ಬೆಂಗಳೂರು : ಇತ್ತೀಚೆಗೆ ಬೇರೆ ಬೇರೆ ಭಾಷೆಯ ಸಿನಿಮಾಗಳು ಪ್ಯಾನ್ ಇಂಡಿಯಾ ಸಿನಿಮಾವಾಗಿ ತೆರೆಗೆ ಬರುತ್ತಿದ್ದು, ನೀವು ನಿಮ್ಮ ಭಾಷೆಯಲ್ಲಿಯೇ ಈ ಸಿನಿಮಾಗಳನ್ನು ನೋಡುವ ಅವಕಾಶವನ್ನೂ ನೀಡುತ್ತಿವೆ. ಒಂದೊಮ್ಮೆ ನಿಮಗೆ ಬೇಕಾದ ಭಾಷೆಯಲ್ಲಿ ಸಿನಿಮಾ ನೋಡಲು ಟಿಕೆಟ್ ದೊರೆಯದಿದ್ದಲ್ಲಿ, ನಿರಾಸೆಯಾಗಬೇಡಿ, ನಿಮಗೆ ನಿಮ್ಮ ಭಾಷೆಯಲ್ಲಿಯೇ ಸಿನಿಮಾ ನೋಡಿದಂತಹ ಮಜಾ ನಿಡಲು ಹೊಸ ಆ್ಯಪ್ ಒಂದು ಬಂದಿದೆ!
ಥಿಯೇಟರ್‌ನಲ್ಲಿ ಟಿಕೆಟ್ ಬುಕ್ಕಿಂಗ್ ಮಾಡುವಾಗ ನಿಮಗೆ ಬೇಕಾದ ಭಾಷೆಯಲ್ಲಿ ಸಿನಿಮಾ ಅವೃತ್ತಿಯ ಟಿಕೆಟ್ ಲಭ್ಯವಾಗದಿದ್ದರೆ ಬೇರೆ ಭಾಷೆಯ ಟಿಕೆಟ್ ಬೇಡ, ಭಾಷೆ ಅರ್ಥವಾಗುವುದಿಲ್ಲ ಎಂದು ಸುಮ್ಮನಾಗಬೇಡಿ. ನೀವು ಯಾವ ಭಾಷೆಯ ಸಿನಿಮಾ ನೋಡಲು ಹೋದರೂ ನಿಮಗೆ ನೆರವಾಗಲು ಸಿನಿಡಬ್ಸ್ ಆ್ಯಪ್ (Cinedubs Mobile App ) ಬಂದಿದ್ದು, ನಿಮಗೆ ಭಾಷೆಯ ವಿಷಯದಲ್ಲಿ ತೊಂದರೆಯಾಗದಂತೆ ನೋಡಿಕೊಳ್ಳಲಿದೆ.
ಬೇರೆ ಭಾಷೆಗಳಲ್ಲಿ ಈಗಾಗಲೇ ಈ ಆ್ಯಪ್ ಚಾಲ್ತಿಯಲ್ಲಿದ್ದು, ಕನ್ನಡದ ಮಟ್ಟಿಗೆ ನಿಧಾನವಾಗಿ ಈ ಆ್ಯಪ್ ಪರಿಚಾಯವಾಗುತ್ತಿದೆ. ಇದೀಗ ಈ ಆ್ಯಪ್‌ನ್ನು ಕಿಚ್ಚ ಸುದೀಪ್ ನಟನೆಯ ʻವಿಕ್ರಾಂತ್ ರೋಣʼ ಸಿನಿಮಾ ಮೂಲಕ ಕನ್ನಡಿಗರಿಗೆ ಪರಿಚಯಿಸಲಾಗುತ್ತದೆ. ಈ ಆ್ಯಪ್‌ನಲ್ಲಿ ʻವಿಕ್ರಾಂತ್ ರೋಣʼ ಸಿನಿಮಾದ ಎಲ್ಲ ಆವೃತ್ತಿಗಳ ಆಡಿಯೋ ಟ್ರ್ಯಾಕ್ ಇರುತ್ತದೆ. ನೀವು ಈ ಆ್ಯಪ್‌ನ ಸಹಾಯದಿಂದ ಸಿನಿಮಾದ ಸಂಭಾಷಣೆಗಳನ್ನು ನಿಮ್ಮದೇ ಭಾಷೆಯಲ್ಲಿ ಕೇಳಬಹುದು, ಶಿಳ್ಳೆ ಹೊಡೆಯಬಹುದು. ಈ ಆ್ಯಪ್ ಬಗ್ಗೆ ಸುದೀಪ್ ಅವರೇ ಮಾಹಿತಿ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ | Vikrant Rona | ವಿಕ್ರಾಂತ್ ರೋಣ ಎರಡನೇ ಹಾಡು ರಿಲೀಸ್: ರಾಜಕುಮಾರಿ ಲೋಕಕ್ಕೆ ಕೊಂಡೊಯ್ದ ಕಿಚ್ಚ
ಏನಿದು ಸಿನಿಡಬ್ ಆ್ಯಪ್?
ಉದಾಹರಣೆಗೆ ಹಿಂದಿ ಸಿನಿಮಾ ಪ್ರದರ್ಶನಕ್ಕೆ ನೀವು ಹೋಗಿದ್ದರೆ ಥಿಯೇಟರ್‌ನಲ್ಲಿ ಕುಳಿತು ಆ್ಯಪ್ ಚಾಲನೆ ಮಾಡಬೇಕು. ಒಂದು ವೇಳೆ ಥಿಯೇಟರ್‌ನ ಹೊರಗಡೆ ಈ ಆ್ಯಪ್ ನಿಮಗೆ ಬೇಕಾದಂತೆ ಕೆಲಸ ಮಾಡುವುದಿಲ್ಲ. ನೀವು ನೋಡುತ್ತಿರುವ ಚಿತ್ರಮಂದಿರ, ಅದರ ಲೊಕೇಷನ್ ಮತ್ತು ನೀವು ನೋಡುತ್ತಿರುವ ಸಿನಿಮಾ ಹಾಗೂ ಪ್ರದರ್ಶನದ ಸಮಯ ಮತ್ತು ನೀವು ಕೇಳಬೇಕಾದ ಭಾಷೆಯನ್ನು ಆ್ಯಪ್‌ನಲ್ಲಿ ನಮೂದಿಸಬೇಕು.
ನೀವು ಯಾವ ಭಾಷೆಯನ್ನು ಆಯ್ಕೆ ಮಾಡಿರುತ್ತೀರೋ ಆ ಭಾಷೆಯಲ್ಲಿ ನೀವು ಕೇಳಬಹುದು. ಕೇಳುವಾಗ ಇಯರ್ ಫೋನ್ ಹಾಕಿಕೊಳ್ಳುವುದು ಖಡ್ಡಾಯ. ತೆರೆಯ ದೃಶ್ಯಗಳಿಗೂ ಹಾಗೂ ಧ್ವನಿಗೂ ಸಿಂಕ್ ಆಗುವಂತೆ ಈ ಆ್ಯಪ್ ರೂಪಿಸಿರುವುದು ವಿಶೇಷ. ನೀವು ಯಾವ ಭಾಷೆಯಲ್ಲಿ ಕೇಳಿತ್ತಿರೋ ಆ ಭಾಷೆಯಲ್ಲಿ ಸಂಭಾಷಣೆಗಳು ಸ್ಪಷ್ಟವಾಗಿ ಕೇಳುತ್ತದೆ.
ನಿಯಮಗಳೇನು?
ನೀವು ಆಯ್ಕೆ ಮಾಡಿರುವ ಭಾಷೆಯಲ್ಲಿ ಚಿತ್ರ ಡಬ್ ಆಗಿರಬೇಕು. ಪ್ಯಾನ್ ಇಂಡಿಯಾ ಸಿನಿಮಾ ನಾಲ್ಕು ಭಾಷೆಗಳಲ್ಲಿ ಡಬ್ ಆಗಿರುತ್ತವೆ. ಯಾವುದೇ ಭಾಷೆಯಲ್ಲಿ ನಿಮಗೆ ಆಡಿಯೋ ಟ್ರ್ಯಾಕ್ ಸಿಗುತ್ತದೆ. ಒಂದು ವೇಳೆ ಪೈರಸಿ ಮಾಡಿದ ಪ್ರತಿಗಳನ್ನು ವೀಕ್ಷಿಸುತ್ತಿದ್ದರೆ ಈ ಆ್ಯಪ್ ಕೆಲಸ ಮಾಡುವುದಿಲ್ಲ.
ಪ್ರಯೋಜನಗಳೇನು?
ಬಿಡುಗಡೆಯಾದ ದಿನ ಅಥವಾ ವಾರಾಂತ್ಯದಲ್ಲಿ ನಿಮ್ಮ ಭಾಷೆಯ ಸಿನಿಮಾದ ಟಿಕೆಟ್ ಸಿಗದಿದ್ದರೆ ಆ ದಿನವೇ ಸಿನಿಮಾ ನೋಡಲು ಬಯಸುವ ಪ್ರೇಕ್ಷಕರಿಗೆ ಅವರ ಇಚ್ಚೇಯ ಭಾಷೆಯಲ್ಲಿ ಆವೃತ್ತಿಯನ್ನು ನೋಡಬಹುದು. ಮತ್ತು ತಮ್ಮ ಭಾಷೆಯಲ್ಲಿ ನೋಡುವುದರಿಂದ ಸುಲಭವೂ ಆಗುತ್ತದೆ. ಈ ಆ್ಯಪ್ ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಉಚಿತವಾಗಿ ಲಭ್ಯವಿದೆ.
ಒಟಿಟಿಯಲ್ಲಿ ಈಗಾಗಲೇ ಈ ರೀತಿಯ ಆಯ್ಕೆಗಳು ಇವೆ. ಕನ್ನಡದ ಸಿನಿಮಾಗೂ ಈ ಆ್ಯಪ್ ಬಂದಿರುವ ಕುರಿತು ನೆಟ್ಟಿಗರು ಕಮೆಂಟ್ ಮೂಲಕ ಪ್ರತಿಕ್ರಿಯಿಸಿದ್ದು, ಇದರಿಂದ ಹೆಚ್ಚಿನ ಪ್ರಯೋಜವಿಲ್ಲ ಎಂದಿದ್ದಾರೆ. ಆದರೆ ಚಿತ್ರಮಂದಿರಕ್ಕೆ ಪ್ರೇಕ್ಷಕರನ್ನು ಸೆಳೆಯಲು ಮತ್ತು ಮಾರುಕಟ್ಟೆಯ ದೃಷ್ಟಿಯಿಂದ ಈ ಆಯ್ಕೆ ಉಪಯೋಗವಾಗುತ್ತದೆ ಎಂದು ಸುದೀಪ್ ಹೇಳಿದ್ದಾರೆ.
ಸಿನಿಮಾದಲ್ಲಿ ಈ ರೀತಿ ಹಲವಾರು ತಂತ್ರಜ್ಞಾನಗಳ ಬಳಕೆ ಹೆಚ್ಚಾಗುತ್ತಿದ್ದು, ಸಿನಿಪ್ರೀಯರು ಖುಷಿ ವ್ಯಕ್ತ ಪಡಿಸುತ್ತಿದ್ದಾರೆ. ಈ ಹಿಂದೆ ನಟ ಪುನೀತ್ ರಾಜ್‌ಕುಮಾರ್ ಅವರ ಜೇಮ್ಸ್ ಸಿನಿಮಾಕ್ಕೆ ತಂತ್ರಜ್ಞಾನದ ನೆರವಿನಿಂದ ಅವರದೇ ದನಿಯನ್ನು ನೀಡಿ, ಚಿತ್ರವನ್ನು ಬಿಡುಗಡೆ ಮಾಡಲಾಗಿತ್ತು. ಈ ಪ್ರಯೋಗ ಯಶಸ್ವಿಯೂ ಆಗಿತ್ತು. ಈ ಕುರಿತು ವಾಯ್ಸ್ ಮಿಕ್ಸಿಂಗ್ ತಂತ್ರಜ್ಞರು, ಭಾರತದಲ್ಲಿ ಮಾತ್ರವಲ್ಲದೇ ಪ್ರಪಂಚದಲ್ಲಿಯೇ ಇದು ಮೊದಲ ಪ್ರಯತ್ನವಾಗಿದೆ. ಹಲವು ವರ್ಷಗಳಿಂದ ಸಂಶೋಧನೆ ಮಾಡುತ್ತಾ ಬಂದಿದ್ದೇವೆ. ಪ್ಯಾನ್ ಇಂಡಿಯಾ ಸಿನಿಮಾಗೆ ಎಲ್ಲಾ ಭಾಷೆಗೆ ಅದೇ ಕಲಾವಿದರ ಧ್ವನಿ ಇದ್ದರೆ ಹೇಗಿರುತ್ತದೆ ಎಂಬ ಆಲೋಚನೆಯಿಂದ ಇದನ್ನು ಟ್ರೈ ಮಾಡಿರುವುದಾಗಿ ಹೇಳಿಕೊಂಡಿದ್ದರು.
ಇದನ್ನೂ ಓದಿ | Vikrant Rona | ಕಿಚ್ಚ ವರ್ಸ್ ಲಾಂಚ್; ಡಿಜಿಟಲ್ ಜಗತ್ತಿನಲ್ಲಿ ಕಿಚ್ಚ ಸುದೀಪ್ ಹವಾ ಶುರು