಲ್ಲ. ಲಾಗ್‌ಇನ್ ಮಾಡಲು ಎಸ್ಸೆಮ್ಮೆಸ್ ಪಡೆದುಕೊಳ್ಳು ಸಾಧ್ಯವಾಗದೇ ಇದ್ದಾಗ ಈ ಫೀಚರ್ ಬಳಕೆದಾರರಿಗೆ ಹೆಚ್ಚು ಉಪಯುಕ್ತ ಕೂಡ ಆಗಲಿದೆ. ಆದರೆ, ಈ ಫೀಚರ್ ಸದ್ಯಕ್ಕೆ ಐಒಎಸ್ ಬಳಕೆದಾರರಿಗೆ ಮಾತ್ರವೇ ದೊರೆಯಲಿದ್ದು, ಆಂಡ್ರಾಯ್ಡ್ ಬಳಕೆದಾರರಿಗೆ (Android Users) ಯಾವಾಗ ದೊರೆಯಲಿದೆ ಎಂಬ ಬಗ್ಗೆ ಯಾವುದೇ ಮಾಹಿತಿ ಇಲ್ಲ.

WABetaInfo ಪ್ರಕಾರ, ಐಒಎಸ್‌ 2.23.24.70 ಅಪ್‌ಡೇಟ್‌ನಲ್ಲಿ ಈ ಹೊಸ ಫೀಚರ್‌ ಕಂಡು ಬಂದಿದೆ. ಈ ಅಪ್‌ಡೇಟ್ ಬಳಕೆದಾರರಿಗೆ ವಾಟ್ಸಾಪ್‌ ಖಾತೆಗೆ ತಮ್ಮ ಇಮೇಲ್ ವಿಳಾಸವನ್ನು ಸೇರಿಸಲು ಬಗ್ಗೆ ಕೇಳುತ್ತಿದೆ. ಅಪ್ಲಿಕೇಶನ್‌ನಲ್ಲಿರುವ ಸಂದೇಶವು “ನಿಮ್ಮ ಖಾತೆಯನ್ನು ಪ್ರವೇಶಿಸಲು ಇಮೇಲ್ ಸಹಾಯ ಮಾಡುತ್ತದೆ. ಇದು ಇತರರಿಗೆ ಗೋಚರಿಸುವುದಿಲ್ಲ” ಎಂದು ಹೇಳುತ್ತದೆ. ಒಮ್ಮೆ ನೀವು ನಿಮ್ಮ ಇಮೇಲ್ ವಿಳಾಸವನ್ನು ನಮೂದಿಸಿದರೆ, ದೃಢೀಕರಣಕ್ಕಾಗಿ ಕಳುಹಿಸಲಾದ ಪರಿಶೀಲನಾ ಕೋಡ್ ಅನ್ನು ನೀವು ನಮೂದಿಸಬೇಕಾಗುತ್ತದೆ.

ನಿಮ್ಮ ವಾಟ್ಸಾಪ್ ಖಾತೆಗೆ ಇ ಮೇಲ್ ವಿಳಾಸ ಸೇರಿಸಲು ನಿಮ್ಮ ವಾಟ್ಸಾಪ್‌ ಅಪ್‌ಡೇಟ್‌ ಆಗಿರಬೇಕು. ಒಂದೊಮ್ಮೆ ಆಗಿಲ್ಲ ಎಂದಾದರೆ, ನಿಮ್ಮ ಐಫೋನ್‌ನಲ್ಲಿರುವ ಆ್ಯಪ್‌ ಸ್ಟೋರ್‌ ಮೂಲಕ ವಾಟ್ಸಾಪ್ ಅಪ್‌ಡೇಟ್ ಮಾಡಿಕೊಳ್ಳಬೇಕು. ಇಷ್ಟಾದ ಮೇಲೆ, ವಾಟ್ಸಾಪ್‌ ಸೆಟ್ಟಿಂಗ್ಸ್‌ಗೆ ಹೋಗಿ ಅಲ್ಲಿ ಅಕೌಂಟ್ ಮೇಲೆ ಟ್ಯಾಪ್ ಮಾಡಿ ಮತ್ತು ಇಮೇಲ್ ವಿಳಾಸದ ಜಾಗದಲ್ಲಿ ನಿಮ್ಮ ಇ ಮೇಲ್ ವಿಳಾಸವನ್ನು ನಮೂದಿಸಿ.

ನಿಮ್ಮ ಖಾತೆಗೆ ಇಮೇಲ್ ವಿಳಾಸವನ್ನು ಲಿಂಕ್ ಮಾಡಿದ ನಂತರ, ನೀವು ನೆಟ್‌ವರ್ಕ್ ಸಮಸ್ಯೆಗಳು ಅಥವಾ ಇತರ ತಾಂತ್ರಿಕ ತೊಂದರೆಗಳಿಂದ ಎಸ್ಸೆಮ್ಮೆಸ್‌ ಕೋಡ್‌ಗಳನ್ನು ಸ್ವೀಕರಿಸಲು ಸಾಧ್ಯವಾಗದಿದ್ದರೆ ನಿಮ್ಮ ಇಮೇಲ್ ವಿಳಾಸದ ಮೂಲಕ ಪರಿಶೀಲನೆ ಕೋಡ್‌ಗಳನ್ನು ಸ್ವೀಕರಿಸಲು ನಿಮಗೆ ಸಾಧ್ಯವಾಗುತ್ತದೆ. ಆದಾಗ್ಯೂ, ವಾಟ್ಸಾಪ್ ನಿಮ್ಮ ಫೋನ್ ಸಂಖ್ಯೆಯನ್ನು ಅಪ್ಲಿಕೇಶನ್‌ನಲ್ಲಿ ನಿಮ್ಮ ಪ್ರಾಥಮಿಕ ಗುರುತಿಸುವಿಕೆಯಾಗಿ ಬಳಸುವುದನ್ನು ಮುಂದುವರಿಸುತ್ತದೆ ಮತ್ತು ಇಮೇಲ್ ವಿಳಾಸವು ಸೇವೆಗೆ ದೃಢೀಕರಣ ಕೋಡ್‌ಗಳನ್ನು ಕಳುಹಿಸಲು ಖಾಸಗಿ ಮಾರ್ಗವಾಗಿ ಉಳಿಯುತ್ತದೆ ಎಂದು ಹೇಳಲಾಗುತ್ತಿದೆ.

ಸದ್ಯಕ್ಕೆ ಐಒಎಸ್‌ ಬಳಕೆದಾರರಿಗ ಮಾತ್ರವೇ ಲಭ್ಯವಾಗಲಿರುವ ಈ ಫೀಚರ್, ಸ್ಥಿರ ಚಾನೆಲ್‌ನಲ್ಲಿ ಆಂಡ್ರಾಯ್ಡ್ ಬಳಕೆದಾರರಿಗೆ ಯಾವಾಗ ದೊರೆಯಲಿದೆ ಎಂಬುದರ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಆದರೆ, ಆಂಡ್ರಾಯ್ಡ್‌ ಬೀಟಾ ಪರೀಕ್ಷಕರಿಗೆ ಸದ್ಯಕ್ಕೆ ಇದು ದೊರೆಯುತ್ತಿದೆ ಎಂಬುದು ಖಚತಿವಾಗಿದೆ. ಜಾಹೀರಾತಿಗಾಗಿ ಇಮೇಲ್ ಲಿಂಕ್ ಮಾಡಲು ಅವಕಾಶ ಕಲ್ಪಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಆಂಡ್ರಾಯ್ಡ್‌ನಲ್ಲಿನ ಬಳಕೆದಾರರಿಗೆ ಇಮೇಲ್ ವಿಳಾಸವನ್ನು ಲಿಂಕ್ ಮಾಡುವ ವೈಶಿಷ್ಟ್ಯವನ್ನು ಮೆಟಾ-ಮಾಲೀಕತ್ವದ ಸಂದೇಶ ಸೇವೆಯು ಹೊರತರಲಿದೆ ಎಂದು ಬಳಕೆದಾರರು ನಿರೀಕ್ಷಿಸಬಹುದು.

ಈ ಸುದ್ದಿಯನ್ನೂ ಓದಿ: WhatsApp: ವಾಟ್ಸಾಪ್ ಚಾಟ್‌ ಲಾಕ್‌ ಮಾಡಲು ಸೀಕ್ರೆಟ್ ಕೋಡ್! ಇದು ಹೊಸ ಫೀಚರ್

Exit mobile version