ಚೆನ್ನೈ: ಗೂಗಲ್‌ನ ಆ್ಯಂಡ್ರಾಯ್ಡ್ ಹಾಗೂ ಆ್ಯಪಲ್‌ನ ಐಒಎಸ್ (iOS)ಗೆ ಪರ್ಯಾಯವಾಗಿ ದೇಶೀಯವಾಗಿಯೇ ಮೊಬೈಲ್ ಆಪರೇಟಿಂಗ್ ಸಿಸ್ಟಂ ಅಭಿವೃದ್ಧಿಪಡಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸುತ್ತಿರುವ ಬೆನ್ನಲ್ಲೇ ಮದ್ರಾಸ್ ಐಐಟಿಯು (IIT Madras) ದೇಶೀಯ ಮೊಬೈಲ್ ಆಪರೇಟಿಂಗ್ ಸಿಸ್ಟಂ (Indigenous OS) ಅಭಿವೃದ್ಧಿಪಡಿಸಿದೆ. ಇದಕ್ಕೆ ಭರವಸೆ ಎಂಬ ಅರ್ಥ ಬರುವ ಭರೋಸ್ (BharOS) ಎಂದು ಹೆಸರಿಡಲಾಗಿದ್ದು, ಮೊಬೈಲ್ ತಂತ್ರಜ್ಞಾನ ಕ್ಷೇತ್ರದಲ್ಲೂ ಭಾರತ ಆತ್ಮನಿರ್ಭರತೆ ಸಾಧಿಸಲು ನೆರವಾಗಲಿದೆ ಎಂದೇ ಹೇಳಲಾಗುತ್ತಿದೆ.
“ಮೊಬೈಲ್ ಬಳಕೆದಾರರಿಗೆ ಮುಕ್ತ ಸ್ವಾತಂತ್ರ್ಯ, ನಿಯಂತ್ರಣ ಹಾಗೂ ಖಾಸಗಿತನವನ್ನು ರಕ್ಷಿಸುವ ಭರೋಸ್ ಮೊಬೈಲ್ ಆಪರೇಟಿಂಗ್ ಸಿಸ್ಟಂ ಅಭಿವೃದ್ಧಿಪಡಿಸಲಾಗಿದೆ. ಬಳಕೆದಾರರು ತಮ್ಮ ಆಯ್ಕೆಯ ಆ್ಯಪ್‌ಗಳನ್ನು ಮಾತ್ರ ಇನ್‌ಸ್ಟಾಲ್ ಮಾಡಿಕೊಳ್ಳುವ, ಸುರಕ್ಷಿತ ಆ್ಯಪ್‌ಗಳನ್ನಷ್ಟೇ ಇನ್‌ಸ್ಟಾಲ್ ಆಗುವ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲಾಗಿದೆ” ಎಂದು ಮದ್ರಾಸ್ ಐಐಟಿ ನಿರ್ದೇಶಕ ಪ್ರೊ.ವಿ.ಕಾಮಕೋಟಿ ಮಾಹಿತಿ ನೀಡಿದರು.
“ದೇಶಾದ್ಯಂತ ಭರೋಸ್ ಆಪರೇಟಿಂಗ್ ಸಿಸ್ಟಂ ಅಳವಡಿಸಿಕೊಳ್ಳುವ ದಿಸೆಯಲ್ಲಿ ಸರ್ಕಾರ, ಖಾಸಗಿ ಕಂಪನಿಗಳು, ಟೆಲಿಕಾಂ ಸೇವೆ ಪೂರೈಕೆದಾರರ ಜತೆ ಮಾತುಕತೆ ನಡೆಸಲಾಗುತ್ತಿದೆ. ಇದರ ಕುರಿತು ಮಾತುಕತೆಗಳು ಕೂಡ ನಡೆಯುತ್ತಿವೆ” ಎಂದು ತಿಳಿಸಿದರು.
ದೇಶೀಯ ಆಪರೇಟಿಂಗ್ ಸಿಸ್ಟಂ ವೈಶಿಷ್ಟ್ಯವೇನು?
ಐಐಟಿ ಮದ್ರಾಸ್ ಪ್ರವರ್ತಕ ಟೆಕ್ನಾಲಜೀಸ್ ಫೌಂಡೇಷನ್ ಸ್ಥಾಪಿಸಿರುವ ಲಾಭರಹಿತ ಜಂಡ್‌ಕೆ ಆಪರೇಷನ್ಸ್ ಪ್ರೈವೇಟ್ ಲಿಮಿಟೆಡ್ (JandKops) ಸಂಸ್ಥೆಯು ಭರೋಸ್ ಮೊಬೈಲ್ ಆಪರೇಟಿಂಗ್ ಸಿಸ್ಟಂ ಅಭಿವೃದ್ಧಿಪಡಿಸಿದೆ. ಫೌಂಡೇಷನ್‌ಗೆ ಕೇಂದ್ರ ಸರ್ಕಾರದ ವ್ಯಾಪ್ತಿಯ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ (DST)ಯು ಅನುದಾನ ನೀಡಿದೆ. ಹೀಗೆ, ದೇಶೀಯವಾಗಿಯೇ ಅಭಿವೃದ್ಧಿಪಡಿಸಿದ ಆಪರೇಟಿಂಗ್ ಸಿಸ್ಟಂ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ.
ಭರೋಸ್ ಮೊಬೈಲ್ ಆಪರೇಟಿಂಗ್ ಸಿಸ್ಟಂ, ಬಳಕೆದಾರರು ಹಾಗೂ ಪರಿಸರಸ್ನೇಹಿಯಾಗಿದೆ. ಬಳಕೆದಾರರ ಖಾಸಗಿತನ ಹಾಗೂ ವೈಯಕ್ತಿಕ ಮಾಹಿತಿಗೆ ಸುರಕ್ಷತೆ ಒದಗಿಸುವ ತಂತ್ರಜ್ಞಾನವಿದೆ. ಅದರಲ್ಲೂ, ಮೊದಲೇ ಇನ್‌ಸ್ಟಾಲ್ ಆಗಿರುವ ಆ್ಯಪ್‌ಗಳು (No Default Apps-NDA) ಇದರಲ್ಲಿ ಇರುವುದಿಲ್ಲ. ನಮಗೆ ಬೇಕಾದ ಆ್ಯಪ್‌ಗಳನ್ನು ಮಾತ್ರ ಡೌನ್‌ಲೋಡ್ ಮಾಡುವ ಹಾಗೂ ಸುರಕ್ಷಿತವಾಗಿದ್ದರೆ ಮಾತ್ರ ಆ ಆ್ಯಪ್‌ಗಳು ಇನ್‌ಸ್ಟಾಲ್ ಆಗುವ ಸೌಲಭ್ಯವಿದೆ.
ಇದನ್ನೂ ಓದಿ | SOVA Virus | ಮೊಬೈಲ್ ಬ್ಯಾಂಕಿಂಗ್ ಬಳಸುವಿರಾ? ಸೋವಾ ವೈರಸ್ ಬಗ್ಗೆ ಇರಲಿ ಎಚ್ಚರ