ನವದೆಹಲಿ: ಹಲವಾರು ಸಿಮ್ ಕಾರ್ಡ್‌ಗಳು ನಿಮ್ಮ (SIM Cards) ಹೆಸರಲ್ಲಿದೆಯೆ? ಹಾಗಿದ್ದರೆ ಎಚ್ಚರಿಕೆ (alert) ಸೂಚನೆ ಒಂದಿದೆ ಗಮನಿಸಿ. ಕಾನೂನು ಪ್ರಕಾರ ನಿಗದಿಪಡಿಸಿದ ಸಿಮ್‌ಗಿಂತ ಹೆಚ್ಚಿನ ಸಂಖ್ಯೆಯ ಸಿಮ್ ನಿಮ್ಮ ಬಳಿ ಇದ್ದರೆ ಭಾರಿ ದಂಡ (fine) ಜೊತೆಗೆ ಜೈಲು ಶಿಕ್ಷೆಗೂ ಗುರಿಯಾಗಬೇಕಾಬಹುದು. ನಿಮ್ಮ ಹೆಸರಲ್ಲಿ ಬೇರೆ ಯಾರೋ ಸಿಮ್ ಕಾರ್ಡ್‌ಗಳನ್ನು ಬಳಸುತ್ತಿದ್ದರೆ ಕೂಡಲೇ ಪತ್ತೆ ಹಚ್ಚಿ ಆದಷ್ಟು ಬೇಗ ನಿಷ್ಕ್ರಿಯಗೊಳಿಸಿ.
ಈಗಿನ ಡಿಜಿಟಲ್ ಯುಗದಲ್ಲಿ, ಗೌಪ್ಯತೆ ಮತ್ತು ಸುರಕ್ಷತೆಯನ್ನು ಕಾಪಾಡಿಕೊಳ್ಳುವುದು ಬಹುಮುಖ್ಯ. ಅದಕ್ಕಾಗಿ ವಿಶೇಷವಾಗಿ ಅನಧಿಕೃತ ಸಿಮ್ ಕಾರ್ಡ್ ವಿತರಣೆಯ ಬಗ್ಗೆ ಕಾಳಜಿಯೊಂದಿಗೆ ಮೊಬೈಲ್ ಸಂಪರ್ಕಗಳನ್ನು ಎಚ್ಚರಿಕೆಯಿಂದ ನಿರ್ವಹಿಸುವುದು ಕೂಡ ಮುಖ್ಯವಾಗಿದೆ. ಒಬ್ಬರ ಹೆಸರಿನಲ್ಲಿ ಹಲವಾರು ಸಿಮ್ ಕಾರ್ಡ್‌ಗಳನ್ನು ಹೊಂದಿರುವುದು ಗಂಭೀರ ಸಮಸ್ಯೆಗಳಿಗೆ ಕಾರಣವಾಗಬಹುದು. ಈ ನಿಟ್ಟಿನಲ್ಲಿ ಟೆಲಿಕಾಂ ಕಾನೂನುಗಳು ನಿಗದಿಪಡಿಸಿದ ಮಿತಿಯನ್ನು ಮೀರಿದರೆ ಭಾರೀ ದಂಡವನ್ನು ಎದುರಿಸಬೇಕಾಗಬಹುದು.
ಏನು ಶಿಕ್ಷೆ?
2023ರ ದೂರಸಂಪರ್ಕ ಕಾಯ್ದೆಯ ಪ್ರಕಾರ, ಒಬ್ಬ ವ್ಯಕ್ತಿಯು ಎಷ್ಟು ಸಿಮ್ ಕಾರ್ಡ್‌ಗಳನ್ನು ಹೊಂದಬಹುದು ಎಂಬುದರ ಕುರಿತು ಕಟ್ಟುನಿಟ್ಟಾದ ನಿಯಮಗಳಿವೆ. ಈ ನಿಯಮಗಳನ್ನು ಉಲ್ಲಂಘಿಸುವುದು ಜೈಲು ಶಿಕ್ಷೆಗೆ ಕಾರಣವಾಗಬಹುದು. ಮೊದಲ ಅಪರಾಧಕ್ಕಾಗಿ 50,000 ರೂ. ವರೆಗೆ ದಂಡ ವಿಧಿಸಬಹುದು ಮತ್ತು ಅ ನಂತರದ ಅಪರಾಧಗಳಿಗೆ 2 ಲಕ್ಷ ರೂ. ದಂಡ ತೆರಬೇಕಾಗುತ್ತದೆ.
ಗರಿಷ್ಠ ಎಷ್ಟು ಸಿಮ್ ಹೊಂದಿರಬಹುದು?
ಅನುಮತಿಸಲಾದ ಗರಿಷ್ಠ ಸಂಖ್ಯೆಯ ಸಿಮ್ ಕಾರ್ಡ್‌ಗಳು ಪ್ರದೇಶವಾರು ಬದಲಾಗುತ್ತವೆ. ರಾಷ್ಟ್ರೀಯವಾಗಿ ಪ್ರತಿ ವ್ಯಕ್ತಿಗೆ ಒಂಬತ್ತು ಸಿಮ್ ಕಾರ್ಡ್‌ಗಳ ಮಿತಿ ಇದೆ. ಆದರೆ ಜಮ್ಮು ಮತ್ತು ಕಾಶ್ಮೀರ, ಅಸ್ಸಾಂ ಮತ್ತು ಕೆಲವು ಈಶಾನ್ಯ ಪ್ರದೇಶಗಳಲ್ಲಿ ಇದು ಆರಕ್ಕೆ ಸೀಮಿತವಾಗಿದೆ.
ಸಿಮ್ ಕಾರ್ಡ್ ಮಾಲೀಕತ್ವದ ಪ್ರಸ್ತುತ ನಿಯಮಗಳ ಬಗ್ಗೆ ಮಾಹಿತಿ ನೀಡುವುದು ಮುಖ್ಯವಾಗಿದೆ ಮತ್ತು ಆನ್‌ಲೈನ್‌ನಲ್ಲಿ ನಿಮ್ಮ ಹೆಸರಿನಲ್ಲಿ ಎಷ್ಟು ಸಿಮ್ ಕಾರ್ಡ್‌ಗಳನ್ನು ನೋಂದಾಯಿಸಲಾಗಿದೆ ಎಂಬುದನ್ನು ನಿಯಮಿತವಾಗಿ ಪರಿಶೀಲಿಸುವುದು ಅಷ್ಟೇ ಅಗತ್ಯವಾಗಿದೆ.
ಹೇಗೆ ಪರಿಶೀಲಿಸುವುದು?
ಆಧಾರ್ ಕಾರ್ಡ್‌ಗೆ ನೀಡಲಾದ ಸಿಮ್ ಕಾರ್ಡ್‌ಗಳ ಸಂಖ್ಯೆಯನ್ನು ಆನ್‌ಲೈನ್ ಮೂಲಕ ನಾವೇ ಪರೀಕ್ಷಿಸಿಕೊಳ್ಳಬಹುದು. ಇದಕ್ಕಾಗಿ TAFCOP ವೆಬ್‌ಸೈಟ್‌ಗೆ ಭೇಟಿ ನೀಡಿ. ಬಳಿಕ ಅಲ್ಲಿ ಇರುವ ಬಾಕ್ಸ್ ನಲ್ಲಿ ನಿಮ್ಮ ಮೊಬೈಲ್ ಸಂಖ್ಯೆಯನ್ನು ನಮೂದಿಸಿ.
ಬಳಿಕ ಒದಗಿಸಲಾಗುವ ಕ್ಯಾಪ್ಚಾ ಕೋಡ್ ಅನ್ನು ನಮೂದಿಸಿ. ಅನಂತರ ಒಟಿಪಿ ಬಟನ್ ಕ್ಲಿಕ್ ಮಾಡಿ.
ಒಟಿಪಿ ನೀವು ನಮೂದಿಸಿರುವ ಮೊಬೈಲ್ ಸಂಖ್ಯೆಗೆ ಬರುತ್ತದೆ. ಅದನ್ನು ಬಳಿಕ ಅಲ್ಲಿ ನಮೂದಿಸಿ ಮತ್ತು ಲಾಗಿನ್ ಬಟನ್ ಮೇಲೆ ಕ್ಲಿಕ್ ಮಾಡಿ.
ಇದನ್ನೂ ಓದಿ: BSNL New Plan: 395 ದಿನಗಳ ವ್ಯಾಲಿಡಿಟಿಯ ಬಿಎಸ್‌ಎನ್‌ಎಲ್ ಹೊಸ ಪ್ಲ್ಯಾನ್; ಜಿಯೊ, ಏರ್‌ಟೆಲ್‌ಗೆ ಸೆಡ್ಡು
ನಿಮ್ಮ ಹೆಸರಿನಲ್ಲಿ ನೋಂದಾಯಿಸಲಾಗಿರುವ ಮೊಬೈಲ್ ಸಂಖ್ಯೆಗಳ ಪಟ್ಟಿಯನ್ನು ಕಾಣಬಹುದು. ಎಲ್ಲಾ ಸಕ್ರಿಯ ಮೊಬೈಲ್ ಸಂಖ್ಯೆಗಳು ನಿಮಗೆ ಅಥವಾ ನಿಮ್ಮ ಸಂಬಂಧಿಕರಿಗೆ ಸೇರಿವೆ ಎಂಬುದನ್ನು ಪರಿಶೀಲಿಸಿ ಮತ್ತು ಖಚಿತಪಡಿಸಿಕೊಳ್ಳಿ.
ಯಾವುದೇ ಗುರುತಿಸದ ಸಂಖ್ಯೆಗಳನ್ನು ಕಂಡುಕೊಂಡರೆ, ವೆಬ್‌ಸೈಟ್ ಮೂರು ಆಯ್ಕೆಗಳನ್ನು ನೀಡುತ್ತದೆ. ನನ್ನ ಸಂಖ್ಯೆ ಅಲ್ಲ, ಅಗತ್ಯವಿಲ್ಲ ಮತ್ತು ಬೇಕಾಗಿದೆ. ಇದರಲ್ಲಿ ನಿಮ್ಮ ಅಗತ್ಯ ಯಾವುದು ಎಂಬುದನ್ನು ತಿಳಿಸಿ. ನನ್ನ ಸಂಖ್ಯೆ ಅಲ್ಲ ಅಥವಾ ಅಗತ್ಯವಿಲ್ಲ ಎಂಬುದನ್ನು ಕ್ಲಿಕ್ ಮಾಡಿದರೆ ನಿಮ್ಮ ಹೆಸರಿನಲ್ಲಿರುವ ಅನಗತ್ಯ ಸಿಮ್‌ಗಳು ನಿಷ್ಕ್ರಿಯಗೊಳ್ಳುತ್ತವೆ.