ಸುಂದರ್ ಪಿಚೈ (ಗೂಗಲ್), ಸತ್ಯ ನಾಡೆಲ್ಲಾ (ಮೈಕ್ರೋಸಾಫ್ಟ್), ಶಂತನು ನಾರಾಯಣ್ (ಅಡೋಬ್), ರಾಜೀವ್ ಸೂರಿ (ನೋಕಿಯಾ), ಫ್ರಾನ್ಸಿಸ್ಕೋ ಡಿಸೋಜ (ಕಾಗ್ನೆಜೆಂಟ್) ಇವೆಲ್ಲಾ ಜಾಗತಿಕ ಐಟಿ ಉದ್ಯಮವನ್ನು (Information technology) ಆಳುತ್ತಿರುವ ಕೆಲವರು ಹೆಸರುಗಳು. ಇವೆಲ್ಲ ಒಂದೇ ಕಡೆ ಬಂದಿರುವುದು ಏಕೆಂದರೆ, ಇವರೆಲ್ಲ ಭಾರತೀಯ ಮೂಲದವರು. ಹೀಗೇ ಇಂಥ ಹತ್ತಾರು ಹೆಸರುಗಳನ್ನು ಉಲ್ಲೇಖಿಸಬಹುದು. ಒಟ್ಟಾರೆಯಾಗಿ ಹೇಳುವುದಾದರೆ ಅದರ್ಥ ಇಷ್ಟೇ- ಇಂದು ಜಗತ್ತಿನ ಒಟ್ಟಾರೆ ಐಟಿ ಶಕ್ತಿಯ ಹಿಂದೆ ಭಾರತದ ಗಣನೀಯ ಕೊಡುಗೆಯಿದೆ. ಭಾರತವಿಲ್ಲದಿದ್ದರೆ ಇವರೂ ಇರುತ್ತಿರಲಿಲ್ಲ. ಇದು ಜಗತ್ತಿಗೇ ಭಾರತದ ಕೊಡುಗೆ.
ಐಟಿ ಅಥವಾ ಮಾಹಿತಿ ತಂತ್ರಜ್ಞಾನ ಇಂದು ಆರ್ಥಿಕ ಬೆಳವಣಿಗೆ ಮತ್ತು ಪ್ರಗತಿಗೆ ನಿರ್ಣಾಯಕ ಅಂಶ. ಐಟಿ ಸೇವೆಯಲ್ಲಿ ಭಾರತ ಎತ್ತಿದ ಕೈ ಎಂಬುದು ಅನುಮಾನಕ್ಕೆ ಎಡೆಯಿಲ್ಲದಂತೆ ಸಾಬೀತಾಗಿದೆ. ಜಗತ್ತಿನ ಮತ್ತು ಭಾರತದ ಐಟಿ ಕ್ಷೇತ್ರಗಳು ಒಟ್ಟೊಟ್ಟಿಗೇ ಬೆಳೆದವು, ಜಗತ್ತಿಗೆ ಮಹತ್ವದ ಕೊಡುಗೆ ನೀಡಿದವು. ಕಳೆದ ಕೆಲವು ದಶಕಗಳಲ್ಲಿ ಭಾರತದಲ್ಲಿ ಐಟಿ ಕ್ಷೇತ್ರ ಇನ್ನಷ್ಟು ಕ್ಷಿಪ್ರ ಬೆಳವಣಿಗೆಗಳನ್ನು ಕಂಡಿದೆ. ಹೆಚ್ಚುತ್ತಿರುವ ಐಟಿ ವೃತ್ತಿಪರರು, ಅಭಿವೃದ್ಧಿ ಹೊಂದುತ್ತಿರುವ ಐಟಿ ಉದ್ಯಮಗಳೊಂದಿಗೆ ಭಾರತ ತಂತ್ರಜ್ಞಾನ ಮತ್ತು ಸಾಫ್ಟ್‌ವೇರ್ ಅಭಿವೃದ್ಧಿಗೆ ಜಾಗತಿಕ ಕೇಂದ್ರವಾಗಿ ಹೊರಹೊಮ್ಮಿದೆ.
ಭಾರತದಲ್ಲಿ ಐಟಿ ಉದ್ಯಮದ ಆರಂಭ
ಭಾರತದಲ್ಲಿ ಐಟಿ ಉದ್ಯಮ 1970ರ ದಶಕದಲ್ಲೇ ಶುರುವಾಯಿತು. 1950ರ ದಶಕದಲ್ಲಿ ಮೊದಲ ಆಧುನಿಕ ಕಂಪ್ಯೂಟರ್ ಅನ್ನು ಕೋಲ್ಕತ್ತಾದ ಭಾರತೀಯ ಅಂಕಿಅಂಶ ಸಂಸ್ಥೆಯಲ್ಲಿ ಪ್ರೊ.ಪಿ.ಸಿ. ಮಹಲನೋಬಿಸ್ ಸ್ಥಾಪಿಸಿದರು. 1960ರ ದಶಕದಲ್ಲಿ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಕಂಪ್ಯೂಟರ್ ಶಿಕ್ಷಣ ಕಾರ್ಯಕ್ರಮಗಳು ಪ್ರಾರಂಭವಾದವು. ಭಾರತ ಸರ್ಕಾರವು 1970ರಲ್ಲಿ ಎಲೆಕ್ಟ್ರಾನಿಕ್ಸ್ ವಿಭಾಗವನ್ನು (DoE) ಸ್ಥಾಪಿಸಿತು. ಮೊದಲ ಸ್ಥಳೀಯವಾಗಿ ನಿರ್ಮಿಸಲಾದ TDC-312 ಕಂಪ್ಯೂಟರ್ ಅನ್ನು ಎಲೆಕ್ಟ್ರಾನಿಕ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ 1974ರಲ್ಲಿ ಬಿಡುಗಡೆ ಮಾಡಿತು. ಮೊದಲ ಐಟಿ ಪಾರ್ಕ್- ಸಾಂತಾಕ್ರೂಜ್ ಎಲೆಕ್ಟ್ರಾನಿಕ್ ಎಕ್ಸ್‌ಪೋರ್ಟ್ ಪ್ರೊಸೆಸಿಂಗ್ ಝೋನ್- 1973ರಲ್ಲಿ ಎಲೆಕ್ಟ್ರಾನಿಕ್ಸ್ ಉತ್ಪನ್ನಗಳು ಮತ್ತು ಸಾಫ್ಟ್‌ವೇರ್ ರಫ್ತನ್ನು ಉತ್ತೇಜಿಸಲು ಮುಂಬೈನಲ್ಲಿ ಸ್ಥಾಪಿಸಲಾಯಿತು. ಮಿನಿಕಂಪ್ಯೂಟರ್ ನೀತಿಯನ್ನು 1978ರಲ್ಲಿ ಘೋಷಿಸಲಾಯಿತು. DCM, ORG ಮತ್ತು ಶಿವ ನಾಡಾರ್ ಅವರ HCL ಕಂಪನಿಗಳು 1979ರಲ್ಲಿ ಮಿನಿಕಂಪ್ಯೂಟರ್‌ಗಳನ್ನು ತಯಾರಿಸಲು ಪ್ರಾರಂಭಿಸಿದವು.
1980ರ ದಶಕವು ಭಾರತದ ಮೊದಲ ಐಟಿ ಉದ್ಯಮಶೀಲತೆಗೆ ಸಾಕ್ಷಿಯಾಯಿತು. ವಿಪ್ರೋ ಇನ್ಫರ್ಮೇಷನ್ ಟೆಕ್ನಾಲಜಿ ಲಿಮಿಟೆಡ್ (ಅಜೀಂ ಪ್ರೇಮ್‌ಜಿ), ಇನ್ಫೋಸಿಸ್ (ನಾರಾಯಣ ಮೂರ್ತಿ), ಎನ್‌ಐಐಟಿ (ರಾಜೇಂದ್ರ ಪವಾರ್), ಮಾಸ್ಟೆಕ್ (ಅಶಾಂಕ್ ದೇಸಾಯಿ) ಮತ್ತು ಇನ್ನೂ ಅನೇಕ ಸ್ಟಾರ್ಟ್-ಅಪ್‌ಗಳು ಈ ಸಮಯದಲ್ಲಿ ಸ್ಥಾಪಿಸಲ್ಪಟ್ಟವು. 1980ರ ದಶಕದಲ್ಲಿ ಹೊಸದಾಗಿ ಸ್ಥಾಪಿಸಲಾದ ಸೆಂಟರ್ ಫಾರ್ ಡೆವಲಪ್‌ಮೆಂಟ್ ಆಫ್ ಅಡ್ವಾನ್ಸ್ಡ್ ಕಂಪ್ಯೂಟಿಂಗ್, ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್‌ನಲ್ಲಿ ರಾಷ್ಟ್ರೀಯ ಸೂಪರ್ ಕಂಪ್ಯೂಟರ್ ಕೇಂದ್ರವನ್ನು ಸ್ಥಾಪಿಸಿತು. ಇಲ್ಲಿಯೇ ನಮ್ಮ ಮೊದಲ ಇಮೇಲ್ ಕಳುಹಿಸಿದೆವು!
ಇದನ್ನೂ ಓದಿ : Independence Day 2023 : ಆರೋಗ್ಯ – ಜೀವನೋಪಾಯ ನಡುವಿನ ಸಮತೋಲನವೇ ಸ್ವತಂತ್ರ ಬದುಕಿನ ಸೂತ್ರ
ನಂತರ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸತತವಾಗಿ ಐಟಿಯನ್ನು ಉತ್ತೇಜಿಸುವ ಕ್ರಮಗಳನ್ನು ಕೈಗೊಳ್ಳುತ್ತಲೇ ಬಂದವು. ಸರ್ಕಾರದ ಉದಾರ ನೀತಿಗಳಿಂದ ಉತ್ತೇಜಿತರಾದ IBMನಂತಹ MNCಗಳು ಭಾರತಕ್ಕೆ ಬಂದವು. 2000ನೇ ಇಸವಿಯ ಆಚೀಚಿನ ವರ್ಷಗಳು ಭಾರತದ ಪ್ರತಿಭೆಗಳಿಗೆ ಅಭೂತಪೂರ್ವ ಅವಕಾಶಗಳನ್ನು ತೆರೆದವು. ಕೇಂದ್ರದಲ್ಲಿ ರಾಜೀವ್ ಗಾಂಧಿ ಮುಂತಾದ ಪ್ರಧಾನಿಗಳು, ರಾಜ್ಯದಲ್ಲಿ ಎಸ್.ಎಂ ಕೃಷ್ಣ ಮುಂತಾದ ಮುಖ್ಯಮಂತ್ರಿಗಳು ಐಟಿಗೆ ಹೆಚ್ಚಿನ ಉತ್ತೇಜನ ನೀಡಿದರು.
ನಂತರ ನಾವು ಈ ಕ್ಷೇತ್ರದಲ್ಲಿ ಹಿಂತಿರುಗಿ ನೋಡಿಯೇ ಇಲ್ಲ. 2000ರ ಹೊತ್ತಿಗೆ, ಭಾರತೀಯ ಐಟಿ ಉದ್ಯಮವು 41,000 ಕೋಟಿ ರೂಪಾಯಿ ಆದಾಯಕ್ಕೆ ಬೆಳೆಯಿತು. ಇಂದು, ಐಟಿ ಉದ್ಯಮದ ಆದಾಯ ಅಂದಾಜು $ 14 ಲಕ್ಷ ಕೋಟಿ ರೂಪಾಯಿಗಳಷ್ಟಿದೆ. 35 ಲಕ್ಷ ಜನರಿಗೆ ಇದು ಉದ್ಯೋಗ ನೀಡಿದೆ. ಇದು ದೇಶದ ಜಿಡಿಪಿಯ ಸುಮಾರು 8% ಕೊಡುಗೆ ನೀಡಿದೆ. ಜಾಗತಿಕವಾಗಿ ಮೂರನೇ ಅತಿ ದೊಡ್ಡ ಸ್ಟಾರ್ಟ್‌ಅಪ್ ಕೇಂದ್ರವಾಗಿದೆ. ಮುಂದಿನ ತಂತ್ರಜ್ಞಾನ ಕ್ರಾಂತಿಗೆ ಭಾರತ ಕೂಡ ಸಜ್ಜಾಗಿದೆ.
ಐಟಿ ಭವಿಷ್ಯವೇನು?
ಭಾರತೀಯ ಐಟಿ ಸಿಬ್ಬಂದಿ ಉದ್ಯಮ ತ್ವರಿತ ಗತಿಯಲ್ಲಿ ಬೆಳೆಯುತ್ತಿದೆ. ಭಾರತೀಯ ತಂತ್ರಜ್ಞಾನ ಕ್ಷೇತ್ರವು 2023ರಲ್ಲಿ 8.4%ನಷ್ಟು ಬೆಳವಣಿಗೆಯನ್ನು ಹೊಂದಿದ್ದು $ 245 ಶತಕೋಟಿ (21 ಲಕ್ಷ ಕೋಟಿ ರೂ.) ಮಾರುಕಟ್ಟೆ ಗಾತ್ರವನ್ನು ತಲುಪಲಿದೆ ಎಂದು NASSCOM ಹೇಳಿಕೆ ನೀಡಿದೆ.
ಐಟಿ ಸಿಬ್ಬಂದಿ ಉದ್ಯಮವು ಭಾರತದಲ್ಲಿನ ಐಟಿ ವಲಯದ ನಿರ್ಣಾಯಕ ಭಾಗ. ನುರಿತ ವೃತ್ತಿಪರರಿಗೆ ತಂತ್ರಜ್ಞಾನ ಕ್ಷೇತ್ರದಲ್ಲಿ ಉದ್ಯೋಗಾವಕಾಶಗಳನ್ನು ಹುಡುಕಲು ಇದು ವೇದಿಕೆ ಒದಗಿಸುತ್ತದೆ. ಕೃತಕ ಬುದ್ಧಿಮತ್ತೆ, ಯಂತ್ರ ಕಲಿಕೆ ಮತ್ತು ಬ್ಲಾಕ್‌ಚೈನ್‌ನಂತಹ ಹೊಸ ತಂತ್ರಜ್ಞಾನಗಳು ಹೆಚ್ಚುತ್ತಿವೆ. ನುರಿತ ಐಟಿ ವೃತ್ತಿಪರರ ಬೇಡಿಕೆಯೂ ಮುಂಬರುವ ವರ್ಷಗಳಲ್ಲಿ ಬೆಳೆಯಲಿದೆ. ಮುಂದಿನ ಐದು ವರ್ಷಗಳಲ್ಲಿ, ಭಾರತದಲ್ಲಿ ಐಟಿ ಸಿಬ್ಬಂದಿ ಉದ್ಯಮ 10% ಗತಿಯಲ್ಲಿ ಬೆಳೆಯಬಹುದು ಎಂಬ ಅಂದಾಜು. ಭಾರತದ ವೃತ್ತಿಪರರು ಯಾವುದೇ ಕೆಲಸದ ಸ್ಥಳಗಳಿಗೆ, ಹೊಸ ತಂತ್ರಜ್ಞಾನಗಳಿಗೆ ಹಾಗೂ ಅವಕಾಶಗಳಿಗೆ ಬಹು ಸುಲಭವಾಗಿ ಹೊಂದಿಕೊಳ್ಳಬಲ್ಲರು. ತಾವು ವಲಸೆ ಹೋದ ಪ್ರದೇಶಗಳ ಸಂಸ್ಕೃತಿಗೆ ಅಡಾಪ್ಟ್ ಆಗಬಲ್ಲರು ಎಂಬ ಅಂಶ ಅವರ ಬೆಳವಣಿಗೆಯನ್ನು ಹೆಚ್ಚಿಸಿದೆ. ಇದೇ ಸುಂದರ್ ಪಿಚೈ ಅವರಂಥ ತಂತ್ರಜ್ಞರ ಸೃಷ್ಟಿಗೂ ಕಾರಣವಾಗಿದೆ.
ಐಟಿ ಸಿಬ್ಬಂದಿ ಉದ್ಯಮದಲ್ಲಿ ಬೆಳವಣಿಗೆಯನ್ನು ಹೆಚ್ಚಿಸುವ ಮತ್ತೊಂದು ಅಂಶ ನುರಿತ ಐಟಿ ವೃತ್ತಿಪರರಿಗೆ ಇರುವ ಬೇಡಿಕೆ. ಭಾರತದಲ್ಲಿ ವಿವಿಧ ತಂತ್ರಜ್ಞಾನಗಳಲ್ಲಿ ಪ್ರವೀಣರಾಗಿರುವ ನುರಿತ ಐಟಿ ವೃತ್ತಿಪರರ ದೊಡ್ಡ ಸಮೂಹವೇ ಇದೆ. ಹೆಚ್ಚಿನ ವಿದ್ಯಾರ್ಥಿಗಳು STEM ಕೋರ್ಸ್‌ಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಸರ್ಕಾರ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮಗಳಲ್ಲಿ ಹೂಡಿಕೆ ಮಾಡಿದೆ. ಹೀಗಾಗಿ ಮುಂಬರುವ ವರ್ಷಗಳಲ್ಲಿ ಈ ಪ್ರತಿಭೆಗಳ ಸಂಖ್ಯೆ ಬೆಳೆಯಲಿದೆ. ಜಾಗತಿಕವಾಗಿ ಭಾರತ ಸ್ಟಾರ್ಟಪ್‌ಗಳ ಮೂರನೇ ಬಹು ದೊಡ್ಡ ತಾಣ. DPIIT (ಉದ್ಯಮ ಮತ್ತು ಆಂತರಿಕ ವಾಣಿಜ್ಯ ವ್ಯವಹಾರ ಉತ್ತೇಜನ ಸಚಿವಾಲಯ) ಯಿಂದ ನೋಂದಾಯಿತವಾದ 99,000ಕ್ಕೂ ಅಧಿಕ ಸ್ಟಾರ್ಟಪ್‌ಗಳು ಇಲ್ಲಿವೆ. ಇದರಲ್ಲಿ ಗಣನೀಯವಾದುದು ಐಟಿ ಉದ್ಯಮಗಳು. ಭಾರತದ ಐಟಿ ಭವಿಷ್ಯವನ್ನು ಊಹಿಸಲು ಇದೇ ಸಾಕಲ್ಲವೇ?