ಮೆಟಾ ಕಂಪನಿಯ, ವಿಡಿಯೊ/ಫೋಟೋ ಶೇರಿಂಗ್ ಸಾಮಾಜಿಕ ಮಾಧ್ಯಮವಾಗಿರುವ ಆಗಿರುವ ಇನ್‌ಸ್ಟಾಗ್ರಾಂ (Instagram) ಈಗ ಟ್ವಿಟರ್ಗೆ ಪೈಪೋಟಿ ಕೊಡಲು ಮುಂದಾಗಿದೆ. ಟ್ವಿಟರ್ನಂಥ ಬರಹ ಆಧಾರಿತ ಆ್ಯಪ್ (Text-Based App)ವೊಂದನ್ನು ಬಿಡುಗಡೆ ಮಾಡಲು ಯೋಜನೆ ರೂಪಿಸುತ್ತಿದೆ. ಅಂದರೆ ಸದ್ಯ ಇನ್ಸ್ಟಾಗ್ರಾಂನಲ್ಲಿ ಬಳಕೆದಾರರು ಕೇವಲ ವಿಡಿಯೊ, ಫೋಟೋ, ರೀಲ್ಸ್ಗಳನ್ನು ಪೋಸ್ಟ್ ಮಾಡಿಕೊಳ್ಳಬಹುದು. ನೀವು ಹಾಕಿದ ವಿಡಿಯೊ/ಫೋಟೋ ಜತೆಗೆ ಕ್ಯಾಪ್ಷನ್ ಹಾಕಬಹುದಷ್ಟೇ. ಅದರ ಹೊರತು ಬರೀ ಬರಹವನ್ನು ಮಾತ್ರ ಪೋಸ್ಟ್ ಮಾಡಲು ಸಾಧ್ಯವಿಲ್ಲ. ಅಂದರೆ ನಿಮಗೇನೋ ಕವನ, ಅನಿಸಿಕೆ, ಅಭಿಪ್ರಾಯಗಳನ್ನು ಹಂಚಿಕೊಳ್ಳಲು ಇನ್ಸ್ಟಾಗ್ರಾಂನಲ್ಲಿ ಆಯ್ಕೆಯೇ ಇಲ್ಲ. ಅದಕ್ಕಾಗಿ ನೀವು ಮೆಟಾದ ಇನ್ನೊಂದು ಪ್ರಮುಖ ಮಾಧ್ಯಮ ಫೇಸ್ಬುಕ್ಗೋ ಅಥವಾ ಎಲಾನ್ ಮಸ್ಕ್ನ ಟ್ವಿಟರ್ನ್ನೋ ಅವಲಂಬಿಸಬೇಕು.
ಆದರೆ ಈಗ ಇನ್‌ಸ್ಟಾಗ್ರಾಂ ಸ್ವಲ್ಪ ಅಪ್ಡೇಟ್ ಆಗಲು ಯೋಚನೆ ಮಾಡಿದೆ. ಅದೂ ಕೂಡ ಬರಹಗಳನ್ನು ಬರೆಯಬಹುದಾದ ಆ್ಯಪ್ನ್ನು ಒದಗಿಸಲು ಮುಂದಾಗಿದೆ. ತನ್ನ ಈ ಯೋಜನೆ ಬಗ್ಗೆ ಅದು ಹಲವು ಗಣ್ಯರು, ತಜ್ಞರು, ಪ್ರಭಾವಿಗಳ (Influencers) ಜತೆ ಚರ್ಚೆ ಮಾಡುತ್ತಿದೆ. ಅಷ್ಟೇ ಅಲ್ಲದೆ, ಅಂದಹಾಗೇ, ಪ್ರಾಯೋಗಿಕ ಹಂತವಾಗಿ ಕೆಲವು ತಿಂಗಳುಗಳ ಕಾಲ ಈ ಆಯ್ಕೆಯ ಆ್ಯಪ್ ಕೆಲವೇ ಕ್ರಿಯೇಟರ್ಸ್ಗೆ ಸಿಗಲಿದೆ. ಯಶಸ್ವಿಯಾಗುತ್ತಿದ್ದಂತೆ ಎಲ್ಲ ಬಳಕೆದಾರರಿಗೂ ನೀಡಲು ಇನ್‌ಸ್ಟಾಗ್ರಾಂ ನಿರ್ಧಾರ ಮಾಡಿದೆ ಎಂದು ಕಂಪನಿಯ ಮೂಲಗಳಿಂದ ಮಾಹಿತಿ ಸಿಕ್ಕಿದೆ.
ಇದನ್ನೂ ಓದಿ: Instagram Down: ಇನ್‌ಸ್ಟಾಗ್ರಾಂ ಡೌನ್; ನಿಮ್ಮ ಸ್ಟೋರಿ, ರೀಲ್ಸ್ ಅಪ್‌ಲೋಡ್ ಆಗುತ್ತಿದೆಯೇ ಚೆಕ್ ಮಾಡಿಕೊಳ್ಳಿ
ಇನ್ಸ್ಟಾಗ್ರಾಂನಲ್ಲೇ ನಿಮಗೆ ಬರಹದ ಆಯ್ಕೆ ಸಿಗುವುದಿಲ್ಲ. ಅದರ ಬದಲು ಪ್ರತ್ಯೇಕ ಆ್ಯಪ್ ನೀವು ಡೌನ್ಲೋಡ್ ಮಾಡಿಕೊಂಡು ಅಕೌಂಟ್ ಕ್ರಿಯೇಟ್ ಮಾಡಿಕೊಳ್ಳಬೇಕಾಗುತ್ತದೆ. ಆದರೆ ನಿಮ್ಮ ಮೂಲ ಇನ್‌ಸ್ಟಾಗ್ರಾಂ ಅಕೌಂಟ್ ಮತ್ತು ಈ ಹೊಸ ಬರಹದ ಆ್ಯಪ್ನ್ನು ಪರಸ್ಪರ ಲಿಂಕ್ ಮಾಡಿಕೊಳ್ಳುವ ಆಯ್ಕೆಯನ್ನು ಕೊಡಲು ಯೋಜನೆ ರೂಪಿಸಲಾಗುತ್ತಿದೆ ಎಂದು ಲಾಸ್ ಏಂಜಲೀಸ್ನಲ್ಲಿರುವ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಲ್ಲಿ ಸೋಷಿಯಲ್ ಮತ್ತು ಇನ್ಫ್ಲ್ಯೂಯೆನ್ಸರ್ ಮಾರ್ಕೆಟಿಂಗ್ ವಿಷಯವನ್ನು ಬೋಧಿಸುವ ಲಿಯಾ ಹ್ಯಾಬರ್ಮನ್ ತಿಳಿಸಿದ್ದಾಗಿ ವರದಿಯಾಗಿದೆ. ಅಂದಹಾಗೇ, ಈ ಆ್ಯಪ್ ಜೂನ್ ಹೊತ್ತಿಗೆ ಅಭಿವೃದ್ಧಿಗೊಳ್ಳಲಿದೆ. ಆದರೆ ಎಲ್ಲ ಬಳಕೆದಾರರಿಗೆ ಸಿಗಲು ತಡವಾಗಬಹುದು ಎನ್ನಲಾಗಿದೆ.
ಹೀಗೆ ಬರಹ ಆಧಾರಿತ ಹೊಸ ಆ್ಯಪ್ ಬಿಡುಗಡೆ ಬಗ್ಗೆ ಇನ್‌ಸ್ಟಾಗ್ರಾಂ ಇದುವರೆಗೂ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿಲ್ಲ. ಇನ್ನೊಂದೆಡೆ ಟ್ವಿಟರ್ ಕೂಡ ಬಳಕೆದಾರರಲ್ಲಿ ಗೊಂದಲ ಉಂಟು ಮಾಡುತ್ತಿದೆ. ಎಲಾನ್ ಮಸ್ಕ್ ಬಂದ ಮೇಲೆ ಅಲ್ಲಿ ಹಲವು ನಿಯಮಗಳು ಬದಲಾಗಿದ್ದು, ಅನೇಕರು ತಮಗೆ ಕಿರಿಕಿರಿ ಆಗುತ್ತಿದೆ ಎಂದು ಹೇಳುತ್ತಿದ್ದಾರೆ. ಅದರಂತೆ ಟ್ವಿಟರ್ಗೆ ಪರ್ಯಾಯವಾದ, ದಿ ಬೆಸ್ಟ್ ಸೋಷಿಯಲ್ ಮೀಡಿಯಾ ಬೇಕೆಂದು ಹೇಳುತ್ತಿದ್ದಾರೆ. ಈ ಸಮಯವನ್ನು ಇನ್‌ಸ್ಟಾಗ್ರಾಂ ಸದ್ಬಳಕೆ ಮಾಡಿಕೊಳ್ಳಲು ಮುಂದಾಗಿದೆ.