ಶ್ರೀನಗರ: ಜಮ್ಮು-ಕಾಶ್ಮೀರದಲ್ಲಿ ಉಗ್ರರ ದಾಳಿ, ಒಳನುಸುಳುವಿಕೆ ಯಾವಾಗಲೂ ಸೇನೆಯನ್ನು, ಜನರನ್ನು ಬಾಧಿಸುತ್ತದೆ. ಸೇನೆ, ಜಮ್ಮು-ಕಾಶ್ಮೀರ ಪೊಲೀಸರು (Jammu Kashmir Police) ಕಾರ್ಯಾಚರಣೆ, ಎನ್‌ಕೌಂಟರ್ ಮೂಲಕ ಉಗ್ರರನ್ನು ಹೆಡೆಮುರಿ ಕಟ್ಟಿದರೂ ಉಗ್ರರ ಉಪಟಳ ಸಂಪೂರ್ಣವಾಗಿ ನಿಲ್ಲುವುದಿಲ್ಲ. ಆದರೂ, ಶಂಕಿತ ಉಗ್ರರ ಮೇಲೆ ನಿಗಾ ಇರಿಸಲು, ಆ ಮೂಲಕ ಮುಂದೆ ಎದುರಾಗಬಹುದಾದ ಅಪಾಯವನ್ನು ತಡೆಯಲು ಜಮ್ಮು-ಕಾಶ್ಮೀರ ಪೊಲೀಸರು ಜಿಪಿಎಸ್ ಟ್ರ್ಯಾಕರ್ ತಂತ್ರಜ್ಞಾನ ಅಳವಡಿಸಿಕೊಂಡಿದ್ದಾರೆ. ಆ ಮೂಲಕ ದೇಶದಲ್ಲಿಯೇ ಮೊದಲ ಬಾರಿಗೆ ಶಂಕಿತ ಉಗ್ರರ ಮೇಲೆ ನಿಗಾ ಇರಿಸಲು ಜಿಪಿಎಸ್ ಟ್ರ್ಯಾಕರ್ (GPS Tracker) ಬಳಿಸಿದ ಮೊದಲ ಪೊಲೀಸ್ ಇಲಾಖೆ ಎಂಬ ಖ್ಯಾತಿಗೆ ಪಾತ್ರವಾಗಿದೆ.
ತಂತ್ರಜ್ಞಾನದ ಬಳಕೆ ಹೇಗೆ?
ಬಂಧಿತರಾಗಿರುವ ಶಂಕಿತ ಉಗ್ರರು ಜಾಮೀನು ಪಡೆದು ಜೈಲಿನಿಂದ ಹೊರಗೆ ಬಿಡುವಾಗ ಅವರ ಪಾದಕ್ಕೆ ಜಿಪಿಎಸ್ ಟ್ರ್ಯಾಕರ್ ಅಳವಡಿಸಲಾಗುತ್ತದೆ. ಇದರಿಂದ ಶಂಕಿತ ಉಗ್ರರು ಜೈಲಿನ ಹೊರಗೆ ಕೈಗೊಳ್ಳುವ ಚಟುವಟಿಕೆಗಳು, ಚಲನವಲನಗಳ ಮೇಲೆ ನಿಗಾ ಇರಿಸಲು ಸಾಧ್ಯವಾಗುತ್ತದೆ. ಜಾಮೀನಿಗೆ ಅರ್ಜಿ ಸಲ್ಲಿಸಿರುವ ಗುಲಾಂ ಮೊಹಮ್ಮದ್ ಭಟ್ ಎಂಬ ಶಂಕಿತ ಉಗ್ರನಿಗೆ ಜಿಪಿಎಸ್ ಅಳವಡಿಸುವ ಮೂಲಕ ಜಮ್ಮು-ಕಾಶ್ಮೀರ ಪೊಲೀಸರು ತಂತ್ರಜ್ಞಾನದ ಬಳಕೆ ಆರಂಭಿಸಿದ್ದಾರೆ.
@JmuKmrPolice becomes the first police force in the country to introduce GPS tracker anklets for monitoring the terror accused out on bail
— Mohsin Dar (@mohsinahmaddar) November 5, 2023
The device is already being used in Western Countries like USA, UK to track the movement of accused persons on bail, parole & house arrest. pic.twitter.com/j45ft7Fcii
ಬೇರೆ ದೇಶಗಳಲ್ಲಿ ಇದೇ ತಂತ್ರಜ್ಞಾನ ಬಳಕೆ
ಶಂಕಿತ ಉಗ್ರರು ಸೇರಿ ಯಾವುದೇ ಅಪರಾಧದ ಆರೋಪ ಹೊತ್ತಿರುವವರ ಮೇಲೆ ನಿಗಾ ಇರಿಸಲು ಬೇರೆ ದೇಶಗಳಲ್ಲಿ ಈಗಾಗಲೇ ಜಿಪಿಎಸ್ ಟ್ರ್ಯಾಕರ್ ತಂತ್ರಜ್ಞಾನದ ಬಳಕೆ ಮಾಡಲಾಗುತ್ತಿದೆ. ಅಮೆರಿಕ, ಬ್ರಿಟನ್, ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ ಹಾಗೂ ನ್ಯೂಜಿಲ್ಯಾಂಡ್ ಸೇರಿ ಹಲವು ದೇಶಗಳಲ್ಲಿ ಜಾಮೀನು ಪಡೆದು, ಪರೋಲ್ ಮೇಲೆ ಜೈಲಿನಿಂದ ಹೊರಬಂದವರ ಮೇಲೆ ಜಿಪಿಎಸ್ ಟ್ರ್ಯಾಕರ್ ಮೂಲಕವೇ ನಿಗಾ ಇರಿಸಲಾಗುತ್ತಿದೆ. ಇದರಿಂದ ಭವಿಷ್ಯದಲ್ಲಿ ಎಸಗಬಹುದಾದ ದಾಳಿ, ಅಪರಾಧಗಳನ್ನು ನಿಗ್ರಹಿಸಲು ಸಾಧ್ಯವಾಗಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: Terrorists Killed: ಬಾರಾಮುಲ್ಲಾದಲ್ಲಿ ಇಬ್ಬರು ಲಷ್ಕರೆ ತೊಯ್ಬಾ ಉಗ್ರರ ಹತ್ಯೆ; ಶಸ್ತ್ರಾಸ್ತ್ರ ವಶ
ಕಾಶ್ಮೀರದಲ್ಲಿ 100ಕ್ಕೂ ಅಧಿಕ ಉಗ್ರರು ಸಕ್ರಿಯ
ಜಮ್ಮು-ಕಾಶ್ಮೀರದಲ್ಲಿ 100ಕ್ಕೂ ಉಗ್ರರು ಸಕ್ರಿಯರಾಗಿದ್ದಾರೆ ಎಂದು ಕಣಿವೆ ಪೊಲೀಸರು ತಿಳಿಸಿದ್ದಾರೆ. ಇವರಲ್ಲಿ 40 ಉಗ್ರರು ಸ್ಥಳೀಯರಾದರೆ, 71 ಉಗ್ರರು ವಿದೇಶದವರಾಗಿದ್ದಾರೆ. ಅಂದ ಹಾಗೆ 2022ರಲ್ಲಿ 137 ಉಗ್ರರು ಸಕ್ರಿಯರಾಗಿದ್ದರು. ಇದನ್ನು ಸೇನೆಯು 111ಕ್ಕೆ ಇಳಿಸಿದೆ. ಇವರೆಲ್ಲರನ್ನೂ ಎನ್‌ಕೌಂಟರ್ ಮಾಡುವುದು ಸೇನೆಯ ಗುರಿಯಾಗಿದೆ. ಕಾಶ್ಮೀರದಲ್ಲಿ ಜನವರಿಯಿಂದ ಸೆಪ್ಟೆಂಬರ್ ಅವಧಿಯಲ್ಲಿ 31 ಉಗ್ರರನ್ನು ಹತ್ಯೆ ಮಾಡಲಾಗಿದೆ. ಕಳೆದ ವರ್ಷ ಕಣಿವೆಯಲ್ಲಿ 187 ಉಗ್ರರನ್ನು ಹತ್ಯೆ ಮಾಡಲಾಗಿತ್ತು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ