Site icon Vistara News

Tips For Mobile Battery Life: ಸ್ಮಾರ್ಟ್‌ ಫೋನಿನ ಬ್ಯಾಟರಿ ಪವರ್‌ ಹೆಚ್ಚಿಸಲು ಹೀಗೆ ಮಾಡಿ…

Tips For Mobile Battery Life

ಹೊಸ ಆಂಡ್ರಾಯ್ಡ್‌ ಸ್ಮಾರ್ಟ್‌ ಫೋನ್‌ (Tips For Mobile Battery Life) ತೆಗೆದುಕೊಂಡಿದ್ದೀರಿ. ತೆಗೆದುಕೊಳ್ಳುವಾಗಿನ ವಿವರಣೆಯನ್ನು ನೋಡಿದರೆ ಅದರ ಬ್ಯಾಟರಿಯ ಆಯಸ್ಸು 12 ತಾಸು ಎಂದಿರುತ್ತದೆ. ಆದರೆ ನೀವು ಉಪಯೋಗಿಸುವಾಗ ಮಾತ್ರ ಎಂಟೊಂಬತ್ತು ತಾಸಿಗೆಲ್ಲಾ ಬ್ಯಾಟರಿ ಕೆಂಪಾಗಿರುತ್ತದೆ. ಎಂದಾದರೂ ಸ್ವಲ್ಪ ಹೆಚ್ಚೇ ಉಪಯೋಗಿಸಿದರೆ ಇನ್ನೂ ಒಂದು ತಾಸು ಮೊದಲೇ ಬ್ಯಾಟರಿ ʻಶಿವಾʼ ಎನ್ನುತ್ತದೆ. ಹಾಗಾದರೆ ಕಂಪನಿಯವರು ಸುಳ್ಳು ಹೇಳಿದರೆ? ಇದೇ ಮಾಡೆಲ್‌ ಮೊಬೈಲು ಉಪಯೋಗಿಸುವ ಉಳಿದ ಕೆಲವರಿಗೆಲ್ಲ ಬ್ಯಾಟರಿ ಇನ್ನೂ ಹೆಚ್ಚು ಬಾಳಿಕೆ ಬರುತ್ತಿದೆ… ಎಂದೆಲ್ಲಾ ಯೋಚನೆಗಳು ಮುತ್ತುತ್ತವೆ. ಆಂಡ್ರಾಯ್ಡ್‌ ಫೋನುಗಳಲ್ಲಿ ಬ್ಯಾಟರಿ ಉಳಿಸುವುದು ಹೇಗೆ ಎಂದು ಹುಡುಕಾಡುವವರು ನೀವಾಗಿದ್ದರೆ, ಇಲ್ಲಿದೆ ನಿಮ್ಮ ಉತ್ತರ. ಪ್ರಯೋಗಿಸಿ ನೋಡಿ.

ಪವರ್‌ ಸೇವರ್‌ ಮೋಡ್

ಹೆಚ್ಚಿನ ಬ್ಯಾಟರಿ ತಿನ್ನುವ ಬಹಳಷ್ಟು ವಿಷಯಗಳಿಗೆ ತಂತಾನೇ ಈ ಆಯ್ಕೆ ಕಡಿವಾಣ ಹಾಕುತ್ತದೆ. ಸೆಟ್ಟಿಂಗ್‌ನಲ್ಲಿ ಬ್ಯಾಟರಿ ಮತ್ತು ಡಿವೈಸ್‌ ಕೇರ್‌ ಆಯ್ಕೆ ಮಾಡಿ. ಅಲ್ಲಿನ ಬ್ಯಾಟರಿ ಆಯ್ಕೆಯಲ್ಲಿ ಪವರ್‌ ಸೇವ್‌ಗೆ ಚಾಲನೆ ನೀಡಿ. ಇದರಿಂದ ಲೊಕೇಶನ್‌ ಸೇವೆ, ನೆಟ್‌ವರ್ಕ್‌, ಸಿಂಕ್‌ ಮುಂತಾದ ಹಲವಾರು ಕೆಲಸಗಳನ್ನು ಒಂದೋ ನಿಲ್ಲಿಸುತ್ತದೆ ಅಥವಾ ಮಿತಗೊಳಿಸುತ್ತದೆ.

ಸ್ಕ್ರೀನ್‌ ಬೆಳಕನ್ನು ಕಡಿಮೆ ಮಾಡಿ

ಸ್ಮಾರ್ಟ್‌ ಫೋನಿನ ಪರದೆಗಳು ದೊಡ್ಡದು ಮಾತ್ರವಲ್ಲ, ಸಾಕಷ್ಟು ಬ್ಯಾಟರಿಯನ್ನೂ ನುಂಗುತ್ತವೆ. ಹಾಗಾಗಿ ಪರದೆಯ ಪ್ರಖರತೆಯನ್ನು ಕಡಿಮೆ ಮಾಡಿ. ಸೆಟ್ಟಿಂಗ್‌ನಲ್ಲಿ ಅದನ್ನು ಮಾಡಬಹುದು. ಜೊತೆಗೆ ಆಟೊ ಬ್ರೈಟ್‌ನೆಸ್‌ ಸಹ ತೆಗೆದುಹಾಕಿ. ಅದಿಲ್ಲದಿದ್ದರೆ ತನ್ನಷ್ಟಕ್ಕೇ ಬೆಳಕನ್ನು ಹೆಚ್ಚಿಸಿಕೊಳ್ಳುತ್ತದೆ.

ಲಾಕ್‌ ಸ್ಕ್ರೀನ್‌

ಮೊಬೈಲಿನ ಲಾಕ್‌ ಸ್ಕ್ರೀನ್‌ನಲ್ಲಿ ದಿನಾಂಕ, ವಾರ ಮತ್ತಿತರ ವಿವರಗಳನ್ನು ತೋರಿಸುವ ವ್ಯವಸ್ಥೆ ಇದ್ದರೆ, ಈ ಪರದೆಯ ಬೆಳಕು ಅತಿ ಕಡಿಮೆ ಸಮಯಕ್ಕೆ ಆರುವಂತೆ ಇರಿಸಿಕೊಳ್ಳಿ. ಈ ಫೀಚರ್‌ ಅನಗತ್ಯ ಎನಿಸಿದರೆ ತೆಗೆದುಹಾಕಿ. ಇದಕ್ಕಾಗಿ ಡಿಸ್‌ಪ್ಲೇ ಆಯ್ಕೆಯಲ್ಲಿ ಲಾಕ್‌ ಸ್ಕ್ರೀನ್‌ನಲ್ಲಿ ಆಲ್‌ವೇಸ್‌ ಶೋ ಟೈಮ್‌ ಎಂಡ್‌ ಇನ್‌ಫೋ ಆಯ್ಕೆಯಲ್ಲಿ ಅಗತ್ಯ ಬದಲಾವಣೆಗಳನ್ನು ಮಾಡಿಕೊಳ್ಳಿ. ಜೊತೆಗೆ ಹೆಚ್ಚು ಹೊತ್ತು ಪರದೆ ಆನ್‌ ಇದ್ದಷ್ಟೂ ಬ್ಯಾಟರಿ ಅಷ್ಟೇ ಬೇಗ ಖರ್ಚಾಗುತ್ತದೆ. ಹಾಗಾಗಿ ಡಿಸ್‌ಪ್ಲೇದಲ್ಲಿ ಸ್ಕ್ರೀನ್‌ ಟೈಮ್‌ಔಟ್‌ ಆಯ್ಕೆಯಲ್ಲಿ ಕೆಲವೇ ಸೆಕೆಂಡುಗಳಿಗೆ ಹೊಂದಿಸಿಕೊಳ್ಳಿ

ಲೊಕೇಶನ್‌, ವಯರ್‌ಲೆಸ್‌

ಫೋನ್‌ ಉಪಯೋಗವಾದೆ ಒಂದೆಡೆ ಇದೆ ಎಂದರೆ ಅದು ಸುಮ್ಮನೆ ಕುಳಿತಿದೆ ಎಂದು ಅರ್ಥವಲ್ಲ. ಆ ಉಪಕರಣದಿಂದ ಬೇಕಾದ, ಬೇಡದ ಸಂಕೇತಗಳೆಲ್ಲ ರವಾನೆಯಾಗುತ್ತಲೇ ಇರುತ್ತವೆ. ಅರೆ! ನಾವು ಉಪಯೋಗಿಸದಿದ್ದರೂ ಬ್ಯಾಟರಿ ಕಡಿಮೆಯಾಯಿತಲ್ಲ ಎಂದರೆ, ಅದು ಹೀಗೆ. ಇದಲ್ಲದೆ, ವೈಫೈ, ಬ್ಲೂಟೂತ್‌ ಮತ್ತು ಮೊಬೈಲ್‌ ಡೇಟಾಗಳನ್ನು ಬೇಕಾದಾಗಷ್ಟೇ ಉಪಯೋಗಿಸಿಕೊಳ್ಳಿ. ಇನ್ನು ಲೊಕೇಶನ್‌ ಸೇವೆಯನ್ನು ಜಾರಿ ಇಟ್ಟಷ್ಟೂ ಬ್ಯಾಟರಿ ಹರೋಹರ. ಹಾಗಾಗಿ ಸೆಟ್ಟಿಂಗ್‌ನಲ್ಲಿ ಲೊಕೇಶನ್‌ಗೆ ಹೋಗಿ ಸ್ಟಾಪ್‌ ಗೂಗಲ್‌ ಫ್ರಂ ಟ್ರಾಕಿಂಗ್‌ ಯು ಆಯ್ಕೆ ಮಾಡಿ

ಅಪ್‌ಡೇಟ್‌, ರಿಫ್ರೆಶ್‌

ಇವೂ ಸಹ ಅನಗತ್ಯ ತಲೆಹರಟೆ ಎನಿಸಿದರೆ ಆಫ್‌ ಮಾಡಿಡಿ. ಕಾರಣ, ನಾವು ಉಪಯೋಗಿಸದೆ ಇರುವಾಗಲೂ ಆಪ್‌ಗಳು ಹಿನ್ನೆಲೆಯಲ್ಲಿ ಕೆಲಸ ಮಾಡುತ್ತಲೇ ಇರುತ್ತವೆ. ಇದರಿಂದ ಮೊಬೈಲಿನ ಡೇಟಾ ಮತ್ತು ಬ್ಯಾಟರಿ ಎರಡೂ ಗುಳುಂ ಆಗುತ್ತಿರುತ್ತದೆ. ಹಾಗಾಗಿ ಉಪಯೋಗವಾಗದ ಬ್ಯಾಟರಿಗಳನ್ನು ನಿದ್ದೆ ಮಾಡಿಸಿ. ಬ್ಯಾಟರಿ ಯೂಸೇಜ್‌ ಲಿಮಿಟ್‌ ಆಯ್ಕೆಯಲ್ಲಿ ಹೀಗೆ ಬೇಡದ ಆಫ್‌ಗಳನ್ನು ನಿದ್ದೆ ಮಾಡಿಸುವಂತೆ ಆಯ್ಕೆ ಮಾಡಿ.

ಕಿವಿಗಳನ್ನು ಮುಚ್ಚಿ!

ನಿಮ್ಮದಲ್ಲ, ಫೋನಿನದ್ದು. ನಿಮ್ಮ ಫೋನ್‌ನಲ್ಲಿ ಯಾವುದಾದರೂ ಧ್ವನಿ ಸೇವೆಯನ್ನು ನೀವು ಬಳಸುತ್ತಿದ್ದರೆ, ನೀವು ಎಚ್ಚರಿಸುವ ಶಬ್ದಕ್ಕಾಗಿ (ವೇಕ್‌ ವರ್ಡ್‌) ಅದು ಸದಾ ಕಾಯುತ್ತಿರುತ್ತದೆ. ಅಂದರೆ ಫೋನಿನ ಕಿವಿ ನಿಮ್ಮ ಮಾತಿನತ್ತ ತೆರೆದೇ ಇರುತ್ತದೆ. ಹಾಗಾಗಿ ಅದನ್ನು ನಿರ್ಬಂಧಿಸಿ. ಆಗ ಇನ್ನಷ್ಟು ಬ್ಯಾಟರಿ ಉಳಿಸಬಹುದು

ಇನ್ನಷ್ಟು ಆಯ್ಕೆಗಳು

ಈಗಿನ ಸ್ಮಾರ್ಟ್‌ ಫೋನ್‌ಗಳು ಸಣ್ಣ ಸೂಪರ್‌ ಕಂಪ್ಯೂಟರ್‌ಗಳಂತೆ ವರ್ತಿಸುತ್ತವೆ. ಆದರೆ ಕೇವಲ ಬ್ರೌಸಿಂಗ್‌ಗಾಗಿ ನೀವದನ್ನು ಬಳಸುತ್ತಿದ್ದರೆ ಅದರ ಪ್ರೊಸೆಸರ್‌ ವೇಗವನ್ನು ಕಡಿಮೆ ಮಾಡಿಕೊಳ್ಳಬಹುದು. ಇದರಿಂದ ಇನ್ನಷ್ಟು ಬ್ಯಾಟರಿ ಉಳಿಯುತ್ತದೆ. ಬ್ಯಾಟರಿ ಮತ್ತು ಡಿವೈಸ್‌ ಕೇರ್‌ ವಿಭಾಗದಲ್ಲಿ, ಮೋರ್‌ ಬ್ಯಾಟರ್‌ ಸೆಟ್ಟಿಂಗ್‌ಗೆ ಹೋಗಿ. ಅದರಲ್ಲಿ ಎನ್‌ಹ್ಯಾನ್ಸಡ್‌ ಪ್ರೊಸೆಸಿಂಗ್‌ ಆಯ್ಕೆಯನ್ನು ತೆಗೆದುಹಾಕಿ. ಕೀ ಒತ್ತುವಾಗ ಶಬ್ದ ಬರುತ್ತಿದ್ದರೆ, ಅದನ್ನು ತೆಗೆದು ಹಾಕಿ. ವೈಬ್ರೇಟರ್‌ ಸಹ ಬ್ಯಾಟರಿ ತಿನ್ನುತ್ತದೆ. ಅನಗತ್ಯ ಆಪ್‌ಗಳಿದ್ದರೆ ಅಳಿಸಿ. ಕಪ್ಪು ಪರದೆ ತೋರುವಂಥ ಡಾರ್ಕ್‌ ಥೀಮ್‌ ಇದ್ದರೆ, ಅದು ಬಳಸುವ ಬ್ಯಾಟರಿ ಕಡಿಮೆ. ಹಾಗಾಗಿ ಅದನ್ನೇ ಆಯ್ಕೆ ಮಾಡಿ.

ಇದನ್ನೂ ಓದಿ: Excessive Use Of Electronic Gadgets: ಗೆಜೆಟ್‌ ಅತಿಬಳಕೆಯಿಂದ ಉಂಟಾಗುವ ʼಟೆಕ್‌ನೆಕ್‌ʼ ಲಕ್ಷಣಗಳಿವು

Exit mobile version