Site icon Vistara News

ಸ್ವಂತ ಬ್ರಾಡ್‌ಬ್ಯಾಂಡ್ K-FON ಆರಂಭಿಸಿದ ಕೇರಳ! ಇದು ನಿಜವಾದ ‘ಕೇರಳ ಸ್ಟೋರಿ’ ಅಂದ್ರು ಸಿಎಂ ಪಿಣರಾಯಿ

Keral CM Pinarayi Vijayan

ನವದೆಹಲಿ: ನಮ್ಮ ನೆರೆಯ ಕೇರಳ ರಾಜ್ಯವು ಮತ್ತೊಂದು ಸಾಹಸವನ್ನು ಮೆರೆದಿದೆ. ದೇವರ ನಾಡು ಎಂದು ಕರೆಯಿಸಿಕೊಳ್ಳುವ ಕೇರಳವು ಸ್ವಂತ ಬ್ರಾಡ್‌ಬ್ಯಾಂಡ್ ಹೊಂದಿದ ದೇಶದ ಮೊದಲ ರಾಜ್ಯ ಎಂಬ ಕೀರ್ತಿಗೆ ಪಾತ್ರವಾಗಿದೆ. ಕೇರಳವು ಮಂಗಳವಾರದಿಂದ ತನ್ನದೇ ಆದ ಕೆ ಫಾನ್ (Kerala Fibre Optic Network K-FON) ಆರಂಭಿಸಿದೆ. ಜನರಿಗೆ ಇಂಟರ್ನೆಟ್‌ ಲಭ್ಯತೆಯನ್ನು ಹೆಚ್ಚಿಸುವುದಕ್ಕಾಗಿ ಈ ಸ್ವಂತ ಬ್ರಾಡ್‌ಬ್ಯಾಂಡ್ ಸೇವೆ ಆರಂಭಿಸಲಾಗಿದೆ ಎಂದು ಕೇರಳ ಸರ್ಕಾರ ಹೇಳಿಕೊಂಡಿದೆ.

ಕೆ ಫಾನ್ ಬ್ರಾಡ್ ಬ್ಯಾಂಡ್ ಸೇವೆಯನ್ನು ಉದ್ಘಾಟಿಸಿ ಮಾತನಾಡಿದ ಕೇರಳ ಸಿಎಂ ಪಿಣರಾಯಿ ವಿಜಯನ್ ಅವರು, ಎಲ್ಲರಿಗೂ ಇಂಟರ್ನೆಟ್ ಲಭ್ಯವಾಗಬೇಕು ಎಂದು ಹೇಳಿದರು. ಕೇರಳವನ್ನು ಜ್ಞಾನದ ಆರ್ಥಿಕತೆಯಾಗಿ ಪರಿವರ್ತಿಸುವ ಮತ್ತು ನಾವೀನ್ಯತೆಯಿಂದ ಕೂಡಿದ ಸಮಾಜವನ್ನು ಬೆಳೆಸುವ ಪ್ರಮುಖ ಹೆಜ್ಜೆ ಎಂದು ಶ್ಲಾಘಿಸಿದರು. ಅರಣ್ಯದ ಒಳಭಾಗದಲ್ಲಿರುವ ಇಡಮಲಕುಡಿ ಸೇರಿದಂತೆ ಕೆ-ಫಾನ್ ಮೂಲಕ ಎಲ್ಲ ಸ್ಥಳಗಳಲ್ಲಿ ಸಂಪರ್ಕವನ್ನು ಖಾತ್ರಿಪಡಿಸುವ ಮೂಲಕ, ಯಾರೂ ಹಿಂದೆ ಉಳಿಯುವುದಿಲ್ಲ ಮತ್ತು ಎಲ್ಲರೂ ನಿಜವಾದ ಕೇರಳ ಕಥೆಯ ಭಾಗವಾಗುತ್ತಾರೆ ಎಂದು ಸಿಎಂ ಪಿಣರಾಯಿ ವಿಜಯನ್ ಅವರು ಹೇಳಿದರು.

ಕಾರ್ಪೊರೇಟ್ ನಡೆಸುವ ಟೆಲಿಕಾಂ ಸೆಕ್ಟರ್‌ಗೆ ಪರ್ಯಾಯ ಮಾದರಿಯಾಗಿ ಕೇರಳ ಸರ್ಕಾರವು K-FON ಬ್ರಾಡ್ ಬ್ಯಾಂಡ್ ಸೇವೆಯನ್ನು ಪರಿಚಯಿಸಿದೆ. ಕೇರಳ ಸರ್ಕಾರದ ಈ ಉಪಕ್ರಮವು ಖಾಸಗಿ ವಲಯದ ಕೇಬಲ್ ನೆಟ್‌ವರ್ಕ್‌ಗಳು ಮತ್ತು ಮೊಬೈಲ್ ಸೇವಾ ಪೂರೈಕೆದಾರರ ಶೋಷಣೆಯಿಂದ ಜನರನ್ನು ಮುಕ್ತಗೊಳಿಸುವ ಮೂಲಕ ಡಿಜಿಟಲ್ ವಿಭಜನೆಯನ್ನು ಕಡಿಮೆ ಮಾಡುವ ಪ್ರಯತ್ನವಾಗಿದೆ ಎಂದು ಸಿಎಂ ಪಿಣರಾಯಿ ವಿಜಯನ್ ಅವರು ಹೇಳಿದರು.

ಇದನ್ನೂ ಓದಿ: Reliance Jio | ಜಿಯೋ, ಏರ್ಟೆಲ್‌ಗೆ ಹೆಚ್ಚಿದ ಗ್ರಾಹಕರು, ವೋಡಾಫೋನ್ ತೊರೆದರು ಬಹುತೇಕರು!

ಕೇರಳ ಸರ್ಕಾರದ ಈ ಬ್ರಾಡ್ ಬ್ಯಾಂಡ್ ಇತರ ಖಾಸಗಿ ಸಂಸ್ಥೆಗಳ ಬ್ರಾಡ್‌ಬ್ಯಾಂಡ್‌ಗಳಿಗಿಂತ ಯಾವದರಲ್ಲೂ ಕಡಿಮೆ ಇಲ್ಲ. ಸ್ಪೀಡ್ ಮತ್ತು ಕ್ವಾಲಿಟಿಯಲ್ಲಿ ಸರಿ ಸಮಾನವಾದ ಸ್ಪರ್ಧೆಯನ್ನು ನೀಡಲಿದೆ. ಎಲ್ಲಕ್ಕಿಂತ ಹೆಚ್ಚಾಗಿ ಕೈಗೆಟುಕುವ ದರದಲ್ಲಿ ಸೇವೆ ದೊರೆಯಲಿದೆ. ಕೆ ಫಾನ್ ಬ್ರಾಡ್ ಬ್ಯಾಂಡ್ ಸೇವೆ ಆರಂಭಿ ಪ್ಲ್ಯಾನ್ 299 ರೂ.ನಿಂದ ಆರಂಭವಾಗಿ, ಗರಿಷ್ಠ 20 Mbps ಸ್ಪೀಡ್ ದೊರೆಯಲಿದೆ. ಜತೆಗೆ ತಿಂಗಳಿಗೆ 3000 ಜಿಬಿವರೆಗೂ ಡೌನ್‌ಲೋಡ್‌ ಮಾಡಿಕೊಳ್ಳಬಹುದು. ಗರಿಷ್ಠ ಪ್ಲ್ಯಾನ್ 250 Mbps ವೇಗದೊಂದಿಗೆ 1,249 ರೂ. ಬೆಲೆ ಹೊಂದಿದೆ. ಈ ಪ್ಲ್ಯಾನ್‌ನಲ್ಲಿ ಬಳಕೆದಾರರು ತಿಂಗಳಿಗೆ5,000 ಜಿಬಿ ಉಚಿತ ಡೌನ್‌ಲೋಡ್ ಮಾಡಿಕೊಳ್ಳಬಹುದು.

ತಂತ್ರಜ್ಞಾನದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version