ನವದೆಹಲಿ: ವಾಟ್ಸಾಪ್‌ಗೆ ಬಂದ ಲಿಂಕ್ (WhatsApp Links Scam) ಮೇಲೆ ಕ್ಲಿಕ್ ಮಾಡಿದ ವ್ಯಕ್ತಿಯೊಬ್ಬ 22 ಲಕ್ಷ ರೂಪಾಯಿ ಕಳೆದುಕೊಂಡ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಗೋಮತಿನಗರ ಸೈಬರ್ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಎಫ್ಐಆರ್ ದಾಖಲಾಗಿದೆ. ವಾಟ್ಸಾಪ್‌ನಲ್ಲಿ ಸಿಂಪಲ್ ಕೆಲಸ ಮಾಡುವುದರ ಮೂಲಕ ಹಣ ಗಳಿಸುವ ಆಮಿಷವನ್ನು ವಾಟ್ಸಾಪ್ ಮೂಲಕವೇ ಒಡ್ಡಲಾಗಿತ್ತು. ಲಿಂಕ್‌ಗಳನ್ನು ಮತ್ತು ವೆಬ್‌ಸೈಟ್‌ಗಳನ್ನು ಲೈಕ್ ಮಾಡುವ ಉದ್ಯೋಗದ ಆಮಿಷ ನೀಡಲಾಗಿತ್ತು. ಸಂತ್ರಸ್ತ ವ್ಯಕ್ತಿ ಈ ಆಫರ್ ನಿಜವೆಂದು ಭಾವಿಸಿದ್ದ. ಆರಂಭದಲ್ಲಿ ಸಂಬಳವಾಗಿ 48,450 ರೂ. ನೀಡಿದ್ದರು. ಬಳಿಕ ವಂಚನೆಗಾರರು, ಇನ್ನೂ ಹೆಚ್ಚಿನ ಹಣ ಗಳಿಸಲು 4.84 ಲಕ್ಷ ರೂ. ಹೂಡಿಕೆ ಮಾಡಿಸಿಕೊಂಡಿದ್ದರು. ಹೀಗೆ ಆತನಿಂದ 22 ಲಕ್ಷದವರೆಗೂ ಹಣ ಕಿತ್ತಿದ್ದಾರೆ. ಬಳಿಕ, ಸಂತ್ರಸ್ತ ವ್ಯಕ್ತಿಯ ಕರೆಗಳಿಗೆ ಉತ್ತರಿಸುವುದನ್ನು ನಿಲ್ಲಿಸಿದ್ದಾರೆ. ಆಗ ಆತನಿಗೆ ತಾನು ಮೋಸ ಹೋಗಿರುವುದು ಗೊತ್ತಾಗಿದೆ. ಗುರುಗಾಂವದಲ್ಲೂ ವ್ಯಕ್ತಿಯೊಬ್ಬ ಇಂಥದ್ದೇ ಜಾಲಕ್ಕೆ ಒಳಗಾಗಿ 45 ಲಕ್ಷ ರೂ. ಕಳೆದುಕೊಂಡಿದ್ದಾನೆ. ಈ ರೀತಿಯ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇವೆ(Cyber Fraud).
ಈ ವಾಟ್ಸಾಪ್ ಲಿಂಕ್ ವಂಚನೆಯಿಂದ ತಪ್ಪಿಸಿಕೊಳ್ಳಬೇಕಾದ ಅಗತ್ಯವಿದೆ. ವಾಟ್ಸಾಪ್‌ಗೆ ಬರುವ ಯಾವುದೇ ಲಿಂಕ್‌ಗಳನ್ನು ಕ್ಲಿಕ್ ಮಾಡುವ ಮುಂಚೆ ಅದರ ಅಸಲಿಯತ್ತು ತಿಳಿದುಕೊಳ್ಳಬೇಕು. ಇಲ್ಲದಿದ್ದರೆ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಖಾಲಿಯಾಗುವುದು ತಪ್ಪಲ್ಲ. ಸೈಬರ್ ವಂಚನೆ ಮತ್ತು ವಾಟ್ಸಾಪ್ ವಂಚನೆಯಿಂದ ತಪ್ಪಿಸಿಕೊಳ್ಳಲು ಕೆಲವು ಟಿಪ್ಸ್‌ಗಳನ್ನು ಇಲ್ಲಿ ನೀಡಿದ್ದೇವೆ. ಓದಿ.
ವಾಟ್ಸಾಪ್ ಸ್ಕ್ಯಾಮ್‌ನಿಂದ ತಪ್ಪಿಸಿಕೊಳ್ಳುವುದು ಹೇಗೆ?
ಅಪರಿಚಿತ ಲಿಂಕ್‌ಗಳನ್ನು ಕ್ಲಿಕ್ ಮಾಡಲು ಹೋಗಬೇಡಿ. ವಾಟ್ಸಾಪ್ ಸ್ಕ್ಯಾಮ್ ಅಥವಾ ಯಾವುದೇ ರೀತಿಯ ಸೈಬರ್ ವಂಚನೆಯಿಂದ ತಪ್ಪಿಸಿಕೊಳ್ಳಬೇಕಿದ್ದರೆ, ಬಳಕೆದಾರರು ಎಚ್ಚರವಹಿಸಬೇಕಾದ ಮಹತ್ವದ ಸಂಗತಿ ಇದು. ಯಾವುದೇ ಕಾರಣಕ್ಕೂ ಅನುಮಾನಾಸ್ಪದ ಹಾಗೂ ಅಪರಿಚಿತ ಲಿಂಕ್‌ಗಳನ್ನು ಕ್ಲಿಕ್ ಮಾಡಲು ಹೋಗಬಾರದು. ಯಾವುದೇ ಲಿಂಕ್ ಕ್ಲಿಕ್ ಮಾಡುವ ಮುಂಚೆ ಅದರ ಸಾಚಾತನ ತಿಳಿಯುವುದು ಅತ್ಯಗತ್ಯ. ಚೂರೇ ಚೂರು ಅನುಮಾನ ಬಂದರೂ ಕ್ಲಿಕ್ ಮಾಡಲು ಹೋಗಬಾರದು.
ಸೈಬರ್ ವಂಚನೆ ತಡೆಯಲು ಎರಡು ಹಂತದ ದೃಢೀಕರಣ ಅಗತ್ಯವಾಗಿ ಬೇಕು. ವಾಟ್ಸಾಪ್ ಲಿಂಕ್ ಸ್ಕ್ಯಾಮ್‌ನಿಂದ ತಪ್ಪಿಸಿಕೊಳ್ಳಬೇಕಿದ್ದರೆ, ವಾಟ್ಸಾಪ್‌ನ ಟು ಸ್ಟೆಪ್ಸ್ ವೆರಿಫೀಕೆಷನ್(ಎರಡು ಹಂತದ ದೃಢೀಕರಣ) ಫೀಚರ್ ಆನ್ ಮಾಡಿ. ಇದರಿಂದಾಗಿ, ನಿಮ್ಮ ಖಾತೆಯ ದೃಢೀಕರಣಕ್ಕೆ 6 ಅಂಕಿಗಳ ಪಿನ್ ನೀಡಬೇಕಾಗುತ್ತದೆ. ಇದರಿಂದ ನಿಮ್ಮನ್ನು ಫಿಶಿಂಗ್ ಅಟಾಕ್ಸ್ ಮತ್ತು ಸೈಬರ್ ವಂಚನೆಯಿಂದ ರಕ್ಷಿಸಿಕೊಳ್ಳಬಹುದಾಗಿದೆ.
ಬ್ಲಾಕ್ ಮಾಡುವುದು ಮತ್ತು ರಿಪೋರ್ಟ್ ಮಾಡುವುದು ಕೂಡ ಉತ್ತಮ ಸುರಕ್ಷತೆಯ ನಡೆಯಾಗಿದೆ. ವಾಟ್ಸಾಪ್‌ಗೆ ಬರುವ ಯಾವುದೇ ಅಪರಿಚಿತ ಮತ್ತು ಅನುಮಾನಾಸ್ಪದ ಕರೆಗಳ ಕುರಿತು ರಿಪೋರ್ಟ್ ಮಾಡಬೇಕು. ಅಲ್ಲದೇ ಬ್ಲಾಕ್ ಮಾಡುವುದು ಸುರಕ್ಷತೆಯ ದೃಷ್ಟಿಯಿಂದ ಒಳ್ಳೆಯ ನಡೆಯಾಗುತ್ತದೆ. ಒಂದು ವೇಳೆ, ಯಾವುದೇ ಕಂಪನಿಯು ಹೆಸರಿನಲ್ಲಿ ಉದ್ಯೋಗ ಆಫರ್ ಮಾಡುವ ಸಂದೇಶಗಳಿದ್ದರೆ, ಮೂಲ ಕಂಪನಿಗಳ ಜತೆ ಮಾತುಕತೆ ನಡೆಸಿ ಮಾಹಿತಿ ತಿಳಿದುಕೊಳ್ಳುವುದು ಉತ್ತಮ. ಇಲ್ಲದಿದ್ದರೆ ಅಪಾಯ ತಪ್ಪಿದ್ದಲ್ಲ.
ಇದನ್ನೂ ಓದಿ: WhatsApp: ಅಂತಾರಾಷ್ಟ್ರೀಯ ಸಂಖ್ಯೆಗಳಿಂದ ಭಾರತದ ಅರ್ಧದಷ್ಟು ವಾಟ್ಸಾಪ್ ಬಳಕೆದಾರರಿಗೆ ಸ್ಪ್ಯಾಮ್ ಕಾಲ್!
ಪ್ರೈವಸಿ ಸೆಟ್ಟಿಂಗ್ ಕೂಡ ಈ ನಿಟ್ಟಿನಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತವೆ. ವಾಟ್ಸಾಪ್ ಗ್ರೂಪ್ ಪ್ರೈವಸಿ ಸೆಟ್ಟಿಂಗ್ಸ್ ಖಚಿತಪಡಿಸಿಕೊಳ್ಳಬೇಕು. ನಿಮ್ಮ ಪ್ರೊಫೈಲ್ ಫೋಟೋ ಮತ್ತು ಆನ್‌ಲೈನ್ ಸ್ಟೇಟಸ್ ಯಾರು ನೋಡಬಹುದು ಎಂಬುದರ ಕುರಿತು ನೀವು ಪ್ರೈವಸಿ ಸೆಟ್ಟಿಂಗ್ ಮಾಡಬಹುದು. ನಿಮ್ಮ ವೈಯಕ್ತಿಕ ಮಾಹಿತಿಯನ್ನು ನೀವು ನಂಬಬಹುದಾದ ಜನರೊಂದಿಗೆ ಮಾತ್ರ ಹಂಚಿಕೊಳ್ಳುವುದು ಉತ್ತಮ.
ವಾಟ್ಸಾಪ್ ಲಿಂಕ್ಡ್ ಡಿವೈಸ್ಡ್‌ಗಳನ್ನು ಚೆಕ್ ಮಾಡಿಕೊಳ್ಳಿ. ಯಾವುದಾದರೂ ಅನುಮಾನಾಸ್ಪದ ಡಿವೈಸ್ ಲಾಗಿನ್ ಆಗಿದ್ದರೂ ಕೂಡಲೇ ಲಾಗ್ ಔಟ್ ಮಾಡಿ. ಇದರಿಂದ ಸಂಭಾವ್ಯ ಅಪಾಯವನ್ನು ತಪ್ಪಿಸಬಹುದಾಗಿದೆ.
ತಂತ್ರಜ್ಞಾನದ ಇನ್ನಷ್ಟು ಕುತೂಹಲಕರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.