ನವದೆಹಲಿ: ಮೊಬೈಲ್ ಫೋನ್ ಬಳಕೆದಾರರಿಗೆ ಸೂಕ್ತ ಭದ್ರತಾ ಗುಣಮಟ್ಟವನ್ನು ಒದಗಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಹೊಸ ವ್ಯವಸ್ಥೆಯನ್ನು ರೂಪಿಸುವತ್ತ ಚಿಂತಿಸುತ್ತಿದೆ. ಮೊಬೈಲ್ ಫೋನ್‌ಗಳಲ್ಲಿರುವ ಪ್ರಿ ಇನ್‌ಸ್ಟಾಲ್ಡ್ ಆ್ಯಪ್‌ಗಳಿಂದ (pre-installed apps) ಡೇಟಾ ಕದಿಯುವ ಹಾಗೂ ಗೂಢಚಾರ ನಡೆಸುವ ಸಾಧ್ಯತೆಗಳಿ ಇರುವುದರಿಂದ ಕೇಂದ್ರ ಸರ್ಕಾರವ ಸುರಕ್ಷತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಮುಂದಾಗಿದೆ. ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ(Meity) ಈ ಬಗ್ಗೆ ಟ್ವೀಟ್ ಮಾಡಿ, ಮೊಬೈಲ್ ಫೋನುಗಳ ಸುರಕ್ಷತೆಯನ್ನು ಹೆಚ್ಚಿಸುವುದು ಮಹತ್ವದ್ದಾಗಿದೆ ಮತ್ತು ಸಾಕಷ್ಟು ಭದ್ರತಾ ಮಾನದಂಡಗಳನ್ನು ಹೆಚ್ಚಿಸುವ ಸಂಬಂಧ ಮೊಬೈಲ್ ಕಂಪನಿಗಳ ಜತೆಗೆ ಸರ್ಕಾರವು ಮಾತುಕತೆ ನಡೆಸುತ್ತಿದೆ ಎಂದು ಹೇಳಿದೆ.
ಭಾರತವು ಎಲೆಕ್ಟ್ರಾನಿಕ್ಸ್‌ನ ಜಾಗತಿಕ ಮೌಲ್ಯ ಸರಪಳಿಯಲ್ಲಿ ವಿಶ್ವಾಸಾರ್ಹ ರಾಷ್ಟ್ರವಾಗಿ ಹೊರಹೊಮ್ಮುತ್ತಿದೆ. ಮೊಬೈಲ್ ಫೋನ್‌ಗಳು ಮತ್ತು ಅಪ್ಲಿಕೇಶನ್‌ಗಳ ಸುರಕ್ಷತೆಯು ಮುಖ್ಯವಾಗಿದೆ. ಸಾಕಷ್ಟು ಭದ್ರತಾ ಮಾನದಂಡಗಳನ್ನು ಅಭಿವೃದ್ಧಿಪಡಿಸಲು ಸರ್ಕಾರವು ಮಧ್ಯಸ್ಥಗಾರರೊಂದಿಗೆ ಸಮಾಲೋಚನೆ ನಡೆಸುತ್ತಿದೆ ಎಂದು ಎಂದು ಮೆಯ್ಟಿ(Meity) ಟ್ವೀಟ್ ಮಾಡಿದೆ.
ಇದನ್ನೂ ಓದಿ: Mobile Phone Export | ಪ್ರಸಕ್ತ ಸಾಲಿನಲ್ಲಿ 1 ಲಕ್ಷ ಕೋಟಿ ರೂ. ಮೊಬೈಲ್ ಫೋನ್ ರಫ್ತು ಗುರಿ: ರಾಜೀವ್ ಚಂದ್ರಶೇಖರ್
ಪ್ರಿ ಇನ್‌ಸ್ಟಾಲ್ಡ್ ಆ್ಯಪ್‌ಗಳ ಮೂಲಕ ಡೇಟಾ ಕದಿಯುವುದು ಮತ್ತು ಗೂಢಚಾರ ನಡೆಸುತ್ತಿರುವ ಬಗ್ಗೆ ಸಾಕಷ್ಟು ಬಳಕೆದಾರರು ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಭದ್ರತಾ ಮಾನದಂಡಗಳನ್ನು ಹೆಚ್ಚಿಸುವ ನಿಟ್ಟಿನಲ್ಲಿ ಮುಂದಾಗಿದೆ. ಡೇಟಾ ದುರುಪಯೋಗವನ್ನು ಪರಿಶೀಲಿಸುವ ಸರ್ಕಾರದ ಉದ್ದೇಶಕ್ಕೆ ನಮ್ಮ ಬೆಂಬಲವಿದೆ ಎಂದು ಮೊಬೈಲ್ ಫೋನ್ ತಯಾರಕರು ಹೇಳಿಕೊಂಡಿದ್ದಾರೆ. ಆದರೆ, ಈ ಪ್ರಕ್ರಿಯೆಯು ಹೊಸ ಹ್ಯಾಂಡ್‌ಸೆಟ್‌ಗಳ ಬಿಡುಗಡೆಯಲ್ಲಿ ವಿಳಂಬಕ್ಕೆ ಕಾರಣವಾಗಬಹುದು. ಪ್ರಿ ಇನ್‌ಸ್ಟಾಲ್ಡ್‌ಗಳಿಂದ ಬರುವ ಆದಾಯದ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು ಎಂದ ಆತಂಕವನ್ನು ವ್ಯಕ್ತಪಡಿಸಿದ್ದಾರೆ.