ಹೊಸದಿಲ್ಲಿ: ಸುರಕ್ಷತೆಯ ಮಾನದಂಡ ಪಾಲಿಸದೇ ಬ್ಯಾಟರಿ ಚಾಲಿತ ವಾಹನಗಳನ್ನು ತಯಾರಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡಿ ಅಗ್ನಿ ಅವಘಡಗಳಿಗೆ ಕಾರಣವಾದ ಕಂಪನಿಗಳಿಗೆ ಬಿಸಿ ಮುಟ್ಟಿಸಲು ಸರಕಾರ ಮುಂದಾಗಿದೆ. ವಾಹನಗಳ ನಿರ್ಮಾಣದ ವೇಳೆ ಯಾಕೆ ಸೂಕ್ತ ನಿಯಮಗಳನ್ನು ಪಾಲಿಸಿಲ್ಲ ಹಾಗೂ ನಿಮಗ್ಯಾಕೆ ದಂಡ ವಿಧಿಸಬಾರದು ಎಂದು ಈ ಎಲ್ಲ ಕಂಪನಿಗಳಿಗೆ ಸರಕಾರ ನೋಟಿಸ್ ನೀಡಿದೆ.
ಓಲಾ ಇವಿ, ಪ್ಯೂರ್ ಇವಿ ಹಾಗೂ ಒಕಿನೊವಾ ನೋಟಿಸ್ ಪಡೆದ ಕಂಪನಿಗಳು. ಈ ಕಂಪನಿಗಳು ಮಾರಾಟ ಮಾಡಿರುವ ಹಲವು ಸ್ಕೂಟರ್‌ಗಳಿಗೆ ಬೆಂಕಿ ತಗುಲಿ ಅನಾಹುತಗಳು ಸಂಭವಿಸಿದ್ದವು. ಈ ಹಿನ್ನೆಲೆಯಲ್ಲಿ ಸರಕಾರ ತನಿಖಾ ಸಮಿತಿಯೊಂದನ್ನು ರಚಿಸಿ ವಿಚಾರಣೆ ನಡೆಸಿತ್ತು. ಈ ವೇಳೆ ಕಂಪನಿಗಳು ಸರಕಾರ ನಿಗದಿ ಮಾಡಿರುವ ನಿಯಮಗಳನ್ನು ಪಾಲಿಸಿಲ್ಲ ಎಂಬುದು ಗೊತ್ತಾಗಿದೆ. ಹೀಗಾಗಿ ಅನಾಹುತಗಳಿಗೆ ಕಾರಣವಾದ ಕಂಪನಿಗಳಿಗೆ ನೋಟಿಸ್ ಜಾರಿ ಮಾಡಲಾಗಿದೆ.
ನೋಟಿಸ್‌ಗೆ ಉತ್ತರ ನೀಡುವಂತೆ ಈ ಕಂಪನಿಗಳಿಗೆ ೩೦ ದಿನಗಳ ಸಮಯ ನೀಡಲಾಗಿದೆ. ಅದನ್ನು ಇನ್ನಷ್ಟು ದಿನಗಳು ವಿಸ್ತರಿಸುವ ಸಾಧ್ಯತೆಗಳೂ ಇವೆ ಎನ್ನಲಾಗಿದೆ.
ಕನಿಷ್ಠ ಸುರಕ್ಷತೆಯ ನಿರ್ಲಕ್ಷ್ಯ
ನೋಟಿಸ್ ಪಡೆದಿರುವ ಕಂಪನಿಗಳು ಸ್ಕೂಟರ್‌ಗಳನ್ನು ತಯಾರಿಸುವ ವೇಳೆ ಕನಿಷ್ಠ ಸುರಕ್ಷತಾ ನಿಯಮಗಳನ್ನೂ ಪಾಲಿಸಿಲ್ಲ ಎಂದು ಹೇಳಲಾಗುತ್ತಿದೆ. ಅಂತೆಯೇ ಹೆಚ್ಚು ತಾಪಮಾನ ಇರುವ ಪ್ರದೇಶಗಳಲ್ಲಿ ಬ್ಯಾಟರಿಯ ಶೆಲ್‌ಗಳು ಬಿಸಿಯಾಗದಂತೆ ತಡೆಯುವ ವ್ಯವಸ್ಥೆಯನ್ನೂ ಮಾಡಿರಲಿಲ್ಲ. ಹೀಗಾಗಿ ಉಷ್ಣತೆ ಹೆಚ್ಚಿರುವ ಪ್ರದೇಶಗಳಲ್ಲಿ ಬ್ಯಾಟರಿಗಳು ಸ್ಫೋಟಗೊಂಡಿದ್ದವು.
ಮಾರುಕಟ್ಟೆಯಲ್ಲಿ ಸ್ಪರ್ಧೆಗೆ ಬಿದ್ದಿರುವ ಈ ಇವಿ ಸ್ಕೂಟರ್ ಕಂಪನಿಗಳು ಮಾರುಕಟ್ಟೆ ಕಡಿಮೆ ಬೆಲೆ ನಿಗದಿ ಮಾಡುವ ಉದ್ದೇಶದಿಂದ ಕಳಪೆ ದರ್ಜೆಯ ವಸ್ತುಗಳನ್ನೂ ಬಳಸಿದ್ದವು ಎಂದು ತನಿಖಾ ವರದಿ ಹೇಳಿದೆ.
ತಕ್ಷಣದಲ್ಲೇ ಉತ್ತರ ನೀಡುವಂತೆ ಕಂಪನಿಗಳಿಗೆ ಹೇಳಲಾಗಿದೆ. ಯಾವ ಕಾರಣಕ್ಕೆ ಅನಾಹುತ ನಡೆದಿದೆ ಎಂಬುದೇ ನಮ್ಮ ಪ್ರಶ್ನೆಯಾಗಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ಇದನ್ನೂ ಓದಿ: ಇವಿ ವಾಹನ ಮಾಲೀಕರಿಗೆ ಶುಭ ಸುದ್ದಿ, ರಾಜ್ಯದಲ್ಲಿ ಸಾವಿರ ವಿದ್ಯುತ್ ಚಾರ್ಜಿಂಗ್ ಸೆಂಟರ್